ಮೈಸೂರು: ವೈದ್ಯಕೀಯ ನಿರ್ಲಕ್ಷ್ಯ ಹಾಗೂ ಸೇವಾ ನ್ಯೂನತೆ ಎಸಗಿದ ಆರೋಪದ ಮೇರೆಗೆ ಮೈಸೂರಿನ ವಿಕ್ರಂ ಜ್ಯೋತ್ ಆಸ್ಪತ್ರೆಯ ವೈದ್ಯರಾದ ಡಾ.ರಾಜ್ಕುಮಾರ್ ಮಾದ್ವಾ ಮತ್ತು ಡಾ.ಎನ್.ರಾಘವೇಂದ್ರ ಅವರಿಗೆ 8 ಲಕ್ಷ ರೂ. ದಂಡ ವಿಧಿಸಿ ಮೈಸೂರು ಜಿಲ್ಲಾ ಗ್ರಾಹಕರ ಆಯೋಗ ಆದೇಶ ನೀಡಿದೆ.
ಮೈಸೂರಿನ ಕುವೆಂಪುನಗರ ನಿವಾಸಿ ಕೆ.ಶಂಕರನಾರಾಯಣ ಎಂಬವರು 2015ರಲ್ಲಿ ಅನಾರೋಗ್ಯದ ಕಾರಣ ಯಾದವಗಿರಿ ವಿಕ್ರಂ ಜ್ಯೋತ್ ಆಸ್ಪತ್ರೆಗೆ ದಾಖಲಾಗಿದ್ದರು. ಆ ವೇಳೆ ಅವರ ಆಸ್ಪತ್ರೆಯ ವೆಚ್ಚ 32 ಸಾವಿರ ರೂ. ಆಗಬಹುದೆಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು. ಜುಲೈ 30ರಂದು ಎನ್ಆರ್ಐ ಸ್ಕ್ಯಾನ್ ಮಾಡಿಸಿದಾಗ ಯಾವುದೇ ಸಮಸ್ಯೆ ಕಂಡುಬಂದಿರಲಿಲ್ಲ. ನಂತರ ವಿಕ್ರಂ ಜ್ಯೋತ್ ಆಸ್ಪತ್ರೆ ವೈದ್ಯರು, ಶಂಕರನಾರಾಯಣ ಅವರಿಗೆ ಚಿಕಿತ್ಸೆ ನೀಡುವಂತೆ ಡಾ.ಎನ್.ರಾಘವೇಂದ್ರ ಅವರಿಗೆ ಸೂಚಿಸಿದ್ದರು.
ಶಂಕರನಾರಾಯಣ ಅವರ ಪತ್ನಿ ವನಜಾಕ್ಷಿ ಅವರ ಗಮನಕ್ಕೆ ತರದೇ 2015ರ ಆಗಸ್ಟ್ 1ರಂದು ಶಂಕರನಾರಾಯಣ ಅವರಿಗೆ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಿದ್ದು, ಈ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಅವರು ಪ್ರಜ್ಞಾಹೀನ ಸ್ಥಿತಿ ತಲುಪಿ ವಿವಿಧ ಅಂಗಾಂಗಗಳ ವೈಫಲ್ಯಕ್ಕೆ ಒಳಗಾದರು. ಆಗಸ್ಟ್ 8ರಂದು ಡಾ. ರಾಘವೇಂದ್ರ 2ನೇ ಬಾರಿಗೆ ಶಸ್ತ್ರಚಿಕಿತ್ಸೆ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಶಂಕರನಾರಾಯಣ ಅವರು 3 ತಿಂಗಳ ಕಾಲ ತೀವ್ರ ನಿಗಾ ಘಟಕದಲ್ಲಿದ್ದರು. ವಿಮಾ ಕಂಪೆನಿಯಿಂದ 3 ಲಕ್ಷ ರೂ. ಸೇರಿ ಶಂಕರನಾರಾಯಣರ ಪತ್ನಿಯಿಂದ ಆಸ್ಪತ್ರೆಯವರು ಒಟ್ಟು 25 ಲಕ್ಷ ರೂ. ಪಡೆದಿದ್ದರು. ಇನ್ನೂ ಹೆಚ್ಚಿನ ಮೊತ್ತ ಪಾವತಿಸಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದಾಗ ರೋಗಿಯನ್ನು 2015ರ ನವೆಂಬರ್ 26ರಂದು ಡಿಸ್ಟಾರ್ಜ್ ಮಾಡಲಾಯಿತು. ನಂತರ ಡಿಸೆಂಬರ್ 12ರಂದು ಶಂಕರನಾರಾಯಣ ಮೃತಪಟ್ಟರು.
ಶಂಕರನಾರಾಯಣರ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯ ಹಾಗೂ ವೈದ್ಯಕೀಯ ನ್ಯೂನತೆ ಕಾರಣ ಎಂದು ಅವರ ಪತ್ನಿ ವನಜಾಕ್ಷಿ ಮತ್ತು ಮಗಳು ಶಿವಾನಿ ಶಂಕರ್ 2017ರ ಡಿಸೆಂಬರ್ 14ರಂದು ಮೈಸೂರು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು. ಈ ನಡುವೆ 2021ರ ಮೇ 21ರಂದು ವನಜಾಕ್ಷಿ ಮೃತಪಟ್ಟಿದ್ದು, ವೈದ್ಯರಾದ ಡಾ.ರಾಜ್ಕುಮಾರ್ ಮಾಲ್ವಾ ಮತ್ತು ಡಾ.ಎನ್.ರಾಘವೇಂದ್ರ ಅವರು ಶಂಕರನಾರಾಯಣರ ಪುತ್ರಿ ಶಿವಾನಿ ಶಂಕರ್ ಅವರಿಗೆ ವಾರ್ಷಿಕ ಶೇ.6ರಷ್ಟು ಬಡ್ಡಿಯೊಂದಿಗೆ 8 ಲಕ್ಷ ರೂ.ಗಳನ್ನು ಹಾಗೂ ಪ್ರಕರಣದ ಖರ್ಚಿನ ಬಾಬ್ತು 5 ಸಾವಿರ ರೂ.ಗಳನ್ನು 2 ತಿಂಗಳೊಳಗಾಗಿ ಪಾವತಿಸಬೇಕೆಂದು ಜಿಲ್ಲಾ ಗ್ರಾಹಕರ ಆಯೋಗವು ಇದೇ ಜನವರಿ 11ರಂದು ಆದೇಶಿಸಿದೆ. ಶಿವಾನಿ ಶಂಕರ್ ಪರ ವಕೀಲ ಕೆ.ಈಶ್ವರ ಭಟ್ ವಕಾಲತ್ತು ವಹಿಸಿದ್ದರು.