vishnuvardhan
ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಪುಣ್ಯಭೂಮಿ ನೆಲಸಮವಾದದ್ದು, ಅಲ್ಲಿ ಒಂದು ಭಾಗ ಲೇಔಟ್ ಆಗಿರುವುದರ ಕುರಿತಂತೆ ಸರ್ಕಾರ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಹಿರಿಯ ನಿರ್ದೇಶಕ ಎಸ್. ವಿ. ರಾಜೇಂದ್ರಸಿಂಗ್ (ಬಾಬು) ಒತ್ತಾಯಿಸಿದ ಸುದ್ದಿ.
ಕಳೆದ ಶುಕ್ರವಾರ ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣುವರ್ಧನ್ ಪುಣ್ಯಭೂಮಿಯಲ್ಲಿ ಕಟ್ಟಿದ್ದ ಗುಡಿಯನ್ನು ಕೆಡವಲಾಯಿತು. ಅದು ಮಾತ್ರವಲ್ಲ, ಅಲ್ಲಿದ್ದ ಬಾಲಣ್ಣನವರ ಸಮಾಧಿಯನ್ನು ಕೂಡ. ಈ ಕೆಲಸ ರಾತ್ರೋರಾತ್ರಿ ನಡೆಯಿತು. ನ್ಯಾಯಾಲಯದ ಆದೇಶದಂತೆ ಈ ಕೆಲಸ ನಡೆದಿರುವ ಮಾಹಿತಿ. ಬಾಲಣ್ಣನವರ ಮೊಮ್ಮಗ ಕಾರ್ತಿಕ್ (ಶ್ರೀನಿವಾಸ್ ಮಗ) ನ್ಯಾಯಾಲಯದಿಂದ ಪಡೆದ ಆದೇಶದ ಹಿನ್ನೆಲೆಯಲ್ಲಿ ಈ ಬೆಳವಣಿಗೆ.
ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ಆಗಿರುವುದರಿಂದ ಮತ್ತೆ ಹಿಂದೆ ಸರ್ಕಾರ ಕೋರಿದಂತೆ ಸ್ಮಾರಕದ ಪ್ರಸ್ತಾಪ ಬರುವುದಿಲ್ಲ ಎನ್ನುವುದು ಅವರ ವಾದ. ಆದರೆ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಜಾಗದಲ್ಲಿ ಸ್ಮಾರಕ ಇರಬೇಕು ಎನ್ನುವ ಅವರ ಕುಟುಂಬ ಮತ್ತು ಅಭಿಮಾನಿಗಳ ಸಹಜ ಒತ್ತಾಯ ಮತ್ತು ಸರ್ಕಾರದ ನಿರ್ಧಾರ ಇತ್ತು. ಆದರೆ ವಿಷ್ಣುವರ್ಧನ್ ದೇಹಾಂತ್ಯವಾಗಿ ಹತ್ತು ವರ್ಷ ಕಳೆದರೂ ಕಾನೂನು ತೊಡಕಿನ ಕಾರಣ ಸ್ಮಾರಕದ ಕೆಲಸ ಆರಂಭವಾಗದೆ ಇದ್ದ ಕಾರಣ ಅದನ್ನು ಮೈಸೂರಿನಲ್ಲಿ ಮಾಡುವ ನಿರ್ಧಾರ ಆಯಿತು.
ಆದರೆ ವಿಷ್ಣುವರ್ಧನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜನ್ಮದಿನ ಮತ್ತು ಪುಣ್ಯದಿನದಂದು ಸಾವಿರಾರು ಸಂಖ್ಯೆಯಲ್ಲಿ ಬಂದು ತಮ್ಮ ಗೌರವ ಸಲ್ಲಿಸುತ್ತಿದ್ದರು, ಮಾತ್ರವಲ್ಲ, ಅಲ್ಲಿ ಕೂಡ ಅವರ ಸ್ಮಾರಕ ಆಗಬೇಕು ಎಂದು ಅವರು ಬಯಸಿದ್ದರು. ಕಳೆದ ವಾರ ಅಲ್ಲಿ ಎರಡು ಸಮಾಧಿಗಳು ನೆಲಸಮವಾದ ಮೇಲೆ ಅಭಿಮಾನಿಗಳು ಮಾತ್ರವಲ್ಲ, ಉದ್ಯಮದಲ್ಲೂ ಈ ಕುರಿತಂತೆ ಚರ್ಚೆ ಆರಂಭ ಆಗಿದೆ.
ಅಭಿಮಾನ್ ಸ್ಟುಡಿಯೋ ಹಿನ್ನೆಲೆಯ ಕುರಿತಂತೆ ಚರ್ಚೆ
ಇದೇ ಅಂಕಣದಲ್ಲಿ ದಶಕದ ಹಿಂದೆ ಬಾಲಣ್ಣನ ‘ಅಭಿಮಾನ’ದ ಹರಾಜು ಶೀರ್ಷಿಕೆಯ ಲೇಖನ ಪ್ರಕಟವಾಗಿತ್ತು. ಸ್ಟುಡಿಯೋ ಕಟ್ಟಲು ಹಿರಿಯ ನಟ ಬಾಲಣ್ಣನವರಿಗೆ ಸರ್ಕಾರ ನೀಡಿದ ೨೦ ಎಕರೆ ಜಮೀನನ್ನು ಅವರ ಗಂಡು ಮಕ್ಕಳು, ಅಪ್ಪನ ಆಸ್ತಿ ಎಂದು ೨೦೦೩ರಲ್ಲಿ ಪಾಲು ಮಾಡಿಕೊಂಡದ್ದು, ೨೦೦೪ರಲ್ಲಿ ಅವರ ಮಗಳು ಗೀತಾಬಾಲಿ ಅದರಲ್ಲಿ ತಮಗೂ ಪಾಲು ಕೇಳಿ ನ್ಯಾಯಾಲಯದ ಮೊರೆ ಹೋದದ್ದು, ೨೦೦೯ರಲ್ಲಿ ನಟ ವಿಷ್ಣುವರ್ಧನ್ ಅವರ ಸಾವು, ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ, ಸರ್ಕಾರ ಅಲ್ಲಿ ಸ್ಮಾರಕ ಕಟ್ಟಲು ನಿರ್ಧರಿಸಿದ್ದು, ಆಸ್ತಿಯಲ್ಲಿ ಪಾಲು ಕೇಳಿದರೂ, ಸ್ಮಾರಕಕ್ಕೆ ಜಾಗ ಕೊಡಲು ತಮ್ಮ ತಕರಾರಿಲ್ಲ ಎಂದು ಹೇಳಲು ಕರೆದ ಪತ್ರಿಕಾಗೋಷ್ಠಿಯ ಹಿನ್ನೆಲೆಯಲ್ಲಿ ಆ ಅಂಕಣವಿತ್ತು.
ಕೆಲವು ಕನ್ನಡ ಚಿತ್ರಗಳ ಚಿತ್ರೀಕರಣ ಮೈಸೂರಿನಲ್ಲಿ ಆಗುತ್ತಿದ್ದವು. ದಕ್ಷಿಣ ಭಾರತದ ಬಹುತೇಕ ಚಿತ್ರಗಳ ಚಿತ್ರೀಕರಣ ಕೇಂದ್ರ ಮದರಾಸು (ಈಗಿನ ಚೆನ್ನೈ). ಬೆಂಗಳೂರಿನಲ್ಲಿ ಸ್ಟುಡಿಯೋ ನಿರ್ಮಾಣದ ಒಂದೆರಡು ಪ್ರಯತ್ನಗಳಾಗಿದ್ದರೂ ಅವು ಯಶಸ್ವಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸ್ಟುಡಿಯೋ ಕಟ್ಟಲು ನಟ ಬಾಲಣ್ಣನವರಿಗೆ ದೀರ್ಘಾವಧಿ ಗುತ್ತಿಗೆಯ ಮೇಲೆ ಅಲ್ಲಿ ೨೦ ಎಕರೆ ಜಮೀನನ್ನು ನೀಡಲಾಯಿತು.
ಕನ್ನಡಿಗರೇ ಈ ಸ್ಟುಡಿಯೋ ಕಟ್ಟಲು ನೆರವಾಗಬೇಕು ಎಂದು ಸಾಹಿತಿ, ಕನ್ನಡ ಚಳವಳಿಯ ನೇತಾರರಾಗಿದ್ದ ಅ. ನ. ಕೃಷ್ಣರಾಯರು ಕರೆನೀಡಿದರು. ಬಾಲಣ್ಣ ತಲಾ ನೂರು ರೂಪಾಯಿಗಳಂತೆ ಸ್ಟುಡಿಯೋ ಕಟ್ಟಲು ದೇಣಿಗೆ ಸಂಗ್ರಹಿಸಿ, ಹಾಗೋ ಹೀಗೋ ಸ್ಟುಡಿಯೋ ಆರಂಭಿಸಿದರು.
ಒಂದಷ್ಟು ಚಿತ್ರಗಳು ಅಲ್ಲಿ ಚಿತ್ರೀಕರಣ ಆದವು. ಸಾಕಷ್ಟು ಮೂಲ ಸೌಲಭ್ಯಗಳ ಕೊರತೆಯ ಕಾರಣ ಅಲ್ಲಿ ಹೋಗುವ ನಿರ್ಮಾಪಕರ ಸಂಖ್ಯೆ ಕಡಿಮೆ ಆಯಿತು. ೧೯೯೫ರಲ್ಲಿ ಬಾಲಣ್ಣ ನಿಧನರಾಗುವ ವೇಳೆ ಇದ್ದ ಸಾಲವನ್ನು ಸರ್ಕಾರ ಮನ್ನಾ ಮಾಡಿತು. ಸ್ಟುಡಿಯೋ ಜಾಗದ ಜವಾಬ್ದಾರಿ ಯನ್ನು ಅವರ ಮಕ್ಕಳಿಗೆ ವರ್ಗಾಯಿಸಲಾಯಿತು.
ಮುಂದೆ ನಡೆದ ಬೆಳವಣಿಗೆಗಳನ್ನು ಗಮನಿಸಬೇಕು. ೨೦೦೩ರಲ್ಲಿ ಬಾಲಣ್ಣನವರ ಮಗ ಗಣೇಶ್ ಅವರು ತಮ್ಮ ತಂದೆಯ ಆಸ್ತಿಯನ್ನು ಗಂಡುಮಕ್ಕಳಿಗೆ ಜಂಟಿ ಖಾತೆ ಮಾಡಿ ಕೊಡಬೇಕು ಎಂದು ಕೆಂಗೇರಿ ಪುರಸಭೆಗೆ ಪತ್ರ ಬರೆದು ಕೋರುತ್ತಾರೆ. ೨೦೦೩ರ ಮೇ ತಿಂಗಳಲ್ಲಿ ಜಂಟಿ ಖಾತೆಗಳ ನೊಂದಣಿಯೂ ಆಗುತ್ತದೆ! ಹತ್ತು ಎಕರೆ ಗಣೇಶ್ ಹೆಸರಿಗೆ! ಹತ್ತು ಎಕರೆ ಶ್ರೀನಿವಾಸ್ ಹೆಸರಿಗೆ! ಆ ಪತ್ರದಲ್ಲಿ ಎಲ್ಲೂ ಇದು ಅಭಿಮಾನ್‌ಸ್ಟುಡಿಯೋಗೆ ಸಂಬಂಧಪಟ್ಟದ್ದು ಎಂದು ಇರಲಿಲ್ಲ. ಇದನ್ನು ಹೇಗೆ ಬೇಕಾ ದರೂ ಅನುಭವಿಸುವ, ಮಾರಾಟ ಮಾಡುವ ಹೀಗೆ ಎಲ್ಲ ಹಕ್ಕುಗಳೂ ಅವರವರದು ಎಂದು ಹೇಳಲಾಗಿತ್ತು!
ಈಗ ಶ್ರೀನಿವಾಸ್ ಅವರು ತಮ್ಮ ಪಾಲಿನ ಜಾಗವನ್ನು ಮಾರುವ ಹೊತ್ತಿನಲ್ಲಿ ವಿಶೇಷ ಜಿಲ್ಲಾಧಿಕಾರಿಗಳ ಅನುಮತಿ ಕೇಳುತ್ತಾರೆ. ಸ್ಟುಡಿಯೋ ವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮೇಲ್ದರ್ಜೆಗೇರಿಸಲು ಬೇಕಾದಷ್ಟು ಹಣ ತಮ್ಮ ಬಳಿ ಇಲ್ಲ. ಅದಕ್ಕಾಗಿ ೧೦ ಎಕರೆ ಮಾರಲು ಅನುಮತಿ ನೀಡಬೇಕು ಎನ್ನುವುದಾಗಿತ್ತು ಕೋರಿಕೆ. ಸರ್ಕಾರದ ಅನುಮತಿ ಪಡೆದು ನಾಲ್ಕು ಷರತ್ತುಗಳೊಂದಿಗೆ ಮಾರಲು ಅಂದಿನ ಜಿಲ್ಲಾಧಿಕಾರಿಗಳು ಅನುಮತಿ ನೀಡುತ್ತಾರೆ.
ಆ ಷರತ್ತುಗಳು ಹೀಗಿವೆ
೧) ಸರ್ಕಾರದ ಆದೇಶದ ನಂ. ಆರ್‌ಡಿ. ೩೭. ಜಿಎನ್‌ಎ. ೬೯ ದಿನಾಂಕ ೨೭-೩-೧೯೭೦ರ ಆದೇಶದಂತೆ, ಮಂಜೂರಾದ ಜಮೀನನ್ನು ಯಾವ ಉದ್ದೇಶಕ್ಕಾಗಿ ಆಗಿದೆಯೋ ಅಂದರೆ ಮಂಜೂರಾದ ೧೦ ಎಕರೆ ಪರಭಾರೆ ಮಾಡಿ, ಉಳಿದ ೧೦ ಎಕರೆ ಜಮೀನನ್ನು ಅಭಿವೃದ್ಧಿಪಡಿಸಲು ಉಪಯೋಗಿಸ ತಕ್ಕದ್ದು.
೨) ಮಾರಾಟ ಮಾಡಲು ಅನುಮತಿ ನೀಡಿದ ಭೂಮಿಯ ಅಭಿವೃದ್ಧಿಯನ್ನು ಅಭಿಮಾನ್ ಸ್ಟುಡಿಯೋ ನಿರ್ಮಾಣ ಮತ್ತು ನಿರ್ಮಾಣಕ್ಕೆ ಯಾವುದೇ ರೀತಿ ಅಡ್ಡಿಬಾರದಂತೆ ಉಪಯೋಗಿಸುವ ಷರತ್ತಿನ ಮೇಲೆ ನೀಡಲಾಗಿದೆ.
೩) ಸರ್ಕಾರದ ಅನುಮೋದನೆ ಪತ್ರದ ಸಂ. ಆರ್‌ಡಿ. ೩೦೪ ಎಲ್‌ಬಿಬಿ. ೨೦೦೩ ದಿನಾಂಕ ೧೧-೦೭-೨೦೦೩ರಂತೆ ಮೈಲಸಂದ್ರ ಗ್ರಾಮದ ಸರ್ವೆ ನಂ. ೬೮ರ ಪೈಕಿ ೧೦ ಎಕರೆ ಜಮೀನನ್ನು ಮಾರಾಟ ಮಾಡಿದ ಹಣದಿಂದ ಅಭಿಮಾನ್ ಸ್ಟುಡಿಯೋವನ್ನು ಆಧುನಿಕ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿ ಸರ್ಕಾರದ ಗಮನಕ್ಕೆ ೨ ವರ್ಷಗಳೊಳಗಾಗಿ (ಈ ಆದೇಶ ಹೊರಡಿಸಿದ ದಿನಾಂಕದಿಂದ) ತಿಳಿಸತಕ್ಕದ್ದು.
೪) ಬಾಕಿ ಉಳಿದಿರುವ ೧೦ ಎಕರೆ ಜಮೀನನ್ನು ಯಾವುದೇ ಕಾಲದಲ್ಲಿ ಅಥವಾ ಭೂಮಿಯನ್ನು ಮಾರಲು; ಗುತ್ತಿಗೆಗೆ ಕೊಡಲು; ಅಡಮಾನ ಮಾಡಲು ಹಾಗೂ ವರ್ಗಾಯಿಸಲು ಅಥವಾ ಬೇರೆ ಯಾವುದೇ ರೀತಿಯಲ್ಲಿ ಪರಭಾರೆ ಮಾಡಲು ಉದ್ದೇಶಿಸಿದ್ದರೆ ಪ್ರಶ್ನಿತ ಜಮೀನನ್ನು ಯಾವುದೇ ತಿಳಿವಳಿಕೆ ನೀಡದೆ ಸರ್ಕಾರದ ವಶಕ್ಕೆ ಪಡೆದುಕೊಳ್ಳಲಾಗುವುದು.
ಆದರೆ, ಶ್ರೀನಿವಾಸ್ ಅವರು ತಮ್ಮ ಪಾಲಿನ ಜಾಗವನ್ನು ಮಾರಿ ಅದನ್ನು ಸ್ಟುಡಿಯೋ ಮೇಲ್ದರ್ಜೆಗೆ ಏರಿಸಲು ಬಳಸಿರಲಿಲ್ಲ. ಬದಲಿಗೆ ತಾವೇ ಬಳಸಿಕೊಂಡರು ಎನ್ನಲಾಗಿದೆ. ಬಾಲಣ್ಣನವರ ಮಗಳು ಗೀತಾಬಾಲಿ ನ್ಯಾಯಾಲಯದ ಮೊರೆ ಹೋದರು. ಅಪ್ಪನ ಆಸ್ತಿಯಲ್ಲಿ ತಮಗೂ ಪಾಲು ಸಿಗಬೇಕು ಎನ್ನುವುದು ನ್ಯಾಯಾಲಯದ ಮೂಲಕ ಅವರಿಟ್ಟ ಬೇಡಿಕೆ. ಈ ನಡುವೆ ವಿಷ್ಣುವರ್ಧನ್ ಸ್ಮಾರಕಕ್ಕೆ ಎರಡು ಎಕರೆ ಜಾಗ ಕೊಡಲು ತಮ್ಮ ಅಭ್ಯಂತರ ಇಲ್ಲ ಎಂದೂ. ಉಳಿದ ಎಂಟು ಎಕರೆಯಲ್ಲಿ ತಮ್ಮ ಪಾಲು ಕೇಳುವುದಾಗಿಯೂ ಅವರು ನ್ಯಾಯಾಲಯಕ್ಕೆ ಹೇಳಿದ್ದರು!
ಹಾಗಾಗಿಯೇ ಮುಂದಿನ ಬೆಳವಣಿಗೆಗಳಾದವು. ಮೈಸೂರಿನಲ್ಲಿ ಸ್ಮಾರಕ ತಲೆ ಎತ್ತಿತ್ತು. ಆದರೆ ವಿಷ್ಣುವರ್ಧನ್ ಪುಣ್ಯಭೂಮಿಯಲ್ಲಿನ ಬೆಳವಣಿಗೆಯ ನಂತರ ನಟ ಸುದೀಪ್ ಅವರು ಸೇರಿದಂತೆ ಕೆಲವು ಮಂದಿ ಸಕ್ರಿಯರಾಗಿದ್ದಾರೆ. ನ್ಯಾಯಾಲಯದಲ್ಲಿ ಈ ದಾವೆಗೆ ಸೇರಿಕೊಂಡ ವಿಷ್ಣುಸೇನೆ ಕೂಡಾ ಶತಾಯ ಗತಾಯ ಅಲ್ಲಿಯೇ ವಿಷ್ಣುವರ್ಧನ್ ಅವರ ನೆನಪನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಆರಂಭದಲ್ಲಿ ಅಡ್ಡಿಪಡಿಸಿದರೂ, ಗೀತಾಬಾಲಿ ಅವರು ರಾಜ್ಯದ ಮುಖ್ಯಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ತಾವು ತಮ್ಮ ತಂದೆಯ ಕನಸಾಗಿದ್ದ ಅಭಿಮಾನ್ ಸ್ಟುಡಿಯೋ ಉಳಿಸಿ ಬೆಳೆಸುವ ಕೆಲಸ ಮಾಡುತ್ತೇನೆ ಎಂದಿದ್ದರು. ಬಾಲಣ್ಣನ ಕಿರಿಯ ಮಗ ಶ್ರೀನಿವಾಸ್ ಈ ನಡುವೆ ನಿಧನರಾದರು, ಅವರ ಮಗ ಕಾರ್ತಿಕ್ ಅಪ್ಪನ ಬದಲು ಇದ್ದಾರೆ. ಇತ್ತೀಚೆಗೆ ಗಣೇಶ್ ಅವರ ಸಾವಿನ ಸುದ್ದಿ ಬಂದಿತ್ತು. ಆದರೆ ಅದು ಸಹಜ ಸಾವಾಗಿರಲಿಲ್ಲ, ಕೊಲೆ. ಈ ಕುರಿತು ಬೆಂಗಳೂರಿನ ಹೊರಮಾವು ಆರಕ್ಷಕ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು, ಗೀತಾಬಾಲಿಯವರು ವಾಹಿನಿಯೊಂದರಲ್ಲಿ ಹೇಳಿದ್ದರು. ಚೋದ್ಯವೆಂದರೆ. ಈ ಸುದ್ದಿಯಾಗಲೀ ಅದರ ಪತ್ತೆಯ ವಿವರವಾಗಲೀ ಎಲ್ಲೂ ವರದಿಯಾದಂತಿಲ್ಲ. ಸಾಮಾನ್ಯವಾಗಿ ಪೊಲೀಸ್ ಇಲಾಖೆಯಿಂದ ಪ್ರತಿದಿನ ಅಪರಾಧ ಸುದ್ದಿಗಳು ಪ್ರಕಟವಾಗುತ್ತವೆ.
ಚಿತ್ರೋದ್ಯಮದ ಬೆಳವಣಿಗೆಗಾಗಿ ಬಾಲಣ್ಣನವರಿಗೆ ಸರ್ಕಾರ ನೀಡಿದ ಜಾಗವನ್ನು ಪರಭಾರೆ ಮಾಡುವ ಪ್ರಯತ್ನ ನಡೆದಿದೆ ಎನ್ನಲಾಗುತ್ತದೆ. ಇದಕ್ಕೆ ಪೂರಕವಾಗಿಯೇ ಅವರ ಮಗಳ ಮಾತುಗಳಿವೆ. ಅಲ್ಲಿ ಮಾಲ್ ಕಟ್ಟುವುದೋ ಇನ್ನೇನೋ ಸುದ್ದಿಗಳು. ಆದರೆ ಹಾಗೇನೂ ಮಾಡುವಂತಿಲ್ಲ ಎಂದು ಸರ್ಕಾರ ಈಗಾಗಲೇ ಹೇಳಿದೆ. ಚಿತ್ರೋದ್ಯಮಕ್ಕೆ ಸೌಲಭ್ಯ ಒದಗಿಸಲು ನೀಡಿದ ಜಾಗ ಪರಭಾರೆಯಾಗದಂತೆ ಅದು ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ಹೌದು. ಆ ಇಚ್ಛಾಶಕ್ತಿಯನ್ನು ಸರ್ಕಾರ ಪ್ರಕಟಿಸಬೇಕಾಗಿದೆ. ಬಾಬು ಅವರಂದಂತೆ ತನಿಖೆಯೊಂದು ನಡೆದರೆ, ಈ ವ್ಯವಹಾರದ ಕಾಣದ ಕೈಗಳೂ ಹೊರಬರುತ್ತವೆ. ನೆಲಸಮವಾಗಿರುವ ವಿಷ್ಣುವರ್ಧನ್ ಪುಣ್ಯಭೂಮಿ, ಬಾಲಣ್ಣನ ಸಮಾಧಿಗೂ ಆಗ ದಾರಿಯಾಗುತ್ತದೆ.
-ಬಾ.ನಾ ಸುಬ್ರಹ್ಮಣ್ಯ
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…