3 ಇದ್ರೂ ಪರ್ವಾಗಿಲ್ಲ… ಮನೆಗೊಂದು ಮಗು ಅಂತಿದ್ದ ಚೀನಾ ನಿರ್ಧಾರ ಬದಲಿಸಿದ್ದೇಕೆ?

ಬೀಜಿಂಗ್‌: ಚೀನಾದ ಒಟ್ಟು ಜನಸಂಖ್ಯೆಯಲ್ಲಿ ವೃದ್ಧರ ಸಂಖ್ಯೆಯೇ ಹೆಚ್ಚಿರುವ ಅಂಕಿಅಂಶ ಜನಗಣತಿ ವೇಳೆ ಬಹಿರಂಗವಾಗಿದ್ದು, ಇನ್ಮುಂದೆ ನಾಗರಿಕರು ಗರಿಷ್ಠ ಮೂರು ಮಕ್ಕಳನ್ನು ಹೊಂದುವುದಕ್ಕೆ ಚೀನಾ ಸರ್ಕಾರ ಅವಕಾಶ ನೀಡಿದೆ.

ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಯೋಜಿಸಿದ್ದ ಚೀನಾದ ಪೊಲಿಟ್‌ಬ್ಯುರೊ ಸಮಿತಿಯ ಸೋಮವಾರದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸುಮಾರು 40 ವರ್ಷಗಳ ಕಾಲ ʻಒಂದೇ ಮಗುʼ ನೀತಿಯನ್ನು ಚೀನಾ ಅನುಸರಿಸುತ್ತಾ ಬಂದಿತ್ತು. ಆದರೆ, ಇಲ್ಲಿನ ಜನರು ವೃದ್ಧರಾಗುತ್ತಿರುವುದು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ. ಈ ಆತಂಕದ ಹಿನ್ನೆಲೆಯಲ್ಲಿ ಕಠಿಣ ಕಾನೂನನ್ನು 2016ರಲ್ಲೇ ತೆಗೆದುಹಾಕಿತ್ತು.

ʻಚೀನಾ ಸದ್ಯ ಮೂರು ಮಕ್ಕಳನ್ನು ಹೊಂದಬಹುದಾದ ಅವಕಾಶವನ್ನು ನಾಗರಿಕರಿಗೆ ನೀಡಿದೆ’ ಎಂದು ಸುದ್ದಿ ಸಂಸ್ಥೆ ‘ಕ್ಸಿನ್ಹುವಾ’ ವರದಿ ಮಾಡಿದೆ.

ಚೀನಾದಲ್ಲಿ ಸುಮಾರು 139 ಕೋಟಿಗೂ ಅಧಿಕ ಜನಸಂಖ್ಯೆ ಇರಬಹುದೆಂದು ಅಂದಾಜಿಸಲಾಗಿದೆ.