ಅಂಕಣಗಳು

ಚಿತ್ರಮಂದಿರಗಳಿಂದ ಪ್ರೇಕ್ಷಕರನ್ನು ದೂರ ತಳ್ಳುತ್ತಿರುವವರು ಯಾರು?

ವೈಡ್‌ ಆಂಗಲ್‌ 

ಬಾ.ನಾ.ಸುಬ್ರಹ್ಮಣ್ಯ 

ಚಿತ್ರಮಂದಿರಗಳಿಗೆ ಪ್ರೇಕ್ಷಕ ಬರುತ್ತಿಲ್ಲ ಎನ್ನುವುದು ಎಲ್ಲ ಭಾರತೀಯ ಭಾಷಾ ಚಿತ್ರೋದ್ಯಮಿಗಳ ಆರೋಪ. ಇದಕ್ಕೆ ಏನು ಕಾರಣ, ಯಾರು ಕಾರಣ ಎನ್ನುವ ಕುರಿತಂತೆ ಅವರವರಿಗೆ ತಿಳಿದಂತೆ ಚರ್ಚೆಗಳಾಗುತ್ತಿವೆ. ಒಳ್ಳೆಯ ಚಿತ್ರಕೊಟ್ಟರೆ ಪ್ರೇಕ್ಷಕರು ಬಂದೇ ಬರುತ್ತಾರೆ ಎನ್ನುವುದು ಸಾರ್ವತ್ರಿಕವಾಗಿ ಕೇಳಿಬರುತ್ತಿರುವ ಮಾತು. ಅದು ಪ್ರೇಕ್ಷಕರ ಮಾತಲ್ಲ.

ಇದೇ ವೇಳೆ ತಮಿಳುನಾಡಿನ ಹೈಕೋರ್ಟಿನಲ್ಲಿ ಮೊನ್ನೆ ಬಂದ ತೀರ್ಪೊಂದು ಈ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ. ನ್ಯಾಯಮೂರ್ತಿ ಆನಂದ ವೆಂಕಟೇಶ್ ಅವರು ಚಿತ್ರಮಂದಿರಗಳಿಂದ ಪ್ರೇಕ್ಷಕರನ್ನು ಪಲಾಯನ ಮಾಡುವಂತೆ ಮಾಡಿರುವ ಪ್ರದರ್ಶಕರ ವಿರುದ್ಧ ಕ್ರಮಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಇದು ೨೦೧೭ರ ಕೇಸೊಂದರ ಅಂತಿಮ ತೀರ್ಪಿನ ವೇಳೆ ಬಂದ ಆದೇಶ.

ಚಿತ್ರಮಂದಿರಗಳು ಹೊಸ ಚಿತ್ರ ಬಿಡುಗಡೆ ಆದ ಮೊದಲ ಕೆಲವು ದಿನಗಳ ಕಾಲ ಸರ್ಕಾರ ನಿಗದಿಪಡಿಸಿದ ಪ್ರವೇಶ ಶುಲ್ಕಕ್ಕಿಂತ ಹೆಚ್ಚು ಹಣವನ್ನು ವಸೂಲಿ ಮಾಡುತ್ತವೆ. ಪ್ರೇಕ್ಷಕರಿಂದ ಹೆಚ್ಚುವರಿಯಾಗಿ ಪಡೆದ ಮೊತ್ತವನ್ನು ಹಿಂದಿರುಗಿಸಬೇಕು ಎಂದು ಪ್ರೇಕ್ಷಕರೊಬ್ಬರು ನ್ಯಾಯಾಲಯದ ಮೆಟ್ಟಲೇರಿದ್ದರು. ಅಜಿತ್ ಅಭಿನಯದ ೨೦೧೭ರಲ್ಲಿ ತೆರೆಕಂಡ ‘ವಿವೇಗಂ’ ಚಿತ್ರದ ಸಂದರ್ಭವಿದು. ಚಿತ್ರತೆರೆ ಕಂಡ ಕೆಲವು ದಿನಗಳ ಕಾಲ ತಮಿಳುನಾಡಿನ ಚಿತ್ರಮಂದಿರಗಳು ಸರ್ಕಾರ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು ಹಣವನ್ನು ಪ್ರವೇಶ ದರವಾಗಿ ವಸೂಲಿ ಮಾಡಿವೆ.

ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಿನಿಮಾ ನೋಡಲು ಇರುವ ಪ್ರವೇಶ ದರವನ್ನು ಮನಸೋ ಇಚ್ಛೆ ವಿದಿಸುವಂತಿಲ್ಲ. ಸರ್ಕಾರವೇ ಚಿತ್ರಮಂದಿರಗಳು ಇರುವ ಪ್ರದೇಶ, ಅವುಗಳ ಸೌಲಭ್ಯಕ್ಕೆ ಅನುಗುಣವಾಗಿ ಪ್ರವೇಶ ದರ ನಿಗದಿಪಡಿಸಿದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಮನರಂಜನೆ ಪಡೆಯಲು ಇರುವ ಸಿನಿಮಾಕ್ಕೆ ದುಬಾರಿ ಶುಲ್ಕ ವಿಽಸಲು ಅಲ್ಲಿನ ಸರ್ಕಾರಗಳು ಸುತರಾಂ ಬಿಡುತ್ತಿಲ್ಲ.

ಅಲ್ಲಿ ಪ್ರವೇಶದರ ನಿಯಂತ್ರಣದ ಕುರಿತಂತೆ ಉದ್ಯಮದ ಮಂದಿ ವಿರೋಧ ವ್ಯಕ್ತಪಡಿಸಿ, ನ್ಯಾಯಾಲಯದ ಮೆಟ್ಟಲೇರಿದ ಉದಾಹರಣೆಯೂ ಇದೆ. ಆದರೆ ಅಂತಿಮವಾಗಿ ಪ್ರೇಕ್ಷಕನಿಗೆ ನ್ಯಾಯದೊರಕಿದೆ. ದಶಕದ ಹಿಂದೆ, ಹೊಸ ಪ್ರವೇಶದರ ಜಾರಿಗೆ ಬರುವ ಮೊದಲು, ಚಿತ್ರಮಂದಿರದ ಮುಂದಿನ ಎರಡು ಸಾಲುಗಳಿಗೆ ಕೇವಲ ೧೦ ರೂ. ಪ್ರವೇಶದರ ಇತ್ತು. ಈಗಲೂ ಅದು ೪೦-೫೦ ರೂ. ಗಳಿಗಿಂತ ಹೆಚ್ಚಿಲ್ಲ.

ತೆಲುಗು ಚಿತ್ರೋದ್ಯಮದ ಮಂದಿ ಅಲ್ಲಿನ ಸರ್ಕಾರದ ಮುಂದೆ ಹೋಗಿ, ಅದ್ಧೂರಿ ವೆಚ್ಚದ ಚಿತ್ರಗಳಿಗೆ ಪ್ರವೇಶ ದರ ಹೆಚ್ಚಿಸಲು ಅವಕಾಶ ನೀಡುವಂತೆ ಕೋರಿದ್ದರು. ಪೂರ್ವಾನುಮತಿ ಪಡೆದು ಕೆಲವು ದಿನಗಳ ಕಾಲ ಪ್ರವೇಶ ದರ ಸ್ವಲ್ಪ ಹೆಚ್ಚಿಸಲು ಅಲ್ಲಿ ಅವಕಾಶ ಇದೆ. ಮಹಾನಗರಪಾಲಿಕೆಗಳಲ್ಲಿ ಇರುವ ಮಲ್ಟಿ ಫ್ಲೆಕ್ಸ್‌ಗಳು, ರಿಕ್ಲೈನರ್ ಸೇರಿದಂತೆ ಗರಿಷ್ಟ ಸೌಲಭ್ಯ ಇದ್ದರೆ ಅಲ್ಲಿ ಪ್ರವೇಶ ದರ ೨೫೦ರೂ. ವಿಧಿಸಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಅದು ಎರಡಂಕಿಗೆ ಇಳಿಯುತ್ತದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣ ತೆಲುಗು ಚಿತ್ರೋದ್ಯಮದ ಬಿಕ್ಕಟ್ಟು ಬೇರೆಯೇ ಬಗೆಯದು. ಒಂಟಿಪರದೆಯ ಚಿತ್ರಮಂದಿರಗಳದು. ಮಲ್ಟಿಪ್ಲೆಕ್ಸ್ ಮತ್ತು ಈ ಚಿತ್ರಮಂದಿರಗಳ ಪೈಕಿ ಆದಾಯ ಹಂಚಿಕೆಯ ವಿಷಯದಲ್ಲಿ ಎದ್ದಿರುವ ತಕರಾರಿದು. ಮಲ್ಟಿಪ್ಲೆಕ್ಸ್‌ಗಳಿಗೆ ಅಲ್ಲಿ ಆಗುವ ಗಳಿಕೆಯ ಆಧಾರದಲಿ  ಬಾಡಿಗೆ ನೀಡಲಾಗುತ್ತದೆ. ಆದರೆ ಏಕಪರದೆಯ ಚಿತ್ರಮಂದಿರಗಳಿಗೆ ನಿಗದಿತ ಬಾಡಿಗೆ. ತಮಗೂ ಮಲ್ಟಿಪ್ಲೆಕ್ಸ್‌ಗಳ ರೀತಿಯಲ್ಲಿ ಗಳಿಕೆಯ ಆಧಾರದಲ್ಲಿ ಬಾಡಿಗೆ ನೀಡಬೇಕು ಎನ್ನುವುದು ನಿರ್ಮಾಪಕ/ವಿತರಕರ ಒತ್ತಾಯ.

ಮೊನ್ನೆ ಒಂದನೇ ತಾರೀಕಿನಿಂದ ಈ ಕಾರಣಕ್ಕಾಗಿ ಚಿತ್ರಮಂದಿರಗಳನ್ನು ಬಂದ್ ಮಾಡುವ ನಿರ್ಧಾರ ಕೂಡ ಆಗಿತ್ತು. ಅಲ್ಲಿನ ಚಲನಚಿತ್ರ ವಾಣಿಜ್ಯ ಮಂಡಳಿ, ಪ್ರಮುಖ ನಿರ್ಮಾಪಕರು ಮಧ್ಯಪ್ರವೇಶಿಸಿ, ಸದ್ಯದಮಟ್ಟಿಗೆ ಈ ಬಂದ್ ನಿರ್ಧಾರ ಮುಂದಕ್ಕೆ ಹೋಗಿದೆ. ಸುಮಾರು ೧,೫೦೦ರಷ್ಟು ಅಲ್ಲಿ ಏಕಪರದೆಯ ಚಿತ್ರಮಂದಿರಗಳಿದ್ದು, ಒಂದು ವೇಳೆ ಗಳಿಕೆಯ ಆಧಾರದ ಮೇಲೆ ಬಾಡಿಗೆ ನಿಗದಿ ಮಾಡಿದ್ದೇ ಆದರೆ, ಕಡಿಮೆ ವೆಚ್ಚದ ಚಿತ್ರಗಳಿಗೆ ಮುಂದೆ ಅದರಿಂದ ತೊಂದರೆ ಆಗಬಹುದು ಎನ್ನುವುದು ಉದ್ಯಮದ ಲೆಕ್ಕಾಚಾರ, ಜನಪ್ರಿಯ ನಟರ, ಅದ್ಧೂರಿ ವೆಚ್ಚದ ಚಿತ್ರಗಳತ್ತ ಈ ಪ್ರದರ್ಶಕರು ಹೆಚ್ಚು ಒಲವು ತೋರಿಸಬಹುದು, ಏಕೆಂದರೆ ಅವು ಹೆಚ್ಚುದಿನಗಳ ಕಾಲ ಪ್ರದರ್ಶನವಾಗುವ ಚಿತ್ರಗಳು, ಪ್ರದರ್ಶಕರ ಪಾಲಿನ ಗಳಿಕೆಯೂ ಹೆಚ್ಚಾಗುತ್ತದೆ ಎನ್ನುತ್ತವೆ ಅಲ್ಲಿನ ಮೂಲಗಳು.

ತಮಿಳುನಾಡು ಸರ್ಕಾರ, ಪ್ರೇಕ್ಷಕರನ್ನು ಪಲಾಯನ ಮಾಡುವಂತೆ ಮಾಡುವ ಪ್ರದರ್ಶಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿರುವ ನ್ಯಾಯಾಲಯ, ಇನ್ನೊಂದು ಕಿವಿಮಾತನ್ನು ಪ್ರದರ್ಶಕರಿಗೆ ಹೇಳಿದೆ. ಅದು ಒಟಿಟಿ ತಾಣಗಳಿಂದ ಪ್ರದರ್ಶನ ಮಂದಿರಗಳಿಗೆ ಆಗುತ್ತಿರುವ ತೊಂದರೆಯ ಕುರಿತು; ಅವುಗಳ ಅಸ್ತಿತ್ವ ತೂಗುಯ್ಯಾಲೆಯಾಡುತ್ತಿರುವುದರ ಕುರಿತು. ವರದಿಯಾಗಿರುವ ಅವರದೇ ಸಾಲುಗಳು ಹೀಗಿವೆ: ‘ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರು, ನಿಮ್ಮ ಮುಂದೆ ಕುಳಿತಿರುವ ನ್ಯಾಯಾಧೀಶರೂ ಸೇರಿ ದಂತೆ ಹೋಮ್ ಥಿಯೇಟರ್ ಬಳಸಿಕೊಂಡು ಒಟಿಟಿಯಲ್ಲಿ ಚಲನಚಿತ್ರಗಳನ್ನು ವೀಕ್ಷಿಸಲು ಹೆಚ್ಚು ಇಷ್ಟಪಡುತ್ತಾರೆ. ಈಗ, ಪಾಪ್ ಕಾರ್ನ್ ಕೂಡ ಮನೆಗೆ ತರಿಸಿಕೊಳ್ಳುವ ಅನುಕೂಲ ನಮಗಿದೆ. ಆದ್ದರಿಂದ, ಥಿಯೇಟರ್ ಮಾಲೀಕರು ಇದರ ಬಗ್ಗೆ ಯೋಚಿಸಬೇಕು’

ತಮಿಳುನಾಡಿನ ಹೈಕೋರ್ಟಿನಲ್ಲಿ ಈ ವಿಚಾರಣೆ ನಡೆಯುತ್ತಿದ್ದಂತೆ, ತಮಿಳುನಾಡು ಸರ್ಕಾರ, ಈ ಕುರಿತಂತೆ ತಾನು ಸಮಿತಿಯೊಂದನ್ನು ರಚಿಸಿದ್ದರ ವಿವರ ನೀಡುತ್ತದೆ. ಇಂತಹ ಪ್ರಸಂಗಗಳಲ್ಲಿ ಅದು ಕೂಡಲೇ ಕಾರ್ಯಪ್ರವೃತ್ತ ಆಗಬೇಕು ಎಂದು ನ್ಯಾಯಾಧಿಶರು ಹೇಳುತ್ತಾರೆ. ತಮಿಳುನಾಡಿನ ಈ ಪ್ರಸಂಗ ನಮ್ಮ ಸರ್ಕಾರ ಮತ್ತು ಉದ್ಯಮ ಎರಡಕ್ಕೂ ಕಣ್ಣುತೆರೆಸುವಂತಹದು. ನಂಬಿದರೆ ನಂಬಿ, ಬಿಟ್ಟರೆಬಿಡಿ, ಜನಪ್ರಿಯ ನಟರ ಅದ್ಧೂರಿ ಚಿತ್ರಗಳು ಮಾತ್ರವಲ್ಲ, ಇತರ ಸಂದರ್ಭಗಳಲ್ಲೂ ಜನಸಾಮಾನ್ಯರ ಕೈಗೆಟುಕದ ರೀತಿಯ ಪ್ರವೇಶದರ ಮಲ್ಟಿಪ್ಲೆಕ್ಸ್‌ಗಳಲ್ಲಿದೆ. ಇನ್ನು ಅಲ್ಲಿ ನ್ಯಾಯಾಧಿಶರು ಪ್ರಸ್ತಾಪಿಸಿದ ಪಾಪ್ ಕಾರ್ನ್ ಮತ್ತಿತರ ತಿನಿಸುಗಳ ಬೆಲೆ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಕೈಗೆ ಎಟುಕುವಂತಹದ್ದಲ್ಲ. ಆ ಕಾರಣಕ್ಕೇ ಪ್ರೇಕ್ಷಕ ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾನೆ. ವಿಶೇಷವಾಗಿ, ಕುಟುಂಬ ಸಮೇತ ಚಿತ್ರಗಳನ್ನು ವೀಕ್ಷಿಸುವ ಸಂಪ್ರದಾಯಕ್ಕೆ ಬಹಳಷ್ಟು ಮಂದಿ ಎಳ್ಳುನೀರು ಬಿಟ್ಟಿದ್ದಾರೆ. ೫೦೦ರಿಂದ ೨೦೦೦ ರೂ. ವರೆಗೆ ಪ್ರವೇಶ ದರ ತೆತ್ತು ಕುಟುಂಬ ಸಮೇತ ಸಿನಿಮಾ ನೋಡಲು ಸಾಧ್ಯವೇ?

ಹಾಗಂತ ಮಲ್ಟಿಪ್ಲೆಕ್ಸ್ ಜಾಲಗಳಲ್ಲೂ ಗಳಿಕೆ ಹೆಚ್ಚು ಇದ್ದಂತಿಲ್ಲ. ಅದ್ಧೂರಿ ಚಿತ್ರಗಳು, ಜನಪ್ರಿಯ ನಟರ ಚಿತ್ರಗಳು, ಹೀಗೆ ಬೆನ್ನು ಹತ್ತುತ್ತಿದ್ದ ಈ ಜಾಲ ಇದೀಗ ಕಡಿಮೆ ವೆಚ್ಚದ ಚಿತ್ರಗಳಿಗೂ ಉತ್ತೇಜನ ನೀಡುವ ಯೋಚನೆ ಮಾಡಿದ್ದಾಗಿ, ಯೋಜನೆ ಹಾಕಿದ್ದಾಗಿ ವರದಿಗಳಿವೆ, ಕನ್ನಡ ಚಿತ್ರಗಳಿಗೆ, ಅದರಲ್ಲೂ ಕಡಿಮೆ ವೆಚ್ಚದ ಸದಭಿರುಚಿಯ, ಅರ್ಥಪೂರ್ಣ ಚಿತ್ರಗಳ ನಿರ್ಮಾಪಕರು ಅಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಗದೆ ಇದ್ದ, ಸಿಕ್ಕಿದರೂ ಸರಿಯಾದ ವೇಳೆಯಲ್ಲಿ ಸಿಗದ ಕುರಿತು ಆರೋಪ ಮಾಡುತ್ತಲೇ ಇದ್ದಾರೆ. ಮಹಾರಾಷ್ಟ್ರ ಸರ್ಕಾರ, ಅಲ್ಲಿ ಮರಾಠಿ ಚಿತ್ರಗಳನ್ನು ಉತ್ತೇಜಿಸುವ ಸಲುವಾಗಿ ಆದೇಶವನ್ನು ಮಾಡಿದೆ. ಅಲ್ಲಿನ ಮಲ್ಟಿಪ್ಲೆಕ್ಸ್‌ಗಳು ಮರಾಠಿ ಚಿತ್ರಗಳನ್ನು ಪೀಕ್ ಅವರ್‌ಗಳಲ್ಲಿ ಪ್ರದರ್ಶನ ಮಾಡಬೇಕು, ಇಲ್ಲದೆ ಹೋದರೆ ಅದರ ಪರವಾನಗಿ ನವೀಕರಿಸುವ ಕುರಿತು ಕಠಿಣ ನಿರ್ಧಾರ ತೆಗೆದುಕೊಳ್ಳುವ ನಿಲುವನ್ನು ಸರ್ಕಾರ ಪ್ರಕಟಿಸಿದೆ.

ಕರ್ನಾಟಕದ ಚಿತ್ರಮಂದಿರಗಳಲ್ಲಿ ಗರಿಷ್ಟ ಪ್ರವೇಶದರ ರೂ.೨೦೦ ಮಾಡುವ, ಹಾಲಿ ಮುಂಗಡ ಪತ್ರದ ಆಶ್ವಾಸನೆ ಇನ್ನೂ ಜಾರಿಗೆ ಬಂದಿಲ್ಲ. ಅದಕ್ಕೆ ತಡ ಏಕೆ ಎನ್ನುವುದಿನ್ನೂ ಗೊತ್ತಿಲ್ಲ. ಅದಾಗಲೇ ಮದರಾಸು ಹೈಕೋರ್ಟಿನ ನ್ಯಾಯಮೂರ್ತಿಗಳು ಹೇಳಿದ ಹಾಗೆ ಸಾಕಷ್ಟು ಮಂದಿ  ಒಟಿಟಿ ತಾಣಗಳ ಬೆನ್ನುಬಿದ್ದಿದ್ದಾರೆ. ದೇಶದ ಎಲ್ಲ ಭಾಷೆಗಳ ಎಲ್ಲ ರೀತಿಯ ಚಿತ್ರಗಳನ್ನು ತಮ್ಮ ಅಭಿರುಚಿಗೆ ಅನುಗುಣವಾಗಿ ನೋಡುವ ಅವಕಾಶ ಈಗ ಇದೆ. ಕೊರೊನಾ ದಿನಗಳು ನೀಡಿದ ಉಚಿತ ಕೊಡುಗೆ ಇದು. ಬೇರೆ ಬೇರೆ ದೇಶಗಳ, ಬೇರೆ ಬೇರೆ ಭಾಷೆಗಳ ಚಿತ್ರಗಳನ್ನು ನೋಡುವ, ನೋಡಿ ತಿಳಿಯುವ, ನಮ್ಮ ದೇಶದ ಚಿತ್ರಗಳೊಂದಿಗೆ ತಾಳೆ ಹಾಕುವ ಕೆಲಸವೂ ಆಗುತ್ತಿರುತ್ತದೆ.

ಒಂದಂತೂ ಹೌದು. ಚಿತ್ರಮಂದಿರಗಳತ್ತ ಹೋಗುವ ಚಿತ್ರರಸಿಕರ ಸಂಖ್ಯೆ ಗಣನೀಯವಾಗಿ ಈಗ ಇಳಿಮುಖವಾಗಿದೆ. ಮನೆಯಲ್ಲೇ ಕುಳಿತೋ, ಮೊಬೈಲ್‌ಗಳಲ್ಲೋ ಚಿತ್ರಗಳನ್ನು ನೋಡುವವರ ಸಂಖ್ಯೆ ಹೆಚ್ಚು. ಚಿತ್ರಗಳಷ್ಟೇ ಅಲ್ಲ, ಐಪಿಎಲ್ ಕೂಡ ಚಿತ್ರಗಳ ಪಾಲಿಗೆ ದುಶ್ಮನ್ ಆಗಿತ್ತು. ರೀಲ್‌ಗಳು ಟ್ರೋಲ್‌ಗಳು , ಮೀಮ್‌ಗಳು ಕೂಡ ಸಿನಿಮಾ ಪ್ರೇಕ್ಷಕರ ಸಮಯವನ್ನು ಕಸಿಯತೊಡಗಿವೆ. ಮೊದಲೆಲ್ಲ ರೀಲ್‌ಗಳ ಮೂಲಕ ಚಿತ್ರಮಂದಿರಗಳಲ್ಲಿ ಸಿನಿಮಾ ತೋರಿಸುತ್ತಿದ್ದರು. ಈಗ ಆ ರೀಲ್‌ಗಳಿಲ್ಲ, ನಮಗೆ ಈ ರೀಲ್‌ಗಳೇ ಸಾಕು ಎನ್ನುವವರೂ ಇದ್ದಾರೆ! ಅದೇನೇ ಇರಲಿ, ಮುಂಗಡಪತ್ರದಲ್ಲಿ ಪ್ರಸ್ತಾಪಿಸಿದ, ಚಿತ್ರಮಂದಿರಗಳಲ್ಲಿ ಪ್ರವೇಶ ದರ ಮಿತಿ ೨೦೦ ರೂ. ಆಗುವಂತೆ ಸಂಬಂಧಪಟ್ಟವರು ಗಮನಹರಿಸಬೇಕು.

” ತಮಿಳುನಾಡಿನ ಈ ಪ್ರಸಂಗ ನಮ್ಮ ಸರ್ಕಾರ ಮತ್ತು ಉದ್ಯಮ ಎರಡಕ್ಕೂ ಕಣ್ಣು ತೆರೆಸುವಂತಹದು. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಜನಪ್ರಿಯ ನಟರ ಅದ್ಧೂರಿ ಚಿತ್ರಗಳು ಮಾತ್ರವಲ್ಲ, ಇತರ ಸಂದರ್ಭಗಳಲ್ಲೂ ಜನಸಾಮಾನ್ಯರ ಕೈಗೆಟುಕದ ರೀತಿಯ ಪ್ರವೇಶದರ ಮಲ್ಟಿಪ್ಲೆಕ್ಸ್ ಗಳಲ್ಲಿದೆ. ಇನ್ನು ಅಲ್ಲಿ ನ್ಯಾಯಾಧಿಶರು ಪ್ರಸ್ತಾಪಿಸಿದ ಪಾಪ್ ಕಾರ್ನ್ ಮತ್ತಿತರ ತಿನಿಸುಗಳ ಬೆಲೆ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಕೈಗೆ ಎಟುಕುವಂತಹದ್ದಲ್ಲ. ಆ ಕಾರಣಕ್ಕೇ ಪ್ರೇಕ್ಷಕ ಚಿತ್ರಮಂದಿರಕ್ಕೆ ಬರಲು ಹಿಂದೇಟು  ಹಾಕುತ್ತಿದ್ದಾನೆ. ವಿಶೇಷವಾಗಿ, ಕುಟುಂಬ ಸಮೇತ ಚಿತ್ರಗಳನ್ನುವೀಕ್ಷಿಸುವ ಸಂಪ್ರದಾಯಕ್ಕೆ ಬಹಳಷ್ಟು ಮಂದಿ ಎಳ್ಳುನೀರು ಬಿಟ್ಟಿದ್ದಾರೆ. ೫೦೦ರಿಂದ ೨೦೦೦ ರೂ.ವರೆಗೆ ಪ್ರವೇಶ ದರ ತೆತ್ತು ಕುಟುಂಬ ಸಮೇತ ಸಿನಿಮಾ ನೋಡಲು ಸಾಧ್ಯವೇ?”

ಆಂದೋಲನ ಡೆಸ್ಕ್

Recent Posts

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಎಲ್ಲ ನಟರ ಅಭಿಮಾನಿಗಳು ಪೈರೆಸಿ ವಿರುದ್ಧ ಸಮರ ಸಾರುವಂತಾದರೆ!

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ವರ್ಷದ ಕೊನೆಯ ವಾರ ತೆರೆಗೆ ಬಂದಿರುವ ಚಿತ್ರಗಳಲ್ಲಿ ಒಂದು ‘ಮಾರ್ಕ್’. ಚಿತ್ರದ ಮುಖ್ಯ ಪಾತ್ರ ಮಾರ್ಕಾಂಡೇಯ…

29 mins ago

2025ರ ನೆನಪು: ಅಗಲಿದ ಗಣ್ಯರ ನೆನಪಿನ ಮಾಲಿಕೆ…

2025ರಲ್ಲಿ ವಿಧಿವಶರಾದ ಗಣ್ಯರ ಮಾಹಿತಿ  ಜನವರಿ... ನಾ.ಡಿಸೋ’ಜಾ: ಕನ್ನಡದ ಪ್ರಸಿದ್ಧ ಬರಹಗಾರ ಮತ್ತು ಕಾದಂಬರಿಕಾರ ನಾ ಡಿ’ಸೋಜಾ ಅವರು ಜನವರಿ…

34 mins ago

ಆಪರೇಟರ್ ಸಮಯ ಪ್ರಜ್ಞೆ: ನಕಲಿ ಜಿಪಿಎಗೆ ಬ್ರೇಕ್

ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಸರ್ಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವವರು ಎಚ್ಚರಿಕೆ ವಹಿಸಿದಲ್ಲಿ ನಡೆಯ ಬಹುದಾದ ವಂಚನೆಗಳನ್ನು ಹೇಗೆ ತಪ್ಪಿಸಬಹುದು ಎಂಬುದಕ್ಕೆ ವಿಧಾನಪರಿಷತ್…

46 mins ago

ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಪೋಟ : ಓರ್ವ ಸಾವು, ನಾಲ್ವರು ಗಂಭೀರ

ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…

10 hours ago

ರಸ್ತೆಯಲ್ಲಿ ರಾಗಿ ಒಕ್ಕಣೆ | ಮುಗುಚಿ ಬಿದ್ದ ಕಾರು ; ಓರ್ವ ಸಾವು

ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…

12 hours ago

ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ

ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…

13 hours ago