ಮಂಡ್ಯ : ನಾವು ಯಾವುದೇ ಕಾರಣಕ್ಕೂ ಬಿಡಲ್ಲ ಇವತ್ತಲ್ಲ ನಾಳೆ ಹೊಡದೆ ಹೊಡಿತೀವಿ. ಇದು ಆತ್ಮೀಯ ಗೆಳೆಯನನ್ನ ಕಳೆದುಕೊಂಡ ಸ್ನೇಹಿತರ ಆಕ್ರೋಶಬರಿತ ಮಾತು. ಇಂತಹ ಮಾತುಗಳು ಕೇಳಿಬಂದಿದ್ದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ. ಕಳೆದ ರಾತ್ರಿ ಬಾರ್ ಮುಂದೆ ನಿಂತಿದ್ದ ಯುವಕನನ್ನ ಮಾತನಾಡಿಸುವ ನೆಪದಲ್ಲಿ ಬಂದ ಹಂತಕನೊಬ್ಬ ಕೊಚ್ಚಿ ಕೊಲೆಗೈದಿದ್ದಾನೆ.
ಅವನ್ನದ್ದು ಮಧ್ಯಮವರ್ಗದ ಕುಟುಂಬ. ತಾನಾಯ್ತು ತನ್ನ ಕೆಲಸವಾಯ್ತು ಎಂಬಂತಿದ್ದ ಆತ, ಬೆಳಿಗ್ಗೆ ಡ್ರೈವಿಂಗ್ ಮುಗಿಸಿ ಸಂಜೆ ವೇಳೆ ಬಾರ್ನಲ್ಲಿ ದುಡಿಯುತ್ತಿದ್ದ. ಕಷ್ಟದಲ್ಲಿದ್ದ ಸ್ನೇಹಿತನಿಗೆ ತನ್ನ ಮನೆಯನ್ನೇ ಬಾಡಿಗೆ ನೀಡಿದ್ದವನು ಇದೀಗ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ. ಕಷ್ಟಕ್ಕೆ ಹೆಗಲು ಕೊಟ್ಟ ಗೆಳೆಯನಿಗೆ ಮುಹೂರ್ತ ಇಟ್ಟಿದ್ದಾನೆ.
ಕೊಲೆಯಾದ ಯುವಕನ ಹೆಸರು ರವಿ. ಬೆಳಗೊಳ ಗ್ರಾಮದ ನಿವಾಸಿ. 28 ವರ್ಷದ ರವಿ ಮನೆಯ ಜವಬ್ದಾರಿ ಹೊತ್ತು ಹಗಲಿರುಳು ದುಡಿಯುತ್ತಿದ್ದನು. ಹಗಲಿನಲ್ಲಿ ಗಾರ್ಮೆಂಟ್ಸ್ ಕಾರ್ಮಿಕರು ಹಾಗೂ ಶಾಲಾ ಮಕ್ಕಳನ್ನು ಡ್ರಾಪ್ ಪಿಕಪ್ ಮಾಡ್ತಿದ್ದ ಈತ ಸಂಜೆಯಾದರೆ ಬೆಳಗೊಳ ಗ್ರಾಮದಲ್ಲಿರುವ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ. ಹೀಗೆ ಕೈ ತುಂಬ ಕೆಲಸ, ನೆಮ್ಮದಿಯ ಸಂಸಾರ ಸಾಗಿಸುತ್ತಿದ್ದವನನ್ನ ಕಳೆದ ರಾತ್ರಿ ಶರತ್ ಎಂಬಾತ ಕೊಲೆಗೈದಿದ್ದಾನೆ. ಮಾತನಾಡುತ್ತಲೆ ಬೆನ್ನಹಿಂದೆ ಬರುವ ಶರತ್ ಮೊದಲಿಗೆ ಆತನ ಕತ್ತು ಕೂಯ್ದು ಮನಸ್ಸೋ ಇಚ್ಛೆ ಕೊಚ್ಚಿದ್ದಾನೆ. ಈ ಭಯಾನಕರ ದೃಶ್ಯ ಬಾರ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರವಿ ಸಹಾಯಕ್ಕೆ ಓಡೋಡಿ ಬಂದ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವಿಧಿಯಾಟ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.
ಅಷ್ಟಕ್ಕೂ ಕೊಲೆಗೈದ ಶರತ್, ರವಿಯ ಆತ್ಮೀಯ ಸ್ನೇಹಿತ. ಶರತ್ ಕುಟುಂಬ ಕಷ್ಟದಲ್ಲಿದ್ದ ಕಾರಣಕ್ಕೆ ತನ್ನ ಮನೆಯನ್ನೆ ಕಡಿಮೆ ಬಾಡಿಗೆಗೆ ನೀಡಿ ನೆರವಾಗಿದ್ದನು. ರವಿ ಸವಿತಾ ವೈನ್ ಸ್ಟೋರ್ನಲ್ಲಿ ಕೆಲಸ ಮಾಡಿಕೊಂಡಿದ್ರೆ, ಶರತ್ ಬಾರ್ ಎದುರು ಕಬಾಬ್ ಅಂಗಡಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಪ್ರತಿದಿನ ಕೆಲಸ ಮುಗಿಸಿ ಒಟ್ಟಿಗೆ ಸೇರ್ತಿದ್ರ ಇಬ್ಬರು ಒಂದೇ ಮನೆಯಲ್ಲಿ ಉಂಡು ತಿಂದು ಮಲಗುತ್ತಿದ್ದರು. ಹೀಗೀರುವಾಗಲೇ ಶರತ್ ರವಿಯನ್ನು ಕೊಲೆಗೈದಿರುವುದು ಇಡೀ ಗ್ರಾಮಕ್ಕೆ ಆಘಾತ ತರಿಸಿದೆ. ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಮುಳುಗಿದೆ. ಸದ್ಯ ಕೆಆರ್ಎಸ್ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಕೃತ್ಯಕ್ಕೆ ಬಳಸಲಾಗಿದ್ದ ಮಾರಕಾಸ್ತ್ರ ವಶಪಡಿಸಿಕೊಂಡಿದ್ದು, ಪರಾರಿಯಾಗಿರುವ ಹಂತಕನಿಗೆ ಬಲೆ ಬೀಸಿದ್ದಾರೆ. ಆರೋಪಿ ಶರತ್ ಬಂಧಿಸಿ ವಿಚಾರಣೆ ನಡೆಸಿದ ಬಳಿಕವೇ ಕೊಲೆಗೆ ಕಾರಣ ತಿಳಿದು ಬರಲಿದೆ.