ಶಿವಮೊಗ್ಗ: ವಿವಾಹವಾದ 5 ತಿಂಗಳಿಗೆ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕಾರು ಶೆಡ್ನಲ್ಲಿ ಶವ ಪತ್ತೆಯಾಗಿದ್ದು, ಸಾವು ಅನುಮಾನಕ್ಕೆ ಕಾರಣವಾಗಿದೆ.
23 ವರ್ಷದ ನವ್ಯಶ್ರೀ ಶವ ಶಿವಮೊಗ್ಗದ ಅಶ್ವತ್ಥ್ ನಗರದ ಮನೆಯಲ್ಲಿ ಪತ್ತೆಯಾಗಿದೆ. ಶನಿವಾರ ತುಳಸಿ ಪೂಜೆ ಕಾರ್ಯದಲ್ಲೂ ನವ್ಯಶ್ರೀ ಪಾಲ್ಗೊಂಡಿದ್ದರು. ಮೇ 25ರಂದು ಆಕಾಶ್ ಹೊಮ್ಮರಡಿ ಜತೆ ನವ್ಯಶ್ರೀ ವಿವಾಹವಾಗಿತ್ತು.
ಆಕಾಶ್ ಶಿವಮೊಗ್ಗದ ಖ್ಯಾತ ವೈದ್ಯೆ ಜಯಶ್ರೀ ಪುತ್ರ. ನವ್ಯಶ್ರೀಯನ್ನು ಕೊಲೆ ಮಾಡಿ ಪತಿಯ ಮನೆಯವರು ನೇಣುಬಿಗಿದಿದ್ದಾರೆ ಎಂದು ಆಕೆಯ ಕುಟುಂಬದವರು ಆರೋಪ ಮಾಡುತ್ತಿದ್ದಾರೆ. ಶಿವಮೊಗ್ಗದ ವಿನೋಬ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಶನಿವಾರ ರಾತ್ರಿ ತುಳಸಿ ಪೂಜೆಯಲ್ಲಿ ಪಾಲ್ಗೊಂಡಿದ್ದ ನವ್ಯಶ್ರೀ ಅರಿಶಿನ, ಕುಂಕುಮ ಸ್ವೀಕರಿಸಿದ್ದರು. ಬಳಿಕ ಕಾರು ಶೆಡ್ಗೆ ತೆರಳಿ ನೇಣು ಬಿಗಿದುಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕೌಟುಂಬಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ನವ್ಯಶ್ರೀ ಕುಟುಂಬದವರು ಶಂಕಿಸಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.