ಕಲಬುರ್ಗಿ: ತುಂಡಾಗಿ ಬಿದ್ದಿದ್ದ ವಿದ್ಯುತ್ನ ಸರ್ವೀಸ್ ವೈರ್ ತಗುಲಿ ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಚಿಂಚೋಳ್ಳಿ ಪಟ್ಟಣದ ಧನಗರ್ದಲ್ಲಿ ನಡೆದಿದೆ.
ಮೃತರನ್ನು ತಾಯಿ ಶರಣಮ್ಮ(45), ಮಕ್ಕಳಾದ ಮುಖೇಶ್(22), ಸುರೇಶ್(20) ಎಂದು ಗುರುತಿಸಲಾಗಿದೆ.
ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಿತ್ತು. ಶನಿವಾರ ತಡರಾತ್ರಿ ಕೂಡ ಗುಡುಗು ಸಹಿತ ಮಳೆ ಆರಂಭವಾಗಿದೆ. ಮನೆ ಸಮೀಪ ಇದ್ದ ತೊಗರಿ ಹೊಟ್ಟು ನೆನೆಯುತ್ತದೆ ಎಂದು ಅದನ್ನು ಮುಚ್ಚಲು ಶರಣಮ್ಮ ಹೊರಹೋಗಿದ್ದಾರೆ.
ಅವರನ್ನು ಹಿಂಬಾಲಿಸಿ ಮಕ್ಕಳು ಕೂಡ ಹೋಗಿದ್ದು, ಈ ಸಂದರ್ಭದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಈ ಅವಘಡ ಸಂಭವಿಸಿದೆ.
ಹೆಂಡತಿ ಹಾಗೂ ಮಕ್ಕಳನ್ನು ಹುಡುಕಿಕೊಂಡು ಬಂದ ತಂದೆ ಅಂಬಣ್ಣ ಅವರಿಗೂ ಕೂಡ ವಿದ್ಯುತ್ ತಗಲಿದೆಯಾದರೂ ಅವರು ಅಪಾಯದಿಂದ ಪಾರಾಗಿದ್ದಾರೆ. ಒಂದೇ ಕುಟುಂಬದ ಮೂವರು ಮೃತಪಟ್ಟ ಹಿನ್ನಲೆಯಲ್ಲಿ ಸಂಬಂಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಂಚೋಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.