ಅಹಮದಾಬಾದ್: ಗುಜರಾತ್ನಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಅರೆಸೇನಾಪಡೆ ಯೋಧರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ. ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಭಾರೀ ರಾಜಕೀಯ ಚಟುವಟಿಕೆ ನಡೆಯುತ್ತಿರುವ ಗುಜರಾತ್ನಲ್ಲಿ ಶನಿವಾರ ಪೋರಬಂದರ್ನಲ್ಲಿ ಘಟನೆಯೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ಪೋರಬಂದರ್ನಲ್ಲಿ, ಚುನಾವಣಾ ಕೆಲಸದಲ್ಲಿ ನಿರತರಾಗಿದ್ದ ಸಿಆರ್ ಪಿಎಫ್ ಯೋಧರ ನಡುವೆ ಘರ್ಷಣೆ ನಡೆದಿದ್ದು, ಇವರಲ್ಲಿ ಒಬ್ಬ ಯೋಧ ಎ.ಕೆ. -56 ನಿಂದ ಸಹೋದ್ಯೋಗಿಗಳತ್ತ ಗುಂಡು ಹಾರಿಸಿದ್ದಾನೆ. ಇಬ್ಬರು ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಪೋರಬಂದರ್ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಎಎಂ ಶರ್ಮಾ ಘಟನೆಯನ್ನು ಖಚಿತಪಡಿಸಿದ್ದಾರೆ. ವಾಗ್ವಾದ ನಡೆದಾಗ ಅವರು ಕರ್ತವ್ಯದಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಅವರು ಪೋರಬಂದರ್ನಿಂದ ಸುಮಾರು 25 ಕಿಮೀ ದೂರದಲ್ಲಿರುವ ತುಕ್ಡಾ ಗೋಸಾ ಗ್ರಾಮದ ಸೈಕ್ಲೋನ್ ಕೇಂದ್ರದಲ್ಲಿ ತಂಗಿದ್ದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಘರ್ಷಣೆಯಲ್ಲಿ ತೊಡಗಿದ್ದ ಯೋಧರು ಮಣಿಪುರದ ಸಿಆರ್ ಪಿಎಫ್ ಬೆಟಾಲಿಯನ್ ಭಾಗವಾಗಿದ್ದು, ಗುಜರಾತ್ಗೆ ಚುನಾವಣಾ ಕರ್ತವ್ಯಕ್ಕೆಂದು ನಿಯೋಸಲಾಗಿತ್ತು.
ಪೋರಬಂದರ್ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಡಿಸೆಂಬರ್ 1 ರಂದು ಮತದಾನ ನಡೆಯಲಿದ್ದು, ಎರಡನೇ ಹಂತದಲ್ಲಿ ಡಿಸೆಂಬರ್ 5 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಹೊರಬರಲಿದೆ