ಮೈಸೂರು: ಕಬ್ಬಿಗೆ 150 ರೂ.ಹೆಚ್ಚುವರಿ ನೀಡುವಂತೆ ಆದೇಶ ಮಾಡಿದ್ದರೂ, ಇದನ್ನು ಪಾಲಿಸದ ಬಣ್ಣಾರಿ ಸಕ್ಕರೆ ಕಾರ್ಖಾನೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮತ್ತು ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ನಗರದ ಗನ್ಹೌಸ್ನಿಂದ ನೂರಾರು ಪ್ರತಿಭಟನಾಕಾರರು ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಜಿಲ್ಲಾಧಿಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಈ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್, ನಮ್ಮ ಸಂಘವು ಸತತ 36 ದಿನಗಳ ಹೋರಾಟ ಮಾಡಿದ ಪರಿಣಾಮ ಕಬ್ಬಿಗೆ 150 ರೂ.ಹೆಚ್ಚುವರಿ ಹಣ ನೀಡುವಂತೆ ಆದೇಶಿಸಲಾಗಿತ್ತು. ಆದರೆ, 3 ತಿಂಗಳಿಂದ ಪಾವತಿಸಿಲ್ಲ. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದರು. ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಈ ಸಮಸ್ಯೆ ಪರಿಹರಿಸಿ ನ್ಯಾಯ ಒದಗಿಸಬೇಕಾದ ಕೆಲಸವನ್ನು ಜಿಲ್ಲಾಧಿಕಾರಿ ಮಾಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಈ ಕೂಡಲೇ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಕಾಡು ಪ್ರಾಣಿಗಳ ಹಾವಳಿಯಿಂದ ನಾಶವಾಗುವ ಪರಿಹಾರ ಧನ ಸಂಪೂರ್ಣ ನಷ್ಟ ಭರಿಸಬೇಕು, ಜೀವ ಹಾನಿಗೆ
ಕನಿಷ್ಠ50 ಲಕ್ಷ ರೂ.ಪರಿಹಾರ ನೀಡಬೇಕು. ಕಾಡಂಚಿನಲ್ಲಿ ಪ್ರಾಣಿಗಳು ಸತ್ತರೆ ರೈತರನ್ನು ಬಂಧಿಸಿ ಜೈಲಿಗೆ ಕಳಿಸುವುದು ರೈತರನ್ನು ಭಯೋತ್ಪಾದಕರಂತೆ ಬಿಂಬಿಸುವ ಅರಣ್ಯ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಅರಿಶಿಣ ಬೆಳೆಗೆ ಕ್ವಿಂಟಲ್ ಗೆ 17,500 ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು. ಕಾವೇರಿ – ಕಬಿನಿ ಅಚ್ಚುಕಟ್ಟು ನಾಲೆಗಳ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಕಬ್ಬು, ಬಾಳೆ ಇನ್ನಿತರ ಬೆಳೆಗೆ ಮತ್ತು ದನ ಕರುಗಳ ಕುಡಿಯುವ ನೀರಿಗಾಗಿ ಕೆರೆ ಕಟ್ಟೆಗಳನ್ನು ತುಂಬಿಸಲು, ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು. ಕೃಷಿ ಪಂಪ್ ಸೆಟ್ ಗಳಿಗೆ ಬೆಳಿಗ್ಗೆ ೬ ರಿಂದ ಸಂಜೆ ೬ ರವರಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ನೀಡಬೇಕು ಎಂದರು.
ಭತ್ತ, ರಾಗಿ ಇತರೆ ಉತ್ಪನ್ನಗಳ ಖರೀದಿ ಕೇಂದ್ರಗಳಲ್ಲಿ, ರೈತರಿಂದ ಖರೀದಿ ಮಿತಿ ವಿಧಿಸಿರುವುದನ್ನು ರದ್ದುಗೊಳಿಸಬೇಕು, ಖರೀದಿ ಮಾಡಿದ ಐದು ದಿನದ ಒಳಗಾಗಿ ರೈತರಿಗೆ ಹಣ ಪಾವತಿಸಬೇಕು. ಬ್ಯಾಂಕ್ ಗಳಲ್ಲಿ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಮಾನದಂಡ ನೀತಿ ಕೈ ಬಿಡಬೇಕು. ಕೃಷಿ ಸಾಲ ನೀತಿ ಬದಲಾಗಬೇಕು. ರಸಗೊಬ್ಬರ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ, ಕೆಲವು ಕಡೆ ಕಳಪೆ ರಸಗೊಬ್ಬರ ಕೀಟನಾಶಕ ಮಾರಾಟ ಮಾಡುವುದನ್ನು ತಡೆಗಟ್ಟಬೇಕು ಎಂದರು.
ಅಡಿಗೆ ಅನಿಲ (ಗ್ಯಾಸ್) ವಿತರಕರು ಪ್ರತಿ ಸಿಲಿಂಡರ್ಗೆ ನಿಗದಿತ ದರಕ್ಕಿಂತ ಹೆಚ್ಚು ಹಣವನ್ನು ಗ್ರಾಮೀಣ ಭಾಗದಲ್ಲಿ ಸುಲಿಗೆ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ರಾಜ್ಯದಲ್ಲಿ ಜಾರಿಗೆ ಬಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ರದ್ದುಗೊಳಿಸಬೇಕು. ಜಿಲ್ಲೆಯಲ್ಲಿ ಸಾವಿರಾರು ರೈತರು ಹತ್ತಾರು ವರ್ಷಗಳಿಂದಲೂ ಸಾಗುವಳಿ ಮಾಡಿಕೊಂಡು ಹೋಗುತ್ತಿರುವ ಜಮೀನುಗಳಿಗೆ ಸಾಗುವಳಿ ಪತ್ರವನ್ನು ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ರೈತರಿಗೆ ನ್ಯಾಯಬದ್ಧವಾಗಿ ಸಾಗುವಳಿ ಪತ್ರವನ್ನು ನೀಡಬೇಕು ಎಂದು ಹೇಳಿದರು.
ನಮ್ಮ ರೈತರ ಸಮಸ್ಯೆಗಳನ್ನು ಪರಿಹರಿಸದೆ ಇದ್ದರೇ, ಈ ನಮ್ಮ ಬೇಡಿಕೆಗಳನ್ನು ಈಡೇರಿಸುವ ಕೆಲಸಗಳನ್ನು ಜಿಲ್ಲಾಧಿಕಾರಿಗಳು ಶೀಘ್ರ ಮಾಡದೇ ಹೋದರೆ ನಮ್ಮ ಹೋರಾಟವನ್ನು ಇನ್ನು ತೀವ್ರವಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಜಿಲ್ಲಾ ಕಾರ್ಯದರ್ಶಿ ಹಳ್ಳಿಕೆರೆಹುಂಡಿ ಭಾಗ್ಯರಾಜು, ಜಿಲ್ಲಾ ಪ್ರಧಾನಕಾರ್ಯದರ್ಶಿ ಬರಡನಪುರ ನಾಗರಾಜು, ಕಮಲಮ್ಮ, ಕುರುಬೂರು ಸಿದ್ದೇಶ್, ಹಾಡ್ಯ ರವಿ, ಕೆರೆಹುಂಡಿ ರಾಜಣ್ಣ, ಗೌರಿಶಂಕರ್, ಅಂಬಳೆ ಮಂಜುನಾಥ್, ನಾಗರಾಜು ಪಟೇಲ್ ಶಿವಮೂರ್ತಿ, ಕುರುಬೂರು ಪ್ರದೀಪ, ಲಕ್ಷ್ಮಿಪುರ ವೆಂಕಟೇಶ್,ಕಾಟೂರು ಮಹದೇವಸ್ವಾಮಿ, ರೂಪ, ದೇವಮಣಿ, ಕೋಟೆ ರಾಜೇಶ್, ಬಿದರಹಳ್ಳಿ ಮಾದಪ್ಪ , ಪ್ರಸಾದ್ ನಾಯ್ಕ,ಗೌರಿಶಂಕರ್, ಹಾಲಿನ ನಾಗರಾಜ್, ಪಿ.ರಾಜು, ಉಡಿಗಾಲ ಮಂಜುನಾಥ್, ಕೋಟೆ ಸುನಿಲ್, ಕುಮಾರ್,ರೇವಣ್ಣ, ಮಹದೇವಸ್ವಾಮಿ ಸೇರಿದಂತೆ ನೂರಾರು ಮಂದಿ ಹಾಜರಿದ್ದರು.
ಅಪರ ಜಿಲ್ಲಾಧಿಕಾರಿಗೆ ಮನವಿ :
ಪ್ರತಿಭಟನಾ ಸ್ಥಳಕ್ಕೆ ಬಂದ ಅಪಾರ ಜಿಲ್ಲಾಧಿಕಾರಿ ಕವಿತಾ ರಾಜರಾವ್ ಅವರು ಮನವಿ ಸ್ವೀಕರಿಸಿದರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆಗಳಿಗೆ ಉತ್ತರ ಹೇಳುತ್ತಾರೆ ಎಂದಾಗ ರೈತರು ಒಪ್ಪಿಕೊಳ್ಳದೇ, ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿಯೇ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳೇ ಹಾಜರಿದ್ದು ಉತ್ತರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಮೂರು ದಿನದೊಳಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಪೊಲೀಸರ ವಿರುದ್ಧವೂ ಆಕ್ರೋಶ
ಜಿಲ್ಲಾಧಿಕಾರಿ ಕಚೇರಿಯ ಬಳಿ ಕೆ.ಆರ್.ಉಪವಿಭಾಗದ ಎಸಿಪಿ ಗಂಗಧಾರಸ್ವಾಮಿ ಅವರ ನೇತೃತ್ವದಲ್ಲಿ ನೂರಾರು ಪೊಲೀಸರನ್ನು ಸರ್ಪಗಾವಲು ಹಾಕಲಾಗಿತ್ತು. ಕಬ್ಬಿನ ಜೊಲ್ಲೆ ಹಿಡಿದು ಪ್ರತಿಭಟನಾಕಾರರು ಮೆರವಣಿಗೆಯ ಮೂಲಕ ಬಿರುಬಿಸಿಲಿನಲ್ಲಿ ಬಂದ ಜಿಲ್ಲಾಧಿಕಾರಿಯ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ,ಬ್ಯಾರಿಕೇಡ್ಗಳನ್ನು ಹಾಕಿ ಪೊಲೀಸರು ತಡೆದರು. ಈ ವೇಳೆ ಕಚೇರಿಯ ಮುಂದೆ ಬಿಸಿಲಿನಲ್ಲಿಯೇ ಕುಳಿತ ಪ್ರತಿಭಟನಾಕಾರರು ಪೊಲೀಸರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ದರೋಡೆಕೋರರನ್ನು,ಕಳ್ಳಕಾಕರನ್ನು ಹಗಲಿನಲ್ಲಿಯೇ ಓಡಾಡಲು ಬಿಡುವ ಪೊಲೀಸರು, ರೈತರು ನ್ಯಾಯ ಕೇಳಲು ಕಾನೂನು ರೀತಿಯಲ್ಲಿ ಶಾಂತಿಯುತವಾಗಿ ನ್ಯಾಯ ಕೇಳಲು ಬಂದರೆ ತಡೆಯುತ್ತಾರೆ. ಇದ್ಯಾವ ಪೊಲೀಸ್ ವ್ಯವಸ್ಥೆ ಎಂದು ಕುರುಬೂರು ಶಾಂತಕುಮಾರ್ ಆಕ್ರೋಶ ಹೊರಹಾಕಿದರು. ಆನಂತರ ಜಿಲ್ಲಾಧಿಕಾರಿ ಕಚೇರಿಯ ಪ್ರವೇಶದ್ವಾರದಲ್ಲಿ ಕುಳಿತು ಪ್ರತಿಭಟಿಸಲು ಅವಕಾಶ ನೀಡಲಾಯಿತು.