ಕೊರೊನಾ ವೈರಾಣುಗಳು ಜಗವನ್ನು ಅಪ್ಪಿಕೊಳ್ಳುತ್ತಿದ್ದಂತೆ, ಮನರಂಜನೋದ್ಯಮದಲ್ಲಿ ಜನಪ್ರಿಯತೆ ಹೆಚ್ಚಿಸಿ ಕೊಂಡದ್ದು ಒಟಿಟಿ ತಾಣಗಳು. ಚಿತ್ರಮಂದಿರಗಳು ಅನಿ ವಾರ್ಯ ವಾಗಿ ಸಿನಿಮಾ ಪ್ರದರ್ಶನ ನಿಲ್ಲಿಸಿ ಬಾಗಿಲೆಳೆಯಬೇಕಾಗಿ ಬಂದ ದಿನಗಳ ಸದುಪಯೋಗವಾದದ್ದು ಒಟಿಟಿ ತಾಣಗಳಿಗೆ. ಮನೆಯಲ್ಲೇ ಕುಳಿತು ಕೊಂಡು ಸಿನಿಮಾಗಳನ್ನು ಮತ್ತಿತರ ಸರಣಿಗಳನ್ನು ನೋಡುವ ವಿಪುಲ ಅವಕಾಶವನ್ನು ಈ ತಾಣಗಳು ಒದಗಿಸಿದವು.
ಕನ್ನಡ ಚಿತ್ರರಸಿಕರಿಗೂ ಇವು ಇತರ ಭಾರತೀಯ ಭಾಷಾ ಚಿತ್ರಗಳ ಪರಿಚಯ ಮಾಡಿಕೊಟ್ಟವಲ್ಲದೆ, ಎಲ್ಲಿ ಸದಭಿರುಚಿಯ, ತಮ್ಮ ಅಭಿರುಚಿಗೆ ತಕ್ಕ ಚಿತ್ರಗಳು ತಯಾರಾಗುತ್ತಿವೆ ಎನ್ನುವುದನ್ನು ತಿಳಿಯುವ ಅವಕಾಶವನ್ನೂ ನೀಡಿದವು. ಕೊರೊನಾ ನಂತರ ಇದರ ಪರಿಣಾಮವನ್ನು ಚಿತ್ರಮಂದಿರಗಳು ಎದುರಿಸಿದ್ದು ಸುಳ್ಳಲ್ಲ. ಚಿತ್ರಮಂದಿರಗಳಿಗೆ ಹೋಗಿ ಚಿತ್ರ ನೋಡುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಯಿತು. ಏಕಪರದೆಯ ಚಿತ್ರಮಂದಿರಗಳಂತೂ ಬಹುತೇಕ ಮುಚ್ಚುವ ಸ್ಥಿತಿಗೇ ಬಂದವು. ಕೆಲವು ಚಿತ್ರಮಂದಿರಗಳು ಜನಪ್ರಿಯ ನಟರ ಚಿತ್ರಗಳು ಬಿಡುಗಡೆಯಾದಾಗ ಮಾತ್ರ ಬಾಗಿಲು ತೆಗೆದ ಉದಾಹರಣೆಗಳೂ ಇವೆ.
ಒಟಿಟಿ ಮತು ಚಿತ್ರಮಂದಿರಗಳ ನಡುವೆ ಜನಸಾಮಾನ್ಯ ಪ್ರೇಕ್ಷಕನ ಆಯ್ಕೆ ಒಟಿಟಿ. ಅದಕ್ಕೆ ಕಾರಣವೂ ಇದೆ. ಮನೆಯಲ್ಲೇ ಕುಳಿತು ಅಷ್ಟೇನೂ ದುಬಾರಿ ಅಲ್ಲದ ವೆಚ್ಚದಲ್ಲಿ ತಮಗಿಷ್ಟ ಬಂದ ಚಿತ್ರವನ್ನೋ, ಸರಣಿಯನ್ನೋ ನೋಡುವ ಸ್ವಾತಂತ್ರ್ಯ ಆತನಿಗಿದೆ. ಚಿತ್ರಮಂದಿರಗಳಲ್ಲಿ, ಅದರಲ್ಲೂ ಮಲ್ಟಿಪ್ಲೆಕ್ಸ್‌ಗಳ ದುಬಾರಿ ಪ್ರವೇಶ ಶುಲ್ಕ ಹಾಗೂ ಅಲ್ಲಿನ ತಿಂಡಿ ತಿನಿಸುಗಳ ಬೆಲೆ ಆತನನ್ನು ಅಲ್ಲಿಂದ ವಿಮುಖನನ್ನಾಗಿಸುವಂತೆ ಇದೆ. ಒಂದು ಚಿತ್ರ ವೀಕ್ಷಿಸಲು ಒಂದು ಕುಟುಂಬ ಮಾಡಬೇಕಾದ ವೆಚ್ಚ, ಅವರ ತಿಂಗಳ ವೆಚ್ಚದ ಅರ್ಧದಷ್ಟು ಇಲ್ಲವೆ ಅದಕ್ಕಿಂತ ಹೆಚ್ಚು! ಈ ಸ್ಥಿತಿಯಲ್ಲಿ, ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಮಂದಿ ಚಿತ್ರಮಂದಿರಗಳಿಗೆ ಬರುವುದಾದರೂ ಹೇಗೆ? ಬರುತ್ತಾರೆ ಎಂದು ನಿರೀಕ್ಷಿಸುವುದಾದರೂ ಹೇಗೆ?
ಹಾಗಾಗಿ ಒಟಿಟಿಯತ್ತ ಎಲ್ಲರ ಗಮನ. ಹೊಸ ಚಿತ್ರವೊಂದು ಚಿತ್ರಮಂದಿರದಲ್ಲಿ ಬಿಡುಗಡೆಯಾದ ಕೂಡಲೇ, ಅದು ಒಟಿಟಿಯಲ್ಲಿ ಯಾವಾಗ ಪ್ರಸಾರ ಆರಂಭಿಸುತ್ತದೆ ಎನ್ನುವುದನ್ನು ವೀಕ್ಷಕರು ಕಾಯುತ್ತಿರು ತ್ತಾರೆ, ನಿರೀಕ್ಷಿಸುತ್ತಾರೆ. ಇದರಿಂದಾಗಿ ಚಿತ್ರಮಂದಿರಗಳಲ್ಲಿ ಅವುಗಳ ಗಳಿಕೆ ಸಹಜವಾಗಿಯೇ ಕಡಿಮೆಯಾಗುತ್ತದೆ.
ಜನಪ್ರಿಯ ನಿರ್ಮಾಣ ಸಂಸ್ಥೆಗಳ, ಇಲ್ಲವೇ ಜನಪ್ರಿಯ ನಟರ ಚಿತ್ರಗಳಿಗೆ ಸಾಮಾನ್ಯವಾಗಿ ಒಟಿಟಿ ಮತ್ತಿತರ ಸಾಮಾಜಿಕ ತಾಣಗಳು ಮತ್ತು ವಾಹಿನಿಗಳಲ್ಲಿ ಬೇಡಿಕೆ ಇರುತ್ತದೆ. ಕೆಲವೆಡೆ ಚಿತ್ರ ಬಿಡುಗಡೆಗೂ ಮೊದಲೇ ಈ ವ್ಯವಹಾರಗಳೂ ಮುಗಿದಿರುತ್ತವೆ. ಆದರೆ ಇವುಗಳ ಹೊರತಾದ ಚಿತ್ರಗಳಿಗೆ ಅಂತಹ ಬೇಡಿಕೆ ಎರಡೂ ಕಡೆಗೆ ಇರುವುದಿಲ್ಲ. ವಿಶೇಷವಾಗಿ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವ, ಕಲಾತ್ಮಕ, ವಾಸ್ತವ ಚಿತ್ರಗಳ ಕುರಿತಂತೆ ಒಟಿಟಿ ತಾಣಗಳ ಪ್ರತಿಕ್ರಿಯೆ ಬಹುತೇಕ ಶೂನ್ಯ.
ಮೊನ್ನೆ ಚಿತ್ರೋತ್ಸವದ ಪತ್ರಿಕಾಗೋಷ್ಠಿಯಲ್ಲಿ ಇಂತಹ ಚಿತ್ರಗಳನ್ನು ನಿರ್ಮಿಸಿ, ಹೊಸ ಪ್ರತಿಭಾವಂತರಿಗೆ ಅವಕಾಶ ಮಾಡಿಕೊಡುತ್ತಿರುವ ರಿಷಭ್ ಶೆಟ್ಟಿ ಅವರು ಇದನ್ನು ಗಮನಕ್ಕೆ ತಂದರು. ಚಿತ್ರೋತ್ಸವದಲ್ಲಿ ಒಟಿಟಿ ತಾಣಗಳಿಗೂ ಉತ್ತೇಜನ ನೀಡುತ್ತಿರುವ ವಾರ್ತಾ ಮತ್ತು ಪ್ರಸಾರ ಇಲಾಖೆ ಇದರ ಕಡೆ ಗಮನ ನೀಡಬೇಕು ಎನ್ನುವುದಾಗಿತ್ತು ಅವರ ಸಲಹೆ. ಚಿತ್ರೋತ್ಸವದಲ್ಲಿ ಈ ಬಾರಿ ಚಲನಚಿತ್ರಗಳಿಗೆ ಮಾತ್ರವಲ್ಲದೆ, ವೆಬ್ ಸರಣಿಗೂ ಪ್ರಶಸ್ತಿ ನೀಡುವ ಮೂಲಕ ಒಟಿಟಿ ತಾಣಗಳಿಗೆ ಉತ್ತೇಜನ ನೀಡುವ ಕೆಲಸವನ್ನು ಸರ್ಕಾರ ಮಾಡಿದೆ. ಅಮೆಜಾನ್‌ನ ವೆಬ್ ಸರಣಿಯೊಂದು ಈ ಬಾರಿಯ ಪ್ರಶಸ್ತಿಗೆ ಭಾಜನವಾಗಿದೆ.
ಒಟಿಟಿ ತಾಣಗಳು ಕನ್ನಡ ಚಿತ್ರಗಳ ಅದರಲ್ಲೂ ಗಂಭೀರ ಚಿತ್ರಗಳ ಕುರಿತಂತೆ ತಾಳಿರುವ ನಿಲುವನ್ನು ಯಾರೂ ಒಟ್ಟಾಗಿ ಈ ತನಕ ಪ್ರಶ್ನಿಸಿಲ್ಲ. ಸಂಬಂಧಪಟ್ವವರ ಗಮನಕ್ಕೂ ತಂದಿಲ್ಲ. ಹತ್ತಾರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದ ‘ಪೆದ್ರೊ’, ‘ಶಿವಮ್ಮ’ ಚಿತ್ರಗಳನ್ನಾಗಲೀ, ಕಾಸರವಳ್ಳಿ, ಶೇಷಾದ್ರಿ, ಲಿಂಗದೇವರು ಸೇರಿದಂತೆ ನಿರ್ದೇಶಕರ ಚಿತ್ರಗಳಾಗಲಿ ಅವುಗಳಿಗೆ ಬೇಕಾಗಿಲ್ಲ. ಯಾವುದೇ ಮುಲಾಜಿಲ್ಲದೆ ನಿರಾಕರಿಸುತ್ತಾರೆ. ಹಿಂದೆ ಇಂತಹ ಚಿತ್ರಗಳನ್ನು ದೂರದರ್ಶನ ಪ್ರಸಾರ ಮಾಡುತ್ತಿತ್ತು. ಅದರ ಪ್ರಸಾರದ ಹಕ್ಕನ್ನು ಪಡೆದು ರಾಯಧನ ನೀಡುತ್ತಿತ್ತು. ಅವುಗಳಲ್ಲಿ ರಾಷ್ಟ್ರ್ರಪ್ರಶಸ್ತಿ ಪಡೆದ ಚಿತ್ರಗಳು, ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ, ಪ್ರಶಸ್ತಿ ಪಡೆದ ಚಿತ್ರಗಳು ಸೇರಿರುತ್ತಿದ್ದವು. ಈಗ ಅದನ್ನೂ ಸ್ಥಗಿತಗೊಳಿಸಲಾಗಿದೆ.
ಎಲ್ಲೂ ನೋಡಲು ಸಾಧ್ಯವಾಗದ ಬೇರೆ ಬೇರೆ ದೇಶಗಳ ಬೇರೆ ಬೇರೆ ಭಾಷೆಗಳ ಚಿತ್ರಗಳನ್ನು ನೋಡುವ ಅವಕಾಶವನ್ನು ಚಿತ್ರೋತ್ಸವ ಕಲ್ಪಿಸಿಕೊಡುತ್ತದೆ. ಸಮಕಾಲೀನ ವಿಶ್ವ ಚಿತ್ರರಂಗದ ಒಳನೋಟಗಳನ್ನು ತಿಳಿಯುವ, ತಾಂತ್ರಿಕ ಪ್ರಗತಿಯನ್ನು ಕಾಣುವ ಅವಕಾಶ ಅಲ್ಲಿರುತ್ತದೆ. ಅದೀಗ ಬದಲಾಗುತ್ತಿರುವಂತಿದೆ. ಮೊನ್ನೆ ಗೋವಾದಲ್ಲಿ ಮುಗಿದ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹಿಂದಿ ಚಿತ್ರರಂಗದ ಮಂದಿಯನ್ನು ಮೆರೆಸುವ ಕೆಲಸ ಸಾಕಷ್ಟು ಚೆನ್ನಾಗಿಯೇ ನಡೆಯಿತು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೊದಲು ಈ ಚಿತ್ರೋತ್ಸವದಲ್ಲಿ ಪ್ರೀಮಿಯರ್ ಮೂಲಕ ಪ್ರಚಾರ ಮಾಡುವ ಕೆಲಸವನ್ನೂ ಚಿತ್ರೋತ್ಸವ ಮಾಡಿತು. ಮುಖ್ಯವಾಹಿನಿ ಚಿತ್ರಗಳ ದಾರಿಯೇ ಬೇರೆ, ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವ ಚಿತ್ರಗಳ ರೀತಿಯೇ ಬೇರೆ. ಆದರೆ ಗೋವಾದಲ್ಲಿ ಅವುಗಳ ವ್ಯತ್ಯಾಸವೇ ಇಲ್ಲದಂತೆ, ಮುಖ್ಯವಾಹಿನಿ ಚಿತ್ರಗಳಿಗೆ, ಅವುಗಳ ಮಂದಿಗೆ ರತ್ನಗಂಬಳಿ ಹಾಸತೊಡಗಿದೆ. ‘ಗೋವಾ ಅಂದರೆ ನನಗಿಷ್ಟ’ ಎನ್ನುವ ಹಿಂದಿ ಚಿತ್ರರಂಗದ ಮಂದಿಗೆ ಮಾತ್ರ ಚಿತ್ರೋತ್ಸವದಲ್ಲಿ ಅಗ್ರಪೂಜೆ ಸರಿಯಲ್ಲ ಎನ್ನುವುದು ಅಲ್ಲಿದ್ದ ಬಹುತೇಕರ ಮಾತಾಗಿತ್ತು.
ವಿಷಯಾಂತರ ಬೇಡ. ಕನ್ನಡ ಚಿತ್ರಗಳನ್ನು ಒಟಿಟಿ ನಿರಾಕರಿಸುತ್ತದೆ ಎನ್ನುವುದು ಒಂದೆಡೆಯಾದರೆ, ಅಲ್ಲಿ ಪ್ರಸಾರವಾಗುವ ಸರಣಿಗಳಲ್ಲಿ ಬಹುತೇಕ, ಹಿಂಸೆಗೆ ಪ್ರೇರೇಪಿಸುವ, ಲೈಂಗಿಕತೆಯನ್ನು ಪ್ರಚೋದಿಸುವವುಗಳೇ ಹೆಚ್ಚು ಎನ್ನುವುದು ಎಲ್ಲರಿಗೂ ಗೊತ್ತು. ಅಲ್ಲಿ ಸೆನ್ಸಾರಿಲ್ಲ. ಸ್ವಯಂ ಸೆನ್ಸಾರ್ ರೀತಿಯ ಕೆಲವು ನಿಯಮಗಳಿವೆ. ಅವುಗಳನ್ನು ಯಾರು ಪಾಲಿಸುತ್ತಾರೆ, ಅಶ್ಲೀಲ ಸರಣಿಗಳ ವಿರುದ್ಧ ಯಾರಾದರೂ ದೂರಿದ್ದರೇ ಎನ್ನುವುದು ಯಾರಿಗೂ ಆಸಕ್ತಿ ಇಲ್ಲದ ವಿಷಯ ಆದಂತಿದೆ. ಎಲ್ಲರ ಗಮನವೂ ಅದರ ವ್ಯಾಪಾರ ಹೊರತು ಅದು ಸಮಾಜದ ಮೇಲೆ ಬೀರಬಲ್ಲ ಪರಿಣಾಮ ಅಲ್ಲ.
ಗಂಭೀರ ಚಿತ್ರಗಳನ್ನು ಒಟಿಟಿ ಮತ್ತು ದೂರದರ್ಶನಗಳಲ್ಲಿ ಪ್ರಸಾರ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಮಂದಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವ ಕೆಲಸವನ್ನು ರಿಷಭ್ ಶೆಟ್ಟಿ ವೈಯಕ್ತಿಕವಾಗಿ ಮಾಡಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ಉದ್ಯಮದ ಸಂಸ್ಥೆಗಳು ಒತ್ತಾಯಿಸಬೇಕು, ಅದು ಫಲಪ್ರದವಾಗುವಂತೆ ನೋಡಿಕೊಳ್ಳಬೇಕು.
ಇನ್ನು ಸಿನಿಮಾ ಸೆನ್ಸಾರ್ ಸಂಬಂಧಪಟ್ಟಂತೆ. ಸೆನ್ಸಾರ್ ಮಂಡಳಿ ಬದಲು, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಎಂದು ಮರುನಾಮಕರಣ ಆಗಿ ವರ್ಷಗಳಾಗಿವೆ. ಮೊನ್ನೆ ಬೆಂಗಳೂರು ಪ್ರಾದೇಶಿಕ ಅಧಿಕಾರಿ ಪ್ರಶಾಂತ್ ಕುಮಾರ್ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಸಿಬಿಐ ಪೊಲೀಸರು ಬಂಧಿಸಿದ್ದಾರೆ. ‘ಅಡವಿ’ ಹೆಸರಿನ ಚಿತ್ರದ ವೀಕ್ಷಣೆ ನವೆಂಬರ್ 21 ರಂದು ನಡೆದಿತ್ತು. ಅದರ ಉಪಶೀರ್ಷಿಕೆಗಳು ಸರಿಯಾಗಿಲ್ಲದೆ ಇದ್ದದ್ದನ್ನು ನಿರ್ಮಾಪಕರ ಗಮನಕ್ಕೆ ತಂದು ಅದನ್ನು ಸರಿ ಮಾಡಿ, ಮತ್ತೆ ಸೆನ್ಸಾರ್ ಮಾಡಿಸಬೇಕು ಎಂದು ಹೇಳಿದ್ದಾಗಿಯೂ, ಇಲ್ಲದೆ ಹೋದರೆ ೧೫,೦೦೦ ರೂ. ಕೊಡುವಂತೆ ಕೇಳಿದ್ದಾಗಿಯೂ, ನಿರ್ಮಾಪಕರು ಸಿಬಿಐಗೆ ದೂರು ನೀಡಿ ರೆಡ್‌ಹ್ಯಾಂಡೆಡ್ ಆಗಿ ಬಂಧಿಸಿದ್ದಾ ಗಿಯೂ ಹೇಳಲಾಗಿದೆ. ಪ್ರಶಾಂತ್ ಕುಮಾರ್ ಜೊತೆ ಇನ್ನಿಬ್ಬರನ್ನೂ ಬಂಧಿಸಲಾಗಿದೆ.
ನ್ಯಾಯಾಲಯ, ಕಾನೂನು ಮುಂದಿನ ಕೆಲಸ ಮಾಡುತ್ತವೆ. ಆದರೆ ಡಿಸೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಪ್ರಮಾಣಪತ್ರ ಪಡೆಯುವ ಚಿತ್ರಗಳ ಸಂಖ್ಯೆ ಉಳಿದ ತಿಂಗಳುಗಳಿಂದ ಮೂರು ನಾಲ್ಕು ಪಟ್ಟು ಹೆಚ್ಚಿರುತ್ತವೆ. ರಾಜ್ಯ, ರಾಷ್ಟ್ರಪ್ರಶಸ್ತಿ, ಸಹಾಯಧನ ಪಡೆಯಲು ವರ್ಷದ ಕೊನೆಯ ದಿನದ ಒಳಗೆ ಪ್ರಮಾಣಪತ್ರ ಪಡೆದಿರಬೇಕು. ಈಗ ಇದನ್ನು ಮಂಡಳಿ ಹೇಗೆ ನಿಭಾಯಿಸುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ. ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ನಿರ್ದೇಶಕ ನಾಗಾಭರಣ ಅವರಿಗೆ ಈ ಕುರಿತಂತೆ ಯಾವುದೇ ಮಾಹಿತಿ ಬಂದಿಲ್ಲ. ಬೆಂಗಳೂರು ಪ್ರಾದೇಶಿಕ ಕಚೇರಿಯ ದೂರವಾಣಿ ಸಂಪರ್ಕ ಸಿಗುತ್ತಿಲ್ಲ. ಮುಂಬೈಯ ಪ್ರಧಾನ ಕಚೇರಿಯಲ್ಲಿರುವ ಮುಖ್ಯಾಽಕಾರಿ ನಿನ್ನೆ ಬೆಳಿಗ್ಗೆ ಯಾವ ಹೊತ್ತಿಗೆ ಸಂಪರ್ಕಿಸಿದರೂ ‘ಸಭೆಯಲ್ಲಿದ್ದಾರೆ’ ಎನ್ನುವ ಉತ್ತರವಿತ್ತು! ಚಲನಚಿತ್ರ ವಾಣಿಜ್ಯ ಮಂಡಳಿ ಈ ಕುರಿತಂತೆ ಅಲ್ಲಿಗೆ ಪತ್ರ ಬರೆದಿದೆ ಎಂದು ಅಧ್ಯಕ್ಷ ಎನ್.ಎಂ.ಸುರೇಶ್ ಹೇಳಿದರು. ಪ್ರಮಾಣೀಕರಣ ನಿಯಮಾವಳಿಯಂತೆ ಚಿತ್ರವೊಂದಕ್ಕೆ ಪ್ರಮಾಣಪತ್ರ ಪಡೆಯಲು ಅರ್ಜಿಸಲ್ಲಿಸಿದ ನಂತರ ಅದರ ವಿವಿಧ ಹಂತಗಳನ್ನು ಪೂರೈಸಿ, ಪ್ರಮಾಣಪತ್ರ ಪಡೆಯಲು ಗರಿಷ್ಟ ಅವಧಿ 68 ದಿನಗಳು. ಈ ನಿಯಮಕ್ಕೆ ಮಂಡಳಿ ಬದ್ಧವಾದದ್ದೇ ಆದರೆ, ಈ ವರ್ಷ ಬಹಳಷ್ಟು ಚಿತ್ರಗಳು ಪ್ರಮಾಣಪತ್ರ ಪಡೆಯುವುದು ಕಷ್ಟಸಾಧ್ಯವಾಗಬಹುದು ಎನ್ನುತ್ತಾರೆ ಈಗಾಗಲೇ ಅರ್ಜಿ ಸಲ್ಲಿಸಿರುವ ನಿರ್ಮಾಪಕರು.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…