ಅಂಕಣಗಳು

ಬಿಜೆಪಿಗೆ ಭಿನ್ನಾಭಿಪ್ರಾಯಗಳ ಭಾರ; ಕಾಂಗ್ರೆಸ್ ವಲಯ ಹಗುರ

ರಾಜ್ಯ ಬಿಜೆಪಿಯ ಗೊಂದಲ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗುವಂತೆ ಕಾಣತೊಡಗಿದೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶ ಬಿಜೆಪಿಯ ಪ್ರಚಂಡ ಯಶಸ್ಸಿಗೆ ಸಾಕ್ಷಿಯಾದಾಗ ಕರ್ನಾಟಕದ ಕಾಂಗ್ರೆಸ್ ಪಾಳೆಯದಲ್ಲಿ ಆತಂಕ ಕಾಣಿಸಿಕೊಂಡಿತ್ತು. ದೇಶದಲ್ಲಿ ಬಿಜೆಪಿ ಪರವಾದ ಅಲೆ ಇದೆ ಎಂಬ ಭಾವನೆ ಬಂದಾಗ ಇಂತಹ ಆತಂಕ ಸಹಜ ಕೂಡ.

ಆದರೆ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಾಳೆಯದಲ್ಲಿನ ಇಂತಹ ಆತಂಕವನ್ನು ರಾಜ್ಯ ಬಿಜೆಪಿ ನಿವಾರಿಸಿದೆ. ಅಷ್ಟೇ ಅಲ್ಲ, ಪಾರ್ಲಿಮೆಂಟ್ ಚುನಾವಣೆಯಲ್ಲಿ ಮೋದಿ ಅಲೆ ಕೆಲಸ ಮಾಡಿದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಹದಿನೈದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ಕಾಣಿಸಿಕೊಂಡಿದೆ.

ಅಂದ ಹಾಗೆ ಒಂದು ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಸಹಜ. ಆದರೆ ಇಂತಹ ಆಂತರಿಕ ಭಿನ್ನಾಭಿಪ್ರಾಯವನ್ನೂ ನಿವಾರಿಸಲು ಸಾಧ್ಯವಿದೆ ಎಂಬ ಪರಿಸ್ಥಿತಿಯಾದರೂ ಇರಬೇಕು. ಆದರೆ ಕರ್ನಾಟಕದ ಬಿಜೆಪಿ ಘಟಕದಲ್ಲಿ ಕಾಣಿಸಿಕೊಂಡಿರುವ ಭಿನ್ನಾಭಿಪ್ರಾಯಗಳು ಸರಳವಾಗಿ ಬಗೆಹರಿಯುವಂತೆ ಕಾಣುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಷಯದಲ್ಲೇ ಇರಬಹುದು. ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿರುವ ಆರ್.ಅಶೋಕ್ ಅವರ ವಿಷಯದಲ್ಲೇ ಇರಬಹುದು. ಒಟ್ಟಿನಲ್ಲಿ ಈ ಇಬ್ಬರೂ ನಾಯಕರ ಬಗ್ಗೆ ಕಾಣಿಸಿಕೊಂಡಿರುವ ಅಸಮಾಧಾನ ಬಿಜೆಪಿ ಪಾಳೆಯವನ್ನು ತಲ್ಲಣಿಸುವಂತೆ ಮಾಡಿದೆ.

ಇದಕ್ಕೆ ಕಾರಣಗಳೂ ಇವೆ. ಮುಖ್ಯವಾಗಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ವರಿಷ್ಠರು ಯಡಿಯೂರಪ್ಪ ವಿರೋಧಿ ಬಣಕ್ಕೆ ಆದ್ಯತೆ ನೀಡಿದ್ದರು. ಅದು ಟಿಕೆಟ್ ಹಂಚಿಕೆಯ ವಿಷಯವೇ ಇರಬಹುದು ಅಥವಾ ಚುನಾವಣೆಯಲ್ಲಿ ಗೆಲ್ಲಲು ಅಗತ್ಯವಾದ ಪ್ರಚಾರ ತಂತ್ರ ರೂಪಿಸುವ ವಿಷಯದಲ್ಲೇ ಇರಬಹುದು. ಒಟ್ಟಿನಲ್ಲಿ ಯಡಿಯೂರಪ್ಪ ವಿರೋಧಿ ಬಣದ ಮಾತಿನಂತೆ ವರಿಷ್ಠರು ಚುನಾವಣೆ ನಡೆಸಿದರು.
ಹೀಗೆ ನಡೆಸಿದ ಚುನಾವಣೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇನಾದರೂ ಸಹಕಾರ ನೀಡಿದ್ದರೆ ಬಿಜೆಪಿ 113ರ ಮ್ಯಾಜಿಕ್ ನಂಬರ್ ತಲುಪಲು ಸಾಧ್ಯವಿಲ್ಲದೆ ಹೋಗಿದ್ದರೂ, ಜಾತ್ಯತೀತ ಜನತಾದಳದ ಜತೆ ಕೈಜೋಡಿಸಿ ಮೈತ್ರಿ ಸರ್ಕಾರ ರಚಿಸಲು ಸಾಧ್ಯವಾಗುತ್ತಿತ್ತು ಎಂಬುದು ಯಡಿಯೂರಪ್ಪ ವಿರೋಧಿ ಬಣದ ಈಗಿನ ಅಸಮಾಧಾನ.

ಆದರೆ ಇದು ಸಾಧ್ಯವಾಗಿದ್ದರೆ ರಾಜಕೀಯವಾಗಿ ತಮ್ಮ ಮತ್ತು ತಮ್ಮ ಪುತ್ರನ ಭವಿಷ್ಯ ಮುಗಿದಂತೆ ಎಂಬ ತೀರ್ಮಾನಕ್ಕೆ ಬಂದ ಯಡಿಯೂರಪ್ಪ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲುವಂತೆ ನೋಡಿಕೊಂಡರು. ಇದರ ಪರಿಣಾಮವಾಗಿ ಬಿಜೆಪಿ ತೊಂಬತ್ತು ಸೀಟುಗಳ ಗಡಿ ತಲುಪಬಹುದು ಎಂಬ ಲೆಕ್ಕಾಚಾರ ತಲೆಕೆಳಗಾಯಿತು.

ಈ ರೀತಿ ಪಕ್ಷದ ಅಭ್ಯರ್ಥಿಗಳು ನಿರೀಕ್ಷಿತ ಪ್ರಮಾಣದಲ್ಲಿ ಗೆಲ್ಲದಂತೆ ನೋಡಿಕೊಂಡ ಯಡಿಯೂರಪ್ಪ ತಮ್ಮ ಪಾರಮ್ಯವನ್ನೇನೋ ಸಾಧಿಸಿದರು. ತಾವಿಲ್ಲದೆ ರಾಜ್ಯ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎಂಬುದನ್ನು ಸಾಬೀತು
ಮಾಡಿದರು.

ಆದರೆ ಅವರ ಈ ಸಾಧನೆಯಿಂದ ಬಿಜೆಪಿಯ ಸಾಧನೆಕಳಾಹೀನವಾಯಿತು. ಅಷ್ಟೇ ಅಲ್ಲ, ಚುನಾವಣೆಯ ಸಾರಥ್ಯವನ್ನು ತಮ್ಮ ಕೈಗೊಪ್ಪಿಸಿದ ಮೋದಿ-ಅಮಿತ್ ಶಾ ಜೋಡಿ ಭ್ರಮನಿರಸನಗೊಳ್ಳುವಂತೆ ಮಾಡಿತು.
ಇಷ್ಟಾದ ನಂತರ ಮೋದಿ-ಅಮಿತ್ ಶಾ ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಕೈಗೆ ಮರಳಿ ಪಕ್ಷವನ್ನು ನೀಡಿದ್ದಾರೆ. ಅವರ ಪುತ್ರ ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರು ಸೂಚಿಸಿದರು ಅಂತ ಆರ್.ಅಶೋಕ್ ಅವರನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕರನ್ನಾಗಿ ಮಾಡಿದ್ದಾರೆ.

ಹೀಗೆ ಪಕ್ಷವನ್ನು ತಮ್ಮ ವಶಕ್ಕೆ ನೀಡಿರುವುದರಿಂದ ಸಹಜವಾಗಿಯೇ ಯಡಿಯೂರಪ್ಪ ಅವರು ಏಕತೆಯ ಮಂತ್ರ ಜಪಿಸುತ್ತಿದ್ದಾರೆ. ಆದರೆ ಇದೇ ಏಕತೆಯ ಮಂತ್ರ ಈ ಹಿಂದೆ ಅವರಿಗೇಕೆ ನೆನಪಾಗಲಿಲ್ಲ? ಎಂಬುದು ಯಡಿಯೂರಪ್ಪ ಬಣದ ಸದ್ಯದ ಸಿಟ್ಟು, ಪರಿಣಾಮ ಕಳೆದ ಕೆಲ ದಿನಗಳಲ್ಲಿ ವಿಜಯೇಂದ್ರ ಮತ್ತು ಅಶೋಕ್ ಅವರ ವಿರುದ್ಧ ತಿರುಗಿ ಬೀಳುವವರ ಸಂಖ್ಯೆ ಹೆಚ್ಚುತ್ತಿದೆ.

ಅಂದ ಹಾಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನ ಪಡೆಯಲು ಯಡಿಯೂರಪ್ಪ ವಿರೋಧಿ ಬಣದ ಹಲವು ನಾಯಕರು ಪ್ರಯತ್ನ ನಡೆಸಿದ್ದರು. ಆದರೆ ಯಾವಾಗ ವರಿಷ್ಠರು ತಮ್ಮ ಇಚ್ಛೆಗೆ ಸ್ಪಂದಿಸಲಿಲ್ಲವೋ ಆಗ ವಿಜಯೇಂದ್ರ ಮತ್ತು ಅಶೋಕ್ ಅವರ ವಿರುದ್ಧ ಹಲವರು ತಿರುಗಿ ಬಿದ್ದಿದ್ದಾರೆ.

ವಿಜಯೇಂದ್ರ ಅವರ ವಿರುದ್ಧ ತಿರುಗಿ ಬಿದ್ದಿರುವ ಬಸನಗೌಡ ಪಾಟೀಲ್ ಯತ್ನಾಳ್, ವಿ.ಸೋಮಣ್ಣ ಅವರಂತಹ ನಾಯಕರು ನೇರವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರೆ, ಅಶೋಕ್ ಅವರ ವಿರುದ್ಧ ಹಲವು ನಾಯಕರು ತೆರೆಯ ಹಿಂದೆ ಕೆಲಸ ಮಾಡುತ್ತಿದ್ದಾರೆ.

ಅಂದ ಹಾಗೆ ಅಶೋಕ್ ಅವರ ವಿರುದ್ಧ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಎಂ.ಕೃಷ್ಣಪ್ಪ ತಿರುಗಿ ಬಿದ್ದಿದ್ದಾರಾದರೂ ಅದಕ್ಕೆ ವೈಯಕ್ತಿಕ ಕಾರಣಗಳಿವೆ. ಅಧಿಕಾರ ಇದ್ದ ಕಾಲದಲ್ಲಿ ಅಶೋಕ್ ತಮಗೆ ಸಹಕಾರ ನೀಡಿರಲಿಲ್ಲ ಎಂಬ ನೋವಿದೆ.

ಆದರೆ ಎಲ್ಲವನ್ನೂ ಮೀರಿ ನೋಡಿದರೂ ವಿಜಯೇಂದ್ರ ಮತ್ತು ಅಶೋಕ್ ಅವರ ವಿರುದ್ಧ ಹಲವು ನಾಯಕರು ತಿರುಗಿ ಬಿದ್ದಿರುವ ರೀತಿ, ನಿಶ್ಚಿತವಾಗಿ ಪಾರ್ಲಿಮೆಂಟ್ ಚುನಾವಣೆಯ ಮೇಲೆ ಪ್ರಭಾವ ಬೀರುತ್ತದೆ.

ನಾಳೆ ವಿಜಯೇಂದ್ರ ನೇತೃತ್ವದ ಬಿಜೆಪಿ ಕರ್ನಾಟಕದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆದ್ದಿತು ಎಂದುಕೊಳ್ಳಿ. ಆಗ ಸಹಜವಾಗಿಯೇ ಪಕ್ಷದ ವರಿಷ್ಠರು, ರಾಜ್ಯದಲ್ಲಿ ಯಡಿಯೂರಪ್ಪ ಅವರ ಕುಟುಂಬಕ್ಕಿರುವ ಪವರ್ ಬೇರೆಯವರಿಗೆ ಇಲ್ಲ ಎಂಬ ತೀರ್ಮಾನಕ್ಕೆ ಬರಬಹುದು.

ಆದರೆ ಈ ಗೆಲುವಿನ ಪ್ರಮಾಣ ಹದಿನೈದಕ್ಕಿಂತ ಕಡಿಮೆ ಆದರೆ ಯಡಿಯೂರಪ್ಪ ಅವರ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ಭ್ರಮನಿರಸನಗೊಳ್ಳುತ್ತದೆ. ಕಳೆದ ಚುನಾವಣೆಯಲ್ಲಿ ಇಪ್ಪತ್ತೈದು ಸೀಟು ಗಳಿಸಿದ ಪಕ್ಷ ಈಗ ಹದಿನೈದರ ರೇಂಜಿಗೆ ಕುಸಿದರೆ ಕರ್ನಾಟಕದಲ್ಲಿ ಬಿಜೆಪಿ ಬಲ ಕುಸಿದಿದೆ ಎಂದೇ ಅರ್ಥ.

ಎಲ್ಲಕ್ಕಿಂತ ಮುಖ್ಯವಾಗಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಮೋದಿ ಪರವಾದ ಅಲೆ ಬಿಜೆಪಿಗೆ ಅನುಕೂಲ ಮಾಡಿಕೊಡುವುದು ನಿಶ್ಚಿತವಾದರೂ ಅಂತಹ ಲಾಭದ ಪ್ರಮಾಣ ಕುಸಿದರೆ ಸಹಜವಾಗಿಯೇ ವರಿಷ್ಠರು ಅಸಮಾಧಾನಗೊಳ್ಳುತ್ತಾರೆ.

ಹೀಗಾಗಿಪಾರ್ಲಿಮೆಂಟ್ ಚುನಾವಣೆಯಸಂದರ್ಭದಲ್ಲಿಯಡಿಯೂರಪ್ಪ ವಿರೋಧಿ ಬಣ ಬಹುತೇಕ ಕಡೆ ತಟಸ್ಥ ಧೋರಣೆ ತಳೆಯಬಹುದು ಎಂಬುದು ಕೈ ಪಾಳೆಯದ ನಿರೀಕ್ಷೆ. ನಾಳೆ ಪಕ್ಷ ಇಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ಗಳಿಸಿದರೆ ಅನುಮಾನವೇ ಬೇಡ, ಯಡಿಯೂರಪ್ಪ ಮತ್ತು ವಿಜಯೇಂದ್ರ ನಿರಾಯಾಸವಾಗಿ ಪಕ್ಷದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಾರೆ. ಹಾಗಾಗಬಾರದು ಎಂಬುದು ಯಡಿಯೂರಪ್ಪ ವಿರೋಧಿ ಬಣದ ಧೋರಣೆ ಎಂಬ ಮಾಹಿತಿ ಕೈ
ಪಾಳೆಯದ ನಾಯಕರನ್ನು ತಲುಪಿದೆ. ಹೀಗಾಗಿ ಸಹಜವಾಗಿಯೇ ಕಾಂಗ್ರೆಸ್ ಪಾಳೆಯ ಖುಷಿಯಾಗಿದೆ.

ಅಂದ ಹಾಗೆ ಬಿಜೆಪಿಯ ಜತೆ ಜಾ.ದಳ ಕೈಜೋಡಿಸಿದೆಯಾದರೂ ಆ ಪಕ್ಷದ ಆಂತರ್ಯದಲ್ಲೂ ಗೊಂದಲಗಳಿರುವುದರಿಂದ ಅದರ ಲಾಭ ತಮಗೆ ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ. ಈ ಹಿನ್ನೆಲೆಯಲ್ಲಿ ಅದು ಮುಂಬರುವ ಪಾರ್ಲಿಮೆಂಟ್ ಚುನಾವಣೆಗೆ ಭರದ ತಯಾರಿ ಆರಂಭಿಸುವುದು ಸಹಜ.

ಅಂದ ಹಾಗೆ ತಮ್ಮಲ್ಲಿನ ಗೊಂದಲ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಹೇಗೆ ಲಾಭದಾಯಕವಾಗಬಹುದು ಎಂಬುದು ಬಿಜೆಪಿಯ ಇಬ್ಬಣಗಳಿಗೂ ಗೊತ್ತು. ಈ ಪೈಕಿ ಯಡಿಯೂರಪ್ಪ ಬಣ ತನ್ನ ಪ್ರತಿಷ್ಠೆಯನ್ನು ಬಿಟ್ಟು ವಿರೋಧಿ ಬಣದೊಂದಿಗೆ ಕೈ ಜೋಡಿಸಲು ತಯಾರಿದೆಯಾದರೂ, ವಿರೋಧಿ ಬಣ ಮಾತ್ರ ಯಡಿಯೂರಪ್ಪ ಅವರ ಜತೆ ಹೊಂದಿಕೊಂಡು ಹೋಗಲು ತಯಾರಿಲ್ಲ.

ಏಕೆಂದರೆ ವಿಜಯೇಂದ್ರ ನೇತೃತ್ವದಲ್ಲಿ ಪಕ್ಷ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದರೆ 2028ರ ವಿಧಾನಸಭೆ ಚುನಾವಣೆಯ ಹೊತ್ತಿಗೆ ವಿಜಯೇಂದ್ರ ಅವರೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಬಹುದು ಎಂಬುದು ಯಡಿಯೂರಪ್ಪ ವಿರೋಧಿ ಬಣದ ಅನುಮಾನ.

ಹೀಗಾಗಿ ಆ ಬಣದಲ್ಲಿರುವ ಪ್ರಮುಖ ನಾಯಕರು ಯಡಿಯೂರಪ್ಪ ಅವರ ಜತೆ ಹೊಂದಿಕೊಂಡು ಹೋಗುವುದಿರಲಿ, ಅವರ ಹೆಸರೆತ್ತಿದರೂ ಕಿಡಿಕಾರತೊಡಗಿದ್ದಾರೆ. ಪರಿಣಾಮ ಬಿಜೆಪಿಯ ಈ ಆಂತರಿಕ ಜಗಳದಿಂದ ಖುಷಿಯಾಗಿರುವ ಕಾಂಗ್ರೆಸ್ ನಾಯಕರು ಇದರ ಲಾಭ ಪಡೆಯಲು ಸಜ್ಜಾಗುತ್ತಿದ್ದಾರೆ.

ಕುತೂಹಲದ ಸಂಗತಿ ಎಂದರೆ ಕರ್ನಾಟಕದಲ್ಲಿ ಪಕ್ಷದ ಸ್ಥಿತಿ ಈ ಮಟ್ಟಕ್ಕೆ ತಲುಪಿದ್ದರೂ ಬಿಜೆಪಿ ವರಿಷ್ಠರಾದ ಮೋದಿ-ಅಮಿತ್ ಶಾ ಚಕಾರವೆತ್ತುತ್ತಿಲ್ಲ. ಇದ್ದುದರಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ ಅವರು ಯಡಿಯೂರಪ್ಪ ವಿರೋಧಿ ಬಣದ ಅಸಮಾಧಾನವನ್ನು ನಿವಾರಿಸಲು ಪ್ರಯತ್ನ ಮಾಡುತ್ತಿದ್ದಾರಾದರೂ ಯಶಸ್ವಿಯಾಗುತ್ತಿಲ್ಲ.

ಕೆಲ ದಿನಗಳ ಹಿಂದೆ ನಡ್ಡಾ ಅವರು ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ: ಆಗಿದ್ದು ಆಗಿ ಹೋಯಿತು. ಮುಂದಿನ ದಿನಗಳಲ್ಲಿ ಹೊಂದಾಣಿಕೆಯಿಂದ ನಡೆದುಕೊಂಡು ಹೋಗಿ ಎಂದು ಹೇಳಿದ್ದಾರೆ.

ಆದರೆ ಯಾವಾಗ ನಡ್ಡಾ ಈ ರೀತಿ ಹೇಳಿದರೋ, ಆಗ ಸೋಮಣ್ಣ ಅವರ ಸಿಟ್ಟು ತಾರಕಕ್ಕೇರಿದೆ. ಹಾಗಂತಲೇ ನಡ್ಡಾ ಅವರಿಗೆ ಅಟಕಾಯಿಸಿಕೊಂಡ ಅವರು, ವರುಣ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಸೇರಿ ನನ್ನನ್ನು ಹೇಗೆ ಸೋಲಿಸಿದರು ಎಂಬುದಕ್ಕೆ ನಾನು ದಾಖಲೆ ಕೊಡುತ್ತೇನೆ. ಹೀಗಾಗಿ ಬರಿ ನಾನೊಬ್ಬ ಹೊಸದಿಲ್ಲಿಗೆ ಬಂದರೆ ಸಾಲದು, ಬದಲಿಗೆ ತಂದೆ-ಮಕ್ಕಳನ್ನೂ ಹೊಸದಿಲ್ಲಿಗೆ ಕರೆಯಿರಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಯಾವಾಗ ಅವರು ಈ ರೀತಿ ಹೇಳಿದರೋ ಇದಾದ ನಂತರ ಜಗತ್‌ ಪ್ರಕಾಶ್ ನಡ್ಡಾ ಅವರು ಸೋಮಣ್ಣ ಅವರಿಗೆ ಮರಳಿ ಫೋನು ಮಾಡಿಲ್ಲ. ಅರ್ಥಾತ್, ಇವತ್ತು ಯಡಿಯೂರಪ್ಪ ಅವರ ವಿರುದ್ಧ ಯಾರೆಲ್ಲ ತಿರುಗಿ ಬಿದ್ದಿದ್ದಾರೋ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಹೇಗೆ ಅಂತ ಸ್ವತಃ ನಡ್ಡಾ ಅವರಿಗೇ ಅರ್ಥವಾಗುತ್ತಿಲ್ಲ.

ಪರಿಣಾಮ, ಬಿಜೆಪಿಯಗೊಂದಲರಾಜ್ಯ ಕಾಂಗ್ರೆಸ್ ಪಾಲಿಗೆ ವರಪ್ರದವಾಗಿ ಕಂಡಿದೆ. ಎಲ್ಲಿಯವರೆಗೆ ಬಿಜೆಪಿ ತನ್ನ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಸಫಲವಾಗುವುದಿಲ್ಲವೋ ಅಲ್ಲಿಯ ತನಕ ಕಾಂಗ್ರೆಸ್ ಸೈನ್ಯದ ಶಕ್ತಿ ಹಿಗ್ಗುತ್ತಲೇ ಇರುತ್ತದೆ. ಇದೇ ಸದ್ಯದ ಸ್ಥಿತಿ.

andolanait

Recent Posts

ನಿರ್ವಹಣೆ ಇಲ್ಲದ ಶೌಚಾಲಯ; ಇಲ್ಲಿ ಬಯಲೇ ಮೂತ್ರಾಲಯ

ವಾಣಿವಿಲಾಸ ಮಾರುಕಟ್ಟೆ ಒಳಗಿನ ಶೌಚಾಲಯದ ದುಸ್ಥಿತಿ; ಬಹುತೇಕ ಶೌಚಾಲಯಗಳಲ್ಲೂ ಇದೇ ಸ್ಥಿತಿ ಹೆಚ್. ಎಸ್. ದಿನೇಶ್ ಕುಮಾರ್ ಮೈಸೂರು: ದೇಶದ…

15 mins ago

ಮುಡಾ: 50:50 ಅನುಪಾತದಡಿ 1950 ಬದಲಿ ನಿವೇಶನ

ಕೆ. ಬಿ. ರಮೇಶನಾಯಕ ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಽಕಾರದಲ್ಲಿ ೫೦:೫೦ ಅನುಪಾತದಡಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿ ರುವ ಹಗರಣ ಕುರಿತು…

26 mins ago

ಸರ್ಕಾರಿ ಶಾಲೆ ಬಾಲಕಿಯರಿಗೆ ಬಯಲೇ ಶೌಚಾಲಯ!

ದೊಡ್ಡಕವಲಂದೆ: 3 ವರ್ಷಗಳಾದರೂ ನಿರ್ಮಾಣವಾಗದ ಶೌಚಾಲಯ; ಗುತ್ತಿಗೆದಾರ ನಾಪತ್ತೆ ಶ್ರೀಧರ್ ಆರ್. ಭಟ್ ನಂಜನಗೂಡು: ಸ್ವಚ್ಛತೆಗಾಗಿ ಕೇಂದ್ರ ಮತ್ತು ರಾಜ್ಯ…

2 hours ago

ಕಾಡಿನಿಂದಲೂ ಕಾಣೆಯಾದ ಕಾಡುಪಾಪ

ಬಿ. ಆರ್. ಜೋಯಪ್ಪ ಕೊಡಗಿನಲ್ಲಿ ಸ್ಥಳೀಯರು ‘ಕಾಡುಪಾಪ’ವನ್ನು ‘ಚೀಂಗೆ ಕೋಳಿ’ ಎಂದು ಕರೆಯುತ್ತಾರೆ. ಇದೊಂದು ನಿಶಾಚರಿ, ನಿರುಪದ್ರವಿ ಕಾಡಿನ ಜೀವಿ.…

2 hours ago

ಹಸಿವಿನ ಆಳ ಮತ್ತು ಅನ್ನ ಎಂಬ ದೃಶ್ಯ ಕಾವ್ಯ…..

ಚಾಮರಾಜನಗರ ನೆಲದ ಕಲಾವಿದರು, ಅಲ್ಲಿನ ಆಡುಭಾಷೆಯನ್ನೇ ಜೀವಾಳವಾಗಿಸಿಕೊಂಡು ಗೆದ್ದ ಅನ್ನ ಚಲನಚಿತ್ರ ರಶ್ಮಿ ಕೋಟಿ ಮನೆಗೆ ಕರೆದುಕೊಂಡು ಹೋಗಲು ಬಂದ…

2 hours ago

ತುಳು ಸಾಹಿತ್ಯ, ಸಂಸ್ಕೃತಿಗೆ ಕನ್ನಡ ಭಾಷಾ ಮೆರುಗು

ತುಳುನಾಡಿನಲ್ಲಿ ಹುಟ್ಟಿ ಬೆಳೆದ ಎಚ್. ನಾಗವೇಣಿಯವರ ಕತೆಗಳಲ್ಲಿ ಕೂಡ ಈ ತಾಯ್ನೆಲದ ಮಣ್ಣಿನ ತುಡಿತ ಮಿಡಿತಗಳು ನರನಾಡಿಯಂತೆ ವ್ಯಾಪಿಸಿರುತ್ತವೆ. ಆ…

3 hours ago