ಕೊರೋನಾ ಪರಿಸ್ಥಿತಿ ಪರಾಮರ್ಶೆ: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ

ಬೆಂಗಳೂರು: ಕರ್ನಾಟಕದ ಕೊರೋನಾ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರ್ಚುವಲ್ ಸಭೆ ಮೂಲಕ ಪರಾಮರ್ಶೆ ನಡೆಸುತ್ತಿದ್ದಾರೆ. ಬೆಂಗಳೂರಿನ ಆರ್.ಟಿ.ನಗರ ನಿವಾಸದಿಂದ ಸಿಎಂ ಬೊಮ್ಮಾಯಿ, ಶಿವಮೊಗ್ಗದಿಂದ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ, ತಿಪಟೂರಿನಿಂದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ನಾಗೇಶ್, ಜಯನಗರ ನಿವಾಸದಿಂದ ಕಂದಾಯ ಸಚಿವ ಆರ್.ಅಶೋಕ್, ಡಾಲರ್ಸ್ ಕಾಲೋನಿ ನಿವಾಸದಿಂದ ಡಾ.ಅಶ್ವತ್ಥ್ ನಾರಾಯಣ ಸಭೆಯಲ್ಲಿ ಭಾಗಿಯಾಗಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರು ವರ್ಚುವಲ್ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳ ಕೊರೊನಾ ಸ್ಥಿತಿಗತಿ, ನೆರೆ ರಾಜ್ಯಗಳ ಪರಿಸ್ಥಿತಿ, ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಪರಿಣಾಮಗಳು ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗಲಿವೆ. ಭವಿಷ್ಯದ ಚಿತ್ರಣ ಹೇಗಿರಲಿದೆ ಎಂಬ ಬಗ್ಗೆ ವಾರ್​ರೂಮ್​ನಿಂದ ಮಾಹಿತಿ ಸಲ್ಲಿಸಲಾಗುವುದು. ಪಾಸಿಟಿವಿಟಿ ಸರಾಸರಿ ಬೆಳವಣಿಗೆಯ ಕುರಿತು ಆರೋಗ್ಯ ಇಲಾಖೆ ಅಭಿಪ್ರಾಯ ತಿಳಿಸಲಿದೆ. ಕೊರೊನಾ 3ನೇ ಅಲೆ ತಡೆಯುವ ನಿಟ್ಟಿನಲ್ಲಿ ಮುಂದಿನ ಒಂದು ತಿಂಗಳು ನಿರ್ಣಾಯಕ. ಈ ವೇಳೆ ಪ್ರತಿದಿನ 1.20 ಲಕ್ಷ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ ಯಥಾರೀತಿಯಲ್ಲಿ ಮುಂದುವರೆಸಿದರೆ ಒಳಿತು ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕರ್ಫ್ಯೂ ಸೇರಿದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗಳಿಸುವುದು ಅಗತ್ಯ ಎಂದು ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ.