ಪ್ರೊ.ಆರ್.ಎಂ.ಚಿಂತಾಮಣಿ
ಬೆಲೆಯೇರಿಕೆಯ ಈ ದಿನಗಳಲ್ಲಿ ದೇಶದ ಬಹುಸಂಖ್ಯೆಯ ಕುಟುಂಬಗಳು ತಮ್ಮ ಆದಾಯದಲ್ಲಿ ಬಹುಭಾಗವನ್ನು ನಿತ್ಯದ ಅವಶ್ಯಕತೆ ಗಳನ್ನು ವಿಶೇಷವಾಗಿ ಆಹಾರ ಪದಾರ್ಥಗಳನ್ನು ಖರೀದಿಸಲು ಬಳಸುವ ಅನಿವಾರ್ಯತೆ ಇರುವುದರಿಂದ ಇತರ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ. ನಗರಗಳಲ್ಲಿ ಕೆಳ ಮಧ್ಯಮ ವರ್ಗಗಳ ಕುಟುಂಬಗಳಿರುವಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹೆಚ್ಚು ಕುಸಿದಿದೆ. ಗ್ರಾಹಕರ ಬೆಲೆ ಸೂಚ್ಯಂಕ ಆಧಾರಿತ ಹಣ ದುಬ್ಬರ ನಿಯಂತ್ರಣಕ್ಕೆ ಬಾರದೆ ಇದ್ದುದರಿಂದ ಸಾಮಾನ್ಯ ಜನರ ಜೀವನ ವೆಚ್ಚ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಕೌಟುಂಬಿಕ ಉಳಿತಾಯಗಳ ಪ್ರಮಾಣ ಕಡಿಮೆಯಾಗುತ್ತಿದ್ದು, ಖಾಸಗಿ ಬಂಡವಾಳ ಹೂಡಿಕೆಗಳು ಹೆಚ್ಚುತ್ತಿಲ್ಲ .
ರಿಸರ್ವ್ ಬ್ಯಾಂಕಿನ ನೀತಿ ಬಡ್ಡಿ ದರಗಳು ಹಣದುಬ್ಬರದ ಕಾರಣದಿಂದ ಮೇಲ್ಮಟ್ಟದಲೇ ಮುಂದುವರಿಯುತ್ತಿವೆ. ವಿವಿಧ ವಲಯಗಳಲ್ಲಿ ಬಂಡವಾಳದ ಮೇಲಿನ ವೆಚ್ಚಗಳೂ ಇತರ ವೆಚ್ಚಗಳೂ ಏರಿಕೆಯಾಗುತ್ತಿರುವುದರಿಂದ ಉದ್ಯಮ ವಲಯಗಳಲ್ಲಿ ವ್ಯವಹಾರದ ಲಾಭಕ್ಕೆ ದೊಡ್ಡ ಪೆಟ್ಟುಬಿದ್ದಿದೆ. ಉತ್ಪಾದಕ ಉದ್ದಿಮೆಗಳೂ ಇದಕ್ಕೆ ಹೊರತಾಗಿಲ್ಲ ಇಷ್ಟೇ ಅಲ್ಲ ಸಮಸ್ಯೆ ಇನ್ನೂ ಗಂಭೀರವಾಗಿದ್ದು, ಕಡಿಮೆಯಾಗುತ್ತಿರುವ ಬೇಡಿಕೆ ಮತ್ತು ಹೆಚ್ಚುತ್ತಿರುವ ಉತ್ಪಾದನಾ ಮತ್ತು ವ್ಯವಹಾರ ವೆಚ್ಚಗಳ ನಡುವೆ ಅಡಕತ್ತರಿಯಲ್ಲಿ ಸಿಲುಕಿಕೊಂಡಿವೆ.
ಅಧಿಕೃತ ಅಂಕಿ ಸಂಖ್ಯೆಗಳ ಪ್ರಕಾರಕ್ಕೆ ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ನಮ್ಮ ರಾಷ್ಟ್ರೀಯ ಒಟ್ಟಾದಾಯ (ಜಿ.ಡಿ.ಪಿ.) ಬೆಳವಣಿಗೆ ಶೇ.೫.೪ಕ್ಕೆ ಇಳಿದಿದೆ ಎನ್ನುವುದೇ ಆತಂಕಪಡಬೇಕಾದ ವಿಷಯ. ಅಂತಹದರಲ್ಲಿ ಉತ್ಪಾದಕ ಉದ್ದಿಮೆ ವಲಯ ಕೇವಲ ಶೇ.೨.೨ ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ಹಣಕಾಸು ವರ್ಷದ ಇದೇ ತ್ರೈ ಮಾಸಿಕದಲ್ಲಿಯ ಬೆಳವಣಿಗೆ (ಶೇ.೧೪.೩)ಗೆ ಹೋಲಿಸಿದರೆ ಇದು ಏನೇನೂ ಅಲ್ಲ. ಅಕ್ಟೋಬರ್, ನವೆಂಬರ್ ತಿಂಗಳುಗಳ ಹಬ್ಬಗಳ ಸಾಲು ಮತ್ತು ನಂತರ ಬರುವ ಮದುವೆಗಳ ಹಂಗಾಮಿನಲ್ಲಿ ಬೇಡಿಕೆ ಹೆಚ್ಚಾಗಿ ಬೆಳೆವಣಿಗೆ ಚೇತರಿಸಿಕೊಂಡು ಪರಿಸ್ಥಿತಿ ಸುಧಾರಿಸೀತೆಂಬ ನಿರೀಕ್ಷೆ ಇತ್ತು.
ಆದರೆ ತಜ್ಞರ ಪ್ರಕಾರ ಹಿಂದಿನ ಎರಡು ತಿಂಗಳ ಅನುಭವದಂತೆ ನಿರೀಕ್ಷಿಸಿದಷ್ಟು ಬೇಡಿಕೆ ಹೆಚ್ಚಾಗದೆ ಚೇತರಿಕೆ ಕಂಡಿಲ್ಲವೆಂದು ಹೇಳಲಾಗುತ್ತದೆ. ಅಂದರೆ ಈ ವರ್ಷದ ಮೂರನೇ ಮತ್ತು ನಾಲ್ಕನೇ ತ್ರೈ ಮಾಸಿಕಗಳಲ್ಲಿ ಉತ್ಪಾದಕ ಉದ್ದಿಮೆಗಳ ಬೆಳವಣಿಗೆಯಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದರೂ ಹಿಂದಿನ ವರ್ಷದ ಮಟ್ಟಕ್ಕೆ ಬರುವ ಸಾಧ್ಯತೆ ಇಲ್ಲ. ಬೇಡಿಕೆ ಹೆಚ್ಚಾಗದೆ ಉತ್ಪಾದನೆ ಗಣನೀಯವಾಗಿ ಹೆಚ್ಚಾಗಲು ಸಾಧ್ಯವಿಲ್ಲ. ಜಾಗತಿಕ ಭೌಗೋಳಿಕ ರಾಜಕೀಯ ಸ್ಥಿತಿ ಬೆಳವಣಿಗೆಗೆ ಪೂರಕವಾಗಿಲ್ಲದೇ ಇರುವುದರಿಂದ ಮತ್ತು ಅಮೇರಿಕೆಯಲ್ಲಿ ಪುನರಾಯ್ಕೆಯಾಗಿರುವುದರಿಂದ ನಮ್ಮ ಆಮದು-ರಪ್ತುಗಳಿಗೆ ಪೂರಕ ಬೆಳವಣಿಗೆ ಸ್ಥಿತಿ ಇಲ್ಲ. ಇದೂ ನಮ್ಮ ಉತ್ಪಾದಕ ಉದ್ದಿಮೆಗಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ.
ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿ ತನ್ನ ಡಿಸೆಂಬರ್ ಸಭೆಯಲ್ಲಿ ಈ ವರ್ಷಕ್ಕಾಗಿ (೨೦೨೪-೨೫) ಜಿ.ಡಿ.ಪಿ ಬೆಳವಣಿಗೆಯ ಅಂದಾಜನ್ನು ಶೇ.೭.೨ ರಿಂದ (ಅಕ್ಟೋಬರ್ ಸಭೆಯ ಅಂದಾಜು) ಶೇ.೬.೬ ಕ್ಕೆ ಇಳಿಸಿದೆ. ಹಣದುಬ್ಬರ ದರ ಅಂದಾಜನ್ನು ಶೇ.೪.೫ ರಿಂದ ಶೇ.೪.೮ಕ್ಕೆ ಹೆಚ್ಚಿಸಿದೆ. ಅದೇ ರೀತಿ ಬರುವ ಹಣಕಾಸು ವರ್ಷದ (೨೦೨೫-೨೬) ಮೊದಲ ತ್ರೈಮಾಸಿಕದಲ್ಲಿ ಜಿ.ಡಿ.ಪಿ. ಬೆಳವಣಿಗೆ ಅಂದಾಜನ್ನು ಶೇ.೭.೩ ರಿಂದ ಶೇ ೬.೯ಕ್ಕೆ ಇಳಿಸಿದೆ. ಆದರೆ ಹಣದುಬ್ಬರ ದರ ಅಂದಾಜನ್ನು ಶೇ.೪.೩ ರಿಂದ ಶೇ ೪.೫ಕ್ಕೆ ಹೆಚ್ಚಿಸಿದೆ. ಇದರ ಅರ್ಥ ಮಿತಿಯನ್ನು ಮೀರಿದ ಹಣದುಬ್ಬರ ನಮ್ಮನ್ನು ಬರುವ ವರ್ಷವೂ ಬಿಡುವುದಿಲ್ಲ ಮತ್ತು ನಮ್ಮ ಅರ್ಥವ್ಯವಸ್ಥೆ ನಿಧಾನ ಗತಿಯಲ್ಲೇ ಮುಂದುವರಿಯುತ್ತದೆ. ನಮ್ಮ ಉತ್ಪಾದಕ ಉದ್ದಿಮೆ ವಲಯವೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.
ಆದರೂ ನಮ್ಮ ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಎರಡನೇ ತ್ರೈಮಾಸಿಕದ ಇಳಿಕೆ ಸಮಸ್ಯೆ ಮೂಲಭೂತವಾದುದಲ್ಲ (ವ್ಯವಸ್ಥೆಯ ಸಮಸ್ಯೆಯಲ್ಲ) ಎಂದೂ ಹೇಳಿಕೆ ನೀಡಿದ್ದಾರೆ. ತಾತ್ಕಾಲಿಕವೆಂದೂ ನಮ್ಮ ದೇಶ ಜಗತ್ತಿನಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ದೇಶವಾಗಿ ಮುಂದುವರಿಯುವುದೆಂದೂ ಸಮರ್ಥಿಸಿಕೊಂಡಿದ್ದಾರೆ. ಸಮಸ್ಯೆಗಳನ್ನು ಸರಿಪಡಿಸಲು ಕ್ರಮಗಳನ್ನು ಕೈಕೊಳ್ಳುವತ್ತ ಹೆಚ್ಚು ಇಟ್ಟು ಹೀಗೆ ಹೇಳಿದರೆ ಅದಕ್ಕೆ ಅರ್ಥ ಉಂಟು. ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿದ್ದವರು ವಾಸ್ತವದ ನೆಲೆಗಟ್ಟಿನಲ್ಲಿ ನಿಂತು ಹೇಳಿದರೆ ಅದನ್ನು ಒಪ್ಪಿಕೊಳ್ಳಲೇಬೇಕು.
೧,೭೪೦ ಉತ್ಪಾದಕ ಕಂಪೆನಿಗಳ ಅಧ್ಯಯನ:
ದೇಶದಲ್ಲಿರುವ ಅತ್ಯಂತ ವಿಶ್ವಾಸಾರ್ಹ ಆರ್ಥಿಕ ಸಂಶೋಧನಾ ಸಂಸ್ಥೆ ಸೆಂಟರ್ -ರ್ ಮಾನಿಟರಿಂಗ್ ಇಂಡಿಯನ್ ಎಕಾನಾಮಿ(ಪಿ.ಎಂ.ಏ.ಇ.) ಪ್ರಾತಿನಿಧಿಕವಾಗಿ ಆಯ್ಕೆ ಮಾಡಿರುವ ೧,೭೪೦ ಉತ್ಪಾದಕ ಕಂಪೆನಿಗಳ ೧೫ ವರ್ಷಗಳ(೨೦೦೯-೯೦ ರಿಂದ ೨೦೨೪-೨೫ವರೆಗೆ) ತ್ರೈಮಾಸಿಕ ಹಣಕಾಸು ವರದಿಗಳನ್ನು (೨೦೨೪- ೨೫ರ ಎರಡನೇ ತ್ರೈಮಾಸಿಕದವರೆಗೆ) ಅಧ್ಯಯನ ಮಾಡಿದೆ. ಅದರಲ್ಲಿ ಕಂಪೆನಿಗಳ ಮುಖ್ಯ ಉದ್ದೇಶ ಉತ್ಪಾದನೆ (ಪೂರಕ ಚಟುವಟಿಕೆಗಳಾದ ಉತ್ಪನ್ನಗಳ ಮಾರಾಟ ಮುಂತಾದವುಗಳೂ ಸೇರಿದಂತೆ) ಚಟುವಟಿಕೆಗಳಿಂದ ಬಂದ ಲಾಭವನ್ನು ವ್ಯವಹಾರದ ಲಾಭ ಎಂದು ಕರೆಯಲಾಗುತ್ತದೆ.
ಸಿ.ಎಂ.ಐ.ಇ. ವಿಶ್ಲೇಷಣೆಯಂತೆ ಈ ವರ್ಷದ ಎರಡನೇ ತ್ರೈಮಾಸಿಕ ಆಪರೇಟಿಂಗ್ ಪ್ರಾಫಿಟ್ ಕಳೆದ ವರ್ಷದ ಇದೇ ಆವಧಿಯ (ಎರಡನೇ ತ್ರೈಮಾಸಿಕ ೨೦೨೩-೨೪) ಆಪರೇಟಿಂಗ್ ಪ್ರಾಫಿಟ್‌ಗಿಂತ ಶೇ.೧೮.೪ರಷ್ಟು ಕಡಿಮೆಯಾಗಿದೆ. ಇದೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕ (ಏಪ್ರಿಲ್- ಜೂನ್) ಶೇ.೮.೮ ಕಡಿಮೆಯಾಗಿದೆ. ೨೦೧೯ ರ ಡಿಸೆಂಬರ್ ತ್ರೈಮಾಸಿಕದಿಂದ ಇಲ್ಲಿಯವರೆಗೆ ಕೇವಲ ಐದು ತ್ರೈಮಾಸಿಕಗಳಲ್ಲಿ ಮಾತ್ರ (ಕೋವಿಡ್-೧೯ ಸಾಂಕ್ರಾಮಿಕ ರೋಗದ ಅವಧಿಯ ಮೂರು ತ್ರೈಮಾಸಿಕಗಳು ಮಾರ್ಚ್ ೨೦(- ಶೇ.೪೭.೪ ಜೂನ್ ೨೦(-ಶೇ.೪೨ .೯ ಮತ್ತು ಸೆಪ್ಟೆಂಬರ್ ೨೨ (-ಶೇ.೨೮.೬) ಸೇರಿದಂತೆ ಕೇವಲ ಐದು ತ್ರೈಮಾಸಿಕಗಳಲ್ಲಿ ಇದಕ್ಕಿಂತ ಕಡಿಮೆ ಬೆಳವಣಿಗೆ ಕಂಡಿವೆ. ಹೀಗಾಗಿ ತಜ್ಞರು ಹೇಳುತ್ತಾರೆ ‘ಈ ಉತ್ಪಾದಕ ಕಂಪೆನಿಗಳು ಸುಧಾರಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತಾದೆ. ಕೂಡಲೇ ಸರ್ಕಾರ ಕ್ರಮ ಕೈಕೊಂಡರೆ ಮಾತ್ರ’ ಎಂದು.
ಎರಡು ದಿಕ್ಕಿನಲ್ಲಿ ಕ್ರಮಗಳನ್ನು ಕೈಗೊಂಡರೆ ಉತ್ಪಾದಕ ಉದ್ದಿಮೆಗಳ ಚೇತರಿಕೆ ತೀವ್ರಗತಿಯಲ್ಲಿ ಮುಂದುವರಿದು ಜಿ.ಡಿ.ಪಿ ಬೆಳವಣಿಗೆಗೂ ವೇಗ ತಂದುಕೊಡಲು ಸಾಧ್ಯವಾಗಬಹುದು. ಮೂದಲು ನಮ್ಮಲ್ಲಿ ಬೇಡಿಕೆ (ಜನರಲ್ಲಿ ಕೊಳ್ಳುವ ಶಕ್ತಿ ಮತ್ತು ಉಪಭೋಗ) ಹೆಚ್ಚಬೇಕು. ಅದಕ್ಕಾಗಿ ಸರ್ಕಾರದ ವೆಚ್ಚ ಗಳು ಹೆಚ್ಚಬೇಕು ಮತ್ತು ಉದ್ಯೂಗಾವಕಾಶದ ಸೃಷ್ಟಿ ತೀವ್ರಗತಿಯಲ್ಲಿ ಬೆಳೆಯಬೇಕು. ಪೇಟೆಯಲ್ಲಿ ಚುರುಕುತನ ಮೂಡಿಸಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೊಳ್ಳುವ ಶಕ್ತಿಯನ್ನು ತುಂಬುವ ಕೆಲಸ ಎಲ್ಲ ದಿಕ್ಕಿನಿಂದಲೂ ನಡೆಯಬೇಕು.
ಎರಡನೆಯದಾಗಿ ರಫ್ತುಗಳನ್ನು ಹೆಚ್ಚಿಸಬೇಕಾಗಿದೆ. ಕಳೆದ ಅಕ್ಟೋಬರ್ನಲ್ಲಿ ವರದಿಯಂತೆ ಶೇ.೧೭.೩ ಬೆಳವಣಿಗೆಯಾಗಿದೆ. ಇದು ಇನ್ನೂ ಹೆಚ್ಚ ಬೇಕು. ಪೂರೈಕೆ ಸರಪಳಿಯನ್ನು ಇನ್ನಷ್ಟು ಸುಸ್ಥಿರಗೊಳಿಸಬೇಕು.
” ಅಧಿಕೃತ ಅಂಕಿ ಸಂಖ್ಯೆಗಳ ಪ್ರಕಾರಕ್ಕೆ ಈ ಹಣಕಾಸು ವರ್ಷದ ಎರಡನೇ ತ್ರೈ ಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್)ನಮ್ಮ ರಾಷ್ಟ್ರೀಯ ಒಟ್ಟಾದಾಯ (ಜಿ.ಡಿ.ಪಿ.) ಬೆಳವಣಿಗೆ ಶೇ.೫.೪ಕ್ಕೆ ಇಳಿದಿದೆ ಎನ್ನುವುದೇ ಆತಂಕಪಡಬೇಕಾದ ವಿಷಯ. ಅಂತಹದರಲ್ಲಿ ಉತ್ಪಾದಕ ಉದ್ದಿಮೆ ವಲಯ ಕೇವಲ ಶೇ.೨.೨ ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ಹಣಕಾಸು ವರ್ಷದ ಇದೇ ತ್ರೈ ಮಾಸಿಕದಲ್ಲಿಯ ಬೆಳವಣಿಗೆ (ಶೇ.೧೪.೩ ಗೆ) ಹೋಲಿಸಿದರೆ ಇದು ಏನೇನೂ ಅಲ್ಲ. ಅಕ್ಟೋಬರ್, ನವೆಂಬರ್ ತಿಂಗಳುಗಳ ಹಬ್ಬಗಳ ಸಾಲು ಮತ್ತು ನಂತರ ಬರುವ ಮದುವೆಗಳ ಹಂಗಾಮಿನಲ್ಲಿ ಬೇಡಿಕೆ ಹೆಚ್ಚಾಗಿ ಬೆಳೆವಣಿಗೆ ಚೇತರಿಸಿಕೊಂಡು ಪರಿಸ್ಥಿತಿ ಸುಧಾರಿಸೀತೆಂಬ ನಿರೀಕ್ಷೆ ಇತ್ತು.”
ಬೆಂಗಳೂರು : ಬಳ್ಳಾರಿ ಘಟನೆಯಲ್ಲಿ ಕಾಂಗ್ರೆಸ್ ಪಕ್ಷ ಶಾಸಕ ನ.ರಾ.ಭರತ್ ರೆಡ್ಡಿ ಪರವಾಗಿ ನಿಲ್ಲಲಿದೆ. ಚುನಾವಣೆಗಳ ಸೋಲಿನಿಂದ ಹತಾಶೆಗೊಂಡಿರುವ ಶಾಸಕ…
ಮೈಸೂರು : ಶತಮಾನ ಪೂರೈಸಿರುವ ಪ್ರತಿಷ್ಠತಿ ಮೈಸೂರು ವಿಶ್ವವಿದ್ಯಾನಿಲಯವು 106ನೇ ಘಟಿಕೋತ್ಸವದ ಸಂಭ್ರಮದಲ್ಲಿದೆ. ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಜನವರಿ…
ಬೆಂಗಳೂರು : ಮಾಧ್ಯಮದವರು ಡೆಂಜರ್ ಇದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹುಸಿಗೋಪ ಪ್ರದರ್ಶಿಸಿದರು. ಮಾಧ್ಯಮದವರನ್ನು ಡಿಕೆಶಿ ಅವರು ಹೀಗೆ…
ಬೆಂಗಳೂರು: ಜಿ ರಾಮ್ ಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಅಂಶಗಳನ್ನು ಹೇಳುವ ಮೂಲಕ…
ಬೆಂಗಳೂರು: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ-ನಿಮ್ಹಾನ್ಸ್ ಹಾಗೂ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸತೆಗಳಲ್ಲಿ ಆಘಾತಕಾರಿ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಪಚ್ಚೆ ದೊಡ್ಡಿ ಗ್ರಾಮಕ್ಕೆ ಸಾರ್ವಜನಿಕ ಅರ್ಜಿ ಸಮಿತಿ ಸದಸ್ಯ ಹಾಗೂ ರಾಜಾಜಿನಗರ ಕ್ಷೇತ್ರದ…