ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ
ಪಂಚರಾಜ್ಯ ಚುನಾವಣೆ, ಉಪಚುನಾವಣೆ ಫಲಿತಾಂಶದ ನಂತರ ಸಿಎಂ ಪಟ್ಟಕ್ಕಾಗಿ ಡಿಕೆಶಿ ತಂತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವೆ ನಡೆಯುತ್ತಿರುವ ಅಽಕಾರ ಹಂಚಿಕೆಯ ಸಂಘರ್ಷ ಮುನ್ನಡೆಯುತ್ತಿರುವ ರೀತಿಯನ್ನು ನೋಡಿದರೆ ಇಂತಹ ದೊಂದು ಪ್ರಶ್ನೆ ಸಹಜವಾಗಿಯೇ ಉದ್ಭವವಾಗುತ್ತದೆ.
ಹಾಗೆ ನೋಡಿದರೆ ರಾಜಕಾರಣದಲ್ಲಿ ಬಂಡಾಯದ ಪರಂಪರೆ ಹೊಸತೂ ಅಲ್ಲ, ಅಸಹಜವೂ ಅಲ್ಲ. ಸ್ವಾತಂತ್ರ್ಯೋತ್ತರ ಕರ್ನಾಟಕದ ರಾಜಕೀಯ ಇತಿಹಾಸವನ್ನು ನೋಡಿದರೆ ಕೆಂಗಲ್ ಹನುಮಂತಯ್ಯ ಅವರ ಕಾಲದಿಂದಲೂ ಅಽಕಾರಾರೂಢ ಪಕ್ಷದಲ್ಲಿ ಬಂಡಾಯದ ಬಿರುಗಾಳಿ ಬೀಸುತ್ತಲೇ ಬಂದಿದೆ.
ಸ್ವಾತಂತ್ರ್ಯ ಬಂದ ನಂತರ ಜವಾಬ್ದಾರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕೆ.ಸಿ.ರೆಡ್ಡಿಯವರ ಕಾಲದಲ್ಲಿ ಇಂತಹ ಬಂಡಾಯದ ಅಗತ್ಯವೂ ಇರಲಿಲ್ಲ. ಅದಕ್ಕೆ ಪೂರಕವಾದ ವಾತಾವರಣವೂ ಇರಲಿಲ್ಲ. ಆದರೆ ೧೯೫೨ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಕೆಂಗಲ್ ಹನುಮಂತಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಯಿತಲ್ಲ ಈ ಸರ್ಕಾರ ಕೆಲ ಕಾಲ ನಡೆಯುವಷ್ಟರಲ್ಲಿಯೇ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯವರ ವಿರುದ್ಧ ಬಂಡಾಯ ಶುರುವಾಯಿತು.
ಕುತೂಹಲದ ಸಂಗತಿ ಎಂದರೆ ಕೆಂಗಲ್ ಹನುಮಂತಯ್ಯನವರ ವಿರುದ್ಧ ಬಂಡಾಯದ ಬಿರುಗಾಳಿ ಮೇಲೇಳಲು ಪರೋಕ್ಷವಾಗಿ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರೇ ಕಾರಣರಾಗಿದ್ದರು. ಕಾರಣ ನಿರ್ಭಿಡೆಯ ಸ್ವಭಾವದ ಕೆಂಗಲ್ ಹನುಮಂತಯ್ಯ ಅವರು ನೇರವಾಗಿ ಆಡುತ್ತಿದ್ದ ಮಾತುಗಳು ನೆಹರು ಅವರಿಗೆ ಇಷ್ಟವಾಗುತ್ತಿರಲಿಲ್ಲ. ಪರಿಣಾಮವಾಗಿ ಕೆಂಗಲ್ ಹನುಮಂತಯ್ಯ ಅವರ ಸರ್ಕಾರದಲ್ಲಿದ್ದ ಕೆಲ ಮಂತ್ರಿಗಳೇ ಬಂಡಾಯ ಶುರು ಹಚ್ಚಿಕೊಂಡರು. ಈ ಮಧ್ಯೆ ಕರ್ನಾಟಕದ ಏಕೀಕರಣವಾದ ನಂತರ ಲಿಂಗಾಯತರು ಪ್ರಬಲವಾಗಿದ್ದ ಜಿಲ್ಲೆಗಳು ರಾಜ್ಯಕ್ಕೆ ಸೇರಿಕೊಂಡದ್ದರಿಂದ ನಿಜಲಿಂಗಪ್ಪ ಅವರ ಪಾಳೆಯ ಬಲಿಷ್ಠವಾಗಿ ಬೆಳೆದು ನಿಂತುಕೊಂಡಿತು.
ಹೀಗೆ ಒಂದಕ್ಕೊಂದು ಅಂಶಗಳು ಸೇರಿ ಪ್ರಬಲವಾದ ಬಂಡಾಯ ಕೆಂಗಲ್ ಹನುಮಂತಯ್ಯ ಅವರು ಅಽಕಾರದಿಂದ ಕೆಳಗಿಳಿಯಲು ಕಾರಣವಾಯಿತು. ಮುಂದೆ ಈ ಸರ್ಕಾರದ ಅವಽಯಲ್ಲಿ ಕಡಿದಾಳ್ ಮಂಜಪ್ಪ ಮತ್ತು ನಿಜಲಿಂಗಪ್ಪ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದರು. ೧೯೫೭ರ ವಿಧಾನಸಭಾ ಚುನಾವಣೆಯ ನಂತರ ಮರಳಿ ಮುಖ್ಯಮಂತ್ರಿಯಾದ ನಿಜಲಿಂಗಪ್ಪನವರು ಬಲಿಷ್ಠರಾಗಿದ್ದರೂ ಕೆಲವೇ ಕಾಲದಲ್ಲಿ ಅವರು ಬಂಡಾಯದ ಸುಳಿಗೆ ಸಿಲುಕಿಕೊಳ್ಳಬೇಕಾಯಿತು. ಕುತೂಹಲದ ಸಂಗತಿ ಎಂದರೆ ಅವರ ವಿರುದ್ಧದ ಬಂಡಾಯಕ್ಕೆ ಕುಮ್ಮಕ್ಕು ಕೊಟ್ಟವರು ಪ್ರಧಾನಿ ನೆಹರು ಅವರ ಸಂಪುಟದಲ್ಲಿ ಸಚಿವರಾಗಿದ್ದ ಮೊರಾರ್ಜಿ ದೇಸಾಯಿ. ಅವತ್ತು ನಿಜಲಿಂಗಪ್ಪನವರು ಪ್ರಧಾನಿ ನೆಹರು ಅವರ ಬೆಂಬಲಿಗರಾಗಿದ್ದರೆ, ನಿಜಲಿಂಗಪ್ಪನವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಬಿ.ಡಿ.ಜತ್ತಿ ಅವರು ಮೊರಾರ್ಜಿ ದೇಸಾಯಿ ಅವರ ಬೆಂಬಲಿಗರಾಗಿದ್ದರು. ದಿಲ್ಲಿಯಲ್ಲಿ ನೆಹರು ಮತ್ತು ಮೊರಾರ್ಜಿ ಅವರ ನಡುವೆ ನಡೆಯುತ್ತಿದ್ದ ಶೀತಲ ಸಮರದ ಭಾಗವಾಗಿ ಇಲ್ಲಿ ಮೊರಾರ್ಜಿ ಅವರ ಬಣದ ಬಿ.ಡಿ.ಜತ್ತಿಯವರು ನಿಜಲಿಂಗಪ್ಪನವರ ವಿರುದ್ಧ ಬಂಡಾಯವೆದ್ದರು ಮತ್ತು ಇಂತಹ ಬಂಡಾಯ ಯಶಸ್ವಿಯಾಗಿ ನಿಜಲಿಂಗಪ್ಪ ನವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯ ಬೇಕಾಯಿತು.
ಮುಂದೆ ೧೯೬೭ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾದರೂ ಮರು ವರ್ಷವೇ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರಿಂದ ಇಲ್ಲಿ ತಮ್ಮ ಶಿಷ್ಯ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಹುದ್ದೆಗೇರಿಸಿ ದೆಹಲಿಗೆ ಹೋದರು. ಆದರೆ ಹೀಗೆ ದೆಹಲಿಗೆ ಹೋದ ನಿಜಲಿಂಗಪ್ಪನವರು ಪ್ರಧಾನಿ ಇಂದಿರಾಗಾಂಧಿ ಅವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದರಿಂದ ಇಲ್ಲಿ ಅವರ ಶಿಷ್ಯ ವೀರೇಂದ್ರ ಪಾಟೀಲರ ವಿರುದ್ಧ ಇಂದಿರಾಗಾಂಧಿ ಬಣ ಬಂಡಾಯಕ್ಕೆ ಇಳಿಯಿತು. ಈ ಸಂದರ್ಭದಲ್ಲಿ ಶಾಂತವೇರಿ ಗೋಪಾಲಗೌಡರ ನೇತೃತ್ವದಲ್ಲಿ ವಿರೋಧ ಪಕ್ಷಗಳ ಹಲ ಶಾಸಕರ ಜತೆ ಸೇರಿ ಪರ್ಯಾಯ ಸರ್ಕಾರ ರಚಿಸುವ ಪ್ರಯತ್ನಗಳು ನಡೆದವಾದರೂ ಅದು ಸಾಧ್ಯವಾಗದೆ ಸರ್ಕಾರ ಉರುಳಿ ಬಿದ್ದು ರಾಜ್ಯಪಾಲರ ಆಡಳಿತ ಜಾರಿಯಾಯಿತು.
ಹಾಗೆ ನೋಡಿದರೆ ಆಡಳಿತಾರೂಢ ಪಕ್ಷದಲ್ಲಿ ಬಂಡಾಯವೇ ಇಲ್ಲದ ಮೊದಲ ಕಾಲಘಟ್ಟವೆಂದರೆ ೧೯೭೨ರಲ್ಲಿ ಅಸ್ತಿತ್ವಕ್ಕೆ ಬಂದ ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ ಸರ್ಕಾರ. ಈ ಸರ್ಕಾರ ಅಸ್ತಿತ್ವದಲ್ಲಿದ್ದ ಮೊದಲ ಐದು ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ಯಾವ ಬಂಡಾಯವೂ ಕಾಣಿಸಲಿಲ್ಲ. ಇದಕ್ಕೆ ದೇವರಾಜ ಅರಸು ಮತ್ತು ಇಂದಿರಾಗಾಂಽ ಅವರ ನಡುವೆ ಇದ್ದ ವಿಶ್ವಾಸದ ವಾತಾವರಣವೇ ಮುಖ್ಯ ಕಾರಣ.
ಆದರೆ ೧೯೭೮ ರಲ್ಲಿ ಮರಳಿ ದೇವರಾಜ ಅರಸರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರ ಹಿಡಿಯಿತಾದರೂ ಈ ಬಾರಿ ಇಂದಿರಾಗಾಂಧಿ ಮತ್ತು ದೇವರಾಜ ಅರಸರ ನಡುವಣ ಬಾಂಧವ್ಯ ಹದಗೆಟ್ಟಿತ್ತು. ಪರಿಣಾಮ ದೇವರಾಜ ಅರಸರ ವಿರುದ್ಧ ಬಂಡಾಯಕ್ಕೆ ಸ್ವತಃ ಇಂದಿರಾಗಾಂಧಿಯವರೇ ಕುಮ್ಮಕ್ಕು ನೀಡಿದರು. ಬಂಗಾರಪ್ಪ, ಗುಂಡೂರಾವ್ ಸೇರಿದಂತೆ ಅರಸರ ಸಚಿವ ಸಂಪುಟದಲ್ಲಿದ್ದ ಪ್ರಮುಖ ನಾಯಕರು ಬಂಡಾಯದ ಕಹಳೆ ಮೊಳಗಿಸಿದ್ದು ಈ ಸಂದರ್ಭದಲ್ಲಿ. ಅವತ್ತು ಇಂತಹ ಬಂಡಾಯಕ್ಕೆ ಅರಸರು ಪ್ರತ್ಯುತ್ತರ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ೧೯೮೦ರಲ್ಲಿ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕಾಯಿತು.
ಆದರೆ ಅವತ್ತು ದೇವರಾಜ ಅರಸರು ಕೆಳಗಿಳಿದರೂ ಅದರ ಪರಿಣಾಮವಾಗಿ ಕರ್ನಾಟಕದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂತು. ಹೀಗೆ ೧೯೮೩ ರಲ್ಲಿ ಅಸ್ತಿತ್ವಕ್ಕೆ ಬಂದ ಜನತಾರಂಗ ಸರ್ಕಾರಕ್ಕೆ ರಾಮಕೃಷ್ಣ ಹೆಗಡೆ ಸಾರಥಿಯಾದರು. ಹೀಗೆ ಮುಖ್ಯಮಂತ್ರಿಯಾದ ಹೆಗಡೆ ಅವರ ವಿರುದ್ಧ ಬಂಗಾರಪ್ಪನವರು ಬಂಡಾಯವೆದ್ದರೂ ಅದರಿಂದ ಹೆಗಡೆ ಅವರಿಗೆ ಹೇಳಿಕೊಳ್ಳುವಂತಹ ಹಾನಿಯಾಗಲಿಲ್ಲ. ಆದರೆ ೧೯೮೫ರಲ್ಲಿ ವಿಧಾನಸಭೆಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಮರಳಿ ಗೆದ್ದ ಜನತಾ ಸರ್ಕಾರ ಕೆಲವೇ ಕಾಲದಲ್ಲಿ ಬಂಡಾಯದ ಬಿರುಗಾಳಿಗೆ ಸಿಲುಕಿತು.
ಹೀಗೆ ಹೆಗಡೆ ಅವರ ವಿರುದ್ಧ ಬಂಡಾಯ ಶುರುವಾಗಲು ದೇವೇಗೌಡರು ಕಾರಣ. ದೇವೇಗೌಡರು ತಮ್ಮ ಪ್ರತಿಸ್ಪರ್ಧಿ ಎಂದು ಪರಿಗಣಿಸಿದ ಹೆಗಡೆ ಅವರು ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲು ಹವಣಿಸಿದ್ದೇ ಅವರಿಗೆ ಮುಳುವಾಯಿತು. ಅಷ್ಟೇ ಅಲ್ಲ,ಇದರ ಪರಿಣಾಮವಾಗಿ ಶುರುವಾದ ಬಂಡಾಯ ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಉತ್ತುಂಗಕ್ಕೇರಿ ಹೆಗಡೆ ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತರಾಗುವಂತೆ ಮಾಡಿತು.
ಇದಾದ ನಂತರ ಮುಖ್ಯಮಂತ್ರಿಯಾದ ಎಸ್.ಆರ್.ಬೊಮ್ಮಾಯಿ ಅವರು ಬಂಡಾಯ ಮತ್ತು ಭಿನ್ನಮತದ ಗಾಳಿಗೆ ತತ್ತರಿಸಿದರು ಮತ್ತು ಅವರ ಸರ್ಕಾರವನ್ನು ರಾಜ್ಯಪಾಲರು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಿದ ಸನ್ನಿವೇಶ ನಡೆಯಿತು. ಇದಾದ ನಂತರ ೧೯೮೯ರಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರ ಹಿಡಿಯಿತಾದರೂ ಆ ಸರ್ಕಾರದ ಐದು ವರ್ಷಗಳ ಅಧಿಕಾರಾವಧಿ ಎಂದರೆ ಅದು ಬಂಡಾಯದ ಪರಂಪರೆ. ಏಕೆಂದರೆ ಮೊದಲು ಮುಖ್ಯಮಂತ್ರಿಯಾದ ವೀರೇಂದ್ರ ಪಾಟೀಲ್ ಮತ್ತು ನಂತರ ಮುಖ್ಯಮಂತ್ರಿಯಾದ ಎಸ್.ಬಂಗಾರಪ್ಪ ಅವರಿಬ್ಬರೂ ಸ್ವಪಕ್ಷೀಯರ ಬಂಡಾಯಕ್ಕೆ ಸಿಲುಕಿ ಅಽಕಾರ ಕಳೆದುಕೊಂಡರು. ಅದೇ ಅವಧಿಯಲ್ಲಿ ಮುಖ್ಯಮಂತ್ರಿಯಾದ ವೀರಪ್ಪ ಮೊಯ್ಲಿ ಅವರ ಕಾಲವೂ ಬಂಡಾಯದ ಪರಂಪರೆಗಳಿಂದ ತುಂಬಿತ್ತಾದರೂ ಪ್ರಧಾನಿ ನರಸಿಂಹರಾವ್‌ರ ಕಟಾಕ್ಷದಿಂದ ಅಧಿಕಾರ ಹೋಗಲಿಲ್ಲ ಅಷ್ಟೇ. ಇದಾದ ನಂತರ ೧೯೯೪ರಲ್ಲಿ ದೇವೇಗೌಡರ ನೇತೃತ್ವದ ಜನತಾದಳ ಸರ್ಕಾರ ಅಸ್ತಿತ್ವಕ್ಕೆ ಬಂತು. ದೇವೇಗೌಡರೇನೋ ಪ್ರಬಲ ನಾಯಕರಾಗಿ ಆಡಳಿತ ನಡೆಸಿದರು. ಆದರೆ ಅವರು ಮುಖ್ಯಮಂತ್ರಿಯಾಗಿರುವಾಗಲೇ ರಾಮಕೃಷ್ಣ ಹೆಗಡೆ ಅವರು ತಮ್ಮ ಬೆಂಬಲಿಗರ ಜತೆ ಸೇರಿ ಸರ್ಕಾರ ಉರುಳಿಸಲು ರಣತಂತ್ರ ಹೂಡತೊಡಗಿದ್ದರು. ಆದರೆ ಇದು ಯಶಸ್ವಿಯಾಗುವ ಮೊದಲೇ ೧೯೯೬ರ ಸಂಸತ್ ಚುನಾವಣೆ ನಡೆದು ಜನತಾದಳ ಹದಿನಾರು ಸೀಟುಗಳನ್ನು ಗೆದ್ದುಕೊಂಡಿತ್ತು ಮತ್ತು ಸನ್ನಿವೇಶದ ಲಾಭ ಪಡೆದ ದೇವೇಗೌಡರು ದೇಶದ ಪ್ರಧಾನಿಯಾದರು. ಹೀಗೆ] ಪ್ರಧಾನಿಯಾದ ದೇವೇಗೌಡರು ಮಾಡಿದ ಮೊದಲ ಕೆಲಸವೆಂದರೆ ಪಕ್ಷದ ನಾಯಕರಿಗೆ ಸೂಚನೆ ನೀಡಿ ರಾಮಕೃಷ್ಣ ಹಗಡೆ ಅವರನ್ನು ಜನತಾದಳದಿಂದ ಉಚ್ಚಾಟಿಸಿದ್ದು. ಮುಂದೆ ಗೌಡರ ಜಾಗಕ್ಕೆ ಬಂದ ಜೆ.ಹೆಚ್.ಪಟೇಲರು ನಿರಂತರವಾಗಿ ಬಂಡಾಯದ ಬಿರುಗಾಳಿಗೆ ಸಿಲುಕಬೇಕಾಯಿತು. ಮತ್ತು ಇಂತಹ ಬಿರುಗಾಳಿಯನ್ನು ಸೃಷ್ಟಿಸುತ್ತಿದ್ದವರು ದೇವೇಗೌಡ ಮತ್ತು ಸಿದ್ದರಾಮಯ್ಯ. ಪರಿಣಾಮ ಜೆ.ಹೆಚ್.ಪಟೇಲರು ಯಾವತ್ತೂ ನೆಮ್ಮದಿಯಿಂದ ರಾಜ್ಯಭಾರ ಮಾಡಲು ಸಾಧ್ಯವಾಗಲಿಲ್ಲ. ಹಾಗೆ ನೋಡಿದರೆ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಶಾಂತಿಯಿಂದ ರಾಜ್ಯಭಾರ ಮಾಡಿದ ಎರಡನೇ ಮುಖ್ಯಮಂತ್ರಿ ಎಂದರೆ ಎಸ್.ಎಂ.ಕೃಷ್ಣ. ಏಕೆಂದರೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ದಿಲ್ಲಿ ಗದ್ದುಗೆಯನ್ನು ಕಳೆದುಕೊಂಡಿತ್ತು. ಮತ್ತು ಇಂತಹ ಸಂದರ್ಭದಲ್ಲೂ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿಯವರಿಗೆ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯಾಗಿ ಉಳಿದುಕೊಂಡಿದ್ದರಿಂದ ಎಸ್.ಎಂ.ಕೃಷ್ಣ ಅವರ ಅಧಿಕಾರಾವಧಿ ಬಂಡಾಯದ ಗೋಜುಗಳಿಲ್ಲದೆ ಶಾಂತವಾಗಿತ್ತು.
ಆದರೆ ೨೦೦೪ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್-ಜಾ.ದಳ ಮೈತ್ರಿಕೂಟ ಸರ್ಕಾರ ಮತ್ತು ೨೦೦೬ ರಲ್ಲಿ ಅಸ್ತಿತ್ವಕ್ಕೆ ಬಂದ ಜಾ.ದಳ -ಬಿಜೆಪಿ ಮೈತ್ರಿಕೂಟ ಸರ್ಕಾರಗಳು ಸ್ವಪಕ್ಷೀಯರ ಇಲ್ಲವೇ ಮಿತ್ರಪಕ್ಷಗಳ ಹೊಡೆತದಿಂದ ನಲುಗಿದವು. ೨೦೦೮ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತಲ್ಲ ಅದು ಕೂಡ ಬಂಡಾಯದ ಪರಂಪರೆ ಮುಂದುವರಿದ ಕಾಲ. ಪರಿಣಾಮವಾಗಿ ಈ ಅವಧಿಯಲ್ಲಿ ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂತ ಬೆಳವಣಿಗೆ ನಡೆಯಿತು. ಇದಾದ ನಂತರ ೨೦೧೩ರಲ್ಲಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೂಡ ಕರ್ನಾಟಕದ ಇತಿಹಾಸದಲ್ಲಿ ಬಂಡಾಯದ ಧ್ವನಿ ಕೇಳದೆ ಶಾಂತವಾಗಿದ್ದ ಸರ್ಕಾರ. ಇದಾದ ನಂತರ ೨೦೧೮ರಲ್ಲಿ ಅಸ್ತಿತ್ವಕ್ಕೆ ಬಂದ ಜಾ.ದಳ -ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಮತ್ತು ೨೦೧೯ರಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ ಬಂಡಾಯದ ಕೂಗಿನಿಂದ ಕೆಪ್ಪಾಗಿ ಹೋಯಿತು.
ಹಾಗೆ ನೋಡಿದರೆ ೨೦೨೩ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಯಾವತ್ತೂ ಬಂಡಾಯದ ಬಿರುಗಾಳಿಯಿಂದ ತತ್ತರಿಸಲಿಲ್ಲ. ಅಧಿಕಾರ ಹಂಚಿಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವೆ ನಿರಂತರವಾಗಿ ಸಂಘರ್ಷ ನಡೆಯುತ್ತಾ ಬಂದರೂ ಯಾವುದೇ ಒಂದು ಬಣ ಎದುರಾಳಿ ಬಣದ ವಿರುದ್ಧ ಬಹಿರಂಗವಾಗಿ ಬಂಡಾಯ ಸಾರಲಿಲ್ಲ. ಆದರೆ ಮೇ ೪ರ ನಂತರ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಬಂಡಾಯದ ಪರಂಪರೆ ಶುರುವಾಗಲಿದೆ ಎಂಬ ಮಾತುಗಳು ದಟ್ಟವಾಗಿವೆ. ಏಕೆಂದರೆ ಈಗ ಸಿಎಂ ಹುದ್ದೆಗಾಗಿ ಪಟ್ಟು ಹಿಡಿದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇನ್ನು ಕಾಯಲು ಸಿದ್ಧರಿಲ್ಲ. ಅದೇ ರೀತಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ತಯಾರಿಲ್ಲ. ಪರಿಣಾಮ ಈ ವಿಷಯದಲ್ಲಿ ಮೇ ನಾಲ್ಕರ ನಂತರ ನಡೆಯುವ ಯಾವುದೇ ಬೆಳವಣಿಗೆ ರಾಜ್ಯ ಕಾಂಗ್ರೆನಲ್ಲಿ ಬಂಡಾಯದ ಬಿರುಗಾಳಿ ಎಬ್ಬಿಸುವುದು ನಿಶ್ಚಿತ. ಮುಂದೇನಾಗುತ್ತದೋ ನೋಡಬೇಕು.
” ಅಧಿಕಾರ ಹಂಚಿಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವೆ ನಿರಂತರವಾಗಿ ಸಂಘರ್ಷ ನಡೆಯುತ್ತಾ ಬಂದರೂ ಯಾವುದೇ ಒಂದು ಬಣ ಎದುರಾಳಿ ಬಣದವಿರುದ್ಧ ಬಹಿರಂಗವಾಗಿ ಬಂಡಾಯ ಸಾರಲಿಲ್ಲ. ದರೆ ಮೇ ೪ರ ನಂತರ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಬಂಡಾಯದ ಪರಂಪರೆ ಶುರುವಾಗಲಿದೆ ಎಂಬ ಮಾತುಗಳು ದಟ್ಟವಾಗಿವೆ.”
ಚೆನ್ನೈ : ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಅವರ ಕಾರು ಚಾಲಕನ…
ಮೈಸೂರು : ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಮೂರು ರಾಜ್ಯಗಳಲ್ಲಿ ಗೆಲುವು ಲಭಿಸಿದ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಜೆಪಿ…
ಚೆನ್ನೈ : ನಟಿ ತ್ರಿಶಾ ಕೃಷ್ಣನ್ ತಮ್ಮ ಹುಟ್ಟುಹಬ್ಬದ ನಿಮಿತ್ತ ಸೋಮವಾರ ಬೆಳಿಗ್ಗೆ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.…
ಚೆನ್ನೈ: ತಮಿಳುನಾಡಿನ ಹಾಲಿ ಸಿಎಂ ಎಂ.ಕೆ.ಸ್ಟಾಲಿನ್ ಸ್ವ ಕ್ಷೇತ್ರದಲ್ಲೇ ಸೋಲು ಅನುಭವಿಸಿದ್ದಾರೆ. ಈ ಮೂಲಕ ಸತತ 2ನೇ ಬಾರಿಗೆ ಸರ್ಕಾರ…
ದಾವಣಗೆರೆ: ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ.…
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ವಿಕಸಿತ ಭಾರತದ ಮೇಲೆ ಜನರು ಹೊಂದಿರುವ ನಂಬಿಕೆಯಿಂದಾಗಿ ಎನ್‌ಡಿಎ…