ಕೇಂದ್ರ ಸರ್ಕಾರದಲ್ಲಿ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು ಡಿಸೆಂಬರ್ ೧೬ರಂದು ಲೋಕಸಭೆಯಲ್ಲಿ ಹೊಸ ಮಸೂದೆಯೊಂದನ್ನು ಮಂಡಿಸಿದ್ದಾರೆ. ಮಸೂದೆಯ ಸಂಖ್ಯೆ ೧೯೭. ಈ ಮಸೂದೆಯ ಸಂಕ್ಷಿಪ್ತ ಹೆಸರು ‘ ವಿಕಸಿತ್ ಭಾರತ್- ಜಿ ರಾಮ್ ಜಿ ಮಸೂದೆ ೨೦೨೫’. ವಿಕಸಿತ್ ಭಾರತಕ್ಕೂ ಜಿ ರಾಮ್ ಜಿ ಗೂ ಏನು ಸಂಬಂಧ ಎಂದು ಯೋಚಿಸಬೇಡಿ..!
ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ೨೦೦೫ರಲ್ಲಿ ಜಾರಿಗೆ ತಂದಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ’ ಗೆ ಪರ್ಯಾಯವಾಗಿ ಈ ಮಸೂದೆಯನ್ನು ಮಂಡಿಸಲಾಗಿದೆ. ಇದು ಮನರೇಗಾ ಕಾಯಿದೆಯನ್ನು ಸಮಗ್ರವಾಗಿ ಬದಲಾಯಿಸುವ ಹುನ್ನಾರ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿ ಕಳೆದ ೨೦ ವರ್ಷಗಳಿಂದ ಜಾರಿಯಲ್ಲಿ ಇದ್ದ ದೇಶದ ಪ್ರಮುಖ ಯೋಜನೆಯೊಂದನ್ನು ಕೇಂದ್ರ ಸರ್ಕಾರ ತನ್ನ ಮನಸ್ಥಿತಿಗೆ ಅನುಗುಣವಾಗಿ ಬದಲಾಯಿಸಲು ಹೊರಟಿದೆ. ಯೋಜನೆಯ ಶೀರ್ಷಿಕೆಯಲ್ಲಿ ವಿರಾಜಮಾನವಾಗಿದ್ದ ಮಹಾತ್ಮ ಗಾಂಧಿ ಎನ್ನುವ ಪದವನ್ನೇ ಕಿತ್ತು ಹಾಕಲಾಗಿದೆ. ಗಾಂಧೀಜಿಯವರು ರಾಮನ ಮಹಾ ಭಕ್ತರು. ಹೀಗಾಗಿ ಯೋಜನೆಗೆ ‘ಜಿ ರಾಮ್ ಜಿ’ ಯೋಜನೆ ಎಂದು ಮರು ನಾಮಕರಣ ಮಾಡಿದ್ದರಲ್ಲಿ ಏನೂ ತಪ್ಪು ಇಲ್ಲ ಎನ್ನುವ ಸಮರ್ಥನೆಯನ್ನು ಆಡಳಿತ ಪಕ್ಷ ಮಾಡುತ್ತಿದೆ.!! ಹೆಸರು ಬದಲಾಯಿಸುವ ರೋಗ ಹೊಸದೇನೂ ಅಲ್ಲ. ಈಗಾಗಲೇ ಹಲವು ಯೋಜನೆಗಳ ಹೆಸರುಗಳನ್ನು ಸದ್ದಿಲ್ಲದೇ ಬದಲಾಯಿಸಲಾಗಿದೆ. ಈಗ ಹೆಸರಿನ ಜೊತೆಗೆ ಒಳಗಿನ ಹೂರಣವನ್ನು ಕೂಡ ಬದಲಾಯಿಸಲಾಗುತ್ತಿದೆ.
ಮನರೇಗಾ ಕುರಿತು ಬಿಜೆಪಿ ಧೋರಣೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೊದಲ ಅವಧಿಯ ಯುಪಿಎ ಸರ್ಕಾರವು ಜಾರಿಗೆ ತಂದ ಅತ್ಯಂತ ಮಹತ್ವದ ಯೋಜನೆಯಾಗಿದೆ. ಗ್ರಾಮೀಣ ದುಡಿಯುವ ಕೈಗಳಿಗೆ ದುಡಿಯುವ ಹಕ್ಕನ್ನು ಮತ್ತು ವರಮಾನವನ್ನು ಖಾತರಿ ಪಡಿಸುವ ಮಹೋನ್ನತ ಉದ್ದೇಶದಿಂದ ಅನುಷ್ಠಾನಕ್ಕೆ ಬಂದ ಮನರೇಗಾ ಯೋಜನೆ ಆರಂಭಗೊಂಡು ೨೦ ವರ್ಷಗಳಾಗಿವೆ. ಯೋಜನೆಯ ಅನುಷ್ಠಾನದ ಆರಂಭದಲ್ಲಿಯೇ ಭಾರತೀಯ ಜನತಾ ಪಕ್ಷ ಯೋಜನೆಯನ್ನು ತೀವ್ರವಾಗಿ ವಿರೋಧಿಸಿತ್ತು. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಯೋಜನೆಯ ಕುರಿತು ಟೀಕಾ ಪ್ರಹಾರ ನಡೆಸಿದ್ದರು. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಯೋಜನೆಯನ್ನು ರದ್ದು ಮಾಡುವ ಆತಂಕವೂ ಇತ್ತು. ಆದರೆ ಮೋದಿಯವರ ನೇತೃತ್ವದಲ್ಲಿ ಬಂದ ಸರ್ಕಾರ ಮನರೇಗಾ ಯೋಜನೆಯನ್ನು ರದ್ದು ಮಾಡುವ ಧೈರ್ಯ ಮಾಡಿರಲಿಲ್ಲ. ಆದರೆ ಈಗ ಆ ಕಾರ್ಯವನ್ನು ಆರಂಭಿಸಿದೆ. ಅದರ ಭಾಗವಾಗಿ ‘ವಿಕಸಿತ್ ಭಾರತ್- ಜಿ ರಾಮ್ ಜಿ ೨೦೨೫’ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದೆ.
ಇದನ್ನು ಓದಿ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ, ಟ್ರೋಫಿ
ಮೇಲ್ನೋಟಕ್ಕೆ ಕಾಣುವ ಸಮಸ್ಯೆಗಳು: ಮನರೇಗಾ ಕಾಯಿದೆ ೨೦೦೫ಕ್ಕೆ ಹೋಲಿಸಿದರೆ ಪ್ರಸ್ತುತ ಮಂಡಿಸಲಾಗಿರುವ ವಿಕಸಿತ್ ಭಾರತ್- ಜಿ ರಾಮ್ ಜಿ ೨೦೨೫ರ ಕರಡಿನಲ್ಲಿ ಅನೇಕ ವ್ಯತ್ಯಾಸಗಳು ಕಂಡು ಬರುತ್ತವೆ. ಹೊಸ ಕಾಯಿದೆಯು ರಾಜ್ಯಗಳ ಮೇಲಿನ ಆರ್ಥಿಕ ಹೊರೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಯೋಜನೆಯ ಅನುಷ್ಠಾನದ ಮೇಲೆ ಕೇಂದ್ರ ಸರ್ಕಾರದ ನಿಯಂತ್ರಣವನ್ನು ಬಿಗಿಗೊಳಿಸಲಾಗಿದೆ. ಅಧಿಕಾರ ವಿಕೇಂದ್ರಿಕರಣದ ಮಹತ್ವ ಮತ್ತು ಅವಶ್ಯಕತೆಯನ್ನು ಕಡೆಗಣಿಸಲಾಗಿದೆ. ಮಸೂದೆಯು ಇನ್ನೂ ಅಂತಿಮವಾಗಿ ಅನುಮೋದನೆಗೊಂಡಿಲ್ಲ, ಚರ್ಚೆಯಲ್ಲಿದೆ. ಏನೇನು ಬದಲಾವಣೆಗಳು ಆಗಲಿವೆ ಎಂದು ಖಚಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಸೂದೆಗೆ ಸಂಬಂಧಿಸಿ ಮೇಲ್ನೋಟಕ್ಕೆ ಕಂಡು ಬರುವ ಸಮಸ್ಯೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
ರಾಜ್ಯಗಳ ಮೇಲೆ ಆರ್ಥಿಕ ಹೊರೆ: ಯೋಜನೆಯ ಒಟ್ಟು ವೆಚ್ಚದಲ್ಲಿ ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯನ್ ಸ್ಟೇಟ್ಸ್ ( ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ )ಗಳನ್ನು ಹೊರತು ಪಡಿಸಿ ಉಳಿದ ಎಲ್ಲ ರಾಜ್ಯಗಳು ಶೇ.೪೦ನ್ನು ಭರಿಸಬೇಕಿದೆ. ಈ ಅನುಪಾತದ ಪ್ರಕಾರ ಒಂದು ವರ್ಷಕ್ಕೆ ಅಂದಾಜಿಸಲಾದ ರೂ. ೧,೫೧, ೨೮೨ ಕೋಟಿ ಮೊತ್ತದಲ್ಲಿ ೯೫,೬೯೨.೩೧ ಕೋಟಿ ರೂ. ಗಳನ್ನು ಮಾತ್ರ ಕೇಂದ್ರ ಸರ್ಕಾರ ಭರಿಸುತ್ತದೆ. ಉಳಿದ ಹೊರೆಯನ್ನು ರಾಜ್ಯ ಸರ್ಕಾರಗಳ ಮೇಲೆ ಹೊರಿಸಲಾಗಿದೆ. ಜೊತೆಗೆ ಕೆಲಸ ಒದಗಿಸಲು ವಿಫಲರಾದ ಸಂದರ್ಭದಲ್ಲಿ ನಿರುದ್ಯೋಗ ಭತ್ಯೆ ನೀಡುವ ಹೊಣೆಗಾರಿಕೆ ಸಂಪೂರ್ಣವಾಗಿ ರಾಜ್ಯ ಸರ್ಕಾರಗಳದ್ದಾಗಿದೆ. ಕೈಗೊಳ್ಳಲಾಗುವ ಕಾಮಗಾರಿಗಳಿಗೆ ಅನುಮೋದಿತ ಯೋಜನಾ ವೆಚ್ಚಕ್ಕಿಂತ ಹೆಚ್ಚು ವೆಚ್ಚವಾದಲ್ಲಿ ಅದನ್ನು ಕೂಡ ರಾಜ್ಯ ಸರ್ಕಾರಗಳೇ ಭರಿಸಬೇಕು ಎಂದು ಮಸೂದೆ ಹೇಳುತ್ತದೆ.
ಹಣ ಬಿಡುಗಡೆಗೆ ರಾಜ್ಯವಾರು ಮಾನದಂಡ: ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಇರುವ ಅನುದಾನವನ್ನು ಕೇಂದ್ರ ಸರ್ಕಾರ ಬೇಡಿಕೆ ಆಧಾರದಲ್ಲಿ ನೀಡುವುದಿಲ್ಲ. ಬದಲಾಗಿ ರಾಜ್ಯಗಳಿಗೆ ಪ್ರತ್ಯೇಕ ಮಾನದಂಡಗಳನ್ನು (Normative allocation) ಆಧರಿಸಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಈ ಮಾನದಂಡಗಳು ಏನು ಎಂದು ಕೇಂದ್ರ ಸರ್ಕಾರವೇ ನಿರ್ಧರಿಸುತ್ತದೆ. ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಆದ್ಯತಾ ವಲಯದ ಆಯ್ಕೆ ಹೊಸ ಯೋಜನೆಯಡಿಯಲ್ಲಿ ಕೈಗೊಳ್ಳಬಹುದಾದ ವಿವಿಧ ವಲಯಗಳು ಮತ್ತು ಕಾಮಗಾರಿಗಳ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕೇಂದ್ರ ಸರ್ಕಾರ ತನ್ನ ನಿಯಂತ್ರಣದಲ್ಲಿ ಉಳಿಸಿಕೊಂಡಿದೆ. ಇದು ರಾಜ್ಯ ಸರ್ಕಾರಗಳು ತಮ್ಮ ರಾಜ್ಯಕ್ಕೆ ಅವಶ್ಯಕತೆ ಇರುವ ಆದ್ಯತೆಗಳನ್ನು ನಿರ್ಧರಿಸುವ ಹಕ್ಕನ್ನು ನಿರಾಕರಿಸುತ್ತದೆ.
ಕುಟುಂಬಕ್ಕೆ ವಾರ್ಷಿಕ ೧೨೫ ದಿನಗಳ ಕೆಲಸ: ಪ್ರತಿ ಕುಟುಂಬಕ್ಕೆ ಒದಗಿಸಲಾಗುವ ಕೆಲಸದ ದಿನಗಳನ್ನು ವಾರ್ಷಿಕ ೧೦೦ ರಿಂದ ೧೨೫ ದಿನಗಳಿಗೆ ಏರಿಸಲು ನಿರ್ಧರಿಸಿರುವುದನ್ನು ದೊಡ್ಡ ಸಾಧ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಈ ಹಿಂದಿನ ೫ ವರ್ಷಗಳ ಪ್ರಗತಿಯ ವಿವರವನ್ನು ನೋಡಿದಾಗ ಇದು ಅವಾಸ್ತವ ಎಂದು ಅರಿವಾಗುತ್ತದೆ. ರಾಷ್ಟ್ರಮಟ್ಟದಲ್ಲಿ ೨೦೨೧-೨೨ ನೇ ಸಾಲಿನಿಂದ ೨೦೨೫-೨೬ನೇ ಸಾಲಿನವರೆಗೆ ಪ್ರತಿ ಕುಟುಂಬಕ್ಕೆ ಒದಗಿಸಿರುವ ವಾರ್ಷಿಕ ಕೆಲಸದ ಅವಧಿ ಸರಾಸರಿ ೫೮ ದಿನಗಳನ್ನು ಮೀರಿಲ್ಲ. ಇದೇ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಒಂದು ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ಒದಗಿಸಿರುವ ಕೆಲಸದ ದಿನಗಳು ೫೦ನ್ನು ದಾಟಿಲ್ಲ. ವಾಸ್ತವ ಹೀಗಿರುವಾಗ ಪ್ರತಿ ಕುಟುಂಬಕ್ಕೆ ೧೨೫ ದಿನಗಳ ಕೆಲಸ ಒದಗಿಸುತ್ತೇವೆ ಎಂದು ಘೋಷಿಸುವುದು ಕೇವಲ ಭ್ರಮೆ..!! ಮೇಲೆ ಗುರುತಿಸಲಾಗಿರುವ ಸಮಸ್ಯೆಗಳನ್ನು ಗಮನಿಸಿದಾಗ ಹೊಸ ಮಸೂದೆಯು ಭಾರತದ ಒಕ್ಕೂಟ ವ್ಯವಸ್ಥೆಯ ಸಬಲೀಕರಣಕ್ಕೆ ಪೂರಕವಾಗಿಲ್ಲ ಎಂದು ಹೇಳಬಹುದು. ಈಗ ಇರುವ ರೂಪದಲ್ಲಿಯೇ ಮಸೂದೆ ಅಂಗೀಕಾರ ಆದಲ್ಲಿ ಭಾರತದ ಒಕ್ಕೂಟ ವ್ಯವಸ್ಥೆ ಇನ್ನಷ್ಟು ಸಡಿಲಗೊಳ್ಳುವ ಅಪಾಯವಿದೆ.
ಇದನ್ನು ಓದಿ: ಪುಕ್ಕಟೆ ಪಾರ್ಕಿಂಗ್ ಮಾಡಬೇಕೆ? ಇಲ್ಲಿಗೆ ಬನ್ನಿ!
ವಿರೋಧ ಪಕ್ಷಗಳು ಕರಡು ಮಸೂದೆಯ ಮೇಲಿನ ಚರ್ಚೆಯನ್ನು ಕೇವಲ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದು ಹಾಕಿರುವ ಕುರಿತು ಕೇಂದ್ರೀಕರಿಸಬಾರದು. ರಾಜ್ಯಗಳ ಸ್ವಾಯತ್ತತೆಗೆ ಮಾರಕವಾಗುವ ಅಂಶಗಳನ್ನು ಗುರುತಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಾಧ್ಯವಾಗಬೇಕು. ದೇಶದ ಗ್ರಾಮೀಣ ಅಕುಶಲ ಕೆಲಸಗಾರರ ದುಡಿಮೆ ಮತ್ತು ಗಳಿಕೆಯ ಹಕ್ಕನ್ನು ಕಾಯಿದೆಯ ಮೂಲಕ ಖಾತರಿಗೊಳಿಸಲು ಇರುವ ಅವಕಾಶ ಕೈ ತಪ್ಪಿ ಹೋಗದಂತೆ ತಡೆಯಬೇಕು.
” ರಾಷ್ಟ್ರಮಟ್ಟದಲ್ಲಿ ೨೦೨೧-೨೨ನೇ ಸಾಲಿನಿಂದ ೨೦೨೫-೨೬ನೇ ಸಾಲಿನವರೆಗೆ ಪ್ರತಿ ಕುಟುಂಬಕ್ಕೆ ಒದಗಿಸಿರುವ ವಾರ್ಷಿಕ ಕೆಲಸದ ಅವಧಿ ಸರಾಸರಿ ೫೮ ದಿನಗಳನ್ನು ಮೀರಿಲ್ಲ. ಇದೇ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಒಂದು ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ಒದಗಿಸಿರುವ ಕೆಲಸದ ದಿನಗಳು ೫೦ನ್ನು ದಾಟಿಲ್ಲ. ವಾಸ್ತವ ಹೀಗಿರುವಾಗ ಪ್ರತಿ ಕುಟುಂಬಕ್ಕೆ ೧೨೫ ದಿನಗಳ ಕೆಲಸ ಒದಗಿಸುತ್ತೇವೆ ಎಂದು ಘೋಷಿಸುವುದು ಕೇವಲ ಭ್ರಮೆ..!!”
ಹೊಸ ಮಸೂದೆಯ ಮುಖ್ಯ ಅಂಶಗಳು:
ಜಿ ರಾಮ್ ಜಿ ಮಸೂದೆ ೨೦೨೫ ರ ಕರಡು ಒಟ್ಟು ೭ ಅಧ್ಯಾಯಗಳು ಮತ್ತು ೨ ಅನುಸೂಚಿಗಳನ್ನು ಹೊಂದಿದೆ
* ಮೊದಲನೇ ಅಧ್ಯಾಯದಲ್ಲಿ ಮಸೂದೆಯ ಕರಡು ಒಳಗೊಂಡಿರುವ ವಿಷಯದ ಪರಿವಿಡಿ ಮತ್ತು ಪ್ರಾಥಮಿಕ ಮಾಹಿತಿ ಇದೆ
* ಎರಡನೇ ಅಧ್ಯಾಯದಲ್ಲಿ ಯೋಜನೆಯ ಸ್ವರೂಪ ಮತ್ತು ಅನುಷ್ಠಾನದ ಚೌಕಟ್ಟನ್ನು ವಿವರಿಸಲಾಗಿದೆ
* ಮೂರನೆಯ ಅಧ್ಯಾಯದಲ್ಲಿ ಕಾಯಿದೆಯ ಕುರಿತು ವಿವರಗಳಿವೆ
* ನಾಲ್ಕನೇ ಅಧ್ಯಾಯದಲ್ಲಿ ಅನುಷ್ಠಾನದ ಹಂತಗಳು, ವಿಧಾನ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯ ಕುರಿತು ತಿಳಿಸಲಾಗಿದೆ
* ಐದನೇ ಅಧ್ಯಾಯದಲ್ಲಿ ಯೋಜನೆಯ ಸ್ವರೂಪ ಮತ್ತು ನಿಧಿ ಹಂಚಿಕೆ ಕುರಿತಾದ ವಿವರಗಳಿವೆ
* ಆರನೇ ಅಧ್ಯಾಯವು ಪಾರದರ್ಶಕತೆ ಮತ್ತು ಉತ್ತರಧಾಯಿತ್ವದ ವಿಧಿ ವಿಧಾನಗಳ ಕುರಿತಾಗಿದೆ
* ಏಳನೇ ಅಧ್ಯಾಯ ಇತರೆ ಪೂರಕ ಅಂಶಗಳನ್ನು ಒಳಗೊಂಡಿದೆ
* ಒಂದನೇ ಅನುಸೂಚಿಯು ಅನುಷ್ಠಾನಗೊಳಿಸಬಹುದಾದ ಕಾಮಗಾರಿಗಳು ಮತ್ತು ಆದ್ಯತೆಯ ವಿವರಗಳನ್ನು ನೀಡುತ್ತದೆ
* ಎರಡನೇ ಅನುಸೂಚಿಯು ರೋಜಗಾರ್ ಕಾರ್ಡ್, ಕೆಲಸಕ್ಕೆ ಅರ್ಜಿ ಸಲ್ಲಿಸುವುದು, ಕೆಲಸದ ಆರಂಭ, ಕೆಲಸದ ಪ್ರಮಾಣ, ಕೆಲಸದ ಅಳತೆ ಮುಂತಾದ ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ
–ವಿಲ್ಪ್ರೆಡ್ ಡಿ’ಸೋಜ
ದೆಹಲಿ ಕಣ್ಣೋಟ -ಶಿವಾಜಿ ಗಣೇಶನ್ ಹತ್ತೊಂಬತ್ತು ದಿನಗಳ ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಎಂದಿನಂತೆ…
ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…
ಸಾಮಾಜಿಕ ಬಹಿಷ್ಕಾರ ಹಾಕಿದವರಿಗೆ ಜೈಲು ಶಿಕ್ಷೆ ಹಾಗೂ ಲಕ್ಷ ರೂ. ದಂಡವನ್ನು ವಿಧಿಸುವ ಮಸೂದೆಗೆ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ…
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟದಿಂದ ಹೊರಬರಲು ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಿದೆ. ಆದರೆ ಈ…
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಊಟಿ ರಸ್ತೆಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯ ಶಾಖೆಗೆ ಪ್ರತಿನಿತ್ಯ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ…
ನಿಗಮಗಳಿಗೆ ಸಕಾಲಕ್ಕೆ ಹಣ ಬಿಡುಗಡೆ ಮಾಡದ ಸರ್ಕಾರ; ಏದುಸಿರು ಬಿಡುತ್ತಿರುವ ನಿಗಮಗಳು ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ…