ಬೆಂಗಳೂರು : ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ನ್ಯಾ. ಹೆಚ್. ಪಿ. ಸಂದೇಶ್ ಅವರ ಏಕಸದಸ್ಯ ಪೀಠ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಪಿಎಸ್ಐ ನೇಮಕಾತಿ ಹಗರಣ 6 ಆರೋಪಿಗಳ ಜಾಮೀನು ಅರ್ಜಿ ಮತ್ತು ತಲೆಮರೆಸಿಕೊಂಡ ಆರೋಪಿ ಬ್ಯಾಡರಹಳ್ಳಿ PSI ನವೀನ್ ಪ್ರಸಾದ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಮಾಡಿತು.
ಆರೋಪಿಗಳಾದ ಸಿ.ಎನ್. ಶಶಿಧರ್, ಆರ್. ಶರತ್ ಕುಮಾರ್, ಹೆಚ್. ಯು, ರಘುವೀರ್, ಕೆ.ಸಿ. ದಿಲೀಪ್ ಸದ್ಯಕ್ಕೆ ಅವರಿಗೆ ಜೈಲು ಖಾಯಂ ಅತಿಥಿ ಗೃಹವಾಗಿದೆ.ಆರೋಪಿಗಳಿಗೆ ಜಾಮೀನು ನೀಡುವಂತೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ದರು. ಜಾಮೀನು ನೀಡಬಾರದು. ದಂಡ ವಿಧಿಸಿ ಜಾಮೀನು ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಸರ್ಕಾರ ಬಲವಾಗಿ ವಾದಿಸಿತು. ವಾದ-ಪ್ರತಿವಾದ ಆಲಿಸಿ, ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸಿತು. ಸಾಧ್ಯವಾದರೆ ಶುಕ್ರವಾರ ತೀರ್ಪು ಪ್ರಕಟಿಸುವುದಾಗಿಯೂ ನ್ಯಾಯಪೀಠ ಹೇಳಿತ್ತು.
ಪಿಎಸ್ಐ ನೇಮಕ ಅಕ್ರಮ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಮುಂದೆ ಬಲವಾಗಿ ಸಮರ್ಥಿಸಿ ಕೊಂಡಿರುವ ಸರ್ಕಾರ, ಯಾವುದೇ ಲೋಪಕ್ಕೆ ಅವಕಾಶವಿಲ್ಲದೆ ಪಾರದರ್ಶಕ ರೀತಿಯಲ್ಲಿ ಅತ್ಯಂತ ವೈಜ್ಞಾನಿಕ, ವೃತ್ತಿಪರ ಮತ್ತು ಕಾನೂನಾತ್ಮಕವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.
ವಿಚಾರಣೆ ವೇಳೆ ಸರ್ಕಾರದ ಪರವಾದ ಮಂಡಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್ ಪಿಪಿ) ವಿ.ಎಸ್. ಹೆಗ್ಡೆ, ಅರ್ಜಿದಾರರು ಎಸಗಿರುವುದು ಸಾಮಾನ್ಯ ಅಪರಾಧ ಕೃತ್ಯವಲ್ಲ. ಇದೊಂದು ದೊಡ್ಡ ಹಗರಣ ಹಾಗೂ ಸಮಾಜದ ಮೇಲಿನ ಭಯೋತ್ಪಾದನೆಯಾಗಿದೆ. ಒಟ್ಟು 545 ಪಿಎಸ್ಐ ಹುದ್ದೆಗಳಿಗೆ 50 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ.
ಆದರೆ, ಅರ್ಜಿದಾರರು, ಕೆಲ ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಅಭ್ಯರ್ಥಿಗಳು ಅಕ್ರಮ ನಡೆಸಿ ಇಡೀ ನೇಮಕಾತಿ ಪ್ರಕ್ರಿಯೆ ರದ್ದುಮಾಡುವ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಅಭ್ಯರ್ಥಿಗಳ ಒಎಂಆರ್ ಶೀಟ್ಗಳನ್ನು ತಿದ್ದಲಾಗಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸಬೇಕಿದೆ. ಹೀಗಾಗಿ ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ಮಂಜೂರು ಮಾಡಬಾರದು ಎಂದು ನ್ಯಾಯಾಲಯವನ್ನು ಬಲವಾಗಿ ಕೋರಿಕೊಂಡಿದ್ದರು.
ಎಸ್ಪಿಪಿ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅಕ್ರಮ ನಡೆಸಲು ಅಧಿಕಾರಿಗಳೇ ಬಾಗಿಲು ತೆರೆದಿದ್ದಾರಲ್ಲವೇ? ಬೇಲಿಯೇ ಎದ್ದು ಹೊಲ ಮೇಯಲು ಬಿಟ್ಟಿದ್ದೇಕೆ? ಹಗರಣದಲ್ಲಿ ಭಾಗಿಯಾಗಿರುವ “ಕಪ್ಪು ಕುಳಗಳನ್ನು’ ಪತ್ತೆ ಹಚ್ಚುವುದು ಸರ್ಕಾರದ ಕರ್ತವ್ಯವಲ್ಲವೇ? ತಪ್ಪಿತಸ್ಥರನ್ನು ಕಠಿಣವಾಗಿ ದಂಡಿಸುವುದು ಸರ್ಕಾರದ ಜವಾಬ್ದಾರಿಯಲ್ಲವೇ? ಎಂದು ಪ್ರಶ್ನಿಸಿತ್ತು.