ಈ ಕಾಲನೆಂಬುವ ಪ್ರಾಣಿ
ಕೈಗೆ ಸಿಕ್ಕಿದ್ದರೆ ಚೆನ್ನಾಗಿ ಥಳಿಸಬೇಕೆಂದಿದ್ದೆ.
ಎಲ್ಲೋ ತಲೆ ಮರೆಸಿಕೊಂಡು ಓಡಾಡುತ್ತಿದ್ದಾನೆ.
ಆಕಾಶದಲಿ ಮಿಂಚಿ
ಭೂಕಂಪದಲಿ ಗದ ಗದ ನಡುಗಿ
ಜ್ವಾಲಾಮುಖಿಯೊಳಗೆ ಸಿಡಿದು ನುಚ್ಚು ನೂರಾಗಿ
ನದ ನದಿಯ ಗರ್ಭವ ಹೊಕ್ಕು
ಮಹಾಪೂರದಲಿ ಹೊರಬಂದು
ನಮ್ಮೆದೆಯಲ್ಲಿ ತುಡಿವ ತಬಲ ವಾಗಿದ್ದಾನೆ,
ಹಿಡಿಯಿರೋ ಅವನ…
ಕಾಲ ನಿಲ್ಲುವುದಿಲ್ಲ
-ಚೆನ್ನವೀರ ಕಣವಿ
ನಮ್ಮ ಭೂಮಿ, ತನ್ನ ಅಕ್ಷದ ಮೇಲೆ ತಾನೂ ಸುತ್ತಿಕೊಂಡು, ಸುತ್ತಿಕೊಂಡು ಸೂರ್ಯನ ಸುತ್ತ ಮತ್ತೊಂದು ಸುತ್ತು ಸುತ್ತಿ ಬರುತ್ತಿದೆ. ಭೂಮಿ ಅನ್ನುವುದೇನೂ ಸಣ್ಣ ಪದಾರ್ಥವಲ್ಲ, ಸುಮಾರು ಎಂಟು ಸಾವಿರ ಮೈಲಿಗಳಷ್ಟು ದಪ್ಪ, ಇಪ್ಪತ್ತೈದು ಸಾವಿರ ಮೈಲಿಗಳಷ್ಟು ಸುತ್ತಳತೆ ಇರುವ ಈ ನಮ್ಮ ಭೂಮಿ ಯಾವ ಆಧಾರವೂ ಇಲ್ಲದೆ ಶೂನ್ಯದಲ್ಲಿ ತನ್ನ ಸುತ್ತ ತಾನೇ ತಿರುಗುತ್ತಲೇ ಸೂರ್ಯನ ಸುತ್ತ ಒಂದು ಅಂಡಾಕಾರದ ಕಕ್ಷೆಯಲ್ಲಿ ಸುತ್ತಿಬರುತ್ತದೆ. ಇದಕ್ಕೆ ತಗಲುವ ಕಾಲಾವಽ ಮುನ್ನೂರ ಅರವತ್ತೈದೂ ಕಾಲು ದಿನ. ಅದು ನಮ್ಮ ಒಂದು ವರ್ಷ. ಈ ಒಂದು ವರ್ಷದಲ್ಲಿ ಭೂಮಿ ಸುತ್ತಿದ ದೂರ ಎಷ್ಟು ಗೊತ್ತೆ? ೫೮.೪ ಕೋಟಿ ಮೈಲಿಗಳು!!
ಅಲೆಲೆಲೆಲೆಲೆಲೆ…!! ಸಾಕು ಬಿಡಿ, ಇನ್ನೂ ಲೆಕ್ಕ ಹಾಕುತ್ತಾ ಹೋಗಿ ನಮ್ಮ ತಲೆ ಸಿಡಿದು ಹೋದರೆ ಯಾರು ಜವಾಬ್ದಾರಿ? ಸ್ವಲ್ಪ ಕಷ್ಟವಾದರೂ ಇಷ್ಟನ್ನು ಕಲ್ಪಿಸಿಕೊಳ್ಳಿ -ಈ ನಮ್ಮ ಭೂಮಿ ಹಗುರ ತೂಕದ ಒಂದು ಖಾಲಿ ಚೆಂಡಲ್ಲ. ಇಷ್ಟೊಂದು ಕೋಟಿ ಮೈಲಿ ಸುತ್ತಿಬರುವ ಭೂಮಿ ಎಷ್ಟು ಜೋಪಾನ ತಿರುಗಬೇಕು? ತನ್ನ ಮೈ ಮೇಲಿನ ಹೊಳೆ ನದಿ ಜಲಪಾತ ಸಮುದ್ರಗಳ ಜಲರಾಶಿ ತುಳುಕದಂತೆ ನೋಡಿಕೊಳ್ಳಬೇಕು, ಕಾಡು, ಕಣಿವೆ, ಬೆಟ್ಟಗಳು ಕಡಲದಂತೆ ನೋಡಿಕೊಳ್ಳಬೇಕು. ಜೊತೆಗೆ ತನ್ನ ಮೇಲಿರುವ ಎಂಟುನೂರು ಕೋಟಿ ಜನ, ಅವರು ಕಟ್ಟಿದ ಮನೆ, ಮಠ, ಗುಡಿ ಚರ್ಚು ಮಸೀದಿ, ಕಾರು ರೈಲು ಬಸ್ಸು ವಿಮಾನಗಳು ಜೊತೆಗೆ ಈ ಮನುಷ್ಯರು ಮಾಡಿದ ಪಾಪ ಪುಣ್ಯ, ವಿವೇಕ ಅವಿವೇಕ, ಇವರೇ ಸೃಷ್ಟಿಸಿದ ಬುಲೆಟ್ಸು, ಬಾಂಬ್ಸು, ಭಗವ ದ್ಗೀತೆ, ಬೈಬಲ್, ಖುರಾನ್, ಎಲ್ಲವನ್ನೂ ಹೊತ್ತು ತಿರುಗಬೇಕು. ಜೊತೆಗೆ ಈ ಭೂಮಿಗೆ ಮನುಷ್ಯನೊಬ್ಬನೇ ದೊಣೆ ನಾಯ್ಕ? ಇನ್ನಿತರ ಜೀವಿಗಳಿಲ್ಲವೇ? ಅವುಗಳನ್ನೂ ಹೊತ್ತೊಯ್ಯಬೇಕು. ಅಹಹಹಹಹಾ! ಸುಮ್ಮನೆ ಹೊಗಳಿದರೇ, ನಮ್ಮ ಭೂಮಿಯನ್ನು ಧಾರಿಣಿ ಅಂತ??!!
ಆಯ್ತು. ಈ ಭೂಮಿಗೆ ಸೂರ್ಯನ ಸುತ್ತ ಇದೆಷ್ಟನೇ ಸುತ್ತು? ಯಾರಿಗೆ ಗೊತ್ತು? ೨೦೨೪ ಸುತ್ತು ಸುತ್ತಿದ್ದು ಕ್ರಿಸ್ತ ಶಕೆಯ ಲೆಕ್ಕ. ಕ್ರಿಸ್ತ ಹುಟ್ಟುವುದಕ್ಕೆ ಮೊದಲೂ ಅದೆಷ್ಟೋ ಅಸಂಖ್ಯ ವರ್ಷ ಗರನೆ ಗರಗರನೆ ತಿರುಗಿದೀ ಧರಣಿ ತಾನೇ ನಮ್ಮ ಭೂಮಿ?
ಅಬ್ಬಾ!! ಇದನ್ನೆಲ್ಲಾ ಲೆಕ್ಕಾಚಾರ ಹಾಕುವುದು, ಕಲ್ಪಿಸಿಕೊಳ್ಳುವುದು ವರ್ಷಕ್ಕೊಂದು ಕ್ಯಾಲೆಂಡರು ಬದಲಿಸುವಷ್ಟು ಸುಲಭವಲ್ಲ, ಮೂವತ್ತೊಂದರ ರಾತ್ರಿ ಬಾರುಗಳಲ್ಲಿ ಎಣ್ಣೆ ಹುಯ್ದುಕೊಂಡು ಬೀದಿಬೀದಿಗಳಲ್ಲಿ ಚಿಯೇರ್ಸ್! ಹ್ಯಾಪ್ಪಿ ನ್ಯೂ ಇಯರ್.. ಅಂತ ಕಿರುಚಾಡುವಷ್ಟು ರೋಮಾಂಚಕವೂ ಅಲ್ಲ! ಆತ್ಮೀಯರೇ,
ಈ ಕಾಲ ಅನಾದಿ, ಅನಂತ, ಇದರ ಆರಂಭದ ಬಿಂದು ಯಾವುದು? ಅಂತ್ಯ ಎಲ್ಲಿ? ಎಂಬುದು ನಮಗೆ ಗೊತ್ತಿಲ್ಲ ಅಂತ ನಮಗೂ ಗೊತ್ತು, ನಿಮಗೂ ಗೊತ್ತು. ಆದರೆ ಈ ಭೂಮಿಯ ಮೇಲೆ ಜೀವ ತಳೆದು ಬಂದ ನಾವು, ಇಷ್ಟೆಲ್ಲಾ ಸುಖಭೋಗ ಅಽಕಾರ, ಅಹಂಕಾರ ಎಲ್ಲವನ್ನೂ ಅನುಭವಿಸಿದೆವಲ್ಲ, ಸೃಷ್ಟಿ ವಿಕಾಸದಲ್ಲಿ ನಾವೇ ಹೆಚ್ಚು ಎಂದು ಕೊಚ್ಚಿಕೊಂಡೆವಲ್ಲ, ಈ ಭೂಮಿ ಯನ್ನು, ಸುಸಂಬದ್ಧವಾಗಿ, ಶಾಂತವಾಗಿ, ಜೋಪಾನವಾಗಿ ಕಾಪಿಟ್ಟುಕೊಂಡು ಮುಂದೆ ಬರುವವರಿಗೆ ಬಿಟ್ಟು ಹೋಗಬೇಕೆಂಬ ಜವಾಬ್ದಾರಿಯನ್ನು ಮರೆತು ಬಿಟ್ಟೆವಲ್ಲ, ಅನಿಸುವುದಿಲ್ಲವೇ? ನಮ್ಮ ದೌಷ್ಟ , ದುರಾಸೆಗಳಿಂದ ಒಬ್ಬರೊಬ್ಬರನ್ನು ಕೊಂದುಕೊಂಡು ರಕ್ತದ ರಾಡಿ ಮಾಡಿದೆವಲ್ಲ, ಸರಿಯಾ? ನಮ್ಮ ಧರ್ಮವನ್ನು ಉಳಿಸಿಕೊಳ್ಳಲು ಕೊಲ್ಲುತ್ತೇವೆ ಎಂಬವರನ್ನು ಕುರಿತು ತೇಜಸ್ವಿ ಏನು ಹೇಳಿದ್ದರು ಗೊತ್ತಾ?: ‘ಅಲ್ರೀ, ಒಬ್ಬರೊಬ್ಬರನ್ನು ಕೊಂದು ಉಳಿಸಿ ಕೊಳ್ಳಬೇಕಾದ ಧರ್ಮ ಅದ್ಯಾವ ಧರ್ಮಾರೀ?’
ಸಂಸ್ಕ ತಿ ಅಂದರೇನು ಅನ್ನುವುದಕ್ಕೆ ಚಿಂತಕ ಮ್ಯಾಥ್ಯೂ ಅರ್ನಾಲ್ಡ್ ಎಷ್ಟು ಚಂದ ಹೇಳಿದ್ದಾನೆ ಗೊತ್ತಾ? The noble aspiration to leave the world, better and happier than we found it ’ ಹಾಗಂದರೆ ‘ನಾವು ಈ ಜಗತ್ತಿಗೆ ಬಂದಾಗ ಈ ಜಗತ್ತು ಹೇಗಿತ್ತೋ, ನಾವು ಹೋಗುವಾಗ ಅದಕ್ಕಿಂತಲೂ ಚಂದವಾಗಿ, ಆನಂದವಾಗಿರುವಂತೆ ಬಿಟ್ಟು ಹೋಗಬೇಕೆಂಬ ಉನ್ನತವಾದ ಆಕಾಂಕ್ಷೆಯೇ ಸಂಸ್ಕ ತಿ’ ಎಷ್ಟು ಚಂದದ ಮಾತಲ್ಲವೇ? ಆದರೆ ನಾವೆಷ್ಟು ಸಂಸ್ಕ ತಿಯುಳ್ಳವರು? ಈ ಜಗತ್ತಿನ ಮಾತು ಹಾಗಿರಲಿ, ನಮ್ಮ ಮನೆ, ನಮ್ಮ ಊರು, ನಮ್ಮ ರಾಜ್ಯ ನಮ್ಮ ದೇಶ ನಾವು ಬಂದಾಗ ಹೇಗಿತ್ತೋ ಅದಕ್ಕಿಂತ ಉತ್ತಮ ಸ್ಥಿತಿಯಲ್ಲಿ ನಮ್ಮ ಮುಂದಿನವರ ಕೈ ಸೇರುವಂತೆ ನಾವು ನಡೆದುಕೊಳ್ಳುತ್ತಿದ್ದೇವಾ? ‘ಹಿಂದೆಯೇ ಎಲ್ಲ ಚೆನ್ನಾಗಿತ್ತು, ಬರ್ತಾ ಬರ್ತಾ ಕಾಲ ಕೆಟ್ಟು ಹೊಯ್ತು’ ಅಂತಲೇ ಎಲ್ಲರೂ ಮಾತಾಡುತ್ತಾರಲ್ಲ, ಹೀಗಾಗಬೇಕಿತ್ತೆ ಇದು?
ಹಾಗೆ ನೋಡಿದರೆ ಕಾಲ ಎಲ್ಲಿ ಕೆಟ್ಟು ಹೋಗುತ್ತೆ ಹೇಳಿ. ನಿಜವಾಗಿ ಕಾಲ ನಿರ್ಗುಣವಾದದ್ದು. ಕಾಲವನ್ನು ಒಳ್ಳೆಯದು ಕೆಟ್ಟದ್ದು ಅಂತ ಮಾಡುವವರೆಲ್ಲ ಮನುಷ್ಯರೇ. ನಮಗೆ ಒಳ್ಳೆಯದಾದಾಗ ಕಾಲ ಒಳ್ಳೆಯದು ಅನ್ನುತ್ತೇವೆ, ಕೆಟ್ಟದ್ದಾದಾಗ ಕೆಟ್ಟದ್ದು ಅನ್ನುತ್ತೇವೆ. ಒಳ್ಳೆಯ ಕಾಲ, ಕೆಟ್ಟ ಕಾಲ ಎಂದು ನಾವು ಹೆಸರಿಸುತ್ತೇವಲ್ಲ, ಒಳ್ಳೆಯ ಕಾಲದಲ್ಲಿ ಕೆಟ್ಟದ್ದು, ಕೆಟ್ಟ ಕಾಲದಲ್ಲಿ ಒಳ್ಳೆಯದು ಅನ್ನುವುದು ಬೇಕಾದಷ್ಟು ಘಟಿಸುವುದಿಲ್ಲವೇ?
ಪ್ರಪಂಚವನ್ನೆಲ್ಲಾ ವ್ಯಾಪಿಸಿಕೊಂಡು ಅಲೆಯಾಡುವ ಸಮುದ್ರಕ್ಕೆ ನಮ್ಮ ಊರಿನ ಬಳಿ ನಾವೊಂದು ಹೆಸರಿಟ್ಟುಕೊಳ್ಳುವುದಿಲ್ಲವೇ, ಹಾಗೆ ಕಾಲಕ್ಕೆ ಇದುಆರಂಭದ ದಿನ ಎಂದು ನಾವು ಹೆಸರಿಟ್ಟುಕೊಳ್ಳುತ್ತೇವೆ ಅಷ್ಟೇ. ಮೊದಲೇ ಹೇಳಿದೆನಲ್ಲ, ನಿರಂತರ ಹರಿಯುವ ಕಾಲಕ್ಕೆ ಮೊದಲಾವುದು, ಕೊನೆಯಾವುದು? ಆದರೂ ನಮ್ಮ ಗ್ರಹಿಕೆಗೆ ಅಂತ ಒಂದು ಆರಂಭ ಅಂತ ಇಟ್ಟುಕೊಳ್ಳುವುದನ್ನು ನಾವು ಆಕ್ಷೇಪಿಸಬೇಕಿಲ್ಲ. ಆದರೆ ಆರಂಭ ಅಂತ ನಾವು ಗುರುತಿಸಿಕೊಂಡ ದಿನದಿಂದ ನಾವು ಇನ್ನಷ್ಟು ಉತ್ತಮರಾಗುವುದಕ್ಕೆ ಯೋಚಿಸೋಣ. ಹೊಸ ವರ್ಷಕ್ಕೆ ಹೊಸ ಸಂಕಲ್ಪಗಳನ್ನು ಮಾಡಿಕೊಳ್ಳುವುದು ಜಗತ್ತಿನಲ್ಲೆಲ್ಲಾ ರೂಢಿಯಲ್ಲಿದೆ. ಈ ಹೊತ್ತಿನಲ್ಲಿ ನಾವೂ ಭೂಮಿಪರವಾದ, ಜೀವಪರವಾದ, ಸಂಕಲ್ಪಗಳನ್ನು ಮಾಡಿಕೊಳ್ಳೋಣ. ಸಣ್ಣ ಸಣ್ಣ ವಿಷಯಗಳಿಗೆಲ್ಲಾ ಕೆರಳುವುದು, ಯಾರಿಗೋ ತಲೆಯನ್ನು ಒಪ್ಪಿಸಿ ಕಿರೀಟ ಕೊಂಡುಕೊಳ್ಳುವುದು, ಮನಸ್ಸನ್ನು ರಾಡಿ ಮಾಡಿಕೊಳ್ಳುವುದು ನಮ್ಮನ್ನು ಹೊತ್ತು ತಿರುಗುವ ಭೂಮಿಯ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಅರಿತುಕೊಳ್ಳೋಣ. ತಂದೆ ತಾಯಿಗಳಿಗೆ ಒಳ್ಳೆಯ ಮಗ/ಳು, ಸಮಾಜಕ್ಕೆ ಒಳ್ಳೆಯ ಮನುಷ್ಯ, ದೇಶಕ್ಕೆ ಒಳ್ಳೆಯ ಪ್ರಜೆ ಅನ್ನಿಸಿಕೊಳ್ಳುವುದು ಯಾವ ಸಂಕಲ್ಪದಿಂದ ಸಾಧ್ಯವಾಗುತ್ತದೆಯೋ ಅದು ಹೊಸ ವರ್ಷದ ಒಳ್ಳೆಯ ಸಂಕಲ್ಪ.
ಎಲ್ಲವೂ ಒಳ್ಳೆಯದಾಗಲಿ. ಹೊಸ ವರ್ಷದ ಶುಭಾಶಯಗಳು.
ಪ್ರೊ.ಎಂ.ಕೃಷ್ಣೇಗೌಡ, ಮೈಸೂರು
ಮೈಸೂರು : ನಗರದ ಹೃದಯ ಭಾಗವಾದ ಕೆ.ಆರ್.ವೃತ್ತದಲ್ಲಿ ಗಂಧದಗುಡಿ ಫೌಂಡೇಶನ್ ಮತ್ತು ನಗರ ಸಂಚಾರ ಪೊಲೀಸ್ ಸಂಯುಕ್ತಾಶ್ರಯದಲ್ಲಿ ಸಂಕ್ರಾಂತಿ ಹಬ್ಬದ…
ಬೆಂಗಳೂರು : ಬ್ಯಾನರ್ ಅಳವಡಿಕೆ ಸಂಬಂಧಪಟ್ಟ ಬಳ್ಳಾರಿಯಲ್ಲಿ ನಡೆದ ಗಲಭೆ ಖಂಡಿಸಿ ಪಾದಯಾತ್ರೆ ನಡೆಸುವ ವಿಷಯದಲ್ಲಿ ಬಿಜೆಪಿಯೊಳಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.…
ಮೈಸೂರು: ವರ್ಕ್ ಫ್ರಂ ಹೋಂ ಕೆಲಸಕ್ಕೆ ಸೇರಿದ ಮಹಿಳೆ ನಂತರ ನಕಲಿ ಕಂಪೆನಿಯವರ ಮಾತನ್ನು ಕೇಳಿ ಷೇರು ಮಾರುಕಟ್ಟೆಯಲ್ಲಿ ಹಣ…
ಮೈಸೂರು : ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೆಳವಾಡಿ ಹಾಗೂ ಕಡಕೊಳ ಬಳಿ ನಡೆದಿದೆ. ಮೊದಲನೇ…
ಮೈಸೂರು : ವರ್ಷದ ಮೊದಲ ಹಬ್ಬ ಸುಗ್ಗಿ ಸಂಕ್ರಾತಿ ಹಿನ್ನೆಲೆ ನಗರದಲ್ಲಿ ಸಂಭ್ರಮ ಮನೆ ಮಾಡಿದ್ದು, ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ…
ಹನೂರು : ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ರೈತನೋರ್ವ ಗಂಭೀರವಾಗಿ ಕೈಗೊಂಡಿರುವ…