ಅರ್ಧ ರಾಜ್ಯ ಅನ್‌ಲಾಕ್‌: ಕೊಡಗು, ಚಾ.ನಗರ, ಮಂಡ್ಯ ಸೆಮಿಲಾಕ್‌, ಮೈಸೂರಿಗಿಲ್ಲ ರಿಲೀಫ್‌

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಎರಡನೇ ಅಲೆ ಕಡಿಮೆಯಾಗುತ್ತಿರುವ ಹಾಗೂ ಮೂರನೇ ಅಲೆ ಆತಂಕದ ನಡುವೆ ಪಾಸಿಟಿವಿಟಿ ಪ್ರಮಾಣ ಶೇಕಡಾ 5 ಕ್ಕಿಂತಲೂ ಕಡಿಮೆ ಇರುವ 16 ಜಿಲ್ಲೆಗಳಲ್ಲಿ ಸೋಮವಾರದಿಂದ ಲಾಕ್‌ಡೌನ್ ಸಡಿಲಿಕೆ ಮಾಡಿ ತಜ್ಞರ ಸಲಹೆಯಂತೆ 2.0 ಅನ್‌ಲಾಕ್ ಜಾರಿಗೆ ತರಲು ನಿರ್ಧರಿಸಲಾಗಿದೆ. ಇದರೊಂದಿಗೆ ಆರ್ಥಿಕ ಚಟುವಟಿಕೆಗಳು ಗರಿಗೆದರಿದೆ.

ಮೊದಲ ಹಂತದಲ್ಲಿ 19 ಜಿಲ್ಲೆಗಳಲ್ಲಿ 1.0 ಅನ್‌ಲಾಕ್‌ ಅನ್ನು ಜಾರಿಗೊಳಿಸಿ ಶೇ.10 ಕ್ಕಿಂತ ಪಾಸಿಟಿವಿಟಿ ಪ್ರಮಾಣ ಹೆಚ್ಚಿಸಿರುವ 11 ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿಸಲಾಗಿತ್ತು. ಇದೀಗ 16 ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಗೊಳಿಸಿದ್ದು 13 ಜಿಲ್ಲೆಗಳಲ್ಲಿ ಸೆಮಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

ಪಾಸಿಟಿವಿಟಿ ದರ ಶೇ. 10ಕ್ಕಿಂತ ಹೆಚ್ಚಿರುವ ಮೈಸೂರು ಜಿಲ್ಲೆಯಲ್ಲಿ ಮಾತ್ರ ಲಾಕ್‌ಡೌನ್ ಯಥಾಸ್ಥಿತಿ ಮುಂದುವರಿಯಲಿದೆ. ಲಾಕ್‌ಡೌನ್ ಜಾರಿಯಲ್ಲಿದ್ದ ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಗೊಳಿಸಿದ್ದು, ಅನ್‌ಲಾಕ್ 1.0 ನಿಯಮಗಳು ಸೋಮವಾರದಿಂದ ಜಾರಿಗೆ ಬರಲಿದೆ.

ಶನಿವಾರ ಕೊವಿಡ್ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಅನ್‌ಲಾಕ್ 2.0 ವಿವರಗಳನ್ನು ನೀಡಿದರು.

2.0 ಅನ್‌ಲಾಕ್ ಜಾರಿಯಾಗುತ್ತಿರುವ ಬೆಂಗಳೂರು ನಗರ, ರಾಮನಗರ, ತುಮಕೂರು, ಕೋಲಾರ, ಉತ್ತರ ಕನ್ನಡ, ಬೆಳಗಾವಿ, ಕೊಪ್ಪಳ, ಚಿಕ್ಕಬಳ್ಳಾಪುರ, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ಸೋಮವಾರದಿಂದ ಹೋಟೆಲ್ ಆರಂಭಿಸಲು, ಅಂಗಡಿ ಮಳಿಗೆಗಳನ್ನು ಸಂಜೆ 5 ಗಂಟೆಯವರೆಗೂ ತೆರೆಯಲು ಅವಕಾಶ ನೀಡಲಾಗಿದೆ.

ಶೇ 50 ರಷ್ಟು ಸಾಮರ್ಥ್ಯದೊಂದಿಗೆ ಹೊರಾಂಗಣ ಚಿತ್ರೀಕರಣ, ಹವಾನಿಯಂತ್ರಣವಿಲ್ಲದೆ ಜಿಮ್‌ಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಸಿನಿಮಾ ಮಂದಿರ, ದೇಗುಲ, ಮಾಲ್‌ಗಳಲ್ಲಿ ನಿರ್ಬಂಧ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಶೇ.5 ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವಿರುವ ೧೩ ಜಿಲ್ಲೆಗಳಾದ ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಧಾರವಾಡ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಜೂನ್ 11 ರಂದು ಹೊರಡಿಸಿರುವ ಮಾರ್ಗಸೂಚಿಗಳು ಮುಂದುವರಿಯುತ್ತವೆ ಎಂದರು.

ಮೈಸೂರಿನಲ್ಲಿ ಲಾಕ್ ಡೌನ್ ಯಥಾಸ್ಥಿತಿ: ಶೇಕಡಾ 10ಕ್ಕಿಂತಲೂ ಹೆಚ್ಚಿನ ಪಾಸಿಟಿವಿಟಿ ದರ ಹೆಚ್ಚಿರುವ ಮೈಸೂರಿನಲ್ಲಿ ಈಗಿರುವ ಲಾಕ್ ಡೌನ್ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಯಡಿಯೂರಪ್ಪ ಹೇಳಿದರು.

ನೈಟ್ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಮುಂದುವರಿಕೆ: ಪ್ರತಿನಿತ್ಯ ನೈಟ್ ಕರ್ಫ್ಯೂ ಸಂಜೆ 7 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ಮುಂದುವರಿಯುತ್ತದೆ. ವಾರಾಂತ್ಯ ಕರ್ಫ್ಯೂ ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೂ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕರ್ನಾಟಕದಲ್ಲಿ 2ನೇ ಹಂತದ ಅನ್‌ಲಾಕ್ ಪ್ರಕ್ರಿಯೆ ಕುರಿತು ನಿರ್ಧಾರ ಕೈಗೊಳ್ಳಲು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಯಿತು. ಡಿಸಿಎಂ ಡಾ. ಅಶ್ವಥ್‌ನಾರಾಯಣ, ಗೃಹಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಸುಧಾಕರ್, ಸಚಿವರಾದ ಆರ್.ಅಶೋಕ್, ಅರವಿಂದ ಲಿಂಬಾವಳಿ, ಸಿಎಸ್ ರವಿಕುಮಾರ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.

16 ಜಿಲ್ಲೆಗಳಲ್ಲಿ 2.0 ಅನ್‌ಲಾಕ್

ಯಾವುದಕ್ಕೆ ಅವಕಾಶ?

* ಎಲ್ಲ ಅಂಗಡಿಗಳು ಬೆಳಿಗ್ಗೆ 6ರಿಂದ ಸಂಜೆ 5ರವರೆಗೆ
* ಹೋಟೆಲ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಕುಳಿತು ಆಹಾರ ಸೇವಿಸಲು ಸಂಜೆ 5 ಗಂಟೆ ವರೆಗೆ ಅವಕಾಶ
* ಶೇ. 50ರ ಆಸನಗಳಲ್ಲಿ ಮಾತ್ರ ಅವಕಾಶ. (ಮದ್ಯಪಾನಕ್ಕೆ ಅವಕಾಶವಿಲ್ಲ)
* ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ
* ಬಸ್, ಮೆಟ್ರೋ ಶೇ.50ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಹುದು.
* ಹೊರಾಂಗಣ ಕ್ರೀಡಾಂಗಣದಲ್ಲಿ ವೀಕ್ಷಕರಿಲ್ಲದೇ ಕ್ರೀಡೆಗೆ ಅವಕಾಶ.
* ಸರ್ಕಾರ ಕಚೇರಿಗಳು ಶೇ.50ರ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಣೆ
* ಲಾಡ್ಜ್, ರೆಸಾರ್ಟ್‌ಗಳಲ್ಲಿ ಶೇ. 50 ಸಾಮರ್ಥ್ಯದೊಂದಿಗೆ ಗ್ರಾಹಕ ಸೇವೆ
* ಜಿಮ್‌ಗಳಲ್ಲಿ ಶೇ. 50ರಷ್ಟು ಮಂದಿಗೆ ಅವಕಾಶ. ಎಸಿ ಬಳಸುವಂತಿಲ್ಲ

ನಿರ್ಬಂಧ ಯಾವುದಕ್ಕೆ?

* ಈಜುಕೊಳ, ಅಮ್ಯೂಸ್‌ಮೆಂಟ್ ಪಾರ್ಕ್‌ಗಳಿಗೆ ನಿರ್ಬಂಧ
* ಸಭೆ ಸಮಾರಂಭ, ರಾಜಕೀಯ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ
* ದೇವಾಲಯ, ಪ್ರಾರ್ಥನಾ ಮಂದಿರಗಳು, ಶಿಕ್ಷಣ ಸಂಸ್ಥೆ
* ಮಲ್ಟಿಪ್ಲೆಕ್ಸ್, ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಪಬ್

13 ಜಿಲ್ಲೆಗಳಲ್ಲಿ 1.0 ಅನ್‌ಲಾಕ್

ಯಾವುದಕ್ಕೆ ಅವಕಾಶ?

* ಮಧ್ಯಾಹ್ನ 2ಗಂಟೆವರೆಗೆ ಅಂಗಡಿಗಳ ವಹಿವಾಟು
* ಹೋಟೆಲ್‌ಗಳಲ್ಲಿ ಪಾರ್ಸೆಲ್ ಮಾತ್ರ
* ಟ್ಯಾಕ್ಸಿ ಆಟೋದಲ್ಲಿ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ
* ಕಾರ್ಖಾನೆ, ಕಚೇರಿಗಳಲ್ಲಿ ಸೇ.50ರ ಸಿಬ್ಬಂದಿ ಮಿತಿ
* ಮದುವೆಗಳಲ್ಲಿ 40 ಮಂದಿಗಷ್ಟೇ ಅನುಮತಿ
* ನೈಟ್ ಕರ್ಫ್ಯೂ ಮುಂದುವರಿಕೆ

ನಿರ್ಬಂಧ ಯಾವುದಕ್ಕೆ?

* ಬಟ್ಟೆ ಮೊಬೈಲ್, ಪಾದರಕ್ಷೆ, ಎಲೆಕ್ಟ್ರಿಕ್, ಪುಸ್ತಕ ಅಂಗಡಿ ಬಂದ್
* ಈಜುಕೊಳ, ಅಮ್ಯೂಸ್‌ಮೆಂಟ್ ಪಾರ್ಕ್‌ಗಳಿಗೆ ನಿರ್ಬಂಧ
* ಸಭೆ ಸಮಾರಂಭ, ರಾಜಕೀಯ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ
* ದೇವಾಲಯ, ಪ್ರಾರ್ಥನಾ ಮಂದಿರಗಳು, ಶಿಕ್ಷಣ ಸಂಸ್ಥೆ ಬಂದ್
* ಮಲ್ಟಿಪ್ಲೆಕ್ಸ್, ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಪಬ್

 

ಸರ್ಕಾರಿ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ

ಸೋಮವಾರದಿಂದ ರಾಜ್ಯವನ್ನು ಮತ್ತಷ್ಟು ಅನ್ ಲಾಕ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಶೇ.50ರಷ್ಟು ಸಿಬ್ಬಂದಿ ರೊಟೇಷನ್ ಆಧಾರದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಇಲಾಖೆ, ಒಳಾಡಳಿತ ಇಲಾಖೆ, ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಎಲ್ಲ ಸಿಬ್ಬಂದಿ ಸಂಪೂರ್ಣವಾಗಿ ಹಾಜರಾಗಬೇಕು. ಉಳಿದ ಇಲಾಖೆಗಳ ಎಲ್ಲ ಗ್ರೂಪ್ ಎ ಅಧಿಕಾರಿಗಳು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು.
ಉಳಿದಂತೆ ಗ್ರೂಪ್ ಬಿ, ಸಿ ಹಾಗೂ ಡಿ ಸಿಬ್ಬಂದಿ ಶೇ. 50ರಂತೆ ರೊಟೇಶನ್ ಆಧಾರದ ಮೇಲೆ ಹಾಜರಾಗಬೇಕು ಎಂದು ಸೂಚಿಸಿದೆ.

ದೃಷ್ಟಿಹೀನ, ದೈಹಿಕ ಅಂಗವೈಕಲ್ಯ ಹಾಗೂ ಗರ್ಭಿಣಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದ್ದು, ಜೂ. 30ರ ವರೆಗೆ ಈ ಅದೇಶ ಜಾರಿಯಲ್ಲಿರುತ್ತದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುವಾರ್ ಆದೇಶ ಹೊರಡಿಸಿದ್ದಾರೆ.

× Chat with us