ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿಯೇ ಚಪ್ಪಲಿ ಹಿಡಿದು ಜಗಳ ಮಾಡಿದ ಗ್ರಾಪಂ ಅಧ್ಯಕ್ಷೆ

ರಾಯಚೂರು : ಗ್ರಾಮಸ್ಥರು ಗ್ರಾಮ ಪಂಚಾಯಿತಿಯ ಕಾರ್ಯವೈಖರಿಗಳ ಕುರಿತು ಕೇಳಿದಕ್ಕಾಗಿ ಕೋಪಗೊಂಡ ಗ್ರಾಮಪಂಚಾಯಿತಿ ಅಧ್ಯಕ್ಷೆ ಚಪ್ಪಲಿ ಹಿಡಿದು ಜನರ ಮೇಲೆ ಜಗಳ ಮಾಡಿದ್ದಾರೆ.

ಹೌದು, ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕ್ಕಿನ ತೋರಣದಿನ್ನಿ ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ಗ್ರಾಮಪಂಚಾಯಿತಿ ಅಧ್ಯಕ್ಷೆ ಚಂದ್ರಮ್ಮ ಎಂಬುವವರೇ ಹಲ್ಲೆ ಮಾಡಿದವರು. ಇವರು ಕಸ ವಿಲೇವಾರಿ ವಾಹನದ ಚಾಲಕನನ್ನಾಗಿ ತಮ್ಮ ಸಂಬಂಧಿಯನ್ನೆ ನೇಮಿಸಿಕೊಂಡಿದ್ದರು. ಈ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಯ ಕಚೇರಿ ಬಳಿ ಬಂದು ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟಗೆದ್ದ ಚಂದ್ರಮ್ಮ ಗ್ರಾಮದ ಬಸವರಾಜ್‌ ಎಂಬುವವರ ಕತ್ತಿನ ಪಟ್ಟಿಯ ಕಾಲರ್‌ ಹಿಡಿದು ದರ್ಪ ತೋರಿದ್ದಾರೆ. ಇದಕ್ಕೆ ಅಧ್ಯಕ್ಷೆ ಚಂದ್ರಮ್ಮ ಅವರ ಪತಿಯೂ ಕೂಡ ಸಾಥ್‌ ನೀಡುತ್ತಿದ್ದು. ಅಧ್ಯಕ್ಷೆಯು ತಮ್ಮ ಅಧ್ಯಕ್ಷೆ ಸ್ಥಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದು ಗ್ರಾಮಸ್ಥರು ಗಾಮ ಪಂಚಾಯಿತಿಯ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.