ಬಾ.ನಾ.ಸುಬ್ರಹ್ಮಣ್ಯbaanaasu@gmail.com
ಕನ್ನಡ ಕಿರುತೆರೆಯ ಹೆಸರಾಂತ ನಿರ್ದೇಶಕ, ನಿರ್ಮಾಪಕ ವಿನೋದ್ ಧೋಂಡಾಳೆ ಕಳೆದ ಶನಿವಾರ ಆತ್ಮಹತ್ಯೆ ಮಾಡಿಕೊಂಡರು. ನಿರ್ದೇಶಕ, ನಿರ್ಮಾಪಕ ಪಿ.ಶೇಷಾದ್ರಿ ಅವರ ಚಿತ್ರಗಳಿಗೆ ಸಹಾಯಕರಾಗಿ, ನಂತರ ಟಿ.ಎನ್.ಸೀತಾರಾಂ ಅವರ ಸರಣಿಗಳ ಸಹಾಯಕರಾಗಿ, ಸಂಚಿಕೆ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಪಡೆದವರು ವಿನೋದ್. ಮುಂದೆ ಅಲ್ಲಿ ಪರಿಚಯವಾದ ವರ್ಧನ್ ಮತ್ತು ದೀಪಕ್ ನಾಯ್ಡು (ಅವರು ಈಗಿಲ್ಲ) ಜೊತೆ ಸೇರಿಕೊಂಡು ತಮ್ಮದೇ ಆದ ನಿರ್ಮಾಣ ಸಂಸ್ಥೆಯಾದ ವೃದ್ಧಿ ಕ್ರಿಯೇಶನ್ಸ್ ಆರಂಭಿಸುತ್ತಾರೆ. ಅದು ಸರಣಿಗಳನ್ನು ನಿರ್ಮಿಸುತ್ತದೆ. ಪ್ರಧಾನ ನಿರ್ದೇಶನ ವಿನೋದ್ ಅವರದು. ಈ ಸಂಸ್ಥೆಯ ಮೂಲಕ ‘ಶಾಂತಂ ಪಾಪಂ’ ಮೊದಲ್ಗೊಂಡು ‘ಚರಣದಾಸಿ’, ‘ಕಿನ್ನರಿ’, ‘ಯಶೋಧೆ’, ‘ನಾ ನಿನ್ನ ಬಿಡಲಾರೆ’, ‘ಮಿಥುನ ರಾಶಿ’, ‘ನನ್ನರಸಿ ರಾಧೆ’, ‘ತ್ರಿಪುರ ಸುಂದರಿ, ಈಗ ಪ್ರಸಾರವಾಗುತ್ತಿರುವ ‘ಕರಿಮಣಿ’, ‘ಗಂಗೆ ಗೌರಿ’ ಸರಣಿಗಳನ್ನು ನಿರ್ದೇಶಿಸುತ್ತಾರೆ.
ವೃದ್ಧಿ ಕ್ರಿಯೇಶನ್ಸ್ ಮೂಲಕ ಸರಣಿಗಳ ಜೊತೆ ಸಿನಿಮಾಗಳನ್ನು ನಿರ್ಮಿ ಸುವ, ತಾವು ನಿರ್ದೇಶಿಸುವ ಕನಸು ಕಾಣುತ್ತಾರೆ ವಿನೋದ್. ಅದಕ್ಕಾಗಿ ಕಥೆಗಳ ಹುಡುಕಾಟ ನಡೆಸಿ, ನಟ ಸಂಪತ್ ಮೈತ್ರೇಯ ಮೂಲಕ ಕಥೆಗಾರ ದಯಾನಂದ ಅವರ ಪರಿಚಯ ಮಾಡಿಕೊಳ್ಳುತ್ತಾರೆ. ಅವರು ಹೇಳಿದ ಮೂರು ಕಥೆಗಳಲ್ಲಿ ‘ಅಶೋಕ ಬೇಡ್’ ಕಥೆಯನ್ನು ತಮ್ಮ ಮೊದಲ ನಿರ್ದೇಶನದ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ.
2022ರ ಮೇ ತಿಂಗಳಲ್ಲಿ ಈ ಚಿತ್ರ ಸೆಟ್ಟೇರುತ್ತದೆ. ಅಷ್ಟು ಹೊತ್ತಿಗೆ ಸಾಕಷ್ಟು ಬೆಳವಣಿಗೆಗಳು, ವೃದ್ಧಿ ಕ್ರಿಯೇಶನ್ಸ್ ಜೊತೆಗೆ ನಟ ನೀನಾಸಂ ಸತೀಶ್ ಸೇರಿಕೊಂಡರು. ಅವರು ನಿರ್ಮಾಪಕರು ಕೂಡ. ಸತೀಶ್ ಪಿಕ್ಟರ್ ಹೌಸ್ ಅವರ ನಿರ್ಮಾಣ ಸಂಸ್ಥೆ. ಅದಕ್ಕೆ ಕಾರಣವೂ ಇತ್ತು. ‘ಸಾಮಾನ್ಯವಾಗಿ ನಿರ್ದೇಶಕರು ಕಥೆ ಹೇಳಲು ಮನೆಗೆ ಬರ್ತಾರೆ. ಈ ಕಥೆ ನಾನೇ ಹುಡುಕಿದ್ದು ಎಂದು ಮುಹೂರ್ತದ ದಿನ ಅವರು ಹೇಳಿದ್ದರು. ಬಹಳ ವಿಭಿನ್ನವಾದ ಕಥೆಯ ಈ ಚಿತ್ರದಲ್ಲಿ ಸತೀಶ್ ಅವರದು ಮುಖ್ಯ ಭೂಮಿಕೆ, ಇವಿಷ್ಟು ‘ಅಶೋಕ ಬ್ಲಡ್’ ಮುಹೂರ್ತದ ದಿನ ಅಲ್ಲಿ ನೀಡಿದ ಮಾಹಿತಿ,
ಕಳೆದ ವಾರ ವಿನೋದ್ ಆತ್ಮಹತ್ಯೆಯ ನಂತರ ಅವರ ಈ ನಿರ್ಧಾರಕ್ಕೆ ಕಾರಣಗಳನ್ನು ಅವರವರಿಗೆ ಬೇಕಾದಂತೆ ಹೇಳಿದರು. ‘ಅಶೋಕ ಬೇಡ್’ ಸಿನಿಮಾ ಅವರ ಸಾವಿಗೆ ಕಾರಣ, ಅದಕ್ಕಾಗಿ ಮಾಡಿದ ಸಾಲ ಮುಳುವಾಯಿತು ಎಂದು ಅವರ ಆತ್ಮೀಯರು ಹೇಳಿದರು. ಅದಕ್ಕೆ ಕಾರಣವೂ ಇಲ್ಲದಿಲ್ಲ. ತಮ್ಮ ಆತ್ಮಹತ್ಯೆಗೆ ಯಾರೂ ಕಾರಣರಲ್ಲ, ಆರ್ಥಿಕ ಸಂಕಷ್ಟದಿಂದ ನೊಂದು ಈ ನಿರ್ಧಾರ ಮಾಡಿದ್ದೇನೆ ಎಂದು ಬರೆದಿದ್ದರಂತೆ.
ಮೂಲಗಳ ಪ್ರಕಾರ, ಸುಮಾರು ಮೂರು ಕೋಟಿ ರೂ.ಗಳಷ್ಟು ಹಣವನ್ನು ಸಿನಿಮಾಕ್ಕಾಗಿ, ಬ್ಯಾಂಕಿನಿಂದ ಓವರ್ ಡ್ರಾಫ್ಟ್ ಪಡೆಯಲಾಗಿತ್ತು. ಒಂದೂವರೆ, ಎರಡು ಕೋಟಿ ರೂ.ಗಳಲ್ಲಿ ಮುಗಿಸಲು ನಿರ್ಧರಿಸಿದ್ದ ಸಿನಿಮಾಕ್ಕೆ ಇನ್ನೂ 20-25 ದಿನಗಳ ಚಿತ್ರೀಕರಣ ಬಾಕಿ ಇರುವ ಹೊತ್ತಿಗೆ, ಅದಾಗಲೇ ನಿರ್ಮಾಣ ವೆಚ್ಚ ಐದು ಕೋಟಿ ರೂ. ದಾಟಿತ್ತಂತೆ. ವಿನೋದ್ ಪ್ರಕಾರ ಚಿತ್ರದ ಚಿತ್ರೀಕರಣ ಮುಗಿಸಿ, ಮೊದಲ ಪ್ರತಿ ಸಿದ್ಧವಾಗಲು ಮತ್ತೂ ಮೂರು ಕೋಟಿ ರೂಪಾಯಿ ಬೇಕಾಗಿತ್ತು. ಮುಂದೆ ಬಿಡುಗಡೆಗೆ ಆಗುವ ವೆಚ್ಚಗಳು ಪ್ರತ್ಯೇಕ. ಈ ವಿವರವನ್ನು ಅವರು ಇನ್ಯಾವುದೋ ಚರ್ಚೆಗಾಗಿ ಇತ್ತೀಚೆಗೆ ಭೇಟಿಯಾಗಿದ್ದ ನಿರ್ದೇಶಕ ಶೇಷಾದ್ರಿಯವರ ಜೊತೆ ಹೇಳಿದ್ದರಂತೆ.
ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ಬೆಳವಣಿಗೆ ಇದು. ಅದಕ್ಕೆ ‘ಅಶೋಕ ಬ್ಲಡ್’ ಕೂಡ ಹೊರತಾಗಲಿಲ್ಲ. ಸಣ್ಣ ಮಟ್ಟದಲ್ಲಿ ನಿರ್ಮಿಸಲು ಹೊರಟ ಚಿತ್ರ ಮುಂದೆ ಪ್ಯಾನ್ ಇಂಡಿಯಾ ಆಗಿ ಬದಲಾಗಬೇಕು, ಎನ್ನುವಾಗ ಸಹಜವಾಗಿಯೇ ಅದರ ಕ್ಯಾನ್ಯಾಸ್ ವಿಸ್ತಾರವಾಗುತ್ತದೆ. ನಿರ್ಮಾಣ ವೆಚ್ಚವೂ ಏರುತ್ತದೆ. ಪ್ಯಾನ್ ಇಂಡಿಯಾ ಅಂದರೆ ಹೆಚ್ಚಿನ ಸಂದರ್ಭಗಳಲ್ಲಿ ಕನ್ನಡದಲ್ಲಿ ಚಿತ್ರೀಕರಣ ಮಾಡಿ ಇತರ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡುವುದು! ಈ ಚಿತ್ರ ಪ್ಯಾನ್ ಇಂಡಿಯಾ ಅಷ್ಟೇ ಅಲ್ಲದೆ, ಎರಡು ಭಾಗಗಳಲ್ಲಿ ತಯಾರಾಗುವುದು ಮುಂದಿನ ಲೆಕ್ಕಾಚಾರ.
ಪ್ಯಾನ್ ಇಂಡಿಯಾ, ಎರಡು ಭಾಗಗಳು ಹೀಗೆ ಚಿತ್ರದ ವ್ಯಾಪ್ತಿ (ನಿರ್ಮಾಣ ವೆಚ್ಚ) ಹೆಚ್ಚಿದಂತೆ ‘ಅಶೋಕ ಬ್ಲಡ್’ನ ಕನಸು ಕಂಡ ಕಿಶೋರ್ ಪಾಲಿಗೆ ಅದು ನಿಜವಾಗಿಯೂ ಭೇಡೇ ಆಯ್ತು ಎನ್ನುವುದು ಅವರ ನಿಕಟವರ್ತಿಗಳ ಮಾತು. ಅದರ ಪಾಲುಗಾರರಿಬ್ಬರು ಅದನ್ನು ಅದರ ಪಾಲುಗಾರರಿಬ್ಬರು ಅದನ್ನು ಒಪ್ಪಲು ತಯಾರಿಲ್ಲ. ವಿನೋದ್ ಜೊತೆಗಾರ ನಿರ್ಮಾಪಕ ವರ್ಧನ್ ಪ್ರಕಾರ, ‘ವಿನೋದ್ ಅವರ ಸಾವಿಗೂ, ‘ಅಶೋಕ ಬ್ಲಡ್’ ಚಿತ್ರಕ್ಕೂ ಸಂಬಂಧವಿಲ್ಲ. ಸಮಸ್ಯೆ ಇದ್ದಿದ್ದು ಹೌದು. ಚಿತ್ರ ಶುರುವಾಗಿ ಎರಡು ವರ್ಷಗಳಾದರೂ ಇನ್ನೂ ಮುಗಿದಿಲ್ಲ, ಇನ್ನೂ ಚಿತ್ರೀಕರಣ ಬಾಕಿ ಇದೆ ಎಂಬ ಬೇಸರ ವಿನೋದ್ ಅವರಿಗೆ ಇತ್ತು. ಆದರೆ, ಅದಕ್ಕೆ ಪರಿಹಾರ ಹಿಂದಿನ ದಿನವಷ್ಟೇ ಸಿಕ್ಕಿತ್ತು. ಶುಕ್ರವಾರವಷ್ಟೇ ನಮಗೆ ಹೂಡಿಕೆದಾರರು ಸಿಕ್ಕಿದ್ದರು. ಚಿತ್ರದ ಶೋ ರೀಲ್ ನೋಡಿ, ಚಿತ್ರಕ್ಕೆ ಐದು ಕೋಟಿ ರೂ.ಗಳಷ್ಟು ಹೂಡಿಕೆ ಮಾಡುವುದಕ್ಕೆ ರೆಡಿಯಾಗಿದ್ದರು. ಇದರಿಂದ ವಿನೋದ್ ಸಹ ಬಹಳ ಖುಷಿಯಾಗಿದ್ದರು. ಖುಷಿಯಿಂದಲೇ ಮನೆಗೆ ಹೋದರು. ಪರಿಹಾರ ಸಿಗಲಿಲ್ಲ ಎಂದರೆ ಡಿಪ್ರೆಷನ್‌ಗೆ ಹೋದರು ಎನ್ನಬಹುದಿತ್ತು. ಆದರೆ, ಪರಿಹಾರ ಸಿಕ್ಕಿತ್ತು. ಆದರೆ, ಶನಿವಾರ ಬೆಳಿಗ್ಗೆ ಅವರು ನಿಧನರಾದ ಸುದ್ದಿ ಬಂತು
ಚಿತ್ರೀಕರಣಕ್ಕೆ ಸಂಬಂಧಪಟ್ಟಂತೆ, ಒಂದು ಹಾಡು, ಫೈಟು ಸೇರಿದಂತೆ ಒಂದಿಷ್ಟು ಚಿತ್ರೀಕರಣ ಬಾಕಿ ಇರುವುದು ಬಿಟ್ಟರೆ ಮಿಕ್ಕಂತೆ ಎಲ್ಲ ಮುಗಿದಿದೆ. ಸಮಸ್ಯೆ ಆಗಿದ್ದು ಪ್ಲಾನಿಂಗ್‌ನಿಂದ, ನಾವು 45 ದಿನಗಳಲ್ಲಿ ಚಿತ್ರೀಕರಣ ಮುಗಿಸಬೇಕೆಂದುಕೊಂಡಿದ್ದೆವು. ಆದರೆ, 87 ದಿನ ಆಯ್ತು. ಆರಂಭದಲ್ಲಿ ಒಂದೂವರೆ ಕೋಟಿ ರೂ.ಗಳಲ್ಲಿ ಮುಗಿಸಬೇಕು ಅಂತಂದುಕೊಂಡಿದ್ದು ಹೌದು. ಆದರೆ, ಚಿತ್ರ ಬೆಳೆಯುತ್ತಾ ಬೆಳೆಯುತ್ತಾ ದೊಡ್ಡದಾಯ್ತು. ನಾಲ್ಕು ದಿನಗಳ ಕೈಮ್ಯಾಕ್ಸ್ ಚಿತ್ರೀಕರಣ 14 ದಿನಗಳಾಯ್ತು, ನಾಲ್ಕು ಲಕ್ಷ ರೂ. ಅಂತಂದುಕೊಂಡಿದ್ದು 45 ಲಕ್ಷ ರೂ. ಬರೀ ಕೈಮ್ಯಾಕ್ಸ್ ಫೈಟ್‌ಗಾಯ್ತು, ಚೆನ್ನಾಗಿ ಮಾಡಬೇಕು ಅಂತ ಹೋಗಿದ್ದಿಕ್ಕೆ ಹೀಗಾಯ್ತು’ ಎನ್ನುವ ಅವರು ‘ಸತೀಶ್ ಈ ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ’ ಎಂದೂ ಸೇರಿಸುತ್ತಾರೆ.
ವಿನೋದ್ ನಿಧನದ ದಿನ, ಮಾಧ್ಯಮಗಳ ಜೊತೆ ಮಾತನಾಡುವಾಗ ಸತೀಶ್ ಅವರೂ ಈ ಮಾತನ್ನು ಹೇಳಿದ್ದರು. ಸಾಮಾನ್ಯವಾಗಿ ಚಿತ್ರದ ಮುಖ್ಯಪಾತ್ರಧಾರಿಗಳು ನಿರ್ಮಾಣದಲ್ಲಿ ಪಾಲುದಾರರಾದಾಗ ಸಂಭಾವನೆ ಮೊದಲೇ ಪಡೆಯುವ ವಾಡಿಕೆ ಇಲ್ಲ. ತಮ್ಮ ಸಂಭಾವನೆಯ ಜೊತೆಗೆ ಇನ್ನೂ ಒಂದಷ್ಟು ಬಂಡವಾಳ ಹೂಡಬಹುದು. ಇಲ್ಲದೆ ಹೋದರೆ, ಸಂಭಾವನೆಯನ್ನು ಚಿತ್ರ ತೆರೆಕಂಡ ಮೇಲೆ ಪಡೆಯುತ್ತಾರೆ. ಲಾಭ ಬಂದರೆ ಲಾಭದ ಪಾಲಿನ ಜೊತೆ, ಕನ್ನಡದ ಜನಪ್ರಿಯ ನಟರಲ್ಲಿ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರಕ್ಕೆ ಅವರೂ ಪಾಲುದಾರರು, ಯಶ್ ಅಭಿನಯದ ಎರಡು ಚಿತ್ರಗಳ ಚಿತ್ರೀಕರಣ ನಡೆದಿದ್ದು, ಅವುಗಳೆರಡರಲ್ಲೂ ಯಶ್ ಸಂಸ್ಥೆಯ ಸಹಯೋಗವಿದೆ.
ವಿನೋದ್ ಅವರ ಅಂತಿಮ ದರ್ಶನಕ್ಕಾಗಿ ತೆರಳಿದ್ದ ನಿರ್ದೇಶಕ ಪಿ.ಶೇಷಾದ್ರಿ ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ, ಕನ್ನಡ ಚಿತ್ರರಂಗದ ಇಂದಿನ ಸ್ಥಿತಿ, ಅದರ ಕಾರಣಗಳ ಕುರಿತೂ ಹೇಳಿದ ಮಾತುಗಳನ್ನು ಉದ್ಯಮ ಗಮನಿಸಬೇಕು. ‘ಈ ಸಾವಿಗೆ ಪರೋಕ್ಷವಾಗಿ, ಅಪರೋಕ್ಷವಾಗಿ ತುಂಬಾ ಜನ ಕಾರಣರು, ಯಾವ ಕೋರ್ಟೂ ಅವರಿಗೆ ಶಿಕ್ಷೆ ಕೊಡುವುದಿಲ್ಲ. ಇದು ನಾವು ಕಂಡ ಸಾವು. ಬದುಕಿಯೂ ಸತ್ತ ಹಾಗೆ ಎಷ್ಟು ಜನ ಇದ್ದಾರೋ ಗೊತ್ತಿಲ್ಲ’ ಎಂದ ಅವರ ಮಾತು, ಚಿತ್ರಗಳನ್ನು ನಿರ್ಮಿಸಿ, ಮನೆ ಮಠ ಮಾರಿ ಬೀದಿಗೆ ಬಂದವರ, ಅನ್ನಲೂ ಆಗದೆ ಅನುಭವಿಸಲೂ ಆಗದೆ ಇರುವವರ ಕುರಿತಂತೆ ಇದ್ದ ಮಾತು.
ಇದು ಉದ್ಯಮದ ಆತ್ಥಾವಲೋಕನಕ್ಕೆ ಸಕಾಲ ಎನ್ನುವುದು ಅವರ ಅಭಿಪ್ರಾಯ. ನಾವು ಎಲ್ಲಿ ತಪ್ಪಿದ್ದೇವೆ, ಚಿತ್ರರಂಗದ ಮಾರುಕಟ್ಟೆ ಎಷ್ಟಿದೆ, ಹಾಕಿದ ಹಣ ಹಿಂದಿರುಗಿ ಬರುವ ರೀತಿ ಹೇಗೆ, ಮುಂತಾಗಿ ಲೆಕ್ಕಾಚಾರಗಳಿಲ್ಲದೆ ಹೋದಾಗ ಆಗುವ ಇಂತಹ ಅಪಾಯವನ್ನು ತಪ್ಪಿಸಲು ಮೊದಲು ದಾರಿ ಹುಡುಕಬೇಕಾಗಿದೆ. ಇಲ್ಲಿ ಯಾರು ಸರಿ, ಯಾರು ತಪ್ಪು ಎನ್ನುವ ಮಾತಲ್ಲ, ಒಟ್ಟು ಚಿತ್ರ ನಿರ್ಮಾಣದಲ್ಲಿನ ಅಶಿಸ್ತು, ಸಮಯ ಪ್ರಜ್ಞೆಯ ಕೊರತೆ, ಮುಖ್ಯವಾಗಿ ನಟರಲ್ಲಿ, ತಾರಾವರ್ಚಸ್ಸನ್ನು ಏರಿಸಿಕೊಳ್ಳುವ, ಅದನ್ನು ಉಳಿಸಿಕೊಳ್ಳುವ ಧಾವಂತದಲ್ಲಿ ಉಳಿದ ಕಡೆ ಆಗುವ ಅಪಾಯ ಇತ್ಯಾದಿಗಳತ್ತ ಗಮನಕೊಡಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ.
ಚಿತ್ರವೊಂದು ಸೋತರೆ, ಆ ಸೋಲು ನಿರ್ಮಾಪಕನದು ಮಾತ್ರ, ನಟರು, ನಿರ್ದೇಶಕರು, ಉಳಿದ ತಂತ್ರಜ್ಞರು, ಕಾರ್ಮಿಕರು ಯಾರೂ ಕೂಡ ಈ ನಷ್ಟದಲ್ಲಿ ಪಾಲುದಾರರಲ್ಲ. ನಿರ್ಮಾಪಕರು ಮಾತ್ರ ಅದನ್ನು ಅನುಭವಿಸಬೇಕಾಗುತ್ತದೆ. ಕನ್ನಡ ಚಿತ್ರರಂಗದಲ್ಲೀಗ ಕೋಟಿಗಳ ದರ್ಬಾರು ಇನ್ನೂ ಪೂರ್ತಿಯಾಗದ ಚಿತ್ರವೊಂದರ ನಿರ್ಮಾಣಕ್ಕೆ ಈಗಾಗಲೇ ಅರವತ್ತರ ಬದಲು 120 ಕೋಟಿ ರೂ. ವೆಚ್ಚವಾಗಿದೆ; ಮತ್ತೊಂದು ಚಿತ್ರಕ್ಕೆ 240 ದಿನಗಳ ಚಿತ್ರೀಕರಣವಾಗಿದೆ, ಇವರು ಒಂದೂವರೆ ಕೋಟಿ ರೂ. ಕೇಳುತ್ತಾರೆ, ಅವರು ಎರಡು ಕೋಟಿ ರೂ. ಕೇಳುತ್ತಾರೆ… ಇವರದು ಆರು ಕೋಟಿ ರೂ… ಹೀಗೆ ಚಿತ್ರಗಳ, ನಟರ ಬಗ್ಗೆ ಮಾತುಗಳು. ಉಳ್ಳವರು ಶಿವಾಲಯ ಮಾಡುವರು’ ಎನ್ನುವಂತೆ ಶಕ್ತರು ಬಂಡವಾಳ ಹೂಡುತ್ತಾರೆ. ಆದರೆ ಅಂತಹವರ ಸಂಖ್ಯೆ ಎಷ್ಟಿದೆ? ಹೀಗೆ ಹೂಡಿ ಬಂಡವಾಳದಲ್ಲಿ ಎಷ್ಟನ್ನು ನಟರೋ ತಂತ್ರಜ್ಞರೋ ತರಲು ಸಾಧ್ಯ ಎನ್ನುವ ಪ್ರಶ್ನೆಯನ್ನು ಯಾರೂ ಕೇಳುತ್ತಿಲ್ಲ. ಇಂತಹ ಬೆಳವಣಿಗೆ ಸೂಕ್ಷ್ಮ ಮನಸ್ಸಿನ ವಿನೋದ್‌ರಂತಹವರಿಗೆ ಇದು ಖಿನ್ನತೆಗೆ ದಾರಿಯಾಗುತ್ತದೆ, ಕಠಿಣ ನಿರ್ಧಾರಕ್ಕೂ, ಇದು ಪುನರಾವರ್ತನೆ ಆಗದಿರಲಿ.
ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…
ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…