ಕಳೆದ ವಾರ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಎಂಎಲ್‌ಸಿ ಯತೀಂದ್ರ ಅವರಾಡಿದ ಮಾತುಗಳು ರಾಜಕೀಯ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
ತಮ್ಮ ತಂದೆ ಸಿದ್ದರಾಮಯ್ಯ ಅವರು ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಮುಂದೆ ಅವರ ಜಾಗಕ್ಕೆ ಬರಲು ಸತೀಶ್ ಜಾರಕಿಹೊಳಿ ಅವರು ಸೂಕ್ತ. ಯಾಕೆಂದರೆ ತಮ್ಮ ತಂದೆಯಂತೆಯೇ ಸಿದ್ಧಾಂತಗಳನ್ನಿಟ್ಟುಕೊಂಡವರು ಸತೀಶ್ ಜಾರಕಿಹೊಳಿ ಅಂತ ಅವರಾಡಿದ ಮಾತು ಏನಿದೆ. ಸಹಜವಾಗಿಯೇ ರಾಜಕೀಯ ವಲಯದ ಕುತೂಹಲಕ್ಕೆ ಕಾರಣವಾಗಿದೆ.
ಅಂದ ಹಾಗೆ ಯತೀಂದ್ರ ಅವರ ಮಾತು ಯಾಕೆ ಕುತೂಹಲ ಕೆರಳಿಸಿದೆ ಎಂದರೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಈ ಕ್ಷಣಕ್ಕೂ ಅಧಿಕಾರ ಹಂಚಿಕೆಯ ಮಾತು ದಟ್ಟವಾಗಿಯೇ ಇದೆ. ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಅಽಕಾರ ಹಂಚಿಕೆ ಎಂಬುದು ಆಗಿಯೇ ಇಲ್ಲ ಎಂದು ಹೇಳಿದ್ದರೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಣದಲ್ಲಿ ಕ್ಷಣ ಕ್ಷಣಕ್ಕೂ ನಿರೀಕ್ಷೆ ಹೆಚ್ಚುತ್ತಲೇ ಇದೆ. ಅದರ ಪ್ರಕಾರ, ನವೆಂಬರ್ ಹದಿನಾಲ್ಕರಂದು ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದ ನಂತರ ಹದಿನೇಳು ಇಲ್ಲವೇ ಹದಿನೆಂಟನೇ ತಾರೀಖಿನಂದು ಎಐಸಿಸಿ ವರಿಷ್ಠರು ಸಿದ್ದರಾಮಯ್ಯ ಅವರನ್ನು ದಿಲ್ಲಿಗೆ ಕರೆಯುತ್ತಾರೆ.
ಇದನ್ನು ಓದಿ: ರಾಜಕೀಯ ವಲಯದಲ್ಲಿ ಕೋಲಾಹಲವೆಬ್ಬಿಸಿದ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಆಮಿಷ ಆರೋಪ
ಹೀಗೆ ಸಿದ್ದರಾಮಯ್ಯ ಅವರನ್ನು ದಿಲ್ಲಿಗೆ ಕರೆಸುವ ವರಿಷ್ಠರು,ಕಾಂಗ್ರೆಸ್ ಪಕ್ಷಕ್ಕಾಗಿ ಸಿದ್ಧರಾಮಯ್ಯನವರು ನೀಡಿದ ಕೊಡುಗೆಗಳ ಬಗ್ಗೆ ಧನ್ಯವಾದಗಳನ್ನು ಹೇಳುವುದಲ್ಲದೆ, ಮುಖ್ಯಮಂತ್ರಿ ಪದವಿಯನ್ನು ಬಿಟ್ಟುಕೊಡುವಂತೆ ಸೂಚಿಸುತ್ತಾರೆ. ಇದಾದ ನಂತರ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಗಳಿಗೆ ಹತ್ತಿರವಾಗುತ್ತದೆ ಎಂಬುದು ಈ ಕ್ಷಣಕ್ಕೂ ಡಿ.ಕೆ.ಶಿವಕುಮಾರ್ ಅವರ ಬಣದಲ್ಲಿರುವ ವಿಶ್ವಾಸ.
ಆದರೆ ಡಿ.ಕೆ.ಶಿವಕುಮಾರ್ ಅವರ ಬಣ ಇಂತಹ ವಿಶ್ವಾಸ ದಲ್ಲಿರುವಾಗಲೇ ಯತೀಂದ್ರ ಅವರು, ಸತೀಶ್ ಜಾರಕಿಹೊಳಿ ಅವರು ಮುಂದಿನ ಮುಖ್ಯಮಂತ್ರಿ ಎಂಬರ್ಥದಲ್ಲಿ ಮಾತನಾಡಿದ್ದು ಈ ಬಣಕ್ಕೆ ಆಘಾತದಂತೆ ಅಪ್ಪಳಿಸಿತು. ಇದಾದ ನಂತರ ರಾಜಕೀಯ ವಲಯದಲ್ಲಿ ಯತೀಂದ್ರ ಅವರ ಹೇಳಿಕೆಯ ಬಗ್ಗೆ ನಿರಂತರವಾಗಿ ಚರ್ಚೆ ನಡೆಯುತ್ತಿದೆ. ಯತೀಂದ್ರ ಅವರ ಹೇಳಿಕೆಯ ಹಿಂದೆ ನಡೆದಿರುವುದೇನು ಎಂಬ ಪ್ರಶ್ನೆ ಅನುರಣಿಸುತ್ತಲೇ ಇದೆ.
ಇಂತಹ ಚರ್ಚೆಗಳ ಸ್ವರೂಪ ಏನೇ ಇದ್ದರೂ ಅದು ಅಂತಿಮವಾಗಿ ಕೆಲವು ಸಂದೇಹಗಳನ್ನು ಮೂಡಿಸಿರುವುದು ನಿಜ. ಅದೆಂದರೆ, ಈ ಕ್ಷಣದವರೆಗೆ ಕಾಂಗ್ರೆಸ್ ಪಕ್ಷದ ವರಿಷ್ಠರು ಸಿದ್ಧರಾಮಯ್ಯ ಅವರ ಜತೆ ಪದತ್ಯಾಗದ ಬಗ್ಗೆ ಮಾತನಾಡಿಲ್ಲವಾದರೂ, ಅಂತಹ ಮಾತನಾಡಬಹುದು ಎಂಬ ಅನುಮಾನವಂತೂ ಶುರುವಾಗಿದೆ. ಇಂತಹ ಅನುಮಾನದ ಹಿಂದೆಯೇ ಯತೀಂದ್ರ ಅವರ ಹೇಳಿಕೆ ರಾಜ್ಯ ಕಾಂಗ್ರೆಸ್‌ನ ಮತ್ತೊಂದು ಮಗ್ಗುಲಲ್ಲಿ ನಡೆದಿರಬಹುದಾದ ಬೆಳವಣಿಗೆಯ ಕುರಿತು ಕುತೂಹಲ ಮೂಡಿಸುತ್ತಿದೆ. ಅದೆಂದರೆ, ವರಿಷ್ಠರು ಇಂತಹ ಪದತ್ಯಾಗದ ಮಾತನಾಡಬಹುದು ಎಂಬ ಸಂದೇಹ ಇದ್ದ ಕಾರಣದಿಂದಲೇ ಸತೀಶ್ ಜಾರಕಿಹೊಳಿ ಅಂಡ್ ಗ್ಯಾಂಗ್ ಪ್ರತ್ಯೇಕವಾಗಿ ಸಭೆಗಳನ್ನು ನಡೆಸುತ್ತಲೇ ಇತ್ತು.
ಮೂಲಗಳ ಪ್ರಕಾರ, ಹೀಗೆ ಪ್ರತ್ಯೇಕ ಸಭೆ ನಡೆಸುತ್ತಿದ್ದ ಸತೀಶ್ ಜಾರಕಿಹೊಳಿ ಅವರು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಜತೆ ನಿರಂತರ ಸಂಪರ್ಕದಲ್ಲಿದ್ದರು. ಇವೇ ಮೂಲಗಳ ಪ್ರಕಾರ, ಹೀಗೆ ಬಿಜೆಪಿಯ ಇಬ್ಬರು ಮುಖ್ಯಮಂತ್ರಿಗಳ ಜತೆ ನಿರಂತರ ಸಂಪರ್ಕದಲ್ಲಿರುವ ಸತೀಶ್ ಜಾರಕಿಹೊಳಿ ಅವರ ಜತೆ ರಾಜ್ಯ ಕಾಂಗ್ರೆಸ್‌ನ ಅರವತ್ತು ಮಂದಿ ಶಾಸಕರಿದ್ದಾರೆ.
ಇದನ್ನು ಓದಿ: ಯತೀಂದ್ರ ಹೇಳಿದ್ದು ಅಹಿಂದ ನಾಯಕತ್ವದ ಬಗ್ಗೆ : ಸತೀಶ ಜಾರಕಿಹೊಳಿ ಸ್ಪಷ್ಟನೆ
ಒಂದು ವೇಳೆ ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯ ಅವರನ್ನು ಕರೆಸಿ ಪದತ್ಯಾಗ ಮಾಡುವಂತೆ ಸೂಚಿಸಿದರೆ ಸತೀಶ್ ಜಾರಕಿಹೊಳಿ, ಮತ್ತವರ ಜತೆಗಿರುವ ಶಾಸಕರು ಬಿಜೆಪಿ ಕಡೆ ವಲಸೆ ಹೋಗಲು ಸಜ್ಜಾಗಿದ್ದಾರೆ. ಆದರೆ ಇಲ್ಲಿ ಮತ್ತೊಂದು ಸೂಕ್ಷ್ಮವೂ ಇದೆ. ಅದೆಂದರೆ, ಕಾಂಗ್ರೆಸ್ ವರಿಷ್ಠರು ಪದತ್ಯಾಗ ಮಾಡಲು ಸಿದ್ದರಾಮಯ್ಯ ಅವರಿಗೆ ಹೇಳಿದರೆಸಿದ್ದರಾಮಯ್ಯ ಅವರೇನೂ ಇಲ್ಲ ಎನ್ನುವುದಿಲ್ಲ. ಆದರೆ ತಮ್ಮ ಪದತ್ಯಾಗವಾದರೂ ರಾಜ್ಯ ಕಾಂಗ್ರೆಸ್‌ನ ಭವಿಷ್ಯದ ನಾಯಕನ ಆಯ್ಕೆ ಶಾಸಕಾಂಗ ಸಭೆಯಲ್ಲಿ ನಡೆಯಬೇಕು ಎಂದು ವರಿಷ್ಠರಿಗೆ ಸ್ಪಷ್ಟವಾಗಿ ಹೇಳುತ್ತಾರೆ.
ಕಾರಣ ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಷಯದಲ್ಲಿ ಹೈಕಮಾಂಡ್ ತೀರ್ಮಾನ ಅಂತಿಮವಾದರೂ, ಮುಖ್ಯಮಂತ್ರಿ ಆಗುವವರು ಶಾಸಕರ ಬೆಂಬಲ ಹೊಂದಿರಬೇಕು. ೧೯೯೨ರಲ್ಲಿ ಬಂಗಾರಪ್ಪ ಅವರನ್ನು ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಮುಖ್ಯಮಂತ್ರಿ ಪದವಿಯಿಂದ ಬಲವಂತವಾಗಿ ಕೆಳಗೆ ಇಳಿಸಿದರಲ್ಲ ಆ ಸಂದರ್ಭದಲ್ಲಿ ಅವರು ಶಾಸಕಾಂಗ ಸಭೆಯಲ್ಲಿ ಭವಿಷ್ಯದ ನಾಯಕನನ್ನು ಆರಿಸುವಂತೆ ನೋಡಿಕೊಂಡಿದ್ದರೆ ಕಾಂಗ್ರೆಸ್ ಪಕ್ಷ ಕಷ್ಟಕ್ಕೊಳಗಾಗುವ ಸ್ಥಿತಿಯೇ ಬರುತ್ತಿರಲಿಲ್ಲ. ಆದರೆ ಪಿ.ವಿ.ನರಸಿಂಹರಾವ್ ಅವರು ಈ ಕೆಲಸ ಮಾಡುವ ಬದಲು ಕೇರಳದ ಕೆ.ಕರುಣಾಕರನ್ ಮತ್ತು ತಮಿಳುನಾಡಿನ ಮರಗತಂ ಚಂದ್ರಶೇಖರ್ ಅವರ ಮಾತು ಕೇಳಿ ವೀರಪ್ಪ ಮೊಯ್ಲಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತಂದು ಕೂರಿಸಿದರು.
ಆದರೆ ಹೀಗೆ ಬಂಗಾರಪ್ಪ ಅವರ ನಂತರ ಹೈಕಮಾಂಡ್ ಕೃಪೆಯಿಂದ ಮುಖ್ಯಮಂತ್ರಿಯಾದ ವೀರಪ್ಪ ಮೊಯ್ಲಿ ಯಾವತ್ತೂ ನೆಮ್ಮದಿಯಿಂದರಾಜ್ಯವಾಳಲಿಲ್ಲ. ಕಾರಣ ಆವತ್ತು ಶಾಸಕಾಂಗ ಪಕ್ಷದಲ್ಲಿ ಎಸ್.ಎಂ.ಕೃಷ್ಣಅವರಿಗೆ ಬಹುಮತವಿತ್ತು. ಆದರೆ ಇದನ್ನು ನಿರ್ಲಕ್ಷಿಸಿ ವೀರಪ್ಪ ಮೊಯ್ಲಿ ಅವರನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸಿದ್ದರಿಂದ ಕಾಂಗ್ರೆಸ್ ಶಾಸಕರು ಮೊಯ್ಲಿ ಅವರನ್ನು ಒಪ್ಪಿಕೊಳ್ಳಲಿಲ್ಲ.
ಪರಿಣಾಮ ತಮ್ಮ ಅಧಿಕಾರಾವಧಿಯಲ್ಲಿ ವೀರಪ್ಪ ಮೊಯ್ಲಿ ಅವರು ನೆಮ್ಮದಿಯಿಂದ ಶಾಸಕಾಂಗ ಸಭೆ ನಡೆಸಲೇ ಇಲ್ಲ. ಒಂದು ಬಾರಿಯಂತೂ ಪಕ್ಷದ ಶಾಸಕರ ವರ್ತನೆಯಿಂದ ಮುಜುಗರಕ್ಕೀಡಾಗಿ ವೀರಪ್ಪ ಮೊಯ್ಲಿ ಅವರು ಶಾಸಕಾಂಗ ಸಭೆಯಿಂದ ದಿಢೀರನೆ ನಿರ್ಗಮಿಸುವ ಸನ್ನಿವೇಶ ಸೃಷ್ಟಿಯಾಗಿತ್ತು. ಇವತ್ತು ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಕೆಳಗಿಳಿಸುವ ಕೆಲಸವಾಗಿ, ತಮ್ಮ ಇಷ್ಟದ ವ್ಯಕ್ತಿಯನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಗೆ ತಂದರೆ ವೀರಪ್ಪ ಮೊಯ್ಲಿ ಕಾಲದ ಇತಿಹಾಸ ಪುನರಾವರ್ತನೆಯಾದರೂ ಅಚ್ಚರಿಯಿಲ್ಲ. ಆದರೆ ತಮ್ಮ ಜಾಗಕ್ಕೆ ಡಿಕೆಶಿ ಬರುವುದನ್ನು ಸಿದ್ದರಾಮಯ್ಯ ಒಪ್ಪದೇ ಇದ್ದರೆ, ಶಾಸಕಾಂಗ ಸಭೆಯಲ್ಲೇ ಪರ್ಯಾಯ ನಾಯಕನ ಆಯ್ಕೆಯಾಗಬೇಕು ಎಂದು ಹಟ ಹಿಡಿದರೆ ಕಾಂಗ್ರೆಸ್ ಹೈಕಮಾಂಡ್ ಸಂಕಟಕ್ಕೆ ಸಿಲುಕುತ್ತದೆ.
ಇದನ್ನು ಓದಿ: ಗುಂಡಿ ಜಟಾಪಟಿ : ಡಿನ್ನರ್ ಮೀಟಿಂಗ್ ಬಳಿಕ ಡಿಕೆಶಿಯನ್ನು ಹಾಡಿ ಹೊಗಳಿದ ಉದ್ಯಮಿಗಳು
ಯಾಕೆಂದರೆ ಸಿದ್ದರಾಮಯ್ಯ ಅವರ ಮಾತನ್ನು ಒಪ್ಪಿದರೆ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರು ಸೂಚಿಸುವ ನಾಯಕ ಮುಖ್ಯಮಂತ್ರಿಯಾಗುತ್ತಾರೆ. ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಅದಕ್ಕೆ ಒಪ್ಪದೆ ತನ್ನಿಚ್ಛೆಯಂತೆ ನಡೆದುಕೊಳ್ಳಲು ಹೋದರೆ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಶಾಸಕರ ದೊಡ್ಡ ಗುಂಪು ಪಕ್ಷ ತೊರೆಯಲು ತಯಾರಾಗುತ್ತದೆ. ಒಂದು ಸಲ ಅದು ಪಕ್ಷ ತೊರೆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಉಳಿಯವುದು ಕಷ್ಟ. ಇವತ್ತು ಯತೀಂದ್ರ ಅವರ ಮಾತಿನ ಹಿಂದಿರುವ ಗೂಢಾರ್ಥ ಇದೇ ಮತ್ತು ಇದೇ.
” ಇವತ್ತು ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಕೆಳಗಿಳಿಸುವ ಕೆಲಸವಾಗಿ, ತಮ್ಮ ಇಷ್ಟದ ವ್ಯಕ್ತಿಯನ್ನು ಕಾಂಗ್ರೆಸ್ಹೈ ಕಮಾಂಡ್ ಮುಖ್ಯಮಂತ್ರಿ ಹುದ್ದೆಗೆ ತಂದರೆ ವೀರಪ್ಪ ಮೊಯ್ಲಿ ಕಾಲದ ಇತಿಹಾಸ ಪುನರಾವರ್ತನೆಯಾದರೂ ಅಚ್ಚರಿಯಿಲ್ಲ. ಆದರೆ ತಮ್ಮ ಜಾಗಕ್ಕೆ ಡಿಕೆಶಿ ಬರುವುದನ್ನು ಸಿದ್ದರಾಮಯ್ಯ ಒಪ್ಪದೆ ಇದ್ದರೆ, ಶಾಸಕಾಂಗ ಸಭೆಯಲ್ಲೇ ಪರ್ಯಾಯ ನಾಯಕನ ಆಯ್ಕೆಯಾಗಬೇಕು ಎಂದು ಹಟ ಹಿಡಿದರೆ ಕಾಂಗ್ರೆಸ್ ಹೈಕಮಾಂಡ್ ಸಂಕಟಕ್ಕೆ ಸಿಲುಕುತ್ತದೆ. ಯಾಕೆಂದರೆ ಸಿದ್ದರಾಮಯ್ಯ ಅವರ ಮಾತನ್ನು ಒಪ್ಪಿದರೆ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರು ಸೂಚಿಸುವ ನಾಯಕ ಮುಖ್ಯಮಂತ್ರಿಯಾಗುತ್ತಾರೆ. ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಅದಕ್ಕೆ ಒಪ್ಪದೆ ತನ್ನಿಚ್ಛೆಯಂತೆ ನಡೆದುಕೊಳ್ಳಲು ಹೋದರೆ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಶಾಸಕರ ದೊಡ್ಡ ಗುಂಪು ಪಕ್ಷ ತೊರೆಯಲು ತಯಾರಾಗುತ್ತದೆ”
–ಬೆಂಗಳೂರು ಡೈರಿ
ಆರ್.ಟಿ.ವಿಠ್ಠಲಮೂರ್ತಿ
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…