ಪ್ರೊ.ಆರ್.ಎಂ.ಚಿಂತಾಮಣಿ
ಮತ್ತೊಂದು ಸಹಕಾರಿ ಬ್ಯಾಂಕು ಮುಳುಗಿದೆ. ನಲವತ್ತಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದ ಮುಂಬಯಿಯ ನ್ಯೂ ಇಂಡಿಯಾ ಸಹಕಾರಿ ಬ್ಯಾಂಕು ರಿಸರ್ವ್ ಬ್ಯಾಂಕ್ ಆದೇಶದ ಮೇರೆಗೆ ಮುಚ್ಚಲ್ಪಟ್ಟಿದೆ. ಆರು ತಿಂಗಳ ಹಿಂದೆಯೇ ಬ್ಯಾಂಕಿನ ಆಡಳಿತ ಸಮರ್ಪಕವಾಗಿಲ್ಲವೆಂದು ರಿಸರ್ವ್ ಬ್ಯಾಂಕ್ ಹೊಸ ಠೇವಣಿಗಳನ್ನು ಸ್ವೀಕರಿಸಬಾರದೆಂದು ಆದೇಶ ಹೊರಡಿಸಿತ್ತು. ಈಗ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಬ್ಯಾಂಕಿನ ಶಾಖಾ ಮ್ಯಾನೇಜರ್ ಒಬ್ಬ ಸೇರಿ ಬ್ಯಾಂಕಿಗೆ ೧೨೨ ಕೋಟಿ ರೂ.ಗಳ ವಂಚನೆ ಮಾಡಿದ್ದಾರೆ ಎಂಬ ಅಂಶ ಕಳೆದ ವಾರ ಬೆಳಕಿಗೆ ಬಂದು ಅವರಿಬ್ಬರನ್ನು ಅರೆಸ್ಟ್ ಮಾಡಿದ ನಂತರ ಬ್ಯಾಂಕಿನ ಕತೆ ಮುಗಿಯಿತು. ಇದರ ಪರಿಣಾಮವಾಗಿ ಬ್ಯಾಂಕಿನ ಲಕ್ಷಾಂತರ ಠೇವಣಿದಾರರು ಆತಂಕದಿಂದ ಕಂಗಾಲಾಗಿದ್ದಾರೆ. ಠೇವಣಿ ವಿಮೆ ರಕ್ಷಣೆ ಇದ್ದರೂ ತಮ್ಮ ಪೂರ್ಣ ಠೇವಣಿಗಳು ವಾಪಸ್ ಬರಲಿಕ್ಕಿಲ್ಲವೆಂಬ ಅನುಮಾನ ಕಾಡುತ್ತಿದೆ.
ಆಗೊಂದು, ಈಗೊಂದು ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದರಿಂದ ಸಹಕಾರಿ ಬ್ಯಾಂಕುಗಳಲ್ಲೇ ಏಕೆ ಹೀಗಾಗುತ್ತಿದೆ ಎಂಬ ಬಗ್ಗೆ ಆಸಕ್ತರೆಲ್ಲರೂ ಚಿಂತಿಸುವಂತಾಗಿದೆ. ಲೋಪದೋಷಗಳನ್ನು ಕಂಡುಹಿಡಿದು ಸರಿಪಡಿಸುವ ಅವಶ್ಯಕತೆ ಇದೆ. ಬ್ಯಾಂಕಿಂಗ್ ವಲಯ ಅರ್ಥವ್ಯವಸ್ಥೆಯ ದೃಷ್ಟಿಯಿಂದ ಮಹತ್ವದ್ದು ಮತ್ತು ಸೂಕ್ಷ ವಾದದ್ದು. ಅದರಲ್ಲಿಯೂ ಸಹಕಾರಿ ಹಣಕಾಸು ಸಂಸ್ಥೆಗಳು ಸ್ಥಳೀಯರಿಂದಲೇ ಆರಂಭಿಸಲ್ಪಟ್ಟು ಅವರಿಂದಲೇ ನಡೆಸಲ್ಪಡುವುದರಿಂದ ಪ್ರಾದೇಶಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇವುಗಳ ಆರೋಗ್ಯಕರ ಬೆಳವಣಿಗೆ ಅತ್ಯವಶ್ಯವಾಗಿರುತ್ತದೆ. ಆದ್ದರಿಂದ ಸರ್ಕಾರ ಮತ್ತು ರಿಸರ್ವ್ ಬ್ಯಾಂಕು ಆಡಳಿತ ಮತ್ತು ನಿಯಂತ್ರಣಗಳನ್ನು ಇನ್ನಷ್ಟು ಬಿಗಿಗೊಳಿಸಬೇಕಾದ ಅವಶ್ಯಕತೆ ಇದೆ. ಸಹಕಾರಿ ಚಳವಳಿಯಲ್ಲಿರುವವರು ಮತ್ತು ಫಲಾನುಭವಿಗಳ ಹೊಣೆಗಾರಿಕೆಯೂ ಅಷ್ಟೇ ಹೆಚ್ಚಾಗಿದೆ.
ಸಹಕಾರಿ ಬ್ಯಾಂಕುಗಳು: ‘ತಾನು ಎಲ್ಲರಿಗಾಗಿ ಮತ್ತು ಎಲ್ಲರೂ ತನಗಾಗಿ’ ಮತ್ತು ‘ಪ್ರತಿ ಸದಸ್ಯನಿಗೂ ಒಂದೇ ಮತ’ ಎಂಬ ಉದಾತ್ತ ತತ್ವಗಳ ಆಧಾರದ ಮೇಲೆ ಸಹಕಾರ ಚಳವಳಿ ಬೆಳೆದಿದೆ. ದೇಶದಲ್ಲಿ ವಿವಿಧ ರಂಗಗಳಲ್ಲಿ ಸಣ್ಣ, ದೊಡ್ಡ ಸಹಕಾರಿ ಸಂಘಗಳು ಯಶಸ್ವಿಯಾಗಿ ನಡೆಯುತ್ತಿವೆ. ಅದೇ ರೀತಿ ಹಣಕಾಸು ವಲಯದಲ್ಲಿ ಪತ್ತಿನ ಸಹಕಾರಿ ಸಂಘಗಳು ದೇಶಾದ್ಯಂತ ದೊಡ್ಡ ಸಂಖ್ಯೆಯಲ್ಲಿವೆ. ಬ್ಯಾಂಕಿಂಗ್ ಕಾಯ್ದೆಯಡಿ ನೋಂದಾಯಿಸಲ್ಪಟ್ಟ ಸ್ಥಳೀಯ ದೊಡ್ಡ ಸಹಕಾರಿ ಹಣಕಾಸು ಸಂಸ್ಥೆಗಳೇ ಸಹಕಾರಿ ಬ್ಯಾಂಕುಗಳು.
ಮೊದಮೊದಲು ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿದ್ದ ವಾಣಿಜ್ಯ ಬ್ಯಾಂಕುಗಳ ಎಲ್ಲ ಕಾರ್ಯಗಳನ್ನೂ ನಿರ್ವಹಿಸುವ ಈ ಸಹಕಾರಿ ಬ್ಯಾಂಕುಗಳನ್ನು ಅರ್ಬನ್ ಸಹಕಾರಿ ಬ್ಯಾಂಕುಗಳು’ ಎಂದು ಕರೆಯಲಾಗುತ್ತಿತ್ತು. ಭೌಗೋಳಿಕ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವ ಅವಕಾಶ ಮತ್ತು ಸಾಮರ್ಥ್ಯಗಳನ್ನು ಪರಿಗಣಿಸಿ ಶಾಖೆಗಳನ್ನು ಹೊಂದಲು ಅವಕಾಶ ಕಲ್ಪಿಸಿಕೊಡಲಾಯಿತು. ಇಂದು ನೂರು, ಇನ್ನೂರು ಮತ್ತು ಅದಕ್ಕಿಂತ ಹೆಚ್ಚು ಶಾಖೆಗಳನ್ನು ಹೊಂದಿರುವ ಸಹಕಾರಿ ಬ್ಯಾಂಕುಗಳೂ ನಮ್ಮಲ್ಲಿವೆ. ದೇಶಾದ್ಯಂತ ಸಹಕಾರಿ ಬ್ಯಾಂಕುಗಳುಬೆಳೆಯುತ್ತಿದ್ದು, ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ಆದರೆ ಆಗಾಗ ನ್ಯೂ ಇಂಡಿಯಾ ಸಹಕಾರಿ ಬ್ಯಾಂಕು ದಿವಾಳಿಯಂತಹ ಅವಘಡಗಳು ನಡೆಯುತ್ತಿರುವುದೂ ಗಮನಿಸಲೇಬೇಕಾದ ವಿಷಯ.
ಅಧಿಕೃತ ಅಂಕಿ ಸಂಖ್ಯೆಗಳ ಪ್ರಕಾರ ದೇಶದಲ್ಲಿ ೨೦೨೪ರ ಮಾರ್ಚ್ ೩೧ರ ಹೊತ್ತಿಗೆ ೧,೪೭೨ ಸಹಕಾರಿ ಬ್ಯಾಂಕುಗಳಿದ್ದು, ಅವುಗಳಲ್ಲಿ ೫,೩೫,೪೬೫ ಕೋಟಿ ರೂ.ಗಳಷ್ಟು ಠೇವಣಿಗಳಿದ್ದವು. ಈ ಬ್ಯಾಂಕುಗಳು ಈ ವೇಳೆಗೆ ೩,೪೫,೩೦೩ ಕೋಟಿ ರೂ.ಗಳಷ್ಟು ಸಾಲ ಕೊಟ್ಟಿದ್ದವು. ಇವುಗಳಲ್ಲಿ ೪೮ ದೊಡ್ಡ ಅಂದರೆ ಷೆಡ್ಯೂಲ್ಡ್ ಬ್ಯಾಂಕುಗಳಾಗಿದ್ದವು (೧೦೦ ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ). ಇವುU೦ಪಳಲ್ಲಿ ಎರಡು ದೊಡ್ಡ ಬ್ಯಾಂಕುಗಳ (ಷೆಡ್ಯೂಲ್ಡ್) ಬಂಡವಾಳ ನಿಯಮಗಳ ಪ್ರಕಾರ ಇರಬೇಕಾದಷ್ಟು ಪ್ರಮಾಣದಲ್ಲಿ ಇರಲಿಲ್ಲ ಎಂಬುದು ವರದಿಗಳಿಂದ ತಿಳಿಯುತ್ತದೆ.
ರಿಸರ್ವ್ ಬ್ಯಾಂಕು ರೂಪಿಸಿದ ನಿಯಮಗಳ ಪ್ರಕಾರ ನಷ್ಟಭಯ ಆಧಾರಿತ ಮೌಲ್ಯ ಹೊಂದಿದ ಆಸ್ತಿಗಳ ಒಟ್ಟು ಮೌಲ್ಯದ ಶೇ.೧೨ರಷ್ಟಾದರೂ ಬಂಡವಾಳವನ್ನು ಈ ಬ್ಯಾಂಕುಗಳು ಹೊಂದಿರಬೇಕು. ಎಲ್ಲ ಸಹಕಾರಿ ಬ್ಯಾಂಕುಗಳ ಪೈಕಿ ೪೫ ಬ್ಯಾಂಕುಗಳಲ್ಲಿ ಮಾತ್ರ ಬಂಡವಾಳದ ಪ್ರಮಾಣ ಶೇ.೧೨ಕ್ಕಿಂತ ಹೆಚ್ಚಿಗೆ ಇತ್ತು. ನಾಲ್ಕರಲ್ಲಿ ಬಂಡವಾಳದ ಪ್ರಮಾಣ ಶೇ.೧೨ಕ್ಕಿಂತ ತೀರ ಕಡಿಮೆ ಇತ್ತು. ರಿಸರ್ವ್ ಬ್ಯಾಂಕು ಈ ಬ್ಯಾಂಕುಗಳಿಗೆ ೨೦೨೫ ಮಾರ್ಚ್ ಒಳಗೆ ಶೇ.೧೨ ತಲುಪಬೇಕೆಂದು ಗಡುವು ನೀಡಿತ್ತು.
ಮಹತ್ವದ ಸಮಸ್ಯೆಗೆ ಬಂದರೆ ಎಲ್ಲ ಸಹಕಾರಿ ಬ್ಯಾಂಕುಗಳ ಸಾಲಗಳ ಪೈಕಿ ವಸೂಲಾಗದೇ ಕಟಬಾಕಿ ಆಗಿರುವ ಸಾಲಗಳ ಪ್ರಮಾಣವು ಸೆಪ್ಟೆಂಬರ್ ೨೦೨೪ರ ಹೊತ್ತಿಗೆ ಶೇ.೯.೬ರಷ್ಟಿತ್ತು. ಇದು ವರ್ಷದ ಹಿಂದೆ ಶೇ.೧೦.೯ರಷ್ಟಿತ್ತು. ಇದು ಆತಂಕಕ್ಕೆ ಮೂಲ ಕಾರಣ. ಏಕೆಂದರೆ ರಿಸರ್ವ್ ಬ್ಯಾಂಕ್ ನೀತಿಯಂತೆ ಬ್ಯಾಂಕುಗಳಲ್ಲಿ ಬರಬೇಕಾದ ಒಟ್ಟು ಸಾಲಗಳ ಪೈಕಿ ಕಟಬಾಕಿ (ವಸೂಲಾಗದ) ಸಾಲಗಳ ಪ್ರಮಾಣ ಅತಿ ಹೆಚ್ಚು ಎಂದರೆ ಶೇ.೩.೦ ರಷ್ಟಿದ್ದರೆ ತಾಳಿಕೊಳ್ಳಬಹುದು. ಆದರೆ ಇಲ್ಲಿ ಈ ಮಿತಿಯ ಮೂರು ಪಟ್ಟಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಎನ್ಪಿಎಗಳಿವೆ. ಇದರಲ್ಲಿ ಬಹುಭಾಗ ವಸೂಲಿ ಮಾಡಲೇಬೇಕಾಗುತ್ತದೆ. ಏಕೆಂದರೆ ವಸೂಲಾಗುವುದಿಲ್ಲವೆಂದು ಇವುಗಳನ್ನು ಲಾಭ ಹಾನಿ ಖಾತೆಗೆ ವರ್ಗಾಯಿಸಿ ಕಳೆದು ಹಾಕಬೇಕೆಂದರೆ ಇದನ್ನು ತಾಳಿಕೊಳ್ಳುವಷ್ಟು ಲಾಭವೇ ಇರುವುದಿಲ್ಲ.
ಈ ಎಲ್ಲ ಸಮಸ್ಯೆಗಳನ್ನು ಗಮನಿಸಿದರೆ ಒಟ್ಟಿನಲ್ಲಿ ಈ ಬ್ಯಾಂಕುಗಳ ಆಡಳಿತದಲ್ಲಿ ಗಟ್ಟಿ ನಿರ್ಧಾರಗಳಿಲ್ಲ ಅನಿಸುತ್ತದೆ. ಅದು ಆಡಳಿತದಲ್ಲಿ ಬರಬೇಕು. ಕಟ್ಟುನಿಟ್ಟಾಗಿ ಕಾಯ್ದೆ ನಿಯಮಗಳನ್ನು ಮತ್ತು ರಿಸರ್ವ್ ಬ್ಯಾಂಕ್ ಆದೇಶಗಳನ್ನು ಪಾಲಿಸಬೇಕು. ಹಾಗಾದರೆ ಮಾತ್ರ ಈಗಿರುವ ಠೇವಣಿದಾರರು ಮುಂದುವರಿಯುತ್ತಾರೆ ಮತ್ತು ಹೊಸ ಠೇವಣಿಗಳನ್ನು ಆಕರ್ಷಿಸಬಹುದು. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಬೇಕೇ ಬೇಕು.
ಈಗಾಗಲೇ ರಿಸರ್ವ್ ಬ್ಯಾಂಕು ಸಹಕಾರಿ ಬ್ಯಾಂಕುಗಳಲ್ಲಿ ಆಡಳಿತ ಸುಧಾರಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ತಪ್ಪನ್ನು ತಿದ್ದಿಕೊಳ್ಳದ ೭೦ ಸಹಕಾರಿ ಬ್ಯಾಂಕುಗಳ ಲೈಸೆನ್ಸ್‌ಗಳನ್ನು ೨೦೧೫ರಿಂದ ಮಾರ್ಚ್ ೨೦೨೪ರವರೆಗೆ ರದ್ದು ಮಾಡಿದೆ. ಸಹಕಾರಿ ಬ್ಯಾಂಕುಗಳ ಆಡಳಿತ ಸುಧಾರಣೆಯತ್ತ ಹೆಚ್ಚು ನಿಗಾ ವಹಿಸಿದ್ದು, ‘ಕೂಡಲೇ ಸಮಸ್ಯೆಗಳನ್ನು ಸರಿಪಡಿಸುವ ಯೋಜನೆ’ಯನ್ನು ಜಾರಿಗೆ ತಂದಿದೆ. ಎಲ್ಲ ಬ್ಯಾಂಕುಗಳೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ ಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು.
ಸಂವಿಧಾನದಂತೆ ಸಹಕಾರ ರಾಜ್ಯಗಳ ಜವಾಬ್ದಾರಿ ಪಟ್ಟಿಯಲ್ಲಿರುವುದರಿಂದ ರಾಜ್ಯ ಸರ್ಕಾರಗಳೂ ಸಹಕಾರ ಬ್ಯಾಂಕುಗಳ ಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್‌ನೊಡನೆ ಸಹಕರಿಸಬೇಕು ಮತ್ತು ತಮ್ಮ ಮಿತಿಯಲ್ಲಿ ಆಡಳಿತ ಸುಧಾರಿಸಲು ಕ್ರಮಗಳನ್ನು ಜರೂರಾಗಿ ಕೈಗೊಳ್ಳಬೇಕು.
ಒಟ್ಟಿನಲ್ಲಿ ಯಾವ ಬ್ಯಾಂಕೂ ಮುಳುಗಬಾರದು. ಇತರೆ ವಲಯಗಳಲ್ಲಿಯ ಯಾವುದೇ ಕಂಪೆನಿ ಅಥವಾ ಸಂಸ್ಥೆ ಮುಳುಗಿದರೆ ಅದರ ಕೆಟ್ಟ ಪರಿಣಾಮ ಸೀಮಿತವಾಗಿದ್ದು, ಅದರ ಪೂರೈಕೆದಾರರು ಮತ್ತು ಗ್ರಾಹಕರಿಗೆ ತಾತ್ಕಾಲಿಕವಾಗಿ ತೊಂದರೆಯಾಗಬಹುದು. ಆದರೆ ಒಂದು ಬ್ಯಾಂಕು ಮುಳುಗಿದರೆ ಅರ್ಥ ವ್ಯವಸ್ಥೆಗೆ ‘ಜೀವ ಜಲ’ ಒದಗಿಸುವ ಒಂದು ಮೂಲವೇ ಮುಳುಗಿದಂತಾಗುತ್ತದೆ. ಬ್ಯಾಂಕುಗಳು ಇತರರ ಹಣವನ್ನು ತನ್ನದೆನ್ನುವಂತೆ ಬಳಸುವುದರಿಂದ ದೊಡ್ಡ ಪ್ರಮಾಣದಲ್ಲಿ ಠೇವಣಿಗಳು ಮುಳುಗಿದಂತಾಗುತ್ತದೆ.
ಮೊದಮೊದಲು ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿದ್ದ ವಾಣಿಜ್ಯ ಬ್ಯಾಂಕುಗಳ ಎಲ್ಲ ಕಾರ್ಯಗಳನ್ನೂ ನಿರ್ವಹಿಸುವ ಈ ಸಹಕಾರಿ ಬ್ಯಾಂಕುಗಳನ್ನು ‘ಅರ್ಬನ್ ಸಹಕಾರಿ ಬ್ಯಾಂಕುಗಳು’ ಎಂದು ಕರೆಯಲಾಗುತ್ತಿತ್ತು. ಭೌಗೋಳಿಕ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವ ಅವಕಾಶ ಮತ್ತು ಸಾಮರ್ಥ್ಯಗಳನ್ನು ಪರಿಗಣಿಸಿ ಶಾಖೆಗಳನ್ನು ಹೊಂದಲು ಅವಕಾಶ ಕಲ್ಪಿಸಿಕೊಡಲಾಯಿತು. ಇಂದು ನೂರು, ಇನ್ನೂರು ಮತ್ತು ಅದಕ್ಕಿಂತ ಹೆಚ್ಚು ಶಾಖೆಗಳನ್ನು ಹೊಂದಿರುವ ಸಹಕಾರಿ ಬ್ಯಾಂಕುಗಳೂ ನಮ್ಮಲ್ಲಿವೆ. ದೇಶಾದ್ಯಂತ ಸಹಕಾರಿ ಬ್ಯಾಂಕುಗಳು ಬೆಳೆಯುತ್ತಿದ್ದು, ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ಆದರೆ ಆಗಾಗ ನ್ಯೂ ಇಂಡಿಯಾ ಸಹಕಾರಿ ಬ್ಯಾಂಕು ದಿವಾಳಿಯಂತಹ ಅವಘಡಗಳು ನಡೆಯುತ್ತಿರುವುದೂ ಗಮನಿಸಲೇಬೇಕಾದ ವಿಷಯ.
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾಡಾನೆ ಬೆಳೆ ಹಾನಿ ಮಾಡುವುದರ ಜೊತೆಗೆ ಮನುಷ್ಯರ ಜೀವದ ಜೊತೆ…
ಟಿ.ನರಸೀಪುರ: ಪಟ್ಟಣದ ಸಿಲ್ಕ್ ಫಿಲೇಚರ್ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ತೀವ್ರ ತೆರನಾದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದಲ್ಲಿ ನಿರ್ಮಾಣ ಮಾಡುತ್ತಿರುವ 50 ಹಾಸಿಗೆಗಳ ನೂತನ ಆಸ್ಪತ್ರೆಯು ಸಾರ್ವಜನಿಕರಿಗೆ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ-ಒಡೆಯರಪಾಳ್ಯ ಮಾರ್ಗ ಮಧ್ಯದ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ಸಮೀಪ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಕುಡಿಯುವ ನೀರಿನ ದಾಹ ಇಂಗಿಸಲು ಕೆರೆಕಟ್ಟೆಗಳು, ಜನಜಾನುವಾರುಗಳಿಗೆ ಸಮರ್ಪಕ…
ಬೆಳಗಾವಿ: ಗಡಿನಾಡು ಬೆಳಗಾವಿ ಜಿಲ್ಲೆಯ ಜನರ ಬಹುದಿನದ ಬೇಡಿಕೆ ಈಡೇರಿದೆ. ಬೆಳಗಾವಿ ಮತ್ತು ನವಿ ಮುಂಬೈ ನಡುವೆ ನೇರ ವಿಮಾನ…