ವರದಕ್ಷಿಣೆ ಕಿರುಕುಳ: ಪ್ರೀತಿಸಿ ವಿವಾಹವಾಗಿದ್ದ ಗೃಹಿಣಿ ಆತ್ಮಹತ್ಯೆ

ವಿರಾಜಪೇಟೆ: ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿಯೊಬ್ಬಳು ನೇಣಿಗೆ ಶರಣಾದ ಘಟನೆ ಮಡಿಕೇರಿ ತಾಲ್ಲೂಕಿನ ಸಣ್ಣಪುಲಿಕೋಟು ಬಳಿಯ ಅಯ್ಯಂಗೇರಿ ಗ್ರಾಮದಲ್ಲಿ ನಡೆದಿದೆ. ಮೃತಳ ಪೋಷಕರು ವರದಕ್ಷಿಣೆ ಕಿರುಕುಳದಿಂದ ತಮ್ಮ ಮಗಳು ಸಾವನ್ನಪ್ಪಿರುವುದಾಗಿ ಆರೋಪಿಸಿದ್ದಾರೆ.

ಅಯ್ಯಂಗೇರಿ ಗ್ರಾಮದ ನಿವಾಸಿ ಎಂ.ಎಸ್.ಮೊಹಮ್ಮದ್ ಮತ್ತು ಅಲೀಮಾ ದಂಪತಿ ಪ್ರಥಮ ಪುತ್ರಿ ಎಂ.ಎಂ.ಅಮೀರಾ (21) ಮೃತ ದುರ್ದೈವಿ.

ಅಮೀರಾಳನ್ನು ಕಕ್ಕಬ್ಬೆ ಕುಂಜಿಲ ಗ್ರಾಮದ ನಿವಾಸಿ ಕುಂಡಂಡ ಅಬ್ದುಲ್ಲಾ ಮತ್ತು ಜಮೀಲಾ ದಂಪತಿಗಳ ಪುತ್ರ ರುವೈಜ್ ಕೆ.ಎ ಎಂಬವನಿಗೆ ಕಳೆದ ವರ್ಷ ನವೆಂಬರ್‌ನಲ್ಲಿ ಮದುವೆ ಮಾಡಿಕೊಡಲಾಗಿತ್ತು. ರುವೈಜ್ ಹಾಗೂ ಅಮೀರಾ ಕಾಲೇಜು ಅವಧಿಯಲ್ಲೇ ಪ್ರೇಮಿಸುತ್ತಿದ್ದರು ಎನ್ನಲಾಗಿದ್ದು, ಈ ಸಂಬಂಧ ಎರಡೂ ಮನೆಯವರ ಒಪ್ಪಿಗೆ ಮೇರೆಗೆ ಮದುವೆ ಮಾಡಿಕೊಡಲಾಗಿತ್ತು. ಮನೆಯಲ್ಲಿ ರುವೈಜ್ ಪೋಷಕರು ಅಮೀರಾಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಖುದ್ದು ಅಮೀರಾ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದಳು ಎನ್ನಲಾಗಿದೆ. ಅಲ್ಲದೆ, ಮನೆಗೆ ಕರೆದುಕೊಂಡು ಹೋಗುವಂತೆ ಪೋಷಕರ ಬಳಿ ಹೇಳಿದ ಮೇರೆಗೆ ಒಂದು ತಿಂಗಳ ಹಿಂದೆ ಅಮೀರಾಳನ್ನು ಪೋಷಕರು ಮನೆಗೆ ಕರೆದುಕೊಂಡು ಬಂದಿದ್ದರು.

ಮನೆಯಲ್ಲೇ ಇದ್ದ ಅಮೀರಾ ಅಯ್ಯಂಗೇರಿ ಸ್ವಗೃಹದ ಕೋಣೆಯೊಂದರಲ್ಲಿ ಹಗ್ಗದಿಂದ ಮನೆಯ ಮೇಲ್ಚಾವಣಿಗೆ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಕರಣಕ್ಕೆ ಸಂಭಂದಿಸಿದಂತೆ ಭಾಗಮಂಡಲ ಪೊಲೀಸು ಠಾಣೆಯಲ್ಲಿ ಮೃತಳ ತಂದೆ ಮೊಹಮ್ಮದ್ ನೀಡಿದ ದೂರಿನ ಮೇರೆಗೆ ಮೃತಳ ಪತಿ ರುವೈಜ್‌ನ ಮೇಲೆ ಆತ್ಮಹತ್ಯೆಗೆ ಪ್ರಚೋದನೆ 306 ಐ.ಪಿ.ಸಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮಡಿಕೇರಿ ತಹಸಿಲ್ದಾರ್ ಅವರ ಸಮ್ಮುಖದಲ್ಲಿ ಶವಪರೀಕ್ಷೆ ನಡೆಸಿ ಮೃತದೇಹವನ್ನು ಕುಟಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.

× Chat with us