ಚಾಮರಾಜನಗರ : ನಾಡ ಬಂದೂಕಿನಿಂದ ಜಿಂಕೆ ಕೊಂದು ಅರಣ್ಯ ಪ್ರದೇಶದಲ್ಲೆ ಮಾಂಸ ಕತ್ತರಿಸುತ್ತಿದ್ದ ಇಬ್ಬರು ಆರೋಪಿಗಳು ಸಿಕ್ಕಿಬಿದ್ದು, ಉಳಿದ ಮೂರು ಮಂದಿ ಪರಾರಿಯಾಗಿರುವ ಘಟನೆ ಕೊಳ್ಳೇಗಾಲ ವನ್ಯಜೀವಿ ವಲಯದಲ್ಲಿ ನಡೆದಿದೆ. ಕುಣಗಳ್ಳಿ ಗ್ರಾಮದ ದಿವಂಗತ ಪುಟ್ಟಮಾದಶೆಟ್ಟಿಅವರ ಮಗ ಮೂರ್ತಿ( 26) ಮತ್ತು ದಿ. ಮರಣಶೆಟ್ಟಿ ಅವರ ಪುತ್ರ ರಾಮು ಬಂಧಿತರಾಗಿದ್ದಾರೆ. ಇದೆ ವೇಳೆ ದೊಡ್ಡಿಂದುವಾಡಿ ಗ್ರಾಮದ ಶಾಂತರಾಜು ಅಲಿಯಾಸ್ ದಪ್ಪ ತಲೆ, ವಿಜಯ, ಮಧು ಪರಾರಿಯಾಗಿದ್ದಾರೆ.
ಕೊಳ್ಳೇಗಾಲ ವನ್ಯಜೀವಿ ವಲಯದಲ್ಲಿ ಮಧುವನಹಳ್ಳಿ ಗಸ್ತಿನ ರಾಯರಹಳ್ಳ ಅರಣ್ಯ ಪ್ರದೇಶದಲ್ಲಿ ಐವರು ಆರೋಪಿಗಳು ಅರಣ್ಯ ಪ್ರವೇಶಿಸಿ ನಾಡ ಬಂದೂಕು ಬಳಸಿ ವನ್ಯಜೀವಿಯಾದ ಜಿಂಕೆಯನ್ನು ನಾಡ ಬಂದೂಕಿನಿಂದ ಬೇಟೆಯಾಡಿ ಮಾಂಸ ಪಾಲು ಮಾಡುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆ ಬಿಆರ್ಟಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪು ಜೆ. ಕಾಂಟ್ರ್ಯಾಕ್ಟರ್, ಎಸಿ ಎಫ್ ಮಹದೇವಯ್ಯ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ವಾಸು, ಉಪ ಅಧಿಕಾರಿ ಮಹೇಶ, ಪ್ರಭುಸ್ವಾಮಿ, ಗಸ್ತು ಅರಣ್ಯಪಾಲಕರಾದ ಸಂಜುನಾಥ ಅಯಟ್ಟಿ, ಮಹೇಶ, ಅರಣ್ಯ ವೀಕ್ಷಕರಾದ ಬಸವರಾಜ ಹಬ್ಬದ, ಸತೀಶ, ತಮ್ಮಯ್ಯಗೌಡ, ನಂಜುಂಡಸ್ವಾಮಿ ಇನ್ನಿತರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಬಂಧಿತ ಆರೋಪಿಗಳಿಂದ ನಾಲ್ಕು ಚಾಕು, ಎರಡು ಮೊಬೈಲ…, 35ಕೆಜಿ ಜಿಂಕೆ ಮಾಂಸ , ಮೂರು ಬೈಕ್ ಸೇರಿದಂತೆ ಇನ್ನಿತರೆ ಪದಾರ್ಥಗಳನ್ನು ವಶಕ್ಕೆ ಪಡೆಯುವ ಮೂಲಕ ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಮಧುವನಹಳ್ಳಿ, ಕುಣಗಳ್ಳಿ, ಅರೇ ಪಾಳ್ಯ ಅರಣ್ಯ ಗಸ್ತು ವ್ಯಾಪ್ತಿಯಲ್ಲಿ ಜಿಂಕೆ ಬೇಟೆ ಪ್ರಕರಣ ಹೆಚ್ಚಾಗಿದೆ. ಆದರೂ ಅರಣ್ಯಾಧಿಕಾರಿಗಳ ಕಾರ್ಯಾಚರಣೆ ವನ್ಯಜೀವಿ ಪ್ರಿಯರಲ್ಲಿ ಪ್ರಶಂಸೆಗೆ ಭಾಜನವಾಗಿದ್ದು ಮುಂದಿನ ದಿನಗಳಲ್ಲಿ ಆರೋಪಿಗಳ ಬಗ್ಗೆ ನಿಗಾ ವಹಿಸುವಂತೆ ಅರಣ್ಯಾಧಿಕಾರಿಗಳು ಮುಂದಾಗಬೇಕು ಎಂದು ವನ್ಯಜೀವಿ ಪ್ರಿಯರು ಕೋರಿದ್ದಾರೆ.