ನವದೆಹಲಿ : ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ಡೆಬಿಟ್ ಕಾರ್ಡ್, ಪಿಒಎಸ್ ಹಾಗೂ ಇ-ಕಾಮರ್ಸ್ ವಹಿವಾಟುಗಳ ದೈನಂದಿನ ಮಿತಿಯನ್ನು ಹೆಚ್ಚಿಸಿದೆ. ಇದು ಈ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಕೆನರಾ ಬ್ಯಾಂಕ್ ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ. ಎಟಿಎಂ ದೈನಂದಿನ ವಹಿವಾಟು ಮಿತಿಯನ್ನು 40 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಕೆನರಾ ಬ್ಯಾಂಕ್ ಹೆಚ್ಚಳ ಮಾಡಿದೆ. ಇನ್ನು ಪಿಒಎಸ್ ಮಿತಿಯನ್ನು ಒಂದು ಲಕ್ಷ ರೂ.ನಿಂದ ಎರಡು ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಕೆನರಾ ಬ್ಯಾಂಕ್ ಕ್ಲಾಸಿಕ್ ಡೆಬಿಟ್ ಕಾರ್ಡ್ ಮೂಲಕ ಮಾಡುವ ಎನ್ ಎಫ್ ಸಿ ವಹಿವಾಟನ್ನು ಮಾತ್ರ ಕೆನರಾ ಬ್ಯಾಂಕ್ ಹೆಚ್ಚಳ ಮಾಡಿಲ್ಲ. ಅದು ಈ ಹಿಂದಿನಂತೆ 25 ಸಾವಿರ ರೂ. ಇದೆ. ಒಮ್ಮೆಗೆ ಐದು ಸಾವಿರ ರೂ. ನಂತೆ ಪ್ರತಿದಿನ ಐದು ವಹಿವಾಟಿಗೆ ಅವಕಾಶವಿದೆ. ಅಂದರೆ 25 ಸಾವಿರ ರೂ. ವಹಿವಾಟು ನಡೆಸಲು ಅವಕಾಶವಿದೆ. ಪ್ಲಾಟಿನಮ್, ಬ್ಯುಸಿನೆಸ್, ಸೆಲೆಕ್ಟ್ ಡೆಬಿಟ್ ಕಾರ್ಡ್ ಗಳ ನಗದು ವಹಿವಾಟಿನ ಮಿತಿಯನ್ನು ಪ್ರತಿದಿನ 50,000ರೂ.ನಿಂದ 1ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಪಿಒಎಸ್ ಮಿತಿಯನ್ನು ಎರಡು ಲಕ್ಷ ರೂ.ನಿಂದ ಐದು ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಕೆನರಾ ಬ್ಯಾಂಕ್ ಭಾರತದ ಉತ್ತಮ ಬ್ಯಾಂಕ್ ಎನಿಸಿಕೊಂಡಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನದಿಂದಾಗಿ ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕುಗಳು ಗಾತ್ರದಲ್ಲಿ ಕ್ರಮವಾಗಿ 3,4, ಮತ್ತು 5ನೇ ಸ್ಥಾನವನ್ನು ಅಲಂಕರಿಸಿವೆ. ಕೆನರಾ ಬ್ಯಾಂಕ್ 2021ರ ಸೆಪ್ಟಂಬರ್ಗೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಒಟ್ಟು 1,333ಕೋಟಿ ರು. ನಿವ್ವಳ ಲಾಭಗಳಿಸಿತ್ತು ಕೂಡ. ಜಾಗತಿಕ ವ್ಯವಹಾರದ ಲಾಭದಲ್ಲೂ ಕೂಡ ಬ್ಯಾಂಕ್ ಮುಂದಿದ್ದು, ಒಟ್ಟು 17,15,000 ಕೋಟಿಗೂ ಹೆಚ್ಚು ಜಾಗತಿಕ ವ್ಯವಹಾರ ನಡೆಸಿ ಶೇ.7.61ರಷ್ಟುಲಾಭ ಗಳಿಸಿದೆ.