ವಿಜಯವಾಡ : ಆಂಧ್ರಪ್ರದೇಶದ ವಿಜಯವಾಡದಲ್ಲಿ ಇಬ್ಬರು ಎಲೆಕ್ಟ್ರಿಷಿಯನ್ಗಳು ತರಗತಿಯ ಕೊಠಡಿಯಲ್ಲಿ ಸ್ಟೀಲ್ ಬೆಂಚಿನ ಮೇಲೆ ಕುಳಿತಿದ್ದ ಮೂವರು ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಮೋಜಿಗಾಗಿ ಉದ್ದೇಶಪೂರ್ವಕವಾಗಿ ಪದೇ ಪದೇ ವಿದ್ಯುತ್ ಶಾಕ್ ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದು ಇಬ್ಬರನ್ನೂ ಬಂಧಿಸಿದ್ದಾರೆ.
ಈಡುಪುಗಲ್ಲು ಗ್ರಾಮದ ಜಿಲ್ಲಾ ಪರಿಷತ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಓರ್ವ ಬಾಲಕಿ ಪ್ರಜ್ಞೆ ತಪ್ಪಿದ್ದು, ಇನ್ನಿಬ್ಬರು ಅಸ್ವಸ್ಥಗೊಂಡಿದ್ದರು. ವಿದ್ಯಾರ್ಥಿಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ.
ಈ ಘಟನೆ ಸಂಬಂಧ ಪೊಲೀಸರು ಆರೋಪಿಗಳಾದ ಕಂಕಿಪಾಡು ನಿವಾಸಿಗಳಾದ ಮರಿವಾಡ ಸೂರಿಬಾಬು (30) ಮತ್ತು ವಿಜಯ ಶೇಖರ್ (45) ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಮೋಜಿಗಾಗಿ ಈ ಕೃತ್ಯ ಎಸಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಎಲೆಕ್ಟ್ರಿಕಲ್ ಔಟ್ಲೆಟ್ಗಳನ್ನು ಸರಿಪಡಿಸಲು ಶಾಲಾ ಆಡಳಿತ ಮಂಡಳಿಯವರು ಎಲೆಕ್ಟ್ರಿಷಿಯನ್ ಗಳನ್ನು ಕರೆಸಿದ್ದರು. ಆರೋಪಿ ಸೂರಿಬಾಬು ಸಾಕೆಟ್ ಬದಲಾಯಿಸುವಾಗ ಸ್ಟೀಲ್ ಬೆಂಚ್ ಗಳಿಗೆ ವಿದ್ಯುತ್ ತಂತಿ ಜೋಡಿಸಿ ಬೆಂಚ್ ಮೇಲೆ ಕುಳಿತಿದ್ದ ಮೂವರು ಹುಡುಗಿಯರಿಗೆ ವಿದ್ಯುತ್ ಶಾಕ್ ಕೊಟ್ಟಿದ್ದರು.
ಆರೋಪಿ ಎಲೆಕ್ಟ್ರಿಷಿಯನ್ ಪದೇ ಪದೇ ಈ ಕೃತ್ಯ ಎಸಗಿದ್ದರಿಂದ ಬಾಲಕಿಯೋರ್ವಳು ಶಾಲೆಯಲ್ಲಿ ಕುಸಿದು ಬಿದ್ದಿದ್ದಾಳೆ. ನಂತರ ಬಾಲಕಿಯರು ಈ ವಿಚಾರವನ್ನು ಮನೆಯಲ್ಲಿ ಪೋಷಕರಿಗೆ ತಿಳಿಸಿದ್ದು, ಬಳಿಕ ದೂರು ದಾಖಲಿಸಲಾಯಿತು. ಈ ಪ್ರದೇಶದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ಸೂರಿಬಾಬು ಮತ್ತು ಶೇಖರ್ ಅವರನ್ನು ಶಾಲೆಯಲ್ಲಿ ವಿದ್ಯುತ್ ಸಾಕೆಟ್ಗಳನ್ನು ಸರಿಪಡಿಸಲು ಗುರುವಾರ ನೇಮಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತರಗತಿಯ ಬಾಲಕಿಯರ ಬೆಂಚಿನ ಬಳಿ ಸಾಕೆಟ್ ಸರಿಪಡಿಸುತ್ತಿದ್ದಾಗ ಸೂರಿಬಾಬು ಅವರು ಉದ್ದೇಶಪೂರ್ವಕವಾಗಿ ಸ್ಟೀಲ್ ಬೆಂಚ್ಗೆ ವಿದ್ಯುತ್ ತಂತಿಯನ್ನು ಜೋಡಿಸಿ ಬೆಂಚ್ ಮೇಲೆ ಕುಳಿತಿದ್ದ ಮೂವರು ವಿದ್ಯಾರ್ಥಿನಿಯರಿಗೆ ವಿದ್ಯುತ್ ಶಾಕ್ ನೀಡಿದ್ದಾನೆ.
ಈ ಕೃತ್ಯವನ್ನು ಹಲವು ಬಾರಿ ಪುನರಾವರ್ತಿಸಿದ್ದು, ಬಾಲಕಿಯರು ಕಿರುಚಿಕೊಂಡ ಬಳಿಕವೇ ನಿಲ್ಲಿಸಿದ್ದಾನೆ ಎನ್ನಲಾಗಿದೆ. ನಂತರ ವಿದ್ಯಾರ್ಥಿನಿಯೊಬ್ಬಳು ವಾಶ್ ರೂಮ್ಗೆ ಹೋಗಿ ಮುಖ ತೊಳೆದ ಕೂಡಲೇ ಪ್ರಜ್ಞೆ ತಪ್ಪಿದ್ದಾಳೆ. ಶಾಲೆಯ ಪ್ರಾಂಶುಪಾಲರು ತಕ್ಷಣ ಬಾಲಕಿಗೆ ಚಿಕಿತ್ಸೆ ನೀಡಿದ ವೈದ್ಯರನ್ನು ಕರೆಸಿ ಆಕೆ ದುರ್ಬಲಳಾಗಿದ್ದಾಳೆ ಎಂದು ಹೇಳಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಕೆಲವು ಗಂಟೆಗಳ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು. 15 ವರ್ಷದ ವಿದ್ಯಾರ್ಥಿನಿ ಘಟನೆಯ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ತಕ್ಷಣ ಶಾಲೆಗೆ ತಲುಪಿದ ಅವರು ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಪೊಲೀಸರಿಗೆ ದೂರು ನೀಡಿ ಮಂಡಲ ಶಿಕ್ಷಣಾಧಿಕಾರಿಗಳಿಗೂ ವಿಷಯ ತಿಳಿಸಿದ್ದಾರೆ.