ಮಲ್ಲಯ್ಯನದೊಡ್ಡಿ ಬಳಿ ಮುಸುಕುಧಾರಿ ಯುವಕರಿಂದ ದಾಳಿ : 6 ಲಕ್ಷ ಮೌಲ್ಯದ ನಗ-ನಗದು ದರೋಡೆ
ಮಂಡ್ಯ: ಬೆಂಗಳೂರು-ಮೈಸೂರು ದಶಪಥ ರಸ್ತೆ ಉದ್ಘಾಟನೆಗೆ ಸಜ್ಜಾಗುತ್ತಿರುವ ನಡುವೆಯೇ ಮಂಡ್ಯ ತಾಲ್ಲೂಕಿನ ಮಲ್ಲಯ್ಯನದೊಡ್ಡಿ ಬೋರೆ ಬಳಿ ಭಾನುವಾರ ರಾತ್ರಿ ದುಷ್ಕರ್ಮಿಗಳು ಶಿಕ್ಷಕ ಕುಟುಂಬವನ್ನು ತಡೆದು ಆರು ಲಕ್ಷ ಮೌಲ್ಯದ ನಗ-ನಗದು ದೋಚಿದ್ದಾರೆ.
ಮೈಸೂರಿನ ಅಶೋಕಪುರಂ ರೈಲ್ವೆ ವರ್ಕ್ ಶಾಪ್ನ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ನಾಗರಾಜು ಹಾಗೂ ಅವರ ಪತ್ನಿ ಜಯಶ್ರೀ ಅವರು ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪುತ್ರನನ್ನು ಭೇಟಿ ಮಾಡಿ ಹಿಂತಿರುಗುತ್ತಿದ್ದ ವೇಳೆ ಭಾನುವಾರ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ.
ಮಧ್ಯರಾತ್ರಿ 1.10ರ ವೇಳೆಗೆ ನಾಗರಾಜು ಅವರು ಮಲ್ಲಯ್ಯನದೊಡ್ಡಿ ಬಳಿ ಮೂತ್ರ ವಿಸರ್ಜನೆಗೆಂದು ಕಾರಿನಿಂದ ಇಳಿದಿದ್ದರು. ಅಷ್ಟರಲ್ಲಿ ಇಬ್ಬರು ಮುಸುಕುಧಾರಿ ಯುವಕರು ಏಕಾಏಕಿ ಇವರ ಮೇಲೆ ದಾಳಿ ಮಾಡಿದ್ದಾರೆ. ನಾಗರಾಜು ಅವರ ಜೇಬಿನಲ್ಲಿದ್ದ 25 ಸಾವಿರ ರೂ.ಗಳ ನ್ನೂ ಕಿತ್ತುಕೊಂಡಿದ್ದಾರೆ. ನಂತರ ಚಿನ್ನದ ಸರ, ಉಂಗುರ ಕೊಡುವಂತೆ ತಾಕೀತು ಮಾಡಿ‡ದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಕುತ್ತಿಗೆ ಭಾಗಕ್ಕೆ ಡ್ರ್ಯಾಗರ್ ಹಿಡಿದು ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಹೆದರಿದ ನಾಗರಾಜು ಉಂಗುರ, ಸರ ನೀಡಿದ್ದಾರೆ. ಬಳಿಕ ಕಾರಿನೊಳಗೆ ಕುಳಿತಿದ್ದ ಪತ್ನಿ ಜಯಶ್ರೀ ಅವರತ್ತ ತೆರಳಿದ ದರೋಡೆಕೋರರು ಅವರ ಮಾಂಗಲ್ಯ ಸರ, ಗುಂಡುಗಳನ್ನು ಕಿತ್ತುಕೊಂಡಿದ್ದಾರೆ. ಸುಮಾರು 100 ಗ್ರಾಂ ಚಿನ್ನದ ಆಭರಣ, 25 ಸಾವಿರ ರೂ. ನಗದು ಸೇರಿ ಸುಮಾರು ಆರು ಲಕ್ಷ ರೂ. ದರೋಡೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.
ಘಟನೆ ಬಳಿಕ ಮಂಡ್ಯಕ್ಕೆ ಆಗಮಿಸಿದ ನಾಗರಾಜು ಅವರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಗ್ರಾಮಾಂತರ ಇನ್ಸ್ಪೆಕ್ಟರ್ ಹಾಗೂ ಪೊಲೀಸರ ತಂಡ ಘಟನೆ ನಡೆದ ಸ್ಥಳಕ್ಕೆ ತೆರಳಿದಾಗ ಅಲ್ಲಿ ಯಾರೂ ಇರಲಿಲ್ಲ. ಈ ಕುರಿತು ಸೋಮವಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮುನ್ನೆಚ್ಚರಿಕೆ ಇರಲಿ
ಬೈಪಾಸ್ ಹಾದಿಯಲ್ಲಿ ಸಾಗುವ ದಶಪಥ ಹೆದ್ದಾರಿಯ ಹಲವೆಡೆ ನಿರ್ಜನವಾಗಿದ್ದು ಇಂತಹ ಕಡೆ ರಾತ್ರಿ ವಾಹನ ನಿಲ್ಲಿಸಬಾರದು. ಕಾರಿನಿಂದ ಇಳಿಯುವ ಅಗತ್ಯ ಬಿದ್ದರೆ ಆದಷ್ಟು ಸುರಕ್ಷಿತ ಸ್ಥಳಗಳನ್ನು ನೋಡಿ ಇಳಿಯಬೇಕು ಎಂದು ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.