ಆಸ್ತಿ ವಿಚಾರಕ್ಕೆ ಪತ್ನಿ, ಮಗನಿಗೆ ಗುಂಡು ಹಾರಿಸಿ ಕೊಲೆ; ಹತ್ಯೆ ಮಾಡಿದಾತ ಕೆರೆಗೆ ಹಾರಿ ಆತ್ಮಹತ್ಯೆ!

ಮಡಿಕೇರಿ: ಆಸ್ತಿ ವೈಷಮ್ಯದ ಹಿನ್ನೆಲೆಯಲ್ಲಿ ಸಂಬಂಧಿಕರ ಮಧ್ಯೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಪತ್ನಿ ಮತ್ತು ಅಣ್ಣನ ಮಗನನ್ನು ಕೊಂದು ತಾನು ಕೆರೆಗೆ ಬಿದ್ದು ಆತ್ಮಹತ್ಯೆಗೆ ಶರಣಾದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕಿರಗೂರು ಗ್ರಾಮದಲ್ಲಿ ನಡೆದಿದೆ.

ಕಿರಗೂರು ಗ್ರಾಮದ ಸೋಮಯ್ಯ ಸಾಗರ್ (೫೨), ಯಶೋಧ (೪೩), ಮಧು (೪೨) ಮೃತರು. ಸೋಮಯ್ಯ ಸಾಗರ್ ಎಂಬವರು ತನ್ನ ಪತ್ನಿ ಯಶೋಧ ಮತ್ತು ಅಣ್ಣನ ಮಗ ಮಧುಗೆ ಶೂಟ್‌ ಮಾಡಿದ ಪರಿಣಾಮ ಸ್ಥಳದಲ್ಲೇ ಮಧು (೪೩) ಮೃತಪಟ್ಟಿದ್ದಾರೆ.

ಗುಂಡು ಹಾರಿಸಲು ಮುಂದಾದಾಗ ತಡೆಯಲು ಬಂದ ಯಶೋಧ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಯಶೋಧ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಯಶೋಧರನ್ನು ಮೈಸೂರಿಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯಶೋಧ ಕೂಡ ಮೃತಪಟ್ಟಿದ್ದಾರೆ. ಇಬ್ಬರಿಗೂ ಗುಂಡು ಹೊಡೆದಿದ್ದ ಸಾಗರ್ ಮನೆಯ ಸಮೀಪವಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಡಿಕೆ ತೋಟದ ಆಸ್ತಿಯಲ್ಲಿ ಪಾಲುಗಾರಿಕೆ ಬಗ್ಗೆ ಪದೇ ಪದೇ ಸೋಮಯ್ಯ ಹಾಗೂ ಮಧು ಅವರಿಗೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಶುಕ್ರವಾರ ಕೂಡ ಆಸ್ತಿ ವಿಷಯವಾಗಿ ಇಬ್ಬರ ನಡುವೆ ಜಗಳ ಆರಂಭಗೊಂಡಿದೆ. ಮಾತಿಗೆ ಮಾತು ಬೆಳೆದು ಸಾಗರ್, ಮನೆಯಲ್ಲಿದ್ದ ಕೋವಿಯಿಂದ ಮಧು ಮೇಲೆ ಗುಂಡು ಹಾರಿಸಿದ್ದಾರೆ. ಮಧು ಸ್ಥಳದಲ್ಲೇ ಮೃತಪಟ್ಟರೆ, ತಡೆಯಲು ಬಂದ ಯಶೋಧ ಗುಂಡು ತಗುಲಿ ತೀವ್ರವಾಗಿ ಗಾಯಗೊಂಡಿದ್ದರು. ವಿಷಯ ತಿಳಿದ ಗ್ರಾಮಸ್ಥರು ಯಶೋಧ ಅವರನ್ನು ಗೋಣಿಕೊಪ್ಪ ಆಸ್ಪತ್ರೆ ದಾಖಲು ಮಾಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಾಗರ್ ಅವರ ಮೃತ ದೇಹವನ್ನು ಪೊಲೀಸರು, ಗ್ರಾಮಸ್ಥರ ನೆರವಿನಿಂದ ಹೊರತೆಗೆದಿದ್ದಾರೆ. ಈ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

× Chat with us