ರಾಜ್ಯಕ್ಕೂ ಪಶ್ಚಿಮ ಬಂಗಾಳದ ‘ಧರ್ಮಾಧಾರಿತ’ ರಾಜಕಾರಣ ಸೂತ್ರ

2024 ಲೋಕಸಭೆ  ಚುನಾವಣೆಯಲ್ಲಿ  ಆಡಳಿತ ವಿರೋಧಿ ಅಲೆ ಹೊಡೆತ ತಡೆದುಕೊಳ್ಳಲು ಉತ್ತರ ಪ್ರದೇಶ, ಕರ್ನಾಟಕ  ರಾಜ್ಯಗಳು ಬಿಜೆಪಿ  ಮುಖ್ಯ!  

ರಾಜ್ಯದಲ್ಲಿ ಧರ್ಮಾದಾರಿತ  ರಾಜಕಾರಣಕ್ಕೆ ಕೈ ಹಾಕಿದ ಬಿಜೆಪಿ ವರಿಷ್ಟರು ಈಗ ಅನಿವಾರ್ಯವಾಗಿ  ಪಶ್ಚಿಮ ಬಂಗಾಳದ ಸೂತ್ರವನ್ನು ಜಾರಿಗೊಳಿಸಲು ಹೊರಟಿದ್ದಾರೆ. ಯಡಿಯೂರಪ್ಪ ಅವರನ್ನು  ಸಿಎಂ ಹುದ್ದೆಯಿಂದ ಕೆಳಗಿಳಿಸಿದ ನಂತರ ಕರ್ನಾಟಕದಲ್ಲಿ ನಾಯಕತ್ವದ ಕೊರತೆ ಎದುರಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಅದು ಉಪಚುನಾವಣೆಯಿಂದ ಹಿಡಿದು ಇತ್ತೀಚಿನ ವಿದಾನಪರಿಷತ್ ಚುನಾವಣೆಯವರೆಗೆ ಇರಬಹುದು, ಒಟ್ಟಿನಲ್ಲಿ ಜನತಾ ನ್ಯಾಯಾಲಯದಲ್ಲಿ ಬಿಜೆಪಿ ಏಳ್ಗತಿ ಕಾಣುತ್ತಿಲ್ಲ.

ಯಾವಾಗ ಜಾತಿ ರಾಜಕಾರಣದ ಸೂತ್ರ ಹಿಡಿದ ನಾಯಕ ತೆರೆಯ ಹಿಂದೆ ಸರಿದರೋ?ಅದಾದ ನಂತರ ಇದು ಅನಿವಾರ್ಯ ಅಂತ ಬಿಜೆಪಿ ವರಿಷ್ಟರಿಗೂ ಗೊತ್ತು.

ಹೀಗಾಗಿ‌ ಕರ್ನಾಟಕದಲ್ಲಿ ಮರಳಿ ಅಧಿಕಾರ ಹಿಡಿಯಬೇಕು ಅಂದರೆ ಪಶ್ಚಿಮ ಬಂಗಾಳದ ಮಾಡೆಲ್ ಗೆ ಜೋತು ಬೀಳುವುದು ಅನಿವಾರ್ಯ ಎಂಬುದು ಅವರ ಲೆಕ್ಕಾಚಾರ. ಅಂದ ಹಾಗೆ ಪಶ್ಚಿಮ ಬಂಗಾಳಕ್ಕೂ,ಕರ್ನಾಟಕದ ರಾಜಕಾರಣಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಹಲವರು ಅಚ್ಚರಿಪಡಬಹುದು.ಆದರೆ ಬಿಜೆಪಿಗೆ ಪಶ್ಚಿಮ ಬಂಗಾಳ ಹೇಗೆ ಮುಖ್ಯವಾಗಿತ್ತೋ? ಅದೇ ರೀತಿ ಕರ್ನಾಟಕವೂ ಮುಖ್ಯ.

ಯಾಕೆಂದರೆ ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ದೊಡ್ಡ ಮಟ್ಟದ ಪೈಪೋಟಿ ನೀಡುತ್ತಿರುವುದು ತೃಣಮೂಲ ಕಾಂಗ್ರೆಸ್‌ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ. ಪಶ್ಚಿಮ ಬಂಗಾಳ ಹೇಳಿ ಕೇಳಿ ತುಂಬ ಸೂಕ್ಷ್ಮವಾದ ರಾಜ್ಯ ಬೇರೆ. ಇವತ್ತು ಅಸ್ತಿತ್ವದಲ್ಲಿರುವ ಬಾಂಗ್ಲಾದೇಶ ಒಂದು ಕಾಲದಲ್ಲಿ ಬಂಗಾಳದ ಭಾಗ. ಭಾರತ- ಪಾಕಿಸ್ತಾನದ ವಿಭಜನೆಯ ಕಾಲದಲ್ಲಿ ಬಂಗಾಳದ ಪೂರ್ವ ಭಾಗ ಬಾಂಗ್ಲಾದೇಶವಾಗಿ ಪ್ರತ್ಯೇಕಗೊಂಡರೆ, ಪಶ್ಚಿಮ ಭಾಗ ಭಾರತದಲ್ಲಿ ಉಳಿಯಿತು.

ಹೀಗೆ ಬಂಗಾಳ ಎರಡು ತುಂಡುಗಳಾಗಿ ಒಡೆದ ನಂತರವೂ ಅದು ಸೂಕ್ಷ್ಮ ರಾಜ್ಯವಾಗಿಯೇ ಉಳಿದಿದೆ. ಒಂದು ಕಾಲದಲ್ಲಿ ಕಮ್ಯೂನಿಸ್ಟರ ಆಳ್ವಿಕೆಯಲ್ಲಿದ್ದ ಪಶ್ಚಿಮ ಬಂಗಾಳವನ್ನು ಈಗ ತಮ್ಮ ಹಿಡಿತಕ್ಕೆ ತೆಗೆದುಕೊಂಡವರು ಮಮತಾ ಬ್ಯಾನರ್ಜಿ.

ಅವರು ಮುಸ್ಲಿಮರನ್ನು ಅತಿಯಾಗಿ ಓಲೈಸುತ್ತಾರೆ, ಹೀಗಾಗಿ ಒಂದಲ್ಲ ಒಂದು ದಿನ ಪಶ್ಚಿಮ ಬಂಗಾಳ ಗಂಭೀರ ಸಮಸ್ಯೆಯನ್ನು ಎದುರಿಸುವುದು ಅಸಹಜವಲ್ಲ ಎಂಬುದು ಬಿಜೆಪಿಯ ನಿಲುವು.

ದಶಕಗಳ ಕಾಲ ಆಳ್ವಿಕೆ ನಡೆಸಿದ ಕಮ್ಯೂನಿಸ್ಟರನ್ನು ಬಗ್ಗು ಬಡಿದು ಪ.ಬಂಗಾಳವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ಮಮತಾ ಬ್ಯಾನರ್ಜಿ ಎಲ್ಲಿಯವರೆಗೆ ಅಧಿಕಾರದಲ್ಲಿರುತ್ತಾರೋ? ಅವರು ಬಿಜೆಪಿಗೆ ಕಂಟಕವೇ ಎಂಬುದು ಬಿಜೆಪಿ ನಾಯಕರಲ್ಲಿ ಇರುವ ಆತಂಕ.

ಇದೇ ಕಾರಣಕ್ಕಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಶ್ಚಿಮ ಬಂಗಾಳದ ಮೇಲೆ ಯಾವ ಮಟ್ಟದ ಗಮನ ನೀಡಿತು ಎಂದರೆ ಪ್ರಧಾನಿ ನರೇಂದ್ರಮೋದಿ ಅವರ ಸಚಿವ ಸಂಪುಟದ ಬಹುತೇಕ ಸಚಿವರು ಪಶ್ಚಿಮ ಬಂಗಾಳಕ್ಕೆ ಹೋಗಿ ಬೀಡು ಬಿಟ್ಟಿದ್ದರು.

ಇಂತಹ ನಾಯಕರು ವಿವಿಧ ಸಮುದಾಯಗಳಿಗೆ ಸೇರಿದವರಾದ್ದರಿಂದ ತಮ್ಮ ತಮ್ಮ ಸಮುದಾಯದ ಮತಗಳನ್ನು ಕ್ರೋಢೀಕರಿಸಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಬಾವುಟ ಪಟಪಟಿಸುವಂತೆ ಮಾಡಲು ಬಯಸಿದ್ದರು.

ಅವರ ಈ ಪ್ರಯತ್ನ ಸಫಲವಾಗದೇ ಇರಬಹುದು.ಆದರೆ ಅದುವರೆಗೆ ಪಶ್ಚಿಮ ಬಂಗಾಳದಲ್ಲಿ ಒಂದು ಶಕ್ತಿಯಾಗಿ ನೆಲೆ ನಿಲ್ಲಲು ಪರದಾಡುತ್ತಿದ್ದ ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯ ನಂತರ ತೃಣಮೂಲ ಕಾಂಗ್ರೆಸ್‌ ಪಕ್ಷದ ಎದುರು ದೊಡ್ಡ ಮಟ್ಟದಲ್ಲಿ ಸೆಡ್ಡು ಹೊಡದು ನಿಂತುಕೊಂಡಿತು.

ಅದರ ಈ ಸಾಧನೆಯ ಪರಿಣಾಮವಾಗಿ ಪಶ್ಚಿಮ ಬಂಗಾಳದ ರಾಜಕೀಯ ಸ್ವರೂಪ ಬದಲಾಗಿದ್ದಲ್ಲದೆ, ಅದುವರೆಗೆ ಮಮತಾ ವಿರುದ್ಧ ಪ್ರಬಲ ಎದುರಾಳಿಗಳು ಎನ್ನಿಸಿಕೊಂಡಿದ್ದ ಕಮ್ಯೂನಿಸ್ಟರು ಕುಸಿದು ಹೋದರು.

ಅವರ ಶಕ್ತಿಯನ್ನು ಬಿಜೆಪಿ ಸ್ವೀಕರಿಸಿ ದೊಡ್ಡ ಮಟ್ಟದಲ್ಲಿ ನೆಲೆಯಾಯಿತು. ಈಗ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆಗಿರಬಹುದು. ಆದರೆ ತನ್ನ ಎದುರಾಳಿ ಬಿಜೆಪಿಯನ್ನು ನಿರ್ಲಕ್ಷಿಸುವ ಸ್ಥಿತಿಯಲ್ಲಂತೂ ಖಂಡಿತ ಇಲ್ಲ.

ಯಾವ ದೃಷ್ಟಿಯಿಂದ ನೋಡಿದರೂ ಬಿಜೆಪಿಯ ಈ ಸಾಧನೆ ದೊಡ್ಡದು. ಮತ್ತು ಇಂತಹ ಅದರ ಸಾಧನೆಗೆ ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರ ಬೀಡು ಬಿಟ್ಟಿದ್ದು ಬಹುಮುಖ್ಯ ಕಾರಣ.

ಈಗ ಕರ್ನಾಟಕದಲ್ಲೂ ಪಶ್ಚಿಮ ಬಂಗಾಳದ ಸೂತ್ರವನ್ನು ಅನುಸರಿಸಲು ಬಿಜೆಪಿ ವರಿಷ್ಟರು ನಿರ್ಧರಿಸಿರುವುದಕ್ಕೆ ಕೆಲ ಕಾರಣಗಳಿವೆ. ಬಹುಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿ ತಲೆ ಎತ್ತಲು ಅನುವು ಮಾಡಿಕೊಟ್ಟ ಮೊಟ್ಟ ಮೊದಲ ರಾಜ್ಯ ಕರ್ನಾಟಕ.

ದಕ್ಷಿಣ ಭಾರತದ ಯಾವ ರಾಜ್ಯಗಳಲ್ಲೂ ಬಿಜೆಪಿಗೆ ಕರ್ನಾಟಕದಂತಹ ಸುಭದ್ರ ನೆಲೆ ಇಲ್ಲ. ಇದಕ್ಕೆ ಯಡಿಯೂರಪ್ಪ ಎಂಬ ನಾಯಕ ಕಾರಣರಾದರೂ, ಅವರನ್ನೇ ನೆಚ್ಚಿಕೊಂಡು ಸುಧೀರ್ಘ ಕಾಲ ರಾಜಕೀಯ ಮಾಡಲು ಸಾಧ್ಯ ಇಲ್ಲವಲ್ಲ?

ಕಳೆದ ಜುಲೈ ತಿಂಗಳ ಅಂತ್ಯದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಮೇಲೆ ರಾಜ್ಯ ಬಿಜೆಪಿಯ ಜಾತಿ ಆಧಾರಿತ ಮತ ಬ್ಯಾಂಕ್‌ ರಾಜಕಾರಣ ಮಂಕಾಗಿದೆ.

ಇದು ಗೊತ್ತಿದ್ದುದರಿಂದಲೇ ಕರ್ನಾಟಕದಲ್ಲಿ ಧರ್ಮಾಧಾರಿತ ಮತ ಬ್ಯಾಂಕ್‌ ಅನ್ನುಕ್ರೋಢೀಕರಿಸುವ ಬಿಜೆಪಿಯ ಆಟ ಶುರುವಾಗಿರುವುದು. ಹೀಗೆ ಧರ್ಮಾಧಾರಿತ ರಾಜಕಾರಣವನ್ನು ಮುಂದುವರಿಸುವುದು ಬೇರೆ. ಆದರೆ ಅಷ್ಟರಿಂದಲೇ ಯಶಸ್ಸು ಪಡೆಯುವುದು ಸುಲಭ ಏನಲ್ಲ.  ಯಾಕೆಂದರೆ ಇವತ್ತಿಗೂ ಕರ್ನಾಟಕ ಜಾತಿ ಆಧಾರಿತ ಮತ ಬ್ಯಾಂಕ್‌ ಗಳ ಮೇಲೆ ನಿರ್ಧರಿತವಾಗುತ್ತದೆ. ಆದರೆ ಇದನ್ನು ಬದಲಿಸಬೇಕು ಎಂಬುದು ಬಿಜೆಪಿ ವರಿಷ್ಟರ ಲೆಕ್ಕಾಚಾರ.

ಹೀಗಾಗಿಯೇ ಅವರು ಹಿಂದೂ ಮತಗಳನ್ನು ಕ್ರೋಢೀಕರಿಸಲು ಹೊರಟಿರುವುದು. ಇಂತಹ ಕಾಲದಲ್ಲಿ ಪಶ್ಚಿಮ ಬಂಗಾಳದ ಸೂತ್ರವನ್ನು ಜಾರಿಗೊಳಿಸಿದರೆ ನಿಶ್ಚಿತವಾಗಿ ತಮಗೆ ಅನುಕೂಲವಾಗುತ್ತದೆ ಎಂಬುದು ಅವರ ಯೋಚನೆ.

ಅರ್ಥಾತ್‌,  ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ಸಂಪುಟದಲ್ಲಿರುವ ಹಲವು ಮಂತ್ರಿಗಳು ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಬಂದು ಬೀಡು ಬಿಡಲಿದ್ದಾರೆ. ಹಲವು ಜಾತಿ, ಧರ್ಮಗಳನ್ನು ಪ್ರತಿನಿಧಿಸುವ ಈ ಮಂತ್ರಿಗಳು ಪದೇ ಪದೇ ರಾಜ್ಯಕ್ಕೆ ಬಂದು ತಮ್ಮ ತಮ್ಮ ಸಮುದಾಯಗಳ ಮೇಲೆ ಪ್ರಭಾವ ಬೀರುವ ಕೆಲಸ ಮಾಡಲಿದ್ದಾರೆ.

ಅದು ಆಯಾ ಧರ್ಮಗಳ ಮಠಗಳಿರಬಹುದು, ಇನ್ನೇನೋ ಸಂಸ್ಥೆಗಳಿರಬಹುದು, ಅಥವಾ ಪ್ರಭಾವಿಗಳಿರಬಹುದು. ಅವರನ್ನು ವೈಯಕ್ತಿಕ ನೆಲೆಯಲ್ಲಿ ಓಲೈಸುವ ಕೆಲಸ ಮಾಡಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಟ ನೂರೈವತ್ತು ಸ್ಥಾನಗಳನ್ನು ಗಳಿಸಬಹುದು ಎಂಬುದು ಬಿಜೆಪಿ ವರಿಷ್ಟರ ಯೋಚನೆ.

ಅಂದ ಹಾಗೆ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ತಮಗೆ ನೂರೈವತ್ತುಸೀಟು ಬರಬೇಕು ಎಂದು ಬಿಜೆಪಿ ವರಿಷ್ಟರು ಯೋಚಿಸುತ್ತಿರುವುದೇಕೆ ಎಂದರೆ, 2024 ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ.

ಈ ಚುನಾವಣೆಯಲ್ಲಿ ಕೇಂದ್ರ ಸರ್ಕಾರಕ್ಕೆ ಎಷ್ಟೇ ಆಡಳಿತ ವಿರೋಧಿ ಅಲೆ ಬಡಿದರೂ ಅದರ ಹೊಡೆತವನ್ನು ತಡೆದುಕೊಳ್ಳಲು ಉತ್ತರ ಪ್ರದೇಶ, ಕರ್ನಾಟಕದಂತಹ ರಾಜ್ಯಗಳು ಬಿಜೆಪಿ ವರಿಷ್ಟರಿಗೆ ಮುಖ್ಯ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಬಂಪರ್‌ ಸೀಟುಗಳನ್ನು ಗಳಿಸಿತ್ತು. ಆದರೆ ಮುಂದಿನ ಸಲವೂ ಅಷ್ಟೇ ದೊಡ್ಡ ಸಂಖ್ಯೆಯಲ್ಲಿ ಸೀಟುಗಳನ್ನು ಗೆಲ್ಲುವುದು ಕಷ್ಟ.

ಆದರೆ ಕಷ್ಟ ಎಂದು ಸುಮ್ಮನಿರುವಂತಿಲ್ಲವಲ್ಲ? ಹೀಗಾಗಿ ಬಿಜೆಪಿ ವರಿಷ್ಟರು ಕರ್ನಾಟಕದ ನೆಲೆಯಲ್ಲಿ 2019 ರ ಸಾಧನೆ ಪುನರಾವರ್ತನೆ ಆಗಲಿ ಎಂದು ಬಯಸುತ್ತಿದ್ದಾರೆ.

ಆ ದೃಷ್ಟಿಯಿಂದ ಅವರಿಗೆ ಕರ್ನಾಟಕದಲ್ಲಿ ಧರ್ಮಾಧಾರಿತ ಮತ ಬ್ಯಾಂಕನ್ನು ಕ್ರೋಢೀಕರಿಸುವುದು ಹೇಗೆ ಮುಖ್ಯವೋ? ಹಾಗೆಯೇ ಎಲ್ಲ ಸಮುದಾಯಗಳ ಪ್ರಭಾವಿಗಳನ್ನು ಓಲೈಸುವುದು ಅಷ್ಟೇ ಮುಖ್ಯ.

ಆ ಕೆಲಸವನ್ನು ಪ್ರಧಾನಿ ನರೇಂದ್ರಮೋದಿ ಅವರ ಸಚಿವ ಸಂಪುಟದ ಸದಸ್ಯರೇ ಬಂದು ಕುಳಿತು ಮಾಡಿದರೆ ಅದರ ಪರಿಣಾಮ ಹೆಚ್ಚು. ಅಂದ ಹಾಗೆ ಇಂತಹ ಸೂತ್ರವನ್ನು ಜಾರಿಗೊಳಿಸುವ ಬಿಜೆಪಿ ವರಿಷ್ಟರ ನಿರ್ಧಾರವನ್ನು ನೋಡಲು ತುಂಬ ದೂರ ಹೋಗಬೇಕಿಲ್ಲ.

ಯಾಕೆಂದರೆ ಅಮಿತ್‌ ಶಾ ಅವರಿಂದ ಹಿಡಿದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ತನಕ ಹಲ ನಾಯಕರು ಈಗಾಗಲೇ ಕರ್ನಾಟಕದತ್ತ ಪೆರೇಡ್ ಮಾಡತೊಡಗಿದ್ದಾರೆ.

ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೋ ಗೊತ್ತಿಲ್ಲ. ಆದರೆ ಸಧ್ಯಕ್ಕಂತೂ ರಾಜ್ಯ ಬಿಜೆಪಿಯ ತಲ್ಲಣ ಹೆಚ್ಚಾಗಿರುವುದಂತೂ ನಿಜ.

 

andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

7 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

9 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

9 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

10 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

11 hours ago