ಅಯೋಗ್ಯರ, ಅಸಮರ್ಥರ ಕಾರ್ಯಭಾರದ ವೈಖರಿ!

 

ಅಂತಿಮ ಭಾಗ

ಅಕ್ರಮ ಮಾರ್ಗದಲ್ಲೇ ಪಾಸಾಗುತ್ತಾ ಬಂದವರು, ದೊಡ್ಡ ಹುದ್ದೆಗಳನ್ನು ಅನಾಯಾಸವಾಗಿ ಗಿಟ್ಟಿಸಿದವರು ಇಂಥವರೆಲ್ಲ ಅದು ಹೇಗೆ ಇಲಾಖೆಯಲ್ಲಿ ಬರಕತ್ತಾಗುತ್ತಾರೆ? ಎಂಬ ಪ್ರಶ್ನೆಗಳನ್ನು ಕೇಳುವುದುಂಟು. ಸೊಣಗಗಳೆಲ್ಲ ಅಂದಣವನೇರುವುದಾದರೆ ಕಷ್ಟಪಟ್ಟೇಕೆ ಓದಬೇಕು? ಸರ್ಟಿಫಿಕೇಟ್ ಒಂದಿದ್ದರೆ ಸಾಕು. ಯಾವ ಹುದ್ದೆಯಲ್ಲಾದರೂ ಕೂರಬಹುದು ಎಂದಾದರೆ ಈ ಪರೀಕ್ಷೆ ಈ ಸಂದರ್ಶನವೆಲ್ಲವೂ ಬಲಿಷ್ಠರ, ಜಾತ್ಯಸ್ತರ ನಾಟಕವಲ್ಲವೇ? ಅದು ಹೇಗೆ ಇವರೆಲ್ಲಾ ದೊಡ್ಡ ಹುದ್ದೆಯ ಚುಕ್ಕಾಣಿ ಹಿಡಿಯಬಲ್ಲರು? ಇಲಾಖೆಯಲ್ಲಿ ಕೊನೆತನಕ ಉಳಿಯಬಲ್ಲರು?

ಅತ್ಯಂತ ಕಳವಳಕಾರಿಯಾದ ಸತ್ಯವೊಂದಿದೆ. ಸರ್ಕಾರಿ ಕೆಲಸಕ್ಕೆ ಸೇರಿಕೊಂಡಾದ ಮೇಲೆ ಮುಗಿಯಿತು. ಕೆಲಸವನ್ನೇ ಮಾಡಬೇಕಿಲ್ಲ. ಬರೋ ಸಂಬಳ ಬಂದೇ ಬರುತ್ತೆ. ಗಿಂಬಳಕ್ಕೆ ದಾರಿ ಮಾಡಿಕೊಂಡರಾಯ್ತು ಎಂಬುದು ಮೈಗಳ್ಳರ ಮಂತ್ರ.

ನಿನಗೆ ಕೆಲಸ ಬರೋದಿಲ್ಲ, ಮಾಡೋದಿಲ್ಲ ಎಂದರೆ ಮೇಲಿನವರು ಗೊಣಗಿ ಮೆಮೋ ನೀಡಬಹುದೇ ಹೊರತು ಕೆಲಸದಿಂದ ಕಿತ್ತು ಹಾಕಲಾರರು. ಅಬ್ಬಬ್ಬಾ ಎಂದರೆ ವರ್ಗಾಯಿಸಬಹುದಷ್ಟೇ? ಅದಕ್ಕೆಲ್ಲಾ ಪುಡಾರಿಗಳಿಲ್ವೇ? ವರ್ಗಾವಣೆ ರದ್ದು ಮಾಡಿಸಿ ಅಧಿಕಾರಿಗೇ ಕೊಕ್ ಕೊಡಿಸಿದರೆ ಆಯ್ತು. ಇಲಾಖೆಗೆ ಸೇರಿದ ಮೇಲೆ ಮುಗಿಯಿತು. ೩೦-೩೫ ವರ್ಷ ಸಂಬಳ ಎಣಿಸಿಕೊಳ್ಳುವುದಂತೂ ಖಾತ್ರಿ. ಕಾಟಾಚಾರದ ಕೆಲಸ ಮಾಡಿದರೂ ಅದರ ಕ್ವಾಲಿಟಿಯನ್ನು ಕೇಳುವವರಾರು? ಹೆಂಗೋ ಪೆಂಡಿಂಗ್ ಮುಗಿಯಿತಲ್ಲಾ ಎಂದು ಉಸಿರು ಬಿಡುವವರೇ ಹೆಚ್ಚು.

ನಿಜವೇ? ಕೆಲಸವನ್ನೇ ಮಾಡದೆ ಸಂಬಳ ಎಣಿಸಬಹುದೇ? ಐ್ಞಛ್ಛ್ಛಿಜ್ಚಿಜಿಛ್ಞಿಠಿ ಎಂದು ಮೇಲಿನವರು ಷರಾ ಬರೆಯಬಲ್ಲರೇ ಹೊರತು ಡಿಸ್ ಮಿಸ್ ಮಾಡಿ ನಿರ್ದಯವಾಗಿ ಮನೆಗೆ ಕಳಿಸಲಾರರು. ಅಂತಹ ಪರಿಸ್ಥಿತಿ ಬಂದರೆ ರಾಜಕಾರಣಿಗಳ ವಶೀಲಿಬಾಜಿ , ಚಮಚಾಗಿರಿಯಂತಹ ನಾನಾ ಮಾರ್ಗಗಳು ಸದಾ ತೆರೆದಿವೆ.

ಇನ್ನು ಕೆಲವು ನಕಲಿಗಳಿಗೆ ತಮ್ಮ ಕೆಪ್ಯಾಸಿಟಿ ತಮಗೇ ಗೊತ್ತು. ಅವರಂತೂ ಯುದ್ಧಕ್ಕೆ ಮೊದಲೇ ಶರಣಾಗತಿ. ಕೆಲಸವಂತೂ ಗೊತ್ತಿಲ್ಲ. ವಿದ್ಯೆ ನೈವೇದ್ಯೆ. ಅವರಿಗೆ ಹಿಕ್ಮತ್ತಿನ ಶಾಣ್ಯಾತನವೂ ಗೊತ್ತಿಲ್ಲ. ೧೦೦% ಮಫ್ ಪಾರ್ಟಿ. ಠಿ ್ಛಜ್ಞಿಜಿಜ್ಞಿಜ! ಹಾಗೆಂದು ತಾನು ದಡ್ಡನೆಂದು ಡಂಗೂರ ಹೊಡೆಯಲಾರರು. ಅದಕ್ಕೊಂದು ಕತೆ ಕಟ್ಟುತ್ತಾರೆ. ಏನೋ ಸಾರ್ ಈಗೊಂದು ನಾಲ್ಕು ವರ್ಷದಿಂದ ರಾವು ಹೊಡೆದು ಅದೇನೋ ಮಂಕು ಕವಿದಂಗಾಗಿದೆ. ಮೆಟ್ಟಿಲು ಜಾರಬಿದ್ದಾಗಲಿಂದ ಹಿಂಗಾಗಿದೆ. ಟ್ರೀಟ್ಮೆಂಟ್ ತಗೋಳ್ತಾ ಇದ್ದೀನಿ. ಇನ್ನೊಂದು ವರ್ಷದಲ್ಲಿ ಹುಷಾರಾಗುತ್ತಂತೆ ! ಜೊತೆಯಲ್ಲಿರುವವನೂ ತಕ್ಕ ಸುವ್ವೀ ಹಾಡುತ್ತಾನೆ. ಮಾನವೀಯ ಅನುಕಂಪ ಎಂದು ಮೇಲಧಿಕಾರಿಯೂ ತೆಪ್ಪಗಾಗುತ್ತಾನೆ. ಇದರ ಮೇಲೆ ಓವರ್ ಆಕ್ಟಿಂಗ್ ಬೇರೆ! ಇದೇ ನಾಟಕದಲ್ಲಿ ಸರ್ವೀಸು ಮುಗಿಯುತ್ತದೆ.

ಇನ್ನು ಕೆಲವು ನಕಲಿಗಳು ರಣಪ್ರಚಂಡರು. ಅಕ್ರಮವೆಸಗಿರುವುದೇ ಸಕ್ರಮ. ಇಲಾಖೆಯ ಎಲ್ಲ ಒಳಸುಳಿಗಳನ್ನೂ ಬಲ್ಲ ಚಾಣಾಕ್ಷರು. ಯಾವ ಮೇಲಧಿಕಾರಿಯೇ ಇರಲಿ. ಮೂರು ವರ್ಷಕ್ಕಿಂತ ಹೆಚ್ಚಿರಲಾರ. ಅಷ್ಟರಲ್ಲಿವರು ಮಂಕುಬೂದಿ ಎರಚಿ ತಮ್ಮದನ್ನು ಸಾಧಿಸಿಕೊಳ್ಳುತ್ತಾರೆ. ಮೇಲಿನವನಿಗೆ ಇವನೆಂಥವನು ಎಂದು ತಿಳಿಯುವ ಹೊತ್ತಿಗೆ ಅವನೇ ವರ್ಗವಾಗಿರುತ್ತಾನೆ. ಹೊಸ ಅಧಿಕಾರಿಯ ಎದುರು ಹೊಸ ಆಟ. ಅವನ ನಂತರದವರ ಎದುರು ನಾನಾ ರಂಗಿನಾಟ. ಈ ಡ್ರಾಮಾ ತಡೆಯಿಲ್ಲದೆ ಸಾಗುತ್ತದೆ.

ಓ ಎಂದರೆ ಠೋ ಎನ್ನಲು ಬಾರದ ನಕಲಿಗಳೆಲ್ಲ ಯಶಸ್ವಿ ಅಧಿಕಾರಿಗಳಾಗಿರುವುದೂ ಉಂಟು. ಅಕ್ರಮದ ಹಾದಿಯನ್ನೇ ಸಕ್ರಮ ಮಾಡಿಕೊಳ್ಳುವ ಶಾಣ್ಯರು ಇವರು. ಮೊದಲಿನಿಂದಲೂ ಕಂಡವರ ಹೆಗಲ ಮೇಲೆ ಸವಾರಿ ಮಾಡಿದವರಲ್ಲವೇ? ರಿಟೈರ್ಡ್ ಆದ ಅಥವಾ ತಮ್ಮ ಕಛೇರಿಯಲ್ಲೇ ಇರುವ ಕಷ್ಟಜೀವಿ ಮೂಗೆತ್ತನ್ನು ಜೀತಕ್ಕಿಟ್ಟುಕೊಂಡು ಸರ್ಕಾರಿ ದಫ್ತರಗಳನ್ನು ಬರೆಸುತ್ತಾರೆ. ತಾವು ಗೋರಿಕೊಂಡಿದ್ದರಲ್ಲಿ ಅವನಿಗೊಂದಿಷ್ಟು ತಳ್ಳಿ ಕೆಲಸ ಮುಗಿಸುತ್ತಾರೆ. ಮೇಲಧಿಕಾರಿಗಳಿಗೆ ಕಛೇರಿ ಕೆಲಸ ಅಪ್ ಡೇಟ್ ಆದರೆ ಸಾಕು. ಯಾವನು ಮಾಡಿದರೆ ಏನಂತೆ? ಸರ್ಕಾರಿ ದಫ್ತರಗಳನ್ನು ಕಡತಗಳನ್ನು ಖಾಸಗಿಯವರಿಗೆ ಕೊಡುವುದು ನಿಯಮ ಬಾಹಿರ. ಈ ಬೃಹಸ್ಪತಿಯನ್ನೇ ನಂಬಿದರೆ ಆಗುವ ಕೆಲಸವೂ ಆಗುವುದಿಲ್ಲ. ಒಟ್ಟಾರೆ ಕಛೇರಿ ಕಸ ಕ್ಲೀನಾದರೆ ಸಾಕು. ಇದು ಧೋರಣೆ.

ಸರ್ಕಾರಿ ಕೆಲಸವೆಂದರೆ ಅದೇ ತಾನೇ?

ಕ್ವಾಲಿಟಿ , ಅಚ್ಚುಕಟ್ಟುತನ , ಕರಾರುವಾಕ್ಕಾದ ಕೆಲಸ ಯಾರಿಗೆ ಬೇಕು? ಕೆಲಸ ಮುಗಿಸಲು ತಿಪ್ಪೆ ಸಾರಿಸಿದರೆ ಸಾಕು. ಕೊಳೆತಿರೋದು ಅಲ್ಲೇ ಕೂತಿರಲಿ! ಅದು ಮುಂದೆ ಬರುವವನ ತಲೆ ಮೇಲೆ ಕೂರಲಿ! ಏನಾದ್ರೂ ಹೆಚ್ಚು ಕಡಿಮೆಯಾದರೆ ಅದು ಅರ್ಜಿದಾರನ ಹಣೆಬರಹ. ಪ್ರತಿಯೊಂದು ಸರ್ಕಾರಿ ಕೆಲಸಗಳೂ ಗಬ್ಬೆದ್ದಿರುವುದಕ್ಕೆ ಇಂತಹ ಅಯೋಗ್ಯರ ,ಅಸಮರ್ಥರ ನೇಮಕಾತಿ ಕಾರಣ. ಬಿತ್ತಿದ್ದೇ ಬೇವು. ಮಾವನ್ನು ಬಯಸಿದರೆ ಬಂದೀತೇ?

ಅದೇ ತನಿಖಾಧಿಕಾರಿ ಹೇಳಿದ ಮತ್ತೊಂದು ಪ್ರಸಂಗ.

ಸ್ನಾತಕೋತ್ತರ ಕೇಂದ್ರದಲ್ಲಿ ತಾಂಡವವಾಡುವ ಜಾತೀಯತೆಯನ್ನು ಕಂಡು ಅವರಿಗೇ ಆಶ್ಚರ್ಯವಾಗುತ್ತಿತ್ತಂತೆ. ರಾಜಕೀಯದಲ್ಲಾದರೆ ಬೇಳೆ ಬೇಯಿಸಿ ಮಸಾಲೆ ಅರೆಯಲು ಜಾತೀಯತೆ ಬೇಕು. ಈ ವಿದ್ಯಾ ಕೇಂದ್ರಗಳಲ್ಲಿ ಅದರ ಆವಶ್ಯಕತೆಯೇ ಇಲ್ಲ. ಅದರೂ ಇಷ್ಟೊಂದು ಜಾತೀಯತೆ ತಾಂಡವವಾಡಲು ಕಾರಣವಾದರೂ ಏನು?

ಪರೀಕ್ಷಾ ಅವ್ಯವಹಾರಗಳು , ಕ್ಯಾಂಪಸ್ ಆಡಳಿತದಲ್ಲಿನ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಜಾತಿಯ ಗುರಾಣಿ ಬೇಕೇ ಬೇಕು. ಅನ್ಯರು ಆಕ್ರಮಣ ಮಾಡದಂತೆ ಸುಸೂತ್ರವಾಗಿ ನಾನಾ ಅವ್ಯವಹಾರ ನಡೆಸಲು ಜಾತೀಯತೆ , ಪಕ್ಷಬೆಂಬಲ, ಗೂಂಡಾಗರ್ದಿ ಬೇಕಿತ್ತು. ಕರೆದೊಡನೆ ಬರುವ ಪುಂಡರ ದಂಡು ಬೇಕಿತ್ತು. ಜಾತಿಯ ಹೆಸರೆತ್ತಿ ಪ್ರಚೋದಿಸಿದರೆ ಉದ್ರಿಕ್ತರಾಗುವ ವಿದ್ಯಾರ್ಥಿಗಳ ಪಡೆ ಕಟ್ಟಿಕೊಳ್ಳಬೇಕು. ತಂತಮ್ಮ ಜಾತಿಗಳ ಗುಂಪು ಬಲವಾಗಿದ್ದರೆ ಏಳಬಲ್ಲ ಆಕ್ಷೇಪಣೆಗಳು ಹಾಗೇ ಮುದುರಿ ಕೊಳ್ಳುತ್ತವೆ. ಆಗ ತಮ್ಮ ಧಂಧೆ ಸೇಫು. ಅಕಸ್ಮಾತ್ ಏನಾದರೂ ಫಜೀತಿಯಾದರೆ ರಕ್ಷಿಸಲು ದೊಡ್ಡದೊಂದು ವಿದ್ಯಾರ್ಥಿ ಪಡೆಯೇ ಇರುತ್ತದೆ.

‘ಅದು ಹೇಗೆ ಜಾತೀಯತೆಯನ್ನು ಈ ಕಾರಣಕ್ಕೆ ಪೋಷಿಸುತ್ತಾರೆ ಎಂದು ಹೇಳ್ತೀರಿ? ಕಾಲೇಜಿನ ವಿದ್ಯಾರ್ಥಿ ರಾಜಕೀಯಕ್ಕೂ ಜಾತಿಬಲ ಬೇಕಲ್ಲವೇ? ನಾನು ಕೇಳಿದೆ.

‘ಅದಕ್ಕೂ ಬೇಕು. ಇದುವರೆಗೆ ಪರೀಕ್ಷಾ ಅವ್ಯವಹಾರದಲ್ಲಿ ಸಿಕ್ಕಿ ಬಿದ್ದವರನ್ನು ಸ್ಟಡಿ ಮಾಡಿದಾಗ ಗೊತ್ತಾದ ಅಂಶ ಅಂದ್ರೆ , ಅವರೆಲ್ಲಾ ಜಾತಿ ಪೋಷಕರಾಗಿ , ಆಯಾಜಾತಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ಅವರ ಜಾತಿಪ್ರೇಮವೂ ನಿಜವಲ್ಲ. ಪೂರ್ತಿ ವ್ಯಾವಹಾರಿಕ. ಉಂಡೆಲೆಗಳನ್ನಾಗಿ ಬಳಸಿದ ವಿದ್ಯಾರ್ಥಿಗಳನ್ನು ಹಾಸಿ ಬೀಸಿ ಒಗೆಯುವುದಷ್ಟೇ !’ ಅವರೆಂದರು.

‘ಕ್ಯಾಂಪಸ್ಸುಗಳಲ್ಲಿ ಬೀಡು ಬಿಟ್ಟಿರೋ ಜಾತೀಯತೆ ನೋಡಿ ಈ ಜಾಗದಲ್ಲೇಕೆ ಈ ಪಿಡುಗು ಅಂತ ಆಶ್ಚರ್ಯಪಡ್ತಾ ಇದ್ದೆ‘ ಉದ್ಗರಿಸಿದೆ.

ಆ ತನಿಖಾಧಿಕಾರಿ ಸಲುಗೆಯವರು. ಛೇಡಿಸುತ್ತಾ ಅಂದರು, ‘ ಅಲ್ರೀ? ಜಾತೀಯತೆ ಅನ್ನೋದು ಎಲ್ಲಿದೇರೀ? ಏನಿದ್ರೂ ದುಡ್ಡು ಅಧಿಕಾರ ಎರಡೇ ಚಲಾವಣೆಯಲ್ಲಿರೋದು. ದುಡ್ಡು ಕೊಟ್ಟು ಕೆಲಸ ಮಾಡಿಸಿದೆ ಅಂತ ಹೇಳೋದಿಕ್ಕೆ ಆಗುತ್ತಾ?. ಅದನ್ನು ಮುಚ್ಚಿಕೊಳ್ಳೋದಿಕ್ಕೆ ಜಾತಿ , ವಶೀಲಿ ಹೆಸರನ್ನು ಹೇಳ್ತಾರೆ.’

‘ಅದೆಂಗೆ ಹೇಳ್ತೀರಾ?’

‘ತನಗೆ ಬೇಕಾದ ಜಾಗಕ್ಕೆ ವರ್ಗ ಮಾಡಿಸಿಕೊಂಡು ಬಂದವನು ಹೇಳೋ ಮಾತು ಒಂದೇ? , ‘ದುಡ್ಡು ನಾನ್ಯಾಕೆ ಕೊಡ್ಲೀ? ಸಕತ್ ಇನ್ ಫ್ಲುಯೆನ್ಸ್ ಇರುವಾಗ? ಎಲ್ಲಾ ನಮ್ಮ ಜಾತಿಯವರೇ ಇರೋದು. ಹಿಂಗಿಂಗೆ ವರ್ಗ ಆಗ್ಬೇಕು ಅಂದೆ, ಪಾಪ ಅವರೇ ಮುಂದೆ ನಿಂತು ಓಡಾಡಿ ಮನೇ ಬಾಗಿಲಿಗೇ ಆರ್ಡರ್ ತಂದು ಕೊಟ್ರು. ಒಂದು ನಯಾಪೈಸಾ ಕೂಡಾ ಖರ್ಚಾಗಲಿಲ್ಲ!’ ಅಂತೆಲ್ಲಾ ಬಿಲ್ಡಪ್ ಕೊಡ್ತಾರೆ. ಆದರೆ ಅವೆಲ್ಲಾ ಬರೀ ಓಳು ಅಷ್ಟೇ!. ಮಿನಿಷ್ಟ್ರು ಅವನ ಜಾತಿಯವನೇ ಆಗಿದ್ರೂ ಮೊದಲು ಕಾಸು ಮಡಗಿ ಮಾತಾಡು ಅಂತಾನೆ. ವ್ಯವಹಾರ ಅಂದ್ರೆ ಅದು ದುಡ್ಡಿನ ವ್ಯವಹಾರ ಮಾತ್ರ. ಕಾಸು ಕೊಟ್ಟು ಪೋಸ್ಟಿಂಗ್ ತಗೊಂಡೆ ಅಂತ ಹೇಳಿಕೊಂಡ್ರೆ ಇವರ ಪೊಸಿಶನ್ನೇ ವೀಕ್ ಆಗಿಬಿಡುತ್ತೆ. ತಮ್ಮ ಕೆಲಸ ಆಗಿದ್ದಕ್ಕೆ ಕಾರಣ ತಮ್ಮ ಜಾತಿಯ ಇನ್ಫ್ಲುಯೆನ್ಸು ಮತ್ತು ತಮ್ಮ ದಕ್ಷತೆ ಕಾರಣ ಎಂದೆಲ್ಲಾ ಬೋಂಗು ಬಿಡ್ತಾರೆ.

ಆಹಾ! ಹಣವೇ ನಿನ್ನಯ ಗುಣವನೇನೆಂದು ವರ್ಣಿಸಲಿ? ಆ ಕಾಲ ಈ ಕಾಲ ಸದಾ ಕಾಲದಲ್ಲೂ ನೀನೇ ನೀನೇ ನೀನೇ !

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

3 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

31 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago