Unresolved power sharing dispute in the state
ಬೆಂಗಳೂರು ಡೈರಿ
ಕಳೆದ ವಾರ ನಂದಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯ ಸಂದರ್ಭದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಕಡ್ಡಿ ಮುರಿದಂತೆ ಉತ್ತರಿಸಿದರು.
ಮುಂದಿನ ಐದು ವರ್ಷಗಳ ಕಾಲ ನಾನೇ ಸಿಎಂ ನಿಮಗೇಕೆ ಅನುಮಾನ ಅಂತ ಅವರು ಮರುಪ್ರಶ್ನೆ ಹಾಕಿದಾಗ ಸುದ್ದಿಗಾರರು ಮಾತ್ರವಲ್ಲ, ಇಡೀ ರಾಜ್ಯವೇ ಅದನ್ನು ಕುತೂಹಲದಿಂದ ಅನೋಡಿತು. ಅಂದ ಹಾಗೆ ಐದು ವರ್ಷಗಳ ಕಾಲ ನಾನೇ ಸಿಎಂ ಅಂತ ಸಿದ್ದರಾಮಯ್ಯ ಅವರು ಹೇಳಿರುವುದು ಇದೇ ಮೊದಲ ಸಲವಲ್ಲ. ಅಧಿಕಾರ ಹಂಚಿಕೆಯ ಮಾತು ಬಂದಾಗಲೆಲ್ಲ ಇದೇ ಮಾತನ್ನು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಆದರೆ ಈ ಸಲ ಅವರು ಅದೇ ಮಾತನಾಡಿದಾಗ ಮಾತ್ರ ಎಲ್ಲರೂ ಬೆರಗಿನಿಂದ ನೋಡಿದರು. ಕಾರಣ ಎರಡೂವರೆ ವರ್ಷಗಳ ನಂತರ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ ಅಂತ ಇದುವರೆಗೆ ಏನು ಹೇಳಿಕೊಂಡು ಬರಲಾಗಿತ್ತೋ ಆ ಕಾಲ ಸಮೀಪದಲ್ಲಿದೆ. ಅರ್ಥಾತ್, ಐದು ತಿಂಗಳಷ್ಟು ಸಮೀಪದಲ್ಲಿದೆ. ಇದೇ ರೀತಿ ಅಧಿಕಾರ ಹಂಚಿಕೆಯ ಬಗ್ಗೆ ಸಿದ್ದರಾಮಯ್ಯ ಆಪ್ತರ ಪಡೆ ವಿರೋಧದ ಧ್ವನಿ ಎತ್ತಿದ ಸಂದರ್ಭಗಳಲ್ಲೆಲ್ಲ ಡಿಸಿಎಂ ಡಿಕೆಶಿ ತಿರುಗಿ ಬಿದ್ದಿದ್ದಾರೆ.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರೇ ಇರಬಹುದು, ಭಾರೀ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರೇ ಇರಬಹುದು ಅಥವಾ ಇನ್ಯಾರೇ ಇರಬಹುದು. ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಅಂತ ಹೇಳಿದಾಗಲೆಲ್ಲ ಡಿಕೆಶಿ ಕನಲಿದ್ದಾರೆ. ಅಷ್ಟೇ ಅಲ್ಲ, ಆ ಸಂದರ್ಭಗಳಲ್ಲೆಲ್ಲ ದಿಲ್ಲಿ ವರಿಷ್ಠರ ಬಳಿ ದೂರು ತೆಗೆದುಕೊಂಡು ಹೋಗಿದ್ದಾರೆ.
ಕುತೂಹಲದ ಸಂಗತಿ ಎಂದರೆ ಅವರು ದೂರು ತೆಗೆದುಕೊಂಡು ಹೋದಾಗಲೆಲ್ಲ ಕೆ.ಸಿ. ವೇಣು ಗೋಪಾಲ್,ರಣದೀಪ್ ಸಿಂಗ್ ಸುರ್ಜೇವಾಲಾ ಅವರಂತಹ ನಾಯಕರು ಮಧ್ಯೆ ಪ್ರವೇಶಿಸಿದ್ದಾರೆ. ಅಧಿಕಾರ ಹಂಚಿಕೆಯ ಬಗ್ಗೆ ದಿಲ್ಲಿಯಲ್ಲಿ ಏನು ನಡೆಯಿತು ಅಂತ ರಾಜ್ಯದ ನಾಯಕರ‍್ಯಾರಿಗೂ ಗೊತ್ತಿಲ್ಲ. ಹೀಗಾಗಿ ಆ ಬಗ್ಗೆ ಯಾರೂ ಮಾತನಾಡಕೂಡದು ಎಂದಿದ್ದಾರೆ. ಹೀಗೆ ಅಧಿಕಾರ ಹಂಚಿಕೆಯ ಬಗ್ಗೆ ಯಾರೂ ಮಾತನಾಡಬಾರದು ಅಂತ ಅವರು ಕಟ್ಟಾಜ್ಞೆ ವಿಧಿಸಿದ್ದರಿಂದಲೇ ಆ ಮಾತು ಇದುವರೆಗೆ ಜೀವಂತವಾಗಿ ಉಳಿದು ಬಂದಿದೆ. ಹೀಗೆ ಅದು ಸುದೀರ್ಘಕಾಲದಿಂದ ಜೀವಂತವಾಗಿ ಉಳಿದು ಕೊಂಡು ಬಂದಿದೆ ಎಂಬ ಕಾರಣಕ್ಕಾಗಿಯೇ ಮೊನ್ನೆ ಸಿದ್ದರಾಮಯ್ಯ ಅವರಾಡಿದ ಮಾತು ಕುತೂಹಲಕ್ಕೆ ಕಾರಣವಾಯಿತು. ಅಷ್ಟೇ ಅಲ್ಲ, ಕೆಲ ಅನುಮಾನದ ಮಾತುಗಳು ಕೇಳಿಸತೊಡಗಿದವು.
ಅಂತಹ ಅನುಮಾನ ವ್ಯಕ್ತಪಡಿಸುವವರ ಪ್ರಕಾರ: ಇವತ್ತು ಅಧಿಕಾರ ಹಸ್ತಾಂತರದ ಮಾತೇ ಇಲ್ಲ ಅಂತ ಸಿಎಂ ಸ್ಪಷ್ಟವಾಗಿ ಹೇಳಿರಬಹುದು. ಆದರೆ ನವೆಂಬರ್ ನಂತರದ ಪರಿಸ್ಥಿತಿ ಸರಳವಾಗಿರಲಿದೆಯೇ ಎಂಬುದು ಅವರ ಪ್ರಶ್ನೆ. ಏಕೆಂದರೆ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಿಎಂ ಹುದ್ದೆ ತಮಗೆ ಬೇಕೇ ಬೇಕು ಅಂತ ಪಟ್ಟು ಹಿಡಿದ ಡಿಕೆಶಿ ಸುಮಾರು ಒಂದು ವಾರ ಕಾಂಗ್ರೆಸ್ ವರಿಷ್ಠರನ್ನು ಕಾಡಿದ್ದರು. ಇದಾದ ನಂತರ ವರಿಷ್ಠರು ಸಿದ್ದರಾಮಯ್ಯ ಸಿಎಂ,ಡಿಕೆಶಿ ಡಿಸಿಎಂ ಅಂತ ತೀರ್ಮಾನಿಸಿದರು.ಆದರೆ ಸಂಘರ್ಷದ ಮೂಲವೊಂದು ಬಗೆಹರಿಯುವಾಗ ಸಂಘರ್ಷಕ್ಕೆ ಕಾರಣರಾದ ಒಬ್ಬರಿಗೆ ಯಾವುದಾದರೂ ಭರವಸೆ ನೀಡಬೇಕಲ್ಲ , ಇಲ್ಲದಿದ್ದರೆ ಸಂಘರ್ಷವನ್ನು ಬಗೆಹರಿಸಿಕೊಳ್ಳಲು ಅವರೇಕೆ ಒಪ್ಪುತ್ತಾರೆ?
ಅವತ್ತು ಸಿಎಂ ಹುದ್ದೆಗೆ ಪಟ್ಟು ಹಿಡಿದ ಡಿಕೆಶಿ ಅಂತಿಮವಾಗಿ ಡಿಸಿಎಂ ಹುದ್ದೆಗೆ ತೃಪ್ತರಾಗಲು ಇಂತಹ ಯಾವುದಾದರೂ ಭರವಸೆ ಸಿಕ್ಕಿರಬೇಕಲ್ಲ?ಎಂಬುದು ಇಂತಹವರ ವಾದ. ಎಲ್ಲಕ್ಕಿಂತ ಮುಖ್ಯವಾಗಿ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿಯುವಲ್ಲಿ ಡಿಕೆಶಿ ಪಾತ್ರ ಇದೆ ಎಂಬುದು ನಿಸ್ಸಂದೇಹ. ಸಿದ್ದರಾಮಯ್ಯ ಅವರ ವರ್ಚಸ್ಸು,ಡಿಕೆಶಿ ರಣತಂತ್ರಗಳು ಸೇರಿ ಪಕ್ಷ ನೂರಾ ಮೂವತ್ತೈದರಷ್ಟು ಸೀಟುಗಳನ್ನು ಗಳಿಸಲು ಸಾಧ್ಯವಾಯಿತು ಎಂಬುದು ಸುಳ್ಳೇನಲ್ಲ.
ಹೀಗಾಗಿ ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗುವುದನ್ನು ಒಪ್ಪಿದ ಡಿಕೆಶಿ ಎರಡನೇ ಅವಧಿಯಲ್ಲಿ ತಾವು ಸಿಎಂ ಆಗಲು ಬಯಸಿದ್ದಾರೆ. ಮತ್ತು ಅದಕ್ಕಾಗಿ ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹೀಗಿರುವಾಗಲೇ ಸಿದ್ದರಾಮಯ್ಯ ಅವರು ನಾನೇ ಐದು ವರ್ಷಗಳ ಕಾಲ ಸಿಎಂ ಆಗಿರುತ್ತೇನೆ ನಿಮಗೆ ಏಕೆ ಅನುಮಾನ ಅಂತ ಕೇಳುತ್ತಾರೆ. ಅಷ್ಟೇ ಅಚ್ಚರಿಯ ಬೆಳವಣಿಗೆಯಲ್ಲಿ ಡಿಸಿಎಂ ಡಿಕೆಶಿ ಕೂಡ:ಸಿಎಂ ಹೀಗೆ ಹೇಳಿದರು ಎಂದ ಮೇಲೆ ನನ್ನ ಮುಂದೆ ಬೇರೆ ಆಯ್ಕೆಗಳಿಲ್ಲ.ಹೀಗಾಗಿ ನಾನು ಅವರ ಕೈಯನ್ನು ಬಲಪಡಿಸುವ ಕೆಲಸ ಮಾಡುತ್ತೇನೆ ಅನ್ನುತ್ತಾರೆ. ಇಲ್ಲಿ ಸಿದ್ದರಾಮಯ್ಯ ಅವರ ಮಾತು ಹೇಗೆ ವಿಶೇಷವೋ, ಡಿಕೆಶಿ ಮಾತು ಕೂಡ ಅಷ್ಟೇ ನಿಗೂಢ.ಇವತ್ತಿನ ಸನ್ನಿವೇಶ ನವೆಂಬರ್ ನಂತರ ಉಳಿಯುತ್ತದೆಯೇ ಎಂಬ ಅನುಮಾನಕ್ಕೆ ಇದು ಮೂಲ. ಇಂತಹ ಅನುಮಾನಕ್ಕೆ ಪುಷ್ಟಿ ನೀಡುವ ಇನ್ನಷ್ಟು ಸಂಗತಿಗಳಿವೆ. ಅವನ್ನು ನೋಡಬೇಕೆಂದರೆ ೨೦೨೪ರ ಲೋಕಸಭಾ ಚುನಾವಣೆಯ ಮುನ್ನಿನ ದಿನಗಳಿಗೆ ಹೋಗಬೇಕು.
ಆ ಸಂದರ್ಭದಲ್ಲಿ ಚುನಾವಣಾ ರಣತಂತ್ರವನ್ನು ಹೆಣೆಯುವ ಸಲುವಾಗಿ ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯ ಮತ್ತವರ ಸಂಪುಟದ ಸದಸ್ಯರನ್ನು ಮಾತುಕತೆಗೆ ಅಂತ ದಿಲ್ಲಿಗೆ ಕರೆಸಿದ್ದರು. ಈ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ: ಈ ಚುನಾವಣೆಯಲ್ಲಿ ಪಕ್ಷ ಗೆದ್ದು ದಿಲ್ಲಿಯಲ್ಲಿ ಅಧಿಕಾರದ ಗದ್ದಿಗೆ ಹಿಡಿಯಬೇಕು.ಕರ್ನಾಟಕದಲ್ಲಿ ಇದಕ್ಕೆ ಪೂರಕವಾಗಿ ನೀವುಕೆಲಸ ಮಾಡಬೇಕು. ಒಂದು ವೇಳೆ ಪಕ್ಷ ದಿಲ್ಲಿ ಗದ್ದಿಗೆಯ ಮೇಲೆ ಕೂರಲಿಲ್ಲ ಅಂದುಕೊಳ್ಳಿ. ಆಗ ನನಗೆ ಇಲ್ಲೇನು ಕೆಲಸ. ಹೀಗಾಗಿ ನಾನು ಕರ್ನಾಟಕಕ್ಕೆ ಮರಳುತ್ತೇನೆ.ಹೀಗೆ ಮರಳಿದ ಮೇಲೆ ನಾನು ಸುಮ್ಮನಿರಲು ಸಾಧ್ಯವೇ? ಹೀಗಾಗಿ ನನ್ನ ಪಾಲು ಕೇಳುತ್ತೇನೆ ಎಂದರು.
ಇಲ್ಲಿ ನನ್ನ ಪಾಲು ಅಂದರೆ ಏನು? ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟು ಬೇರೆಯದೇನೂ ಅಲ್ಲ. ಏಕೆಂದರೆ ಮೂರೂವರೆ ದಶಕಗಳ ಕಾಲ ಕರ್ನಾಟಕದ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಹಿಡಿದು ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದವರು. ಸಿದ್ದರಾಮಯ್ಯ ಮತ್ತು ತಮ್ಮ ಮಧ್ಯೆ ನಾಯಕತ್ವಕ್ಕಾಗಿ ಶುರುವಾದ ಸಂಘರ್ಷದ ಕಾಲದಲ್ಲಿ ವರಿಷ್ಠರ ಮಾತಿನಂತೆ ರಾಷ್ಟ್ರ ರಾಜಕಾರಣಕ್ಕೆ ಶಿಫ್ಟ್ ಆದವರು. ಅಂತಹವರು ಕರ್ನಾಟಕದ ರಾಜಕಾರಣಕ್ಕೆ ಮರಳುತ್ತಾರೆ ಎಂದರೆ ಅವರಿಗೆ ಕೊಡಲು ಸಿಎಂ ಹುದ್ದೆಯನ್ನು ಬಿಟ್ಟು ಇನ್ನೇನಿರಲು ಸಾಧ್ಯ? ಕುತೂಹಲದ ಸಂಗತಿ ಎಂದರೆ ಅವತ್ತು ಇಂತಹ ಮಾತುಗಳನ್ನಾಡಿದ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ರಾಜಕಾರಣಕ್ಕೆ ಇದುವರೆಗೂ ಹಿಂತಿರುಗಿಲ್ಲ.ಹಾಗಂತ ಅವರು ಕರ್ನಾಟಕದ ರಾಜಕಾರಣಕ್ಕೆ ಹಿಂತಿರುಗುವುದಿಲ್ಲ ಅಂತಲ್ಲ. ಏಕೆಂದರೆ ಈ ವರ್ಷದ ಅಂತ್ಯದಲ್ಲಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಪ್ರಿಯಾಂಕಾ ಗಾಂಧಿ ಅವರಿಗೆ ಆ ಪಟ್ಟವನ್ನು ಬಿಟ್ಟುಕೊಡುವುದು ಬಹುತೇಕ ನಿಚ್ಚಳವಾಗಿದೆ. ಈ ಬೆಳವಣಿಗೆಯ ನಂತರ ಅವರು ಕರ್ನಾಟಕದ ರಾಜಕಾರಣಕ್ಕೆ ಮರಳುವುದು ಸಹಜ.ಅರ್ಥಾತ್,ರಾಜ್ಯ ಕಾಂಗ್ರೆಸ್‌ನಲ್ಲಿ ಉಳಿದಿರುವ ಅಧಿಕಾರ ಹಂಚಿಕೆಯ ಮಾತು, ಡಿಕೆಶಿಯ ನಿಗೂಢ ಹೇಳಿಕೆ, ಕರ್ನಾಟಕದ ರಾಜಕಾರಣಕ್ಕೆ ಖರ್ಗೆ ಮರಳಲು ಸಜ್ಜಾಗಿರುವ ಕಾಲಗಳೆಲ್ಲ ಸೇರಿದರೆ ಬೇರೇನೋ ಕತೆ ಹುಟ್ಟುವಂತೆ ಕಾಣುತ್ತಿದೆ.
ಅದೇನು ಎಂಬುದೇ ರಾಜಕೀಯ ವಲಯಗಳ ಕುತೂಹಲ. ಅಂದ ಹಾಗೆ ಇಂತಹ ಹೊಸ ಕತೆ ಸೃಷ್ಟಿಯಾಗಲೇಬೇಕು ಅಂತೇನೂ ಇಲ್ಲ.ಬದಲಿಗೆ ಕರ್ನಾಟಕದ ರಾಜಕೀಯ ಸ್ವರೂಪ ಬದಲಾಗುತ್ತಾ ಒಕ್ಕಲಿಗ-ಲಿಂಗಾಯತರನ್ನು ಮೂಲ ಬಲವಾಗುಳ್ಳ ಬಿಜೆಪಿ-ಜಾ.ದಳ ಮೈತ್ರಿಕೂಟ ಬಲಿಷ್ಠವಾಗುತ್ತಿದೆ. ಹೀಗಾಗಿ ಅಧಿಕಾರ ಹಂಚಿಕೆಯ ಬಿಕ್ಕಟ್ಟು ಉಲ್ಬಣಗೊಂಡರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವುದಿಲ್ಲ.ಹೀಗಾಗಿ ಸಿದ್ದರಾಮಯ್ಯ ಅವರ ಜತೆ ಹೊಂದಿಕೊಂಡು ಹೋಗುವುದು ಅನಿವಾರ್ಯ ಅಂತ ಡಿಕೆಶಿಗೆ ಮನದಟ್ಟಾಗಿದ್ದರೆ ಅನುಮಾನವೇ ಬೇಡ.ನಂದಿ ಬೆಟ್ಟದಲ್ಲಿ ಸಿದ್ದರಾಮಯ್ಯ ಅವರಾಡಿದ ಮಾತು ಕೈ ಕಚ್ಚಾಟಕ್ಕೆ ಬ್ರೇಕ್ ಬಿದ್ದಿದೆ ಎಂಬುದರ ಸ್ಪಷ್ಟ ಸಂಕೇತ.
“ಇಲ್ಲಿ ಸಿದ್ದರಾಮಯ್ಯ ಅವರ ಮಾತು ಹೇಗೆ ವಿಶೇಷವೋ, ಡಿಕೆಶಿ ಮಾತು ಕೂಡ ಅಷ್ಟೇ ನಿಗೂಢ. ಇವತ್ತಿನ ಸನ್ನಿವೇಶ ನವೆಂಬರ್ ನಂತರ ಉಳಿಯುತ್ತದೆಯೇ ಎಂಬ ಅನುಮಾನಕ್ಕೆ ಇದು ಮೂಲ. ಇಂತಹ ಅನುಮಾನಕ್ಕೆ ಪುಷ್ಟಿ ನೀಡುವ ಇನ್ನಷ್ಟು ಸಂಗತಿಗಳಿವೆ”
– ಆರ್.ಟಿ. ವಿಠ್ಠಲಮೂರ್ತಿ
ನವದೆಹಲಿ: ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿನ ಅವ್ಯವಸ್ಥೆಯಿಂದಾಗಿ ನೂರಾರು ವಿಮಾನಗಳು ರದ್ದಾಗಿದ್ದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಇಂದು ಕೇಂದ್ರ ಸರ್ಕಾರವನ್ನು ತರಾಟೆಗೆ…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಅವಿವಾಹಿತ ಯುವಕರ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪಂಚಾಯಿತಿ ವತಿಯಿಂದ ನಮಗೆ ಮಠ ಕಟ್ಟಿಸಿಕೊಡುವಂತೆ…
ಚಿತ್ರದುರ್ಗ: ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಸಮಾಧಿ ನಾಮಫಲಕ ಧ್ವಂಸ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಲೇಔಟ್ ನಿರ್ಮಾಣ ಮಾಡುವ ವೇಳೆ ರೇಣುಕಾಸ್ವಾಮಿ…
ಬೆಂಗಳೂರು: ರಾಜ್ಯದಲ್ಲಿ ದ್ವೇಷ ಭಾಷಣ ಮಾಡಿದರೆ 3 ವರ್ಷ ಜೈಲು ಶಿಕ್ಷೆ ಫಿಕ್ಸ್ ಆಗಿದೆ. ವಿಧಾನಸಭೆಯಲ್ಲಿ ಇಂದು ಮಸೂದೆ ಮಂಡನೆ…
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಚಿನ್ನಯ್ಯ ಆರೋಪಿಸಿದ್ದ ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆ ವೇಳೆ ಸ್ಪೋಟಕ ಮಾಹಿತಿ ಬಯಲಾಗಿದೆ. ಹಣದ…
ಬೆಳಗಾವಿ: ಗ್ಯಾರಂಟಿಗಳ ಬಗ್ಗೆ ಸಿಎಲ್ಪಿಯಲ್ಲಿ ಚರ್ಚೆಯೇ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಶಾಸಕರು…