ಅಂಕಣಗಳು

ಅಸ್ತಿತ್ವವಾದಿ ಚಳವಳಿಗಳನ್ನು ದಾಟಿ ನೋಡಬೇಕಿದೆ

ಆರ್ಥಿಕ ವಿಕಾಸದತ್ತ ಸಾಗುತ್ತಿರುವ ನವ ಭಾರತ ದುಡಿಯುವ ವರ್ಗಗಳ ಮತ್ತೊಂದು ಸಾರ್ವತ್ರಿಕ ಮುಷ್ಕರಕ್ಕೆ ಸಾಕ್ಷಿಯಾಗಿದೆ. ಬಹುಶಃ ಕಳೆದ ಎರಡು ದಶಕಗಳಿಂದ ಇದು ಆಚರಣಾತ್ಮಕ ಮಾದರಿಯಲ್ಲಿ (Ritualistic Way) ನಡೆಯುತ್ತಾ ಬಂದಿದೆ. ಈ ಸಮಸ್ಯೆಗಳೊಂದಿಗೆ ತಮ್ಮ ಭವಿಷ್ಯದ ಬದುಕಿನ ಸುಸ್ಥಿರತೆಗಾಗಿ ಹಕ್ಕೊತ್ತಾಯಗಳನ್ನು ಮಂಡಿಸುತ್ತಿರುವುದೂ ಗಮನಾರ್ಹ ಸಂಗತಿ. ನವ ಉದಾರವಾದಿ ಆರ್ಥಿಕತೆ ಮತ್ತು ಕಾರ್ಪೋರೇಟೀಕರಣದ ಪ್ರಭಾವದಿಂದ ಶ್ರಮಿಕ ಜಗತ್ತಿನ ತಲ್ಲಣಗಳನ್ನು ಶೋಽಸಿ, ಆ ಸಮಾಜದ ಒಳಹೊಕ್ಕು, ಅಲ್ಲಿನ ಒಳಬಿರುಕುಗಳನ್ನು (Fault lines) ಹಾಗೂ ಜಟಿಲ ಸಿಕ್ಕುಗಳನ್ನು, ಪರಿಹರಿಸುವ ಒಂದು ವ್ಯವಧಾನವನ್ನು, ವಿವೇಚನೆಯನ್ನು ಸರ್ಕಾರಗಳು ಕಳೆದುಕೊಂಡಿರುವುದರಿಂದ, ಈ ಮುಷ್ಕರವು ಆಳ್ವಿಕೆಯನ್ನು ಎಚ್ಚರಿಸುವ ಒಂದು ಕಾರ್ಯತಂತ್ರವಾಗಿ ಅನಿವಾರ್ಯ ಎನಿಸುತ್ತದೆ.

ವಸ್ತುಸ್ಥಿತಿಯ ಸ್ಥೂಲ ದತ್ತಾಂಶಗಳು:  ಮೇ ೨೦೨೫ರಲ್ಲಿ ಸಲ್ಲಿಸಲಾಗಿರುವ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) ಮಾಹಿತಿಯ ಅನುಸಾರ ದೇಶದಲ್ಲಿ ನಿರುದ್ಯೋಗದ ಪ್ರಮಾಣವು ಏಪ್ರಿಲ್‌ನಲ್ಲಿದ್ದ ಶೇಕಡಾ ೫.೧ ರಿಂದ ಮೇ ವೇಳೆಗೆ ಶೇಕಡಾ ೫.೬ಕ್ಕೆ ಏರಿದೆ. ಭಾರತೀಯ ಆರ್ಥಿಕತೆಯ ಮೇಲ್ವಿಚಾರಣಾ ಕೇಂದ್ರ (CMIE) ವರದಿಯಲ್ಲಿ ನಮೂದಿಸಿರುವ ನಿರುದ್ಯೋಗ ಪ್ರಮಾಣ ಶೇಕಡಾ ೭ರಷ್ಟಿದ್ದು, ಈ ವ್ಯತ್ಯಯಗಳಿಗೆ ಸಮೀಕ್ಷೆಯ ಮಾನದಂಡಗಳು ಕಾರಣ ಎನ್ನುವುದನ್ನು ಗಮನಿಸಬೇಕಿದೆ. ೨೦೧೭-೧೮ರ ಶೇಕಡಾ ೬ಕ್ಕೆ ಹೋಲಿಸಿದರೆ, ಈಗಿನ ನಿರುದ್ಯೋಗ ಪ್ರಮಾಣವು ಕಡಿಮೆಯಾಗಿರುವುದಾಗಿ ತೋರಿದರೂ, ನೆಲದ ವಾಸ್ತವಗಳನ್ನು (Ground Realities) ಸೂಕ್ಷ್ಮ ವಾಗಿ ಗಮನಿಸಿದರೆ ಈ ದತ್ತಾಂಶಗಳ ಹಿಂದೆ ಶ್ರಮಿಕರ ಜೀವನ-ಜೀವನೋ ಪಾಯದ ಹಾದಿಗಳಲ್ಲಿ ಇರುವ ಬಿರುಕುಗಳು ಸ್ಪಷ್ಟವಾಗಿ ಕಾಣುತ್ತವೆ. ಈ ರೀತಿಯ ಸ್ವತಂತ್ರ ಸಮೀಕ್ಷೆಯ ಲಭ್ಯತೆಯ ಬಗ್ಗೆ ಅನುಮಾನಗಳಿವೆ.

ಇದೇ ಅಧಿಕೃತ ಮಾಹಿತಿಯ ಅನುಸಾರ ಗ್ರಾಮೀಣ ಯುವಸಮೂಹದ ನಿರುದ್ಯೋಗದ ಪ್ರಮಾಣವು ೧೫-೨೯ ವಯೋಮಾನದವರಲ್ಲಿ ಶೇಕಡಾ ೧೩.೭ರಷ್ಟಿದ್ದು, ನಗರಗಳಲ್ಲಿ ಇದು ಶೇಕಡಾ ೧೭.೯ರಷ್ಟಿದೆ. ಕಾರ್ಮಿಕ ಪಡೆಯ ಭಾಗವಹಿಸುವಿಕೆಯ ದರ (LFPR) ಮೇ ೨೦೨೫ರಲ್ಲಿ ಶೇಕಡಾ ೫೪.೮ಕ್ಕೆ ಕುಸಿದಿರುವುದನ್ನು ದಾಖಲಿಸಲಾಗಿದೆ. ಇದು ಕಡಿಮೆ ಸಂಖ್ಯೆಯ ಜನರು ದುಡಿಮೆಯಲ್ಲಿ ತೊಡಗಿರುವುದನ್ನು ಸೂಚಿಸುತ್ತದೆ. ದುಡಿಯುವ ವಯೋಮಾನದ ೯೦ ಕೋಟಿ ಜನಸಂಖ್ಯೆಯ ಪೈಕಿ ೬೧ ಕೋಟಿ ಜನರು ಮಾತ್ರ ಉದ್ಯೋಗಿಗಳಾಗಿದ್ದು, ಇದರ ಪೈಕಿ ೩೩ ಕೋಟಿ ಜನರು ಕೃಷಿಯೇತರ ವಲಯದಲ್ಲಿರುವುದನ್ನು ೨೦೨೩-೨೪ರ ಸಮೀಕ್ಷೆಯೊಂದು ಸೂಚಿಸುತ್ತದೆ. ೨.೮ ಕೋಟಿ ಜನರು ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ದುಡಿಮೆಯಲ್ಲಿದ್ದು, ಇದರಲ್ಲಿ ಬಹುಪಾಲು ಸಂಖ್ಯೆ ವೇತನ-ಕೂಲಿ ಪಡೆಯದ ಕೌಟುಂಬಿಕ ಶ್ರಮದಲ್ಲಿ ತೊಡಗಿದ್ದಾರೆ.

ಇದೇ ಸಮೀಕ್ಷೆಯಲ್ಲಿ ಹೇಳುವಂತೆ ೨೮ ಕೋಟಿ ವಿದ್ಯಾವಂತ ನಿರುದ್ಯೋಗಿ ಯುವಸಮೂಹವು ಯೋಗ್ಯ ಉದ್ಯೋಗಗಳ (Decent Job) ನಿರೀಕ್ಷೆಯಲ್ಲಿದೆ. ಬಹುಪಾಲು ಮಹಿಳೆಯರನ್ನೊಳಗೊಂಡ ೧೦ ಕೋಟಿ ವಿದ್ಯಾವಂತ ಯುವ ಸಮೂಹವು, ಯಾವುದೇ ಉದ್ಯೋಗವನ್ನು ಅರಸುತ್ತಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಇದರ ಸಾಮಾಜಿಕ-ಸಾಂಸ್ಕೃತಿಕ ಕಾರಣಗಳನ್ನು ಶೋಽಸುವುದು ಸಮಾಜಶಾಸ್ತ್ರೀಯ ಅಧ್ಯಯನ ಕ್ಷೇತ್ರದ ಜವಾಬ್ದಾರಿ. ಇದೇ ಸಮೀಕ್ಷೆಯಲ್ಲಿ ಉಲ್ಲೇಖಿಸುವ ಮತ್ತೊಂದು ಅಂಶವೆಂದರೆ, ೧೫ ಕೋಟಿಗೂ ಹೆಚ್ಚಿನ ಯುವ ಸಮೂಹವು ವಿದ್ಯಾರ್ಜನೆ ಮತ್ತು ತರಬೇತಿಯ ಹಂತದಲ್ಲಿದ್ದು, ಈ ಇಡೀ ಯುವ ಸಂಕುಲ ಉದ್ಯೋಗಾವಕಾಶಗಳ ಆಕಾಂಕ್ಷೆಯೊಂದಿಗೆ ಜೀವನ ಸಾಗಿಸುತ್ತಿರುವುದು ಕಾಣುತ್ತದೆ. ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣವು, ಅಸಂಪೂರ್ಣ ಉದ್ಯೋಗಿಗಳ (Under employed) ಸಮಾಜದಲ್ಲಿ ಆತಂಕಗಳನ್ನು ಸಹಜವಾಗಿಯೇ ಹೆಚ್ಚಿಸುತ್ತದೆ.

ಸಾರ್ವತ್ರಿಕ ಮುಷ್ಕರದ ಆಶಯಗಳು:  ಈ ನಡುವೆಯೇ ಜುಲೈ ೯ರಂದು ನಡೆದ ಸಾರ್ವತ್ರಿಕ ಮುಷ್ಕರದಲ್ಲಿ ೨೫ ಕೋಟಿಗೂ ಹೆಚ್ಚು ಕಾರ್ಮಿಕರು, ರೈತರು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಈ ಕಾರ್ಮಿಕರ ನಡುವೆ ಮೊಳಗುವ ಪ್ರಧಾನ ಘೋಷಣೆ ‘ ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ ’ ಸಾರ್ವತ್ರಿಕ ಮುಷ್ಕರಕ್ಕೆ ಒಂದು ಭರವಸೆಯ ಭವಿಷ್ಯವನ್ನು ಸೃಷ್ಟಿಸುವ ನಿರೀಕ್ಷೆಯೊಂದಿಗೆ ವಾರ್ಷಿಕ ಮುಷ್ಕರಗಳನ್ನು ಭಾರತದ ಸಂಘಟಿತ ಕಾರ್ಮಿಕ ಸಂಘಟನೆಗಳು ಆಯೋಜಿಸುತ್ತಿವೆ. ಭಾರತ ಅನುಸರಿಸುತ್ತಿರುವ ಮತ್ತು ಪಕ್ಷಾತೀತವಾಗಿ, ಎಡಪಂಥೀಯ ಸರ್ಕಾರವೊಂದನ್ನು ಬಿಟ್ಟರೆ, ಎಲ್ಲ ರಾಜಕೀಯ ಪಕ್ಷಗಳೂ ಅನುಮೋದಿಸಿ ಅನುಸರಿಸುತ್ತಿರುವ ಕಾರ್ಮಿಕ ನೀತಿಗಳು, ಹೊಸ ಕರಾಳ ಕಾರ್ಮಿಕ ಸಂಹಿತೆಗಳು ಮತ್ತು ನಿರ್ದಿಷ್ಟ ‘ಉದ್ಯೋಗನೀತಿ ’ (Employment Policy) ಇಲ್ಲದ ಹೊಸ ನಿಯಮಗಳು ಸಮಸ್ತ ಕಾರ್ಮಿಕರನ್ನು ಬಾಧಿಸುತ್ತಿದೆ. ಮಾರುಕಟ್ಟೆಯ ಹಂಗಿಗೆ ಒಳಗಾದ ನಿರುದ್ಯೋಗಿ, ಅರೆ ಉದ್ಯೋಗಿ, ಅಸಂಪೂರ್ಣ ಉದ್ಯೋಗಿಗಳ ಬೃಹತ್ ಜನಸಂಖ್ಯೆಯನ್ನು ಈ ಸಾರ್ವತ್ರಿಕ ಮುಷ್ಕರ ಸಾಂಕೇತಿಕವಾಗಿ ಪ್ರತಿನಿಧಿಸಿತ್ತು.

ಇಂದು ಲಕ್ಷಾಂತರ ಅತಿಥಿ ಬೋಧಕರು ನಿವೃತ್ತಿಯ ಅಂಚಿನಲ್ಲಿದ್ದು, ನಿವೃತ್ತಿಯಾಗಿದ್ದು, ತಮ್ಮ ಕೌಟುಂಬಿಕ ಜೀವನ ನಿರ್ವಹಣೆಗೆ ಅನ್ಯ ಉದ್ಯೋಗ ಗಳನ್ನು ಅವಲಂಬಿಸುವ ಅನಿವಾರ್ಯತೆಯನ್ನು ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರೇ ಪ್ರಧಾನವಾಗಿರುವ ಆಶಾ- ಅಂಗನ ವಾಡಿ- ಬಿಸಿಯೂಟ ಕಾರ್ಮಿಕರ ವೇತನವನ್ನು ಕೊಂಚ ಮಟ್ಟಿಗೆ ಹೆಚ್ಚಿಸಲಾಗಿದೆಯಾದರೂ, ಈ ದುಡಿಮೆಗಾರರ ಭವಿಷ್ಯದ ಬದುಕಿಗೆ ಸುಭದ್ರ ಬುನಾದಿ ಒದಗಿಸುವಂತಹ ಯಾವುದೇ ನೀತಿಗಳನ್ನು ಅನುಸರಿಸಲಾಗುತ್ತಿಲ್ಲ. ಭವಿಷ್ಯನಿಧಿ, ವಿಮಾ ಸೌಲಭ್ಯ, ಇಎಎಸ್‌ಐ ಸೌಕರ್ಯ ಮತ್ತು ಸೇವಾವಧಿಯಲ್ಲಿ ಒದಗಿಸಲಾಗುವ ಹಲವು ಅನುಕೂಲತೆಗಳು ದುಡಿಮೆಯ ಅವಧಿಯಲ್ಲಿ ಈ ಕಾರ್ಮಿಕರ ಬದುಕಿಗೆ ಸಾಂತ್ವನದ ನೆಲೆ ನೀಡುವುದಾದರೂ, ನಿವೃತ್ತಿಯ ಅನಂvಅರದ ಬದುಕು ಹೇಗೆ ? ಇದೇ ಪ್ರಮೇಯವನ್ನು ಈ ಸಾರ್ವತ್ರಿಕ ಮುಷ್ಕರದಲ್ಲಿ ಭಾಗಿಯಾಗುತ್ತಿರುವ ರೈತ ಸಮುದಾಯದ ನಡುವೆಯೂ ಇಟ್ಟು ನೋಡಿದಾಗ, ಭೂಮಿ ಇರುವ ರೈತರ ಬವಣೆಯಾದರೆ, ಕೃಷಿ-ಬೇಸಾಯ-ಕೃಷಿ ಸಂಬಂಧಿತ ಸಣ್ಣ ಕಸುಬುಗಳನ್ನೇ ನಂಬಿ ಬದುಕುವ ಬೃಹತ್ ಜನಸಂಖ್ಯೆ, ಅನ್ಯರ ಭೂಮಿಯಲ್ಲಿ ದಿನಗೂಲಿ ಆಧಾರದಲ್ಲಿ ದುಡಿಯುವ ಕೃಷಿ ಕಾರ್ಮಿಕರ ಬದುಕು ಇನ್ನೂ ದುರ್ಗಮ ಹಾದಿಯಲ್ಲಿ ಸಾಗುತ್ತಿರುವುದನ್ನು ಗಮನಿಸಬೇಕಿದೆ.

ಜುಲೈ ೯ರಂದು ಮೊಳಗಿದ ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ ಎಂಬ ಉದಾತ್ತ ಘೋಷಣೆಯನ್ನು ಬಿಡಿಸಿ ನೋಡಿದಾಗ, ಕಾರ್ಮಿಕರು ಅಥವಾ ಶ್ರಮಿಕರ ನಡುವಿನ ಅಸಮಾನತೆ, ವೇತನ ತಾರತಮ್ಯ ಮತ್ತು ಜೀವನೋಪಾಯದ ತರತಮಗಳು ಢಾಳಾಗಿ ಕಾಣುತ್ತವೆ. ಜುಲೈ ೯ರ ಮುಷ್ಕರದ ಬೇಡಿಕೆಗಳಲ್ಲಿ ಒಂದಾಗಿದ್ದರೂ, ಸಾಂವಿಧಾನಿಕವಾಗಿ ‘ಉದ್ಯೋಗದ ಹಕ್ಕು’ ಶಾಸನಬದ್ಧವಾಗಿ ಜಾರಿಗೊಳಿಸುವ ಆಗ್ರಹವು ಸಾಂಕೇತಿಕ ಮುಷ್ಕರಗಳನ್ನು ದಾಟಿ, ರಾಜಕೀಯ ಸ್ವರೂಪ ಪಡೆಯಬೇಕಾದ ಅಗತ್ಯತೆಯನ್ನು ಸಂಘಟಿತ ವಲಯವು ಗುರುತಿಸಬೇಕಿದೆ. ಈ ದೃಷ್ಟಿಯಿಂದ ಇಲ್ಲಿ ಬೇಕಿರುವುದು ಕಾರ್ಮಿಕ ಹೋರಾಟಗಳ ರಾಜಕೀಯ ಐಕ್ಯತೆ ಅಥವಾ ಕಾರ್ಮಿಕರಲ್ಲಿ ಇರಲೇಬೇಕಾದ, ಇರುವ ರಾಜಕೀಯ ಪ್ರಜ್ಞೆಯ ಐಕ್ಯತೆ. ಈ ರಾಜಕೀಯ ಪ್ರಜ್ಞೆ ((Political Consciousness) ಇಂದು ಅಧಿಕಾರ ರಾಜಕಾರಣದ ಅಂಗಳದಲ್ಲಿ ಛಿದ್ರೀಕರಣಕ್ಕೊಳಗಾಗಿರುವುದು ವಾಸ್ತವ. ಕಾರ್ಮಿಕರಲ್ಲಿ ಈ ಪ್ರಜ್ಞೆ ಮೂಡಿಸುವುದೇ ಆದರೆ ಅದು ಚುನಾವಣೆ ಆಧಾರಿತ ಅಧಿಕಾರ ಕೇಂದ್ರಿತ ಪ್ರಜಾಸತ್ತಾತ್ಮಕ ಪ್ರಜ್ಞೆಯಿಂದಾಚೆಗೆ ವಿಸ್ತರಿಸಬೇಕಿದೆ. ‘ಕಾರ್ಮಿಕರ ಐಕ್ಯತೆ’ಯ ಪ್ರಶ್ನೆ ಎದುರಾದಾಗ ಎಡಪಕ್ಷಗಳು ಗಂಭೀರ ಆತ್ಮಾವಲೋಕನಕ್ಕೆ ಮುಂದಾಗಬೇಕಿದೆ. ಈ ತಾತ್ವಿಕ ನೆಲೆಯಲ್ಲಿ ಜುಲೈ ೯ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಮರುವಿಮರ್ಶೆ ಗೊಳಪಡಿಸಬೇಕಿದೆ. ಇದರ ಅಗತ್ಯತೆ ಇರುವುದು ಹೌದಾದರೂ, ಮುಂದೇನು ಎಂಬ ಪ್ರಶ್ನೆಗೆ ನಿರುತ್ತರರಾಗಿ ನಿಲ್ಲಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಈ ಅರಿವಿನೊಂದಿಗೇ ಜುಲೈ ೯ರ ಸಾರ್ವತ್ರಿಕ ಮುಷ್ಕರದ ಯಶಸ್ಸನ್ನು ಸಂಭ್ರಮಿಸೋಣ.

” ಗ್ರಾಮೀಣ ಯುವಸಮೂಹದ ನಿರುದ್ಯೋಗದ ಪ್ರಮಾಣವು ೧೫-೨೯ ವಯೋಮಾನದವರಲ್ಲಿ ಶೇಕಡಾ ೧೩.೭ರಷ್ಟಿದ್ದು, ನಗರಗಳಲ್ಲಿ ಇದು ಶೇಕಡಾ ೧೭.೯ರಷ್ಟಿದೆ. ಕಾರ್ಮಿಕ ಪಡೆಯ ಭಾಗವಹಿಸುವಿಕೆಯ ದರ (LFPR) ಮೇ ೨೦೨೫ರಲ್ಲಿ ಶೇಕಡಾ ೫೪.೮ಕ್ಕೆ ಕುಸಿದಿರುವುದನ್ನು ದಾಖಲಿಸಲಾಗಿದೆ. ಇದು ಕಡಿಮೆ ಸಂಖ್ಯೆಯ ಜನರು ದುಡಿಮೆಯಲ್ಲಿ ತೊಡಗಿರುವುದನ್ನು ಸೂಚಿಸುತ್ತದೆ.”

– ನಾ ದಿವಾಕರ

ಆಂದೋಲನ ಡೆಸ್ಕ್

Recent Posts

ಜೈಲಿಗೆ ಹೋಗಿ ಬಂದ್ರೂ ಬುದ್ಧಿ ಕಲಿಯದ ರಜತ್:‌ ಮತ್ತೊಂದು ಯಡವಟ್ಟು.!

ಮೈಸೂರು: ಪಾರಂಪರಿಕ ಕಟ್ಟಡದ ಬಳಿ ಸಿಗರೇಟ್‌ ಸೇದುತ್ತಾ ರಜತ್‌ ಫೋಟೋಶೂಟ್‌ ಮಾಡಿಸಿದ್ದು, ಬಿಗ್‌ಬಾಸ್‌ ಹುಡುಗನ ಹುಚ್ಚಾಟಕ್ಕೆ ನೆಟ್ಟಿಗರು ತೀವ್ರ ಆಕ್ರೋಶ…

26 mins ago

ಮೈಸೂರು: ಲೋಕಾಯುಕ್ತ ಪೊಲೀಸರಿಂದ ಏಳು ಕಡೆ ದಾಳಿ: ದಾಖಲೆಗಳ ಪರಿಶೀಲನೆ

ಮೈಸೂರು: ಆದಾಯಕ್ಕಿಂತ ಹೆಚ್ಚು ಹಣ ಸಂಪಾದಿಸಿದ್ದಾರೆ ಎಂಬ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ಏಳು ಕಡೆ ದಾಳಿ ನಡೆಸಿದ್ದಾರೆ.…

54 mins ago

ಸರಗೂರು| ಕಾಡಾನೆ ದಾಳಿ: ದೇವಸ್ಥಾನದ ಕಾವಲುಗಾರ ಸಾವು

ಸರಗೂರು: ಬಹುರ್ದೆಸೆಗೆಂದು ಬಯಲಿಗೆ ತೆರಳಿದ್ದ ವ್ಯಕ್ತಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು…

2 hours ago

ಓದುಗರ ಪತ್ರ: ವಾಲ್ಮೀಕಿ ಭವನ ಉದ್ಘಾಟಿಸಿ

ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ವಾಲ್ಮೀಕಿ ಭವನ ನಿರ್ಮಾಣವಾಗಿ ಎರಡು ವರ್ಷ ಕಳೆದಿದ್ದರೂ ಉದ್ಘಾಟನೆಯಾಗದೇ ಇರುವುದರಿಂದ ಸಾರ್ವಜನಿಕರು…

5 hours ago

ಓದುಗರ ಪತ್ರ: ಬಾಳೆಕೆರೆ ಗ್ರಾಮದಲ್ಲಿ ರಸ್ತೆ ನಿರ್ಮಿಸಿ

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಬಾಳೆಕೆರೆ ಗ್ರಾಮದಲ್ಲಿ ರಸ್ತೆ ಹಾಳಾಗಿದ್ದು, ಮಳೆಗಾಲದಲ್ಲಿ ಗ್ರಾಮಸ್ಥರು ಓಡಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಹೊಸ ಬಡಾವಣೆಗಳಿಗೆ…

5 hours ago

ಓದುಗರ ಪತ್ರ: ಸಾರಿಗೆ ಬಸ್ಸುಗಳು ಸಕಾಲಕ್ಕೆ ನಿಗದಿತ ಸ್ಥಳ ತಲುಪಲಿ

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸಂಚರಿಸುವ ಕೆಲವು ಸಾರಿಗೆ ನಿಗಮದ ಬಸ್ಸುಗಳು ಹಾಗೂ ಮೈಸೂರು ಮತ್ತು, ಬೆಂಗಳೂರು ನಗರ ಸಾರಿಗೆ ಬಸ್ಸುಗಳಲ್ಲಿ…

5 hours ago