ನಂಜನಗೂಡು ತಾಂಡ್ಯದ ಕಾರ್ಖಾನೆಯಿಂದಲೇ ಅಪಹರಣ, ಹಣ ಪಡೆದ ಬಳಿಕ ತಿ. ನರಸೀಪುರ ಬಳಿ ಅಪಹೃತರ ಬಿಡುಗಡೆ
ಮೈಸೂರು: ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶದಿಂದ ಉದ್ಯಮಿ ಮತ್ತು ಅವರ ಪುತ್ರನನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕಿಡ್ನಾಪ್ ವಾಡಿರುವ ಅಪಹರಣಕಾರರು, ಕೆಲ ಹೊತ್ತಿನ ನಂತರ ಅವರನ್ನು ಬಿಡುಗಡೆ ಮಾಡಿ ಪರಾರಿಯಾಗಿದ್ದು, ಪ್ರಕರಣ ಸಾಕಷ್ಟು ಅನುವಾನಗಳನ್ನು ಸೃಷ್ಟಿಸಿದೆ.
ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೈಸೂರಿನ ಜೆ.ಪಿ.ನಗರ ನಿವಾಸಿ ದೀಪಕ್ಕುಮಾರ್ ಕೆಡಿಯಾ (50) ಹಾಗೂ ಪುತ್ರ ಹರ್ಷ ಕುವಾರ್ ಕೆಡಿಯಾ (28) ಅವರನ್ನು ದುಷ್ಕರ್ಮಿಗಳು ಸೋಮವಾರ ಮಧ್ಯಾಹ್ನ ಕಾರ್ಖಾನೆ ಬಳಿ ಅಪಹರಿಸಿ ಸಂಜೆ ವೇಳೆ ತಿ.ನರಸೀಪುರದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ದೀಪಕ್ ಮತ್ತು ಹರ್ಷ ಸೋಮವಾರ ಮೈಸೂರಿನಿಂದ ಕಾರ್ಖಾನೆಗೆ ತೆರಳಿದ್ದು, ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿ ಕಾರಿನಲ್ಲಿ ಅಪಹರಿಸಿದ್ದ ಕಿಡಿಗೇಡಿಗಳು ಕುಟುಂಬದವರಿಗೆ ಕರೆ ವಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ಧಾರೆ.
ಕುಟುಂಬದವರು ಅಪಹರಣಕಾರರು ಹೇಳಿದ ಸ್ಥಳಕ್ಕೆ ಹಣ ಕಳುಹಿಸಿದ ಬಳಿಕ ಸಂಜೆ ಹೊತ್ತಿಗೆ ಇಬ್ಬರನ್ನೂ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ದೀಪಕ್ ಹಾಗೂ ಹರ್ಷ ಅವರು ಮೈಸೂರು ನಗರಕ್ಕೆ ಬಂದು ನಂಜನಗೂಡಿಗೆ ಹೋಗಿ ಇಲ್ಲಿ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ವಿವಿಧ ಆಯಾಮದಲ್ಲಿ ವಿಚಾರಣೆ: ಉದ್ಯಮಿ ಹಾಗೂ ಪುತ್ರ ಅಪಹರಣವಾಗಿ ಬಿಡುಗಡೆಯಾಗಿರುವ ಬಗ್ಗೆ ಬಂದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ
ಅಪಹರಣಕ್ಕೆ ಕಾರಣವೇನು? ಅಪಹರಣ ಮಾಡಿದವರು ಯಾರು ? ಕಾರ್ಖಾನೆಗೆ ನುಸುಳಿ ಹೇಗೆ ಅಪಹರಣ ಮಾಡಿದರು ಮತ್ತು ಕಿಡ್ನಾಪ್ ಮಾಡಿ ಇದ್ದಕ್ಕಿದ್ದ ಹಾಗೆ ಬಿಟ್ಟು ಹೋಗಲು ಕಾರಣವೇನು? ಎಂಬಿತ್ಯಾದಿ ಆಯಾಮದಲ್ಲಿ ವಿಚಾರಣೆ ನಡೆಸುತ್ತಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ದೀಪಕ್ ಮೇಲೂ ಪ್ರಕರಣ ಇದೆ: ಅಪಹರಣಗೊಂಡಿದ್ದ ಉದ್ಯಮಿ ದೀಪಕ್ ಅವರ ಮೇಲೆ ಈ ಹಿಂದೆ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಯೂರಿಯಾವನ್ನು ಬಳಸಿಕೊಂಡು ಗಮ್ ತಯಾರಿಸುತ್ತಿದ್ದರು ಎಂದು ಎಫ್ ಐಆರ್ ಕೂಡ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.