ಜಿಡ್ಡು ಗಟ್ಟಿದ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆಯೇ ಅಪಸಹ್ಯವೆನಿಸುವ ವಿಕ್ಷಿಪ್ತತೆ ಮುಂದುವರಿಯುತ್ತಿರುವುದು ನಿಜಕ್ಕೂ ಖೇದಕರ. ಸರ್ವಜನಾಂಗದ ಶಾಂತಿಯ ತೋಟವೆಂಬುದಕ್ಕೆ ಸೂಕ್ತವಾದ ಮೈಸೂರಿನಲ್ಲಿ ಮರ್ಯಾದೆಗೇಡು ಹತ್ಯೆಯಂತಹ ಕುಕೃತ್ಯಗಳು ನಡೆಯುತ್ತಿರುವುದು ಸ್ವೀಕಾರ್ಹವಲ್ಲ. ಪ್ರೇಮಾಂಕುರವಾಗಿ ಅರಳಬೇಕಾದ ಹೂವುಗಳು ವಿದಳನ ಹೊಂದುವಂತಹ ಸ್ಥಿತಿಗೆ ಈ ವ್ಯವಸ್ಥೆ ಬಾಗಿದೆ ಎಂಬುದನ್ನು ಇಂದಿನ ಆಧುನಿಕ ಯುಗದಲ್ಲಿ ಉಲ್ಲೇಖಿಸುವುದು ಒಂದು ರೀತಿಯ ವ್ಯವಸ್ಥೆಯ ದೌರ್ಬಲ್ಯ ಎಂದೇ ಪರಿಗಣಿಸಬೇಕಾಗುತ್ತದೆ. ಅದೂ ಮಾನವೀಯ ಮನಸ್ಸುಗಳನ್ನು ಬೆಚ್ಚಿಬೀಳಿಸಿದೆ ಕೂಡ. ಜಾತಿ ಮತದ ಬೇಲಿ ದಾಟಿ ಬೆಳೆಯುವ ಪ್ರೀತಿಗೆ ಸಾಮಾನ್ಯವಾಗಿ ಮೈಸೂರು ಆಶ್ರಯತಾಣವೇ ಆಗಿದೆ. ಅದಕ್ಕೆ ಹಿರಿಯ ಚಿಂತಕರಾಗಿದ್ದ ಪ್ರೊ.ಕೆ.ರಾಮದಾಸ್, ಪ್ರೊ.ಎಚ್.ಗೋವಿಂದಯ್ಯ ಅವರಂತಹ ಪ್ರಗತಿಪರರು ಸ್ಥಾಪಿಸಿದ್ದ ‘ಮಾನವ ಮಂಪಟ’ ವೇದಿಕೆಯೇ ಸಾಕ್ಷಿ ಎನ್ನಬಹುದು.
1980ರ ದಶಕದಲ್ಲಿ ಇಡೀ ರಾಜ್ಯದಲ್ಲಿ ಯಾವುದೇ ಅಂತರ್ಜಾತಿ, ಅಂತರ್ಧರ್ಮೀಯ ಪ್ರೇಮಿಗಳು ಮದುವೆಯಾಗಲು ಧಾವಿಸುತ್ತಿದ್ದುದು ಸಾಂಸ್ಕೃತಿಕ ನಗರಿ ಮೈಸೂರಿಗೆ. ಅಂತಹ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಗ್ಗುಂಡಿ ಎಂಬ ಹಳ್ಳಿಯಲ್ಲಿ ಅನ್ಯ ಕೋಮಿನ ಯುವಕನನ್ನು ಪ್ರೇಮಿಸಿದ ಒಂದೇ ಕಾರಣಕ್ಕೆ ಸ್ವಂತ ಮಗಳನ್ನೇ ಹೆತ್ತವರು ಹತ್ಯೆ ಮಾಡಿರುವುದು ಮಾನವ ಕುಲ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಪೊಲೀಸ್ ಠಾಣೆಯಲ್ಲಿ ಪ್ರೀತಿಯನ್ನು ಬಹಿರಂಗಪಡಿಸಿದ್ದರೂ ಕಾನೂನು ಕೈಹಿಡಿಯಲಿಲ್ಲವೇ? ಎಂಬ ಪ್ರಶ್ನೆ ಕೂಡ ಉದ್ಭವಿಸುತ್ತದೆ. ಸಂವಿಧಾನದಲ್ಲಿ ಯಾರೇ ಯಾವುದೇ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಬಹುದಾದ ಮತ್ತು ಆಯ್ಕೆ ಮಾಡಿಕೊಳ್ಳಬಹುದಾದ ಸ್ವಾತಂತ್ರ್ಯವಿದ್ದರೂ, ಜಾತ್ಯತೀತತೆ ಎಂಬ ಪದವೂ ಸಂವಿಧಾನದಲ್ಲಿ ಅಡಕವಾಗಿದ್ದರೂ ಸಮಾಜವನ್ನು ಬೆನ್ನು ಬಿಡದೆ ಕಾಡುತ್ತಿರುವ ಚಾತುರ್ವರ್ಣ ಪದ್ಧತಿಯ ಬೇರುಗಳು ಇಂದಿಗೂ ಚೋದ್ಯವಾಗಿ ಮುನ್ನುಗ್ಗುತ್ತಿರುವುದು ನಾವೇ ಪಾಲಿಸುವ ಸಂವಿಧಾನದಕ್ಕೆ ಮತ್ತು ನೈತಿಕತೆಗೆ ಮಾಡಿಕೊಂಡ ಅಪಮಾನವೇ ಸರಿ. ವಿದ್ಯಾರ್ಥಿನಿಗೆ ಸಿಡಿಪಿಒ ಕಚೇರಿಯಲ್ಲಿ ಕೌನ್ಸಿಲಿಂಗ್ ನಡೆಸಿ, ಬಾಲಮಂದಿರಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಪತ್ರ ಬರೆದುಕೊಟ್ಟು ಪೋಷಕರು ಮಗಳನ್ನು ಮನೆಗೆ ಕರೆತಂದು ನಡೆಸಿರುವ ಹೇಯಕೃತ್ಯ ೨೧ನೇ ಶತಮಾನದಲ್ಲೂ ಜಾತಿ, ಧರ್ಮಗಳ ಬಗ್ಗೆ ಇರುವ ಅಂಧಾಭಿಮಾನ ಕರುಳು ಕುಡಿಗಳನ್ನೇ ನಾಶ ಮಾಡುವಷ್ಟು ಕ್ರೂರವಾಗಿರುವುದು ವಿಪರ್ಯಾಸ. ಮೈಸೂರಿನಲ್ಲೇ ಕೆಲ ವರ್ಷಗಳ ಹಿಂದೆ ಇಂತಹದೇ ಕಾರಣಕ್ಕೆ ಒಡಹುಟ್ಟಿದ ಅಣ್ಣನೇ ತಂಗಿಯನ್ನು ಕೊಲೆಗೈದಿದ್ದ. ಮಂಡ್ಯದಲ್ಲಿಯೂ ಕೆಲ ವರ್ಷಗಳ ಹಿಂದೆ ಇಂತಹ ಎರಡು ಪ್ರಕರಣಗಳು ನಡೆದಿದ್ದವು. ಆಯಾ ಘಟನೆ ನಡೆದ ಸಂದರ್ಭದಲ್ಲಿ ಪೊಲೀಸರು ಎಷ್ಟೇ ಬಿಸಿ ಮುಟ್ಟಿಸಿದರೂ, ಮಾಧ್ಯಮಗಳಲ್ಲಿ ವ್ಯಾಪಾಕ ಪ್ರಚಾರ ಮಾಡಿದರೂ ವೈಯಕ್ತಿಕ ನೆಲಗಟ್ಟಿಗೆ ಬಂದಾಗ ಮನುಷ್ಯ ಕ್ರುದ್ಧರಾಗುವ ದುರಿತ ದಿನಗಳನ್ನು ನೋವುಂಡ ಮನಸ್ಸುಗಳು ಪದೇ ಪದೇ ನೋಡುವಂತಾಗಿದೆ. ಹೆತ್ತವರು ಮಕ್ಕಳನ್ನೇ ಕೊಲೆಗೈಯ್ಯುವಷ್ಟು ಕಠಿಣ ಹೃದಯಿಗಳಾಗಲು ಕಾರಣಗಳನ್ನು ಊಹಿಸಬಹುದು. ಸ್ವಜಾತಿಯ ಬಂಧುಗಳು, ಸ್ನೇಹಿತರ ಅಣಕು, ಕುಹಕ, ವ್ಯಂಗ್ಯಗಳ ಭರಾಟೆಯನ್ನು ನೆನೆದೇ ಬಹುತೇಕ ಇಂತಹ ಘಟನೆಗಳಿಗೆ ಪೋಷಕರು ಮುಂದಾಗುತ್ತಾರೆ ಎಂಬ ಮಾತುಗಳಿವೆ. ಅಂದರೆ ಅವರಿಗೆ ನಿಜವಾಗಿ ಜಾತಿ ಮೇಲೆ ಪ್ರೀತಿ ಇರುವುದಿಲ್ಲ ಎನ್ನಬಹುದು. ಇಂತಹ ಕೃತ್ಯಗಳು ಮರುಕಳಿಸದಂತೆ ನಿಜವಾದ ಪ್ರೀತಿಯ ಮುಂದೆ ಜಾತಿ, ಧರ್ಮಗಳು ನಗಣ್ಯ ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ.
ವಾಸ್ತವವಾಗಿ ಸಮಾಜ ಕಲ್ಯಾಣ ಇಲಾಖೆ ಮಧ್ಯ ಪ್ರವೇಶಿಸಿ ಎರಡೂ ಕುಟುಂಬಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೈಜ ಸ್ಥಿತಿ ನಿಭಾಯಿಸುವ ಜವಾಬ್ದಾರಿ ನಿರ್ವಹಿಸಬೇಗಾಗಿದೆ. ಇದಕ್ಕೆ ಸಾಮಾಜಿಕ ಸಂಘಟನೆಗಳು ಕೈಜೋಡಿಸಬೇಕಿದೆ. ಆದರೆ, ರಾಜ್ಯದಲ್ಲಿ ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ ಇದು ‘ದುರಾಸೆ’ ಅನಿಸಬಹುದು. ಇಂತಹದ್ದಕ್ಕೆಲ್ಲ ಕಡಿವಾಣ ಬಿದ್ದು, ಕಠಿಣ ಕಾನೂನು ಕ್ರಮದ ಬಿಗಿ ಹಿಡಿತಗೊಳಿಸಿದರೆ ಮತ್ತಷ್ಟು ಪ್ರೇಮಿಗಳಿಗೆ ನೈತಿಕವಾಗಿ ಬೆಂಬಲ ನೀಡಿದಂತಾಗುತ್ತದೆ. ಹೆತ್ತ ಮಗಳ ಪ್ರಾಣವನ್ನೇ ತೆಗೆದಿರುವ ಆರೋಪಿಗಳಿಗೆ ಕೌನ್ಸಿಲಿಂಗ್ ನಡೆಸಿ, ನಿಜವಾದ ಕಾರಣವನ್ನು ಹೊರತೆಗೆಯುವ ಹೊಣೆಗಾರಿಕೆಯನ್ನು ಪೊಲೀಸರು ಪ್ರದರ್ಶಿಸಬೇಕಾಗುತ್ತದೆ. ಸರ್ಕಾರ ಕೂಡ ಆಗಾಗ ಸಮಾಜದಲ್ಲಿ ಪ್ರತಿಯೊಬ್ಬರೂ ತಮಗಿಷ್ಟದಂತೆ ಬದುಕಲು, ಸಂವಿಧಾನ ಬದ್ಧವಾಗಿ ಆಯ್ಕೆ ಮಾಡಿಕೊಳ್ಳುವಂತಹ ಸ್ವಾತಂತ್ರ್ಯ ನೀಡಬೇಕಾಗುತ್ತದೆ.
ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಹಿರಿದು. ಅದನ್ನು ನಗಣ್ಯ ಮಾಡುವಂತಿಲ್ಲ. ಆದರೆ, ವಯಸ್ಸಿಗೆ ಬಂದ ಮಕ್ಕಳಿಗೂ ಆಯ್ಕೆ ನೀಡುವ ಔದಾರ್ಯ ನೀಡುವಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಮೈಸೂರಿನಲ್ಲಿ ಮದ್ಯವ್ಯಸನಿಗಳಿಗೆ ಚಟ ಬಿಡಿಸಲು ಎರಡು ಮೂರು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವಂತಹ ಇಂತಹ ಸಂದಿಗ್ಧ ಸ್ಥಿತಿ ಎದುರಿಸುತ್ತಿರುವ ಪ್ರೇಮಿಗಳಿಗೆ ನೆರವಾಗಲು ಎನ್‌ಜಿಒಗಳ ಅವಶ್ಯಕತೆಯಿದೆ. ಮನುಷ್ಯ ತಾನು ಎಷ್ಟೇ ಹಣ ಸಂಪಾದಿಸಿದರೂ, ಆಧುನಿಕ ಯುಗಕ್ಕೆ ತೆರೆದುಕೊಂಡರೂ ಮರ್ಯಾದೆಯಂತಹ ವಿಚಾರಗಳು ಎದುರಾದಾಗ ಬುದ್ಧಿಗೆ ಕೆಲಸ ಕೊಡದೆ ಕೋಪಕ್ಕೆ ಎಡೆಮಾಡಿಕೊಟ್ಟು ನಡೆಸುವ ಅಚಾತುರ್ಯ ಕೇವಲ ವೈಯಕ್ತಿಕ ನಷ್ಟವಲ್ಲ, ಸಾಮಾಜಿಕ ನೆಲಗಟ್ಟಿನಲ್ಲಿಯೂ ಅತ್ಯಂತ ಕುಬ್ಜ ಮನಸ್ಥಿತಿಯ ತೋರ್ಪಡಿಕೆಯಾಗುತ್ತದೆ.
(ಚಿತ್ರಕೃಪೆ- ಸಬ್ರಂಗ್ ಇಂಡಿಯ)
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…