• ಶುಭಮಂಗಳ ರಾಮಾಪುರ
ಬಹುಶಃ ನಾನು 5 ನೇ ತರಗತಿಯಲ್ಲೋ 6ನೇ ತರಗತಿಯಲ್ಲಿಯೋ ಓದುತ್ತಿದ್ದೆ ಅನ್ಸುತ್ತೆ. ಆದಿನ ತೋಟದಿಂದ ತಂದಿದ್ದ ಎಳೆ ಮುಸುಕಿನ ಜೋಳವನ್ನು ಅಮ್ಮ ಹದವಾಗಿ ಬೇಯಿಸಿ ಕೊಡಲು ಎಲ್ಲರೂ ಮೆಲ್ಲುತ್ತಾ, ಹರಟುತ್ತಾ ಕುಂತಿರಲು ರಾತ್ರಿ ಹನ್ನೆರಡು ಒಂದು ಗಂಟೆಯಾದರೂ ನಿದ್ದೆ ಹತ್ತಿರಲಿಲ್ಲ.ಮನೆಯಲ್ಲಿ ಎಲ್ಲರಿಗೂ ಜಾಗ ಸಾಲದೆಂದು ತಾತ ಮನೆಯ ಹಿಂಭಾಗ ಹೆಂಚಿನ ಕೆಳಗೆ ಹಗ್ಗದ ಮಂಚದ ಮೇಲೆ ಮಲಗುತ್ತಿದ್ದರು. ಆಗಾಗ್ಗೆ ‘ಏನಮ್ಮ, ಇನ್ನೂ ಮಾತು ಮುಗಿದಿಲ್ವಾ? ಮೇ ತಿಮ್ಮಿ ಎಲ್ಲರೂ ಹೋಗಿ ಮಲಗೋಕೆ ಹೇಳು’ ಅಂತ ಗದರಿದಾಗ ಒಬ್ಬೊಬ್ಬರಾಗಿ ಎದ್ದು ಹೋಗಿ ಮಲಗೋಕೆ ಶುರು ಮಾಡಿದ್ರು. ನಾನು ಅಪ್ಪನ ಹೊಟ್ಟೆಯ ಮೇಲೆ ತಲೆಯಿಟ್ಟು ಮಲಗಿದ್ದೆ. ಮಧ್ಯರಾತ್ರಿ ಸುಮಾರು ಎರಡು ಮೂರು ಗಂಟೆಯ ಸಮಯ ಅನ್ಸುತ್ತೆ ಇದ್ದಕ್ಕಿದ್ದಂತೆ ಜೋರಾಗಿ ಢಂ…ಢ….. ಶಬ್ದ! ಅಪ್ಪ ಗಕ್ಕನೆ ಎದ್ದು ಕುಂತ್ರು. ನಾನೂ ಎದ್ದೆ, ದೇಹ ನಡುಗುತ್ತಿತ್ತು. ಅಪ್ಪ ಗಾಬರಿಯಾಗಿದ್ದುದು ನಿದ್ದೆಗಣ್ಣಿನಲ್ಲಿದ್ದ ನಾನು ಅಷ್ಟು ಗಮನಿಸಲಿಲ್ಲ. ಅಪ್ಪ ಏನಿಲ್ಲ ಪಾಪು ಯಾರೋ ಲಕ್ಷ್ಮಿ ಪಟಾಕಿನೋ ಆಟಂ ಬಾಂಬೋ ಹೊಡೀತಿದ್ದಾರೆ ಅನ್ಸುತ್ತೆ, ಕ್ರಿಕೇಟಲ್ಲಿ ಇಂಡಿಯಾ ಗೆದ್ದಿರಬೇಕು ಅದಕ್ಕಷ್ಟೇ, ನೀನು ಹೆದರಬೇಡ ಮಲಗಿಕೋ ಅಂತ ಹೇಳಿ ದಿಂಬಿನ ಮೇಲೆ ತಲೆಯಿಟ್ಟು ಮಲಗಿಸಿದರು.
ಬೆಳಿಗ್ಗೆ ಎದ್ದವಳೇ ಬಸ್ ಸ್ಟ್ಯಾಂಡಿನಲ್ಲಿದ್ದ ಡೇರಿ ಮುತ್ತಪ್ಪನ ಅಂಗಡಿಯಿಂದ ಹಾಲು ತರುವುದು ನನ್ನ ನಿತ್ಯ ಕರ್ಮಗಳಲ್ಲೊಂದು. ಆ ದಿನ ಕೂಡ ಟೀ ಪ್ಯಾನ್ ತೆಗೆದುಕೊಂಡು ಮನೆಯಿಂದ ಹೊರಗೆ ಕಾಲಿಡುತ್ತಿದ್ದಂತೆ ಹಿಂದೆ ಹಿತ್ತಲಿನಲ್ಲಿದ್ದ ಅಮ್ಮ ಅದೆಷ್ಟು ಬೇಗ ಬಂದಳೋ ಗಕ್ಕನೆ ಕೈಹಿಡಿದು ನನ್ನನ್ನು ಒಳಗೆ ಎಳೆದುಕೊಂಡು, ಇವತ್ತು ಹಾಲು ತರೋದು ಬೇಡ ಬಾ ಒಳಗೆ ಅಂದುಬಿಟ್ಟು.
ಸ್ವಲ್ಪ ಸಮಯ ಕಳೆಯುತ್ತಿದ್ದಂತೆ ಗುಂಯ್ ಗುಂಯ್ ಅಂತ ಶಬ್ದ ಮಾಡ್ತಾ ಧಡಕ್ಕನೆ ಬಂದು ನಿಲ್ತಿತ್ತು ಹತ್ತಾರು ಕಾರುಗಳು, ಪೊಲೀಸ್ ಜೀಪುಗಳು. ಬಿಳಿಕಾರಿನ ಮೇಲಿದ್ದ ಕೆಂಪುದೀಪ ಸೈರನ್ ಸೌಂಡ್ ಮಾಡ್ತಾ ಬಂದ್ರೆ ಅದರ ಹಿಂದೆ ಮತ್ತೆ ನಾಲ್ಕು ಜೀಪುಗಳು.
ನರಹಂತಕ ಕಾಡುಗಳ್ಳ ವೀರಪ್ಪನ್ ಮತ್ತು ಆತನ ತಂಡ ರಾಮಾಪುರದ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿತ್ತು ! ಗುಂಡಿನ ದಾಳಿಯಲ್ಲಿ ನನ್ನೂರಿನ ಏಳು ಜನ ಪೊಲೀಸರು ರಕ್ತದಲ್ಲಿ ತೋಯ್ದಾಡಿದ್ದರು. ನರಹಂತಕ ವೀರಪ್ಪನ್ ನಿಂದಾಗಿ ಏಳು ಕುಟುಂಬಗಳು ಅನಾಥವಾಗಿದ್ದವು. ನನ್ನೂರಲ್ಲಿ ಭಯದ ಕರಿನೆರಳು ಆವರಿಸಿತ್ತು . ಹೆಂಗಸರು ಮತ್ತು ಮಕ್ಕಳ ಎದೆಯಲ್ಲಿ ದಿಗಿಲನ್ನೇ ಹುಟ್ಟಿಸಿದ್ದ ನರಹಂತಕ ವೀರಪ್ಪನ್!!
ಇದಾಗಿ ಹಲವು ವರ್ಷಗಳ ನಂತರ ನಾನು ಮೈಸೂರಿನಲ್ಲಿ ಡಿ.ಇಡಿ ಮಾಡುತ್ತಿರುವಾಗ ಕಾಡುಗಳ್ಳ ವೀರಪ್ಪನ್‌ನನ್ನು ನಮ್ಮ ಹೆಮ್ಮೆಯ ಪೊಲೀಸರು ಕಾರ್ಯಾಚರಣೆಯಲ್ಲಿ ಕೊಂದುಹಾಕಿದ ವಿಷಯ ಕೇಳಿ ಅಬ್ಬಾ ಸದ್ಯ ಅಂತಹ ವ್ಯಕ್ತಿ ಸತ್ತನಲ್ಲ ಅಂತ ಖುಷಿಯೂಪಟ್ಟಿದ್ದೆ. ಆದರೆ ಅವನ ಸಾವಿಗೆ ಕಣ್ಣೀರಿಟ್ಟವರೂ ಉಂಟು.
ಕುವೆಂಪುನಗರದ ಬಿ.ಸಿ.ಎಂ. ಹಾಸ್ಟೆಲ್‌ನಲ್ಲಿ ರಾತ್ರಿ ಊಟಕ್ಕೆ ಬರಬೇಕಾಗಿದ್ದ ಮೇಲಿನ ಕೋಣೆಯಲ್ಲಿದ್ದ ಅಮುದವಳ್ಳಿ ಮತ್ತು ಮಲ್ಲಿಗಾ ಬಂದಿರಲಿಲ್ಲ. ಅರೇ, ಊಟಕ್ಕೆ ಎಲ್ಲರಿಗಿಂತ ಮೊದಲೇ ಹಾಜರಾಗ್ತಾ ಇದ್ದವರು ಇವತ್ತೇಕೆ? ಅಂತ ಅವರ ಕೋಣೆಗೆ ಹೋದರೆ ಅವರಿಬ್ಬರೂ ಕನ್ನಡಿಯ ಮುಂಭಾಗ ನಿಂತು ಮುಂಬತ್ತಿ ಹೊತ್ತಿಸಿ ಮೌನಾಚರಣೆ ನಡೆಸುತ್ತಿದ್ದರು. ಅವರಿಗೆ ಡಿಸ್ಟರ್ಬ್ ಆಗಬಾರದೆಂದು ಮೌನಾಚರಣೆ ಮುಗಿದ್ದೇಲೆ ಒಳಗೆ ಹೋದ ನನಗೆ ದಿಗ್ಧಮೆಯಾಯಿತು. ಅವರು ಮೌನಾಚರಣೆ ಮಾಡುತ್ತಿದ್ದುದು ಕಾಡುಗಳ್ಳ, ನರಹಂತಕ ವೀರಪ್ಪನ್ ಸತ್ತನೆಂದು!
ಒಬ್ಬ ಸಮಾಜಘಾತುಕ ವ್ಯಕ್ತಿಯ ಸಾವಿಗೆ ಇವರಿಬ್ಬರ ಮೌನಾಚರಣೆ ನನ್ನಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು. ನಿಜವಾಗಿಯೂ ವೀರಪ್ಪನ್ ಒಳ್ಳೆಯವನಾ? ಅಥವಾ ಕೆಟ್ಟವನಾ? ತಡೆಯಲಾಗದೆ ಕೇಳಿಯೇ ಬಿಟ್ಟೆ.
ಮೂಲತಃ ಹೂಗ್ಯಂ ಗ್ರಾಮದ ಕುಮುದವಲ್ಲಿ ಸುಮಾರು ಹತ್ತು ವರ್ಷದವಳಾಗಿದ್ದಾಗ ತೀವ್ರ ಕಾಯಿಲೆಗೆ ಒಳಗಾಗಿದ್ದು, ದೂರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಚೈತನ್ಯವಿಲ್ಲದೆ ಪೋಷಕರು ಕೈಚೆಲ್ಲಿ ಕುಂತಿದ್ದರು. ಅದೊಂದು ದಿನ ರಾತ್ರಿ ಯಾರೋ ಇಬ್ಬರು ಮಧ್ಯಮ ವಯಸ್ಸಿನ ಗಂಡಸರು ಮುಖಪೂರ್ತಿ ಬಟ್ಟೆಯಿಂದ ಮುಚ್ಚಿಕೊಂಡು ಬಂದವರೆ ತಾವು ತಂದಿದ್ದ ಮಾಂಸವನ್ನೂ ನೂರು ರೂಪಾಯಿಯ ಒಂದು ಕಟ್ಟನ್ನು ಅವಳಮ್ಮನ ಕೈಗಿತ್ತು ‘ಕರಿ ಕೊಳಂಬು ಸಂಜಿ ಕುಡುಕ್ಕ ಮುಡಿಯುಮಾ?’ ಅಂತ ಕೇಳಿದರು.ವೀರಪ್ಪನ್ ಕಡೆಯವರೆಂತಲೇ ತಿಳಿದು ನಡುಗುತ್ತಲೇ ಅವಳ ಅಮ್ಮ ಮತ್ತು ಅಪ್ಪ ಕೆಲವೇ ಗಂಟೆಗಳಲ್ಲಿ ರುಚಿಯಾದ ಮಾಂಸದ ಸಾರು, ರಾಗಿಮುದ್ದೆ ಮತ್ತು ಅನ್ನ ಎಲ್ಲವನ್ನೂ ತಯಾರಿಸಿ ದೊಡ್ಡ ಪಾತ್ರೆಗಳಲ್ಲಿ ತುಂಬಿಟ್ಟರು. ಎಲ್ಲಿ ತನ್ನ ಮನೆಯವರನ್ನೆಲ್ಲಾ ಸಾಯಿಸಿಬಿಡುತ್ತಾರೋ ಎಂಬ ಭಯದಿಂದಲೇ! ಕಾಯಿಲೆಯಿಂದ ನಿತ್ರಾಣಳಾಗಿದ್ದ ತಾನು ಹೊರಹೋಗದೆ ಕಿಟಕಿಯಿಂದಷ್ಟೇ ಇಣುಕಿ ನೋಡುತ್ತಿದ್ದೆಯೆಂದು ಕುಮುದ ಹೇಳುವಾಗ ಅವಳ ದನಿ ನಡುಗುತ್ತಿತ್ತು. ತಕ್ಷಣವೇ ಊಟವನ್ನು ತೆಗೆದುಕೊಂಡು ಹೊರಟವರು ಮರುದಿನ ರಾತ್ರಿ ಮತ್ತೆ ಬಂದು ಒಂದಷ್ಟು ಹಣ ಕೊಟ್ಟು ತಮ್ಮ ವಿಚಾರವನ್ನು ಯಾರಿಗೂ
ಹೇಳಬಾರದೆಂದು ಎಚ್ಚರಿಸಿ ಹೋಗಿದ್ದರು.
ಅವರು ಕೊಟ್ಟ ಹಣದಿಂದಲೇ ತಾನು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದು ಗುಣಮುಖಳಾಗಿದ್ದಾಗಿಯೂ, ಅದೇ ಹಣದಿಂದ ಅಪ್ಪ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುವುದಾಗಿಯೂ ಹೇಳಿದಾಗ ನನಗೆ ಆ ಸಮಯದಲ್ಲೇನು ಹೇಳಬೇಕೋ ಅರ್ಥವಾಗಲಿಲ್ಲ.
ಮಾರ್ಟಳ್ಳಿಯಿಂದ 8-10 ಕಿಲೋಮೀಟರ್ ದೂರದಲ್ಲಿರುವ ದೊಡ್ಡಾಣೆಯ ಮುರುಗನ್ ಕಾಡಿನಿಂದ ಕಟ್ಟಿಗೆ ತಂದು, ಮಾರಿ ಜೀವನ ನಡೆಸುತ್ತಿದ್ದರು. ಮುರುಗನ್ ಸೌದೆಗೆಂದು ಕಾಡಿಗೆ ಹೋಗಿದ್ದಾಗ ಒಂಟಿಸಲಗವೊಂದರ ತುಳಿತದಿಂದ ಕಾಲನ್ನು ಕಳೆದುಕೊಂಡಾಗ ಆತನನ್ನು ವೀರಪ್ಪನ್ ಸಹಚರರು ರಕ್ಷಿಸಿದ್ದು ಮಾತ್ರವಲ್ಲದೇ ಶುಶೂಷೆ ಮಾಡಿ ಕೆಲದಿನಗಳ ನಂತರ ಅವನನ್ನು ಮನೆಗೆ ತಂದು ಬಿಟ್ಟರಲ್ಲದೇ ಅವರು ಕೊಟ್ಟ ಹಣದಿಂದ ಮುರುಗನ್ ಮಾರ್ಟಳ್ಳಿಯಲ್ಲಿ ಹೋಟೆಲ್ ನಡೆಸುತ್ತಿರುವುದು, ಅದರಿಂದಲೇ ತಾನು ವಿದ್ಯಾಭ್ಯಾಸ ಮುಂದುವರಿಸಿ ಈಗ ಮೈಸೂರಿನಲ್ಲಿ ಡಿ.ಎಡ್ ಮಾಡ್ತಾ ಇರೋದು, ಆ ಪುಣ್ಯಾತ್ಮ ಇಲ್ಲದಿದ್ದರೆ ನಾನು ಅಪ್ಪನನ್ನ ಕಳೆದುಕೊಂಡು ತಬ್ಬಲಿ ಆಗ್ತಿದ್ದೆ ಅಂತ ಮಾಲತಿ ಬಿಕ್ಕಿಬಿಕ್ಕಿ ಅತ್ತಳು. ಇವರಿಬ್ಬರಿಗೂ ಏನೂ ಹೇಳೋಕೆ ತೋಚದ ನಾನು ಮೌನವಾಗಿ ನನ್ನ ರೂಮಿಗೆ ವಾಪಸ್ಸಾದೆ.
ವೀರಪ್ಪನ್‌ನಂತಹ ಒಬ್ಬ ಸಮಾಜಘಾತುಕ ವ್ಯಕ್ತಿ ತನ್ನ ಕಾರ್ಯವನ್ನು ಸಾಧಿಸಲು ಅಮಾಯಕ ಜನರನ್ನು ಬಳಸಿಕೊಂಡಿದ್ದನೆಂಬುದರಲ್ಲಿ ಎರಡು ಮಾತಿಲ್ಲ. ಜನರನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವನು ಪುಣ್ಯಾತ್ಮನಾಗಲಾದೀತೇ? ಆತನಿಗೆ ಮನುಷ್ಯತ್ವದ ನೆರಳಿದ್ದಿದ್ದರೆ ಬಹುಶಃ ಡಾ.ರಾಜ್‌ಕುಮಾರ್ ಅಪಹರಣವಾಗಲೀ, ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ನಾಗಪ್ಪರವರ ಹತ್ಯೆಯಾಗಲೀ ನಡೆಯುತ್ತಿರಲಿಲ್ಲ. ಇಂತಹ ಕ್ರೂರವ್ಯಕ್ತಿಯ ಸಾವು ಉಚಿತವಾದುದು ಎಂದೂ ಅನ್ನುತ್ತಿತ್ತು ಮನಸ್ಸು.
shubhamangalamahesh@gmail.com
ಬೆಂಗಳೂರು : ರಾಜ್ಯದಲ್ಲಿ 76ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ…
ಶಿವಪುರ, ನಾಚನಹಳ್ಳಿಪಾಳ್ಯ, ರೈಲ್ವೆ ವರ್ಕ್‌ಶಾಪ್ ನಿಲುಗಡೆ ತಾಣದಲ್ಲಿ ನಿಲ್ಲದ ಬಸ್‌ಗಳು ಕೈ ಸಂಜ್ಞೆಗೂ ಕ್ಯಾರೇ ಎನ್ನದ ಡ್ರೈವರ್‌ಗಳು; ಮಹಿಳೆಯರು, ವಯೋವೃದ್ಧರು,…
ಕಷ್ಟ-ಸುಖಗಳಿಗೆ ಸ್ಪಂದಿಸುವ ಮನಃಸ್ಥಿತಿ ಕಳೆದುಕೊಂಡ ಜನತೆ ಕೈಯಲ್ಲಿ ಹಿಡಿದಿದ್ದ ದಿನ ಪತ್ರಿಕೆಯ ಮೇಲೆ ಕಣ್ಣು ನೆಟ್ಟಿದ್ದ ಚಿದಾನಂದ ಇದ್ದಕ್ಕಿದ್ದಂತೆ 'ಥೋ'…
ಕಳೆದ ಗುರುವಾರ ಆರಂಭವಾದ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಯಥಾವತ್ತು ಓದುವುದಕ್ಕೆ ರಾಜ್ಯಪಾಲರು ನಿರಾಕರಿಸಿದ್ದಲ್ಲದೆ, ತಾವೇ…
ಜಾಗೃತಿ ಕಾರ್ಯಕ್ರಮಗಳು ಮತ್ತಷ್ಟು ಪರಿಣಾಮಕಾರಿ ಆಗಲಿ ಡಾ.ಡಿ.ಜೆ.ಶಶಿಕುಮಾರ್ ದೇಶದ ಐಕ್ಯತೆ, ಭದ್ರತೆ ಮತ್ತು ಪ್ರಗತಿಗೆ ಕಾರಣವಾಗಿರುವ ಭಾರತದ ಸಂವಿಧಾನ ರಚನೆಯಾಗಿ…
ಹೊಸದಿಲ್ಲಿ : ಇಲ್ಲಿನ ಕೆಂಪುಕೋಟೆಯಲ್ಲಿ ಇಂದು ನಡೆಯುವ ಗಣರಾಜ್ಯೋತ್ಸವಕ್ಕೆ ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯ ಇಬ್ಬರು ಮಹಿಳೆಯರು ವಿಶೇಷ ಆಹ್ವಾನಿತರಾಗಿ ಆಯ್ಕೆಯಾಗಿದ್ದಾರೆ.…