ಅಂಕಣಗಳು

ಗ್ರೇಟರ್ ಬೆಂಗಳೂರು ಯಾವ ಪುರುಷಾರ್ಥಕ್ಕಾಗಿ?

ಸಾಮಾನ್ಯ ಆರ್ಥಿಕ ಪರಿಭಾಷೆಯಲ್ಲಿ ‘ಅಭಿವೃದ್ಧಿ ಅಥವಾ ಪ್ರಗತಿ’ ಎಂಬ ಕಲ್ಪನೆಯನ್ನು ಇಡೀ ಸಮಾಜದ ಸಮಾನ ಮುನ್ನಡೆ, ಸಮತೋಲಿತ ಬೆಳವಣಿಗೆ ಮತ್ತು ಸಮಾಜದ ಸಮಸ್ತ ಸದಸ್ಯರನ್ನೂ ಒಳಗೊಂಡಂತಹ ಸಾಮಾಜಿಕ ಮೇಲ್ ಚಲನೆ-ಆರ್ಥಿಕ ಸಬಲೀಕರಣದ ನೆಲೆಯಲ್ಲಿ ನಿರ್ವಚಿಸಲಾಗುತ್ತದೆ. ಆದರೆ ೧೯೮೦ರ ನಂತರ ಭಾರತ ಜಾಗತೀಕರಣಕ್ಕೆ ತೆರೆದುಕೊಂಡು, ೧೯೯೦ರ ಮುಕ್ತ ಮಾರುಕಟ್ಟೆ-ನವ ಉದಾರವಾದಕ್ಕೆ ಒಡ್ಡಿಕೊಂಡ ನಂತರ, ಭಾರತದ ಆಳುವ ವರ್ಗಗಳು ಪಕ್ಷಾತೀತವಾಗಿ, ಈ ಸೂಕ್ಷ್ಮಗಳನ್ನು ಪರಿಗಣಿಸಲು ನಿರಾಕರಿಸುತ್ತಲೇ ಬಂದಿವೆ.

ಭಿನ್ನ ಸಿದ್ಧಾಂತಗಳ ಸರ್ಕಾರಗಳು ಎಲ್ಲಿಯಾದರೂ ಸಮಾನ ನೆಲೆ ಕಾಣುವುದೇ ಆದರೆ ಈ ಆರ್ಥಿಕ ಚಿಂತನೆಗಳಲ್ಲಿ ಮತ್ತು ಇದರ ಭಾಗವಾಗಿ ೧೯೭೦ರ ದಶಕದಿಂದಲೇ ದೇಶದಲ್ಲಿ ಅನುಸರಿಸಲಾಗುತ್ತಿರುವ ನಗರೀಕರಣ-ನಗರ ವಿಸ್ತರಣೆಯ ಆಡಳಿತ ನೀತಿಗಳಲ್ಲಿ ಕಾಣಬಹುದು. ಈ ಚಿಂತನಾ ಕ್ರಮವೇ ಭಾರತದ ನಗರೀಕರಣ ಮತ್ತು ನಗರ ವಿಸ್ತೀರ್ಣದ ಆಲೋಚನೆಗಳನ್ನು ಪ್ರಧಾನವಾಗಿ ಆವರಿಸಿಕೊಂಡಿದ್ದು, ಪಕ್ಷಾತೀತವಾಗಿ ಅಮರಿಕೊಂಡಿದೆ. ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬೆಂಗಳೂರು ನಗರವನ್ನು Greater Bangalore ಅಥವಾ ಬೃಹತ್ ಬೆಂಗಳೂರು ಮಾಡುವ ಯೋಜನೆಗೆ ಚಾಲನೆ ನೀಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂದು ಮರುನಾಮಕರಣ ಮಾಡಿ ಈ ಯೋಜನೆಯಡಿ ಬೆಂಗಳೂರನ್ನು ಐದು ಪಾಲಿಕೆಗಳನ್ನಾಗಿ ವಿಂಗಡಿಸುವ ಬೃಹತ್ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಘೋಷಿಸಿದೆ. ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರಿಗೆ ಪೂರಕವಾದ ಐದು ನಗರ ಪಾಲಿಕೆಗಳಾಗಿ ವಿಂಗಡಿಸಲು ಯೋಜನೆ ಮೂಲ ಕಾರಣವಾಗಿದೆ. ಈ ಬೃಹನ್ನಗರಿಯ ಪರಿಕಲ್ಪನೆಯ ಮೂಲವನ್ನು ೧೯೬೦-೭೦ರ ದಶಕದ ಬೃಹನ್ ಮುಂಬೈ ಯೋಜನೆಯಲ್ಲಿ ಕಾಣಬಹುದು.ಗ್ರೇಟರ್ ಬೆಂಗಳೂರು ನಗರವನ್ನು ಒಂದು ರಿಯಲ್ ಎಸ್ಟೇಟ್ ಹಬ್ ಮಾಡುವ, ಡಿಜಿಟಲ್ ಬಂಡವಾಳದ ಸಂಸ್ಥಾನವನ್ನಾಗಿಸುವ ಯೋಜನೆಯನ್ನು ಇಲ್ಲಿ ಗುರುತಿಸಬಹುದು. ನಗರೀಕರಣ ಮತ್ತು ನಗರ ವಿಸ್ತೀರ್ಣದ ಯೋಜನೆಗಳು ಈಗ ಸರ್ಕಾರದ ಅಂಗಳದಲ್ಲೇ ರೂಪುಗೊಂಡರೂ ಮೂಲತಃ ಅದರ ಆಕರಗಳು ಕಾರ್ಪೋರೇಟ್ ಔದ್ಯಮಿಕ ಜಗತ್ತಿನ ಪ್ರಭಾವಿ ಕೇಂದ್ರಗಳಲ್ಲಿರುತ್ತದೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬಹುಪಾಲು ಶಾಸಕರು ರಿಯಲ್ ಎಸ್ಟೇಟ್ ಮತ್ತು ಇತರ ಮೂಲಸೌಕರ್ಯಗಳ ಔದ್ಯಮಿಕ ಜಗತ್ತಿನಿಂದಲೇ ಬಂದಿರುವುದರಿಂದ, ಗ್ರೇಟರ್ ಬೆಂಗಳೂರು ಯೋಜನೆಯ ಫಲಾನುಭವಿಗಳೂ ಅವರೇ ಆಗಿರುತ್ತಾರೆ. ಇದು ಪಕ್ಷಾತೀತವಾದ ವಿದ್ಯಮಾನ. ಹಾಗಾಗಿ ಇಲ್ಲಿ ಸರ್ಕಾರದ ಕ್ಷಮತೆ ಎನ್ನುವುದಕ್ಕಿಂತಲೂ, ಜನಬದ್ಧತೆ ಅಥವಾ ಸಾಮಾಜಿಕ ಜವಾಬ್ದಾರಿ ನಗಣ್ಯವಾಗುತ್ತದೆ, ಔದ್ಯಮಿಕ ಹಿತಾಸಕ್ತಿ ಮೇಲುಗೈ ಸಾಧಿಸುತ್ತದೆ. ಹಳೆಯ ಸಾಂಸ್ಥಿಕ ರಚನೆಗಳನ್ನು ಕ್ರಮೇಣವಾಗಿ ಇಲ್ಲವಾಗಿಸುತ್ತಾ, ಮುಂದಿನ ದಿನಗಳಲ್ಲಿ, ಸಾಮಾನ್ಯ ಜನರ ಮನರಂಜನೆ ಮತ್ತು ಸಾಂತ್ವನದ ನೆಲೆಗಳಾದ ಉದ್ಯಾನಗಳನ್ನೂ ಕಾರ್ಪೋರೇಟ್ ಉದ್ದಿಮೆಗೆ ಒಪ್ಪಿಸುವ ಒಂದು ಮಾದರಿಯ ಪೂರ್ವ ಸೂಚನೆಯನ್ನು ಗ್ರೇಟರ್ ಬೆಂಗಳೂರು ಯೋಜನೆಯಲ್ಲಿ ಕಾಣಬಹುದು.

ಇದನ್ನು ಓದಿ:ಐಟಿಆರ್ ಸಲ್ಲಿಕೆಯಿಂದ ವಿನಾಯಿತಿ ಪಡೆಯುವುದು ಹೇಗೆ ?

ಸಂವಿಧಾನದ ತಿದ್ದುಪಡಿ ಕಾಯ್ದೆ ೧೯೯೨ ಮೂಲತಃ ಸ್ಥಳೀಯ ಸಂಸ್ಥೆಗಳಿಗೆ (Urban Local Bodies) ಸಾಂವಿಧಾನಿಕ ಸ್ಥಾನಮಾನ ಮತ್ತು ಅಧಿಕಾರವನ್ನು ಕಲ್ಪಿಸುವ ಘನ ಉದ್ದೇಶವನ್ನು ಹೊಂದಿದೆ. ಸ್ಥಳೀಯ ಸ್ವ ಸರ್ಕಾರವನ್ನು ( Self administered bodies) ಬಲಪಡಿಸುವ ಉದ್ದೇಶವನ್ನು ಹೊಂದಿತ್ತು. ಮೂಲತಃ ಪುರಸಭೆ ಮತ್ತು ನಗರ ಪಾಲಿಕೆಗಳನ್ನು ಅಧಿಕಾರ ವಿಕೇಂದ್ರೀಕರಣದ ಭಾಗವಾಗಿ ಪರಿಗಣಿಸಿ ಕಾಲಕಾಲಕ್ಕೆ ಚುನಾವಣೆಗಳನ್ನು ನಡೆಸುವ ಧ್ಯೇಯದೊಂದಿಗೆ ಈ ತಿದ್ದುಪಡಿ ತರಲಾಗಿತ್ತು. ಆದರೆ ಈ ಮೂರು ದಶಕಗಳಲ್ಲಿ ಭಾರತದ ಆರ್ಥಿಕ ಪಥ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದು, ಅಧಿಕಾರ, ಆದಾಯ, ತೆರಿಗೆ ಮತ್ತು ಸಂಪನ್ಮೂಲಗಳ ಕೇಂದ್ರೀಕರಣವೇ ೨೧ನೇ ಶತಮಾನದ ಆಡಳಿತ ಮಂತ್ರವಾಗಿದೆ.

ಇದರ ನೇರ ಪ್ರಾತ್ಯಕ್ಷಿಕೆಯನ್ನು ದೇಶಾದ್ಯಂತ ನಗರೀಕರಣ-ನಗರ ವಿಸ್ತೀರ್ಣ-ಮೂಲ ಸೌಕರ್ಯ ನಿರ್ಮಾಣ ಕ್ಷೇತ್ರಗಳಲ್ಲಿ ಗುರುತಿಸಬಹುದು.ಹೊಸ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಾಂಸ್ಥಿಕ ನಿರ್ವಹಣೆಯನ್ನು ಕುರಿತಂತೆ, ಈ ಬೃಹನ್ ನಗರಿ ಅಥವಾ ಆಧುನಿಕ ನಗರೀಕರಣದ ನಂತರ ಉಗಮಿಸಲಿರುವ ಸಾಂಸ್ಥಿಕ ಚೌಕಟ್ಟುಗಳು ಬಹುತೇಕವಾಗಿ ಕಾರ್ಪೋರೇಟ್ ಬಂಡವಾಳಶಾಹಿ ಅವಲಂಬಿತ, ರಾಜಕೀಯ ಅಧಿಕಾರ ಕೇಂದ್ರಗಳಲ್ಲೇ ಉಳಿಯುತ್ತವೆ. ಈಗಲೂ ಸಹ ಸರ್ಕಾರಗಳು ದೊಡ್ಡ ನಗರ ಪಾಲಿಕೆಗಳಿಗೆ ಅಧಿಕಾರಿಗಳ ನೇಮಕವನ್ನು ಪಕ್ಷನಿಷ್ಠೆಯ ನೆಲೆಯಲ್ಲೇ ಪರಿಗಣಿಸುತ್ತವೆ. ಚುನಾವಣೆಗಳು ಪ್ರಜಾಸತ್ತಾತ್ಮಕವಾಗಿ ನಡೆದರೂ, ಅಲ್ಲಿಯೂ ಕುದುರೆ ವ್ಯಾಪಾರ, ಪಕ್ಷಾಂತರ ಮತ್ತು ಬೇಲಿ ಹಾರುವ ಪ್ರತಿನಿಧಿಗಳೇ ಪ್ರಧಾನವಾಗಿ ಶಕ್ತಿಕೇಂದ್ರ ಗಳಾಗಿರುತ್ತಾರೆ.

ಈ ಹಿನ್ನೆಲೆಯಲ್ಲಿ ನೋಡಿದಾಗ, ತೆರಿಗೆ, ಹಣಕಾಸು, ಸಂಪನ್ಮೂಲಗಳ ಪ್ರಶ್ನೆ ಮುನ್ನಲೆಗೆ ಬರುತ್ತದೆ. ನಗರ ಪಾಲಿಕೆಗಳ ನಿರ್ವಹಣೆಗೆ ಅಗತ್ಯವಾದ ತೆರಿಗೆಯ ಹಣ ಮತ್ತು ಮೂಲ ಸಂಪನ್ಮೂಲಗಳ ವಿತರಣೆಗೆ ವೈಜ್ಞಾನಿಕ ನೆಲೆಯಲ್ಲಿ ನೀಲನಕ್ಷೆಯನ್ನು ಸಿದ್ದಪಡಿಸುವ ಒಂದು ಕ್ರಮ ನಮ್ಮಲ್ಲಿ ಈಗಲಾದರೂ ಇದೆಯೇ? ಬಹುಶಃ ಇದು ಲಾಭ ಹಂಚಿಕೆಯ ಪ್ರಕ್ರಿಯೆಯಾಗಿ ನಿಷ್ಕರ್ಷೆಯಾಗುವುದೇ ಹೊರತು, ಜನತೆಯ ಪ್ರಗತಿ ಮತ್ತು ಸಾಮಾಜಿಕ- ಆರ್ಥಿಕ ಅಭಿವೃದ್ಧಿಯ ಪ್ರಕ್ರಿಯೆಯಾಗಿರುವುದಿಲ್ಲ. ಪಂಚಾಯತ್ ವ್ಯವಸ್ಥೆಯನ್ನು ಅಳವಡಿಸಿ ಮೂರು ದಶಕಗಳೇ ಮೀರಿದ್ದರೂ, ಇಂದಿಗೂ ಸಹ ಜಿಲ್ಲಾ-ತಾಲ್ಲೂಕು-ಗ್ರಾಮ ಪಂಚಾಯತ್ ಸಂಸ್ಥೆಗಳಿಗೆ ಆರ್ಥಿಕ ಸ್ವಾಯತ್ತತೆ ನೀಡುವ ಯೋಚನೆಯನ್ನೂ ಮಾಡದಿರುವುದು, ಈ ವಿರಾಟ್ ಯೋಜನೆಯ (Grand Plan) ಸಂಕೇತವಾಗಿ ಕಾಣಬಹುದು.

ಇದನ್ನು ಓದಿ:ಸು ಫ್ರಂ ಸೋ, ಕನ್ನಡ ಒಟಿಟಿ, ವೆಬ್ ಸರಣಿ, ಹೊಸ ವಾಹಿನಿ ಮತ್ತು ಅತ್ತ.. 

ಈಗ ಗ್ರೇಟರ್ ಬೆಂಗಳೂರನ್ನು ಐದು ನಗರ ಪಾಲಿಕೆಗಳಾಗಿ ವಿಂಗಡಿಸುವುದು, ಸಂಪನ್ಮೂಲ ಅಥವಾ ಅಧಿಕಾರದ ವಿಕೇಂದ್ರೀಕರಣದ ಪ್ರಕ್ರಿಯೆ ಎಂಬ ಭ್ರಮೆ ಬಹುಶಃ ಅತಿ ಎನಿಸುತ್ತದೆ. ಇದು ಇನ್ನೂ ಹೆಚ್ಚಿನ ಕೇಂದ್ರೀಕರಣಕ್ಕೆ ಕಾರಣವಾಗುತ್ತದೆ. ರಾಜಕೀಯ ಪ್ರಭಾವದ ವಿಸ್ತರಣೆ, ಪ್ರಸರಣ ಮತ್ತು ಪಕ್ಷ ರಾಜಕಾರಣದ ಅಧಿಕಾರ ಶಕ್ತಿ ಕೇಂದ್ರಗಳ ಕೇಂದ್ರ ಬಿಂದುಗಳಾಗಿ ಈ ನವ ಪಾಲಿಕೆಗಳು ಕಾರ್ಯನಿರ್ವಹಿಸುವ ಸಾಧ್ಯತೆಗಳೇ ಹೆಚ್ಚು. ಇಲ್ಲಿಯೂ ರಾಜಕೀಯ ಪಕ್ಷಗಳು, ಕಾರ್ಪೋರೇಟ್ ಬಂಡವಾಳಶಾಹಿಯ ಒಡನಾಟದೊಂದಿಗೆ ನಗರಾಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತವೆ. ಭೌಗೋಳಿಕವಾಗಿ, ಸಾಂವಿಧಾನಿಕವಾಗಿ ವಿಂಗಡನೆಯಾಗುವ ಪಾಲಿಕೆಗಳಲ್ಲಿ ಅಧಿಕಾರ ರಾಜಕಾರಣದ ಶಕ್ತಿ ಕೇಂದ್ರಗಳು ಪ್ರಧಾನವಾಗಿ ಫಲಾನುಭವಿಗಳಾಗುತ್ತವೆ.

ಕೊನೆಯದಾಗಿ, ಈಗಿನ ಬೆಂಗಳೂರಿನ ಬಡಾವಣೆಯ ನಿವಾಸಿಗಳು ಎದುರಿಸುತ್ತಿರುವ ಮೂಲಸೌಕರ್ಯ ಸಮಸ್ಯೆಗಳು, ಒಳಚರಂಡಿ ಅವ್ಯವಸ್ಥೆ, ಜಲಮೂಲಗಳ ನಿರ್ವಹಣೆಯಲ್ಲಿರುವ ಕೊರತೆಗಳು ಇದಾವುದನ್ನೂ ಪರಿಹರಿಸುವ ಒಂದು ವೈಜ್ಞಾನಿಕ ಯೋಜನೆಯನ್ನು ಯಾವ ಸರ್ಕಾರಗಳೂ ರೂಪಿಸುವುದಿಲ್ಲ, ರೂಪಿಸಿಯೂ ಇಲ್ಲ. ಸ್ಥಳೀಯ ನಾಗರಿಕ ಸಂಸ್ಥೆಗಳು, ಹಿರಿಯ ನಾಗರಿಕರು, ಸಾಮಾಜಿಕ ಸಂಘಟನೆಗಳು ಹಾಗೂ ತಳಸಮಾಜದ ನಡುವೆ ನಿಂತು ಉತ್ತಮ ಸೌಕರ್ಯಗಳಿಗಾಗಿ ನಿರಂತರ ಹೋರಾಡುತ್ತಿರುವ ಹತ್ತು ಹಲವಾರು ಸಂಘಟನೆಗಳು ಈ ಯೋಜನೆಯ ಒಂದು ಭಾಗವಾಗಿ ಪರಿಗಣಿಸಲ್ಪಡುವುದೇ ಇಲ್ಲ. ಈ ಒಳಗೊಳ್ಳುವಿಕೆಯ (Inclusiveness) ಕೊರತೆಯೇ ನಮ್ಮ ನಗರಾಭಿವೃದ್ಧಿಯ ಯೋಜನೆಗಳನ್ನು ಭ್ರಷ್ಟರ ಕೂಪಗಳನ್ನಾಗಿ ಮಾಡಿವೆ. ಗ್ರೇಟರ್ ಬೆಂಗಳೂರು ಅಥವಾ ಬೃಹತ್ ಮೈಸೂರು ಈ ಯೋಜನೆಗಳೆಲ್ಲವೂ ಆಡಳಿತ ಭ್ರಷ್ಟಾಚಾರದ ವಿಕೇಂದ್ರೀಕರಣದ ಭಾಗವಾಗುವುದೇ ಹೊರತು, ಉತ್ತಮ ಜನಸೇವೆಯ ಕೇಂದ್ರವಾಗುವ ಸಾಧ್ಯತೆಗಳು ವಿರಳ.

” ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬಹುಪಾಲು ಶಾಸಕರು ರಿಯಲ್ ಎಸ್ಟೇಟ್ ಮತ್ತು ಇತರ ಮೂಲ ಸೌಕರ್ಯಗಳ ಔದ್ಯಮಿಕ ಜಗತ್ತಿನಿಂದಲೇ ಬಂದಿರುವುದರಿಂದ, ಗ್ರೇಟರ್ ಬೆಂಗಳೂರು ಯೋಜನೆಯ ಫಲಾನುಭವಿಗಳೂ ಅವರೇ ಆಗಿರುತ್ತಾರೆ. ಇದು ಪಕ್ಷಾತೀತವಾದ ವಿದ್ಯಮಾನ.”

-ನಾ.ದಿವಾಕರ 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮೈಸೂರಿನಲ್ಲಿ ಮಳೆ ನೀರು ಕೊಯ್ಲು ಥೀಮ್ ಪಾರ್ಕ್ ಕನ್ನಡಿಯೊಳಗಿನ ಗಂಟು

ಮೈಸೂರು ನಗರದಲ್ಲಿ ಮಳೆನೀರು ಕೊಯ್ಲು ಥೀಮ್ ಪಾರ್ಕ್ ಸ್ಥಾಪಿಸುವ ಹಿಂದಿನ ಹಾಗೂ ಈಗಿನ ಸರ್ಕಾರಗಳ ಭರವಸೆ ಇನ್ನೂ ಕನ್ನಡಿಯೊಳಗಿನ ಗಂಟಾಗಿಯೇ…

35 mins ago

ಓದುಗರ ಪತ್ರ: ಅಂಕೇಗೌಡರಿಗೆ ಸಿಕ್ಕ ಪದ್ಮಶ್ರೀ ಸಾರಸ್ವತ ಲೋಕಕ್ಕೆ ಸಂದ ಗೌರವ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ಪುಸ್ತಕ ಪ್ರೇಮಿ ೭೮ ವರ್ಷದ ಅಂಕೇಗೌಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಕನ್ನಡ…

37 mins ago

ಓದುಗರ ಪತ್ರ: ರಾಮಕೃಷ್ಣನಗರಕ್ಕೆ ಮತ್ತಷ್ಟು ಬಸ್ ಸೌಲಭ್ಯ ಕಲ್ಪಿಸಿ

ಮೈಸೂರಿನ ರಾಮಕೃಷ್ಣನಗರ ಮಾರ್ಗಕ್ಕೆ ಪ್ರತಿದಿನ ನಗರ ಸಾರಿಗೆ ಬಸ್ಸುಗಳು ಸಂಚರಿಸುತ್ತವೆ. ಆದರೆ ಈ ಮಾರ್ಗದಲ್ಲಿ ಓಡಾಡುವ ಬಸ್ಸುಗಳ ಸಂಖ್ಯೆ ಮಾತ್ರ…

40 mins ago

ವಿಜೃಂಭಣೆಯಿಂದ ನಡೆದ ಸಂತೆ ಮಾಸ್ತಮ್ಮನವರ ಜಾತ್ರೆ

ಸರಗೂರು: ಪಟ್ಟಣದಲ್ಲಿ ಗ್ರಾಮದೇವತೆ ಶ್ರೀ ಸಂತೆ ಮಾಸ್ತಮ್ಮನವರ ೩೧ನೇ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ಜಾತ್ರಾ…

42 mins ago

ಕಬಿನಿ ಹಿನ್ನೀರಿನ ರೆಸಾರ್ಟ್‌ಗಳ ದಾಖಲಾತಿ ಪರಿಶೀಲನೆ

ರೆಸಾರ್ಟ್‌ಗಳು, ಹೋಂಸ್ಟೇಗಳಿಗೆ ಅಕ್ರಮ ರೆಸಾರ್ಟ್‌ಗಳ ತನಿಖಾ ಸಮಿತಿಯವರ ದಿಢೀರ್ ಭೇಟಿ ಹೆಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಹಿನ್ನೀರಿನ ನಾಗರಹೊಳೆ ಮತ್ತು ಬಂಡೀಪುರ…

45 mins ago

ಬೀದಿ ನಾಯಿ ಪುನರ್ವಸತಿ ಕೇಂದ್ರ ಸ್ಥಾಪನೆಗೆ ವಿರೋಧ

ಕೆ.ಬಿ.ಶಂಶುದ್ಧೀನ್ ಗ್ರಾಮಕ್ಕೆ ಹುಲಿ, ಚಿರತೆಗಳು ಲಗ್ಗೆಯಿಡುವ ಆತಂಕ; ಹೋರಾಟದ ಎಚ್ಚರಿಕೆ ನೀಡಿದ ಹಕ್ಕೆ ಗ್ರಾಮಸ್ಥರು ಕುಶಾಲನಗರ: ಬೀದಿ ನಾಯಿಗಳ ಹಾವಳಿ…

49 mins ago