ಬೆಂಗಳೂರು : ತಾಯಿ, ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಬಾಗಲಗುಂಟೆಯ ರವೀಂದ್ರನಗರದಲ್ಲಿ ನಡೆದಿದೆ. ನವನೀತಾ(33), ಸೃಜನ್(11) ಕೊಲೆಯಾದವರು.
ನಿನ್ನೆ ಸಂಜೆ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಾಗಲಗುಂಟೆ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಚಂದ್ರುನೇ ತನ್ನ ಪತ್ನಿ ಹಾಗೂ ಮಗನನ್ನು ಕೊಂದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಗಲಗುಂಟೆ ಪೊಲೀಸರು ಪರಾರಿಯಾದ ಚಂದ್ರು ಪತ್ತೆಗಾಗಿ ಶೋಧ ನಡೆಸಿದ್ದಾರೆ.
ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿ ಪತಿ ಚಂದ್ರುವೇ ಕೊಂದಿರಬಹುದೆಂದು ಮೃತ ನವನೀತಾ ಕುಟುಸ್ಥರು ಅರೋಪಿಸಿದ್ದಾರೆ. ಕೊಲೆಯಾದ ಮಹಿಳೆ ಆಂಧ್ರ ಪ್ರದೇಶ ಮೂಲದವರಾಗಿದ್ದು, ಕಳೆದ ಮೂರು ವರ್ಷಗಳಿಂದ ರವೀಂದ್ರ ನಗರದಲ್ಲಿ ವಾಸವಿದ್ದರು. ಪತಿಯಿಂದ ಕಳೆದ 2 ವರ್ಷಗಳಿಂದ ದೂರವಾಗಿ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಳು. ಇನ್ನು ಈ ಪ್ರಕರಣ ಭೇದಿಸಲು ಡಿಸಿಪಿ ಶಿವಪ್ರಕಾಶ್ ದೇವರಾಜ ಅವರು ವಿಶೇಷ ತಂಡವನ್ನು ರಚಿಸಿದ್ದಾರೆ. ಈ ಬಗ್ಗೆ ಪೊಲೀಸರು ಚಂದ್ರುನನ್ನು ಹಿಡಿದು ವಿಚಾರಣೆಗೊಳಪಡಿಸಿದಾಗ ಕೊಲೆ ಸತ್ಯಾಸತ್ಯತೆ ತಿಳಿಯಲಿದೆ.