ಅಂಕಣಗಳು

ಯುಐ-ನೀನು ನಾನು, ಮ್ಯಾಕ್ಸ್ -ಗರಿಷ್ಟ: ಡಿಸೆಂಬರ್ ತಿಂಗಳ ಚಿತ್ರಗಳ ಓಟದ ನಡುವೆ

ಡಿಸೆಂಬರ್ ತಿಂಗಳ ಮೂರನೇ ಮತ್ತು ನಾಲ್ಕನೇ ವಾರ ಕ್ರಮವಾಗಿ ಉಪೇಂದ್ರ ನಿರ್ದೇಶಿಸಿ, ನಟಿಸಿದ ‘ಯುಐ’ (ನೀನು ನಾನು) ಮತ್ತು ಸುದೀಪ್ ಮುಖ್ಯ ಭೂಮಿಕೆಯ ‘ಮ್ಯಾಕ್ಸ್’ (ಗರಿಷ್ಟ) ಚಿತ್ರಗಳು ತೆರೆಗೆ ಬರುತ್ತವೆ. ಈ ಚಿತ್ರಗಳು ಬಿಡುಗಡೆಯಾಗುವ ಸುದ್ದಿ ಬರುತ್ತಲೇ, ತರಹೇವಾರಿ ಪ್ರತಿಕ್ರಿಯೆ, ಟೀಕೆಗಳು ಆರಂಭವಾಗುತ್ತವೆ. ಅದು ಗಾಂಧಿನಗರ ಮೊದಲ್ಗೊಂಡು ಮಾಧ್ಯಮಗಳವರೆಗೆ. ಇವುಗಳ ಐದು ದಿನಗಳ ಅಂತರದಲ್ಲಿ ಎರಡು ‘ದೊಡ್ಡ’ ಚಿತ್ರಗಳು ತೆರೆಕಂಡರೆ ಇಬ್ಬರಿಗೂ ನಷ್ಟವಾಗುವುದಿಲ್ಲವೇ ಎನ್ನುವುದು ಎಲ್ಲರ ಪ್ರಶ್ನೆ. ಯಾರಿಗೂ ತೊಂದರೆ ಆಗಬಾರದು, ಎನ್ನುವುದು ಇದರ ಹಿಂದಿರುವ ಕಾಳಜಿ.

ಕಾಳಜಿಯ ಕುರಿತಂತೆ ಯಾರಿಗೂ ಅನುಮಾನ ಇಲ್ಲ. ನಿರ್ಮಾಪಕರು ಮಾತ್ರವಲ್ಲ, ಚಿತ್ರಮಂದಿರಗಳ ಗಳಿಕೆಗೂ ಏಟು ಬೀಳುತ್ತದೆ ಎನ್ನುವ ಆತಂಕವೂ ಅಲ್ಲಿದೆ. ಯುಐ ೨೦ರಂದು ತೆರೆಕಂಡರೆ, ಕ್ರಿಸ್ಮಸ್ ದಿನ, ೨೫ರಂದು ಮ್ಯಾಕ್ಸ್ ಬಂತು. ಐದೇ ದಿನಗಳ ಅಂತರ. ಇಂತಹ ಕಾಳಜಿ ಪರಭಾಷಾ ಚಿತ್ರಗಳು ಮೂಲ ಮಾತ್ರವಲ್ಲದೆ, ಕನ್ನಡವೂ ಸೇರಿದಂತೆ ಇತರ ಭಾಷೆಗಳ ಡಬ್ಬಿಂಗ್ ಅವತರಣಿಕೆಗಳೊಂದಿಗೆ ತೆರೆಕಂಡಾಗ ಇಲ್ಲದೆ ಇರುವುದು, ಸಂಬಂಧಪಟ್ಟವರ ಕಣ್ಣಿಗೆ ಕಾಣದೆ ಇರುವುದನ್ನು ಜಾಣಕುರುಡು ಎನ್ನದೆ ವಿಧಿ ಇಲ್ಲ. ಇಲ್ಲಿ ವಾರದ ಅಂತವಾದರೂ ಇತ್ತು. ಮುಂದಿನ ವಾರ ಎರಡು, ಬಹು ನಿರೀಕ್ಷೆಯ ಕನ್ನಡ ಚಿತ್ರಗಳು ತೆರೆಗೆ ಬರುವುದಾಗಿ ಪ್ರಕಟಿಸಿವೆ. ಜೊತೆಗೆ ಕಡಿಮೆ ನಿರ್ಮಾಣ ವೆಚ್ಚದ ಒಂದೆರಡು ಚಿತ್ರಗಳು.

ಪ್ರದರ್ಶಕರ ಆತಂಕಕ್ಕೆ ಕಾರಣ ಇಲ್ಲದಿಲ್ಲ. ಸಾಮಾನ್ಯವಾಗಿ ಜನಪ್ರಿಯ ನಟರ ಚಿತ್ರಗಳಿಗೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಾರೆ. ಅದರಲ್ಲೂ ಏಕ ಪರದೆಯ ಚಿತ್ರಮಂದಿರಗಳಿಗೆ. ಮಲ್ಟಿಪ್ಲೆಕ್ಸ್‌ಗಳಿಗೆ ಕನ್ನಡ ಚಿತ್ರಗಳ ಕುರಿತ ಆಸ್ಥೆಯಾಗಲೀ, ಆಸಕ್ತಿಯಾಗಲಿ, ಕಾಳಜಿಯಾಗಲಿ ಕಡಿಮೆ. ಇಲ್ಲ ಎಂದರೂ ತಪ್ಪೇನೂ ಇಲ್ಲ. ಆದರೆ ಒಂಟಿ ಪರದೆಯ ಚಿತ್ರಮಂದಿರಗಳು ಹೆಚ್ಚಿನವು ಕನ್ನಡ ಚಿತ್ರಗಳನ್ನು ಪ್ರದರ್ಶಿಸುತ್ತಿರುತ್ತವೆ. ಅಲ್ಲೂ ಪರಭಾಷಾ ಚಿತ್ರಗಳ ಒತ್ತುವರಿ ಕಡಿಮೆ ಏನಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷತೆ ಈ ಬಾರಿ ಪ್ರದರ್ಶಕರದು. ಹಾಗಾಗಿಯೇ ಈಗ ಇಂತಹ ವಿಷಯಗಳ ಕುರಿತು ಚರ್ಚೆ ಆರಂಭ ಆಗಿದೆ.

ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಲು ಆಶಿಸುವ ಮಂದಿ ಇಲ್ಲಿನ ದುಬಾರಿ ಪ್ರವೇಶ ದರದ ಕಾರಣ, ಒಟಿಟಿಯಲ್ಲಿ ಬಂದಾಗ ನೋಡಿದರಾಯಿತು ಎನ್ನುವುದೂ ಇದೆ. ಒಟಿಟಿಯಲ್ಲಿ ಇತ್ತೀಚೆಗೆ ಚಿತ್ರಗಳನ್ನು ಕೊಳ್ಳುತ್ತಿಲ್ಲ; ಚಿತ್ರಮಂದಿರಗಳಲ್ಲಿ ತೆರೆಕಂಡು ಯಶಸ್ವಿಯಾದರೆ ಮಾತ್ರ ಒಟಿಟಿ ಮಂದಿಯ ಜೊತೆ ವ್ಯವಹಾರ ಕುದುರುತ್ತದೆ, ಇಲ್ಲದಿದ್ದರೆ ಇಲ್ಲ. ಹಾಗಾಗಿಯೇ ಸಾಕಷ್ಟು ಕನ್ನಡ ಚಿತ್ರಗಳು ಅತ್ತ ಚಿತ್ರಮಂದಿರಗಳಿಗೂ ಬರಲಾಗದೆ, ಇತ್ತ ಒಟಿಟಿಯಲ್ಲೂ ಪ್ರಸಾರವಾಗದೆ ತ್ರಿಶಂಕು ಸ್ಥಿತಿಯಲ್ಲಿರುತ್ತವೆ. ಬಂಡವಾಳ ಹೂಡಿದ ನಿರ್ಮಾಪಕನಿಗೆ ಆಕಾಶ ನೋಡುವ ಪರಿಸ್ಥಿತಿ.

ಒಟಿಟಿ ಮಂದಿ ಚಿತ್ರಗಳನ್ನು ಕೊಂಡುಕೊಳ್ಳದೆ ಇರಲು ಅವುಗಳ ಆಯಕಟ್ಟಿನ ಜಾಗದಲ್ಲಿ ಕುಳಿತ ಮಂದಿಯ ಸಿನಿಮಾ ಕುರಿತ ಜ್ಞಾನದ ಕೊರತೆ ಕಾರಣ ಎನ್ನುತ್ತಾರೆ ಹಿಂದಿಯ ನಿರ್ದೇಶಕ, ನಿರ್ಮಾಪಕ, ನಟ ಅನುರಾಗ್ ಕಶ್ಯಪ್. ಒಟಿಟಿಗಳು ಬಹುರಾಷ್ಟ್ರೀಯ ಕಂಪೆನಿಗಳು. ಅವುಗಳ ಆಯಕಟ್ಟಿನ ಜಾಗದಲ್ಲಿ, ನಿರ್ಮಾಪಕರ ಜೊತೆ ವ್ಯವಹರಿಸಲು ಇರುವ ಮಂದಿಗೆ ಸಿನಿಮಾ ಕುರಿತ, ಭಾರತೀಯ ಭಾಷಾ ಚಿತ್ರಗಳ ಕುರಿತ ಜ್ಞಾನ ಕಡಿಮೆ. ಅವರಲ್ಲಿ ಹೆಚ್ಚಿನವರು ಕಿರುತೆರೆ ಕ್ಷೇತ್ರದಲ್ಲಿ ಪರಿಣತಿ ಪಡೆದ ಮಂದಿ. ತಮ್ಮ ಸ್ಥಾನ, ಸಂಬಳಗಳನ್ನು ಉಳಿಸಿಕೊಳ್ಳುವುರ ಹೊರತಾಗಿ ಇತರ ರೀತಿಯ ಸವಾಲುಗಳಿಗೆ ಅವರು ಸಿದ್ಧರಾಗುವುದಿಲ್ಲ ಎನ್ನುವುದು ಅವರ ಅಭಿಪ್ರಾಯ.

ಅವರ ನಿರ್ಮಾಣದ ನಾಲ್ಕೆ ದು ಚಿತ್ರಗಳು ಬಿಡುಗಡೆಯಾಗಿಲ್ಲ, ಆ ಕಾರಣದಿಂದ ಅವುಗಳಿಗೆ ಒಟಿಟಿ ತಾಣಗಳಲ್ಲೂ ಅವಕಾಶವಿಲ್ಲ! ಎತ್ತರದ ಸ್ಥಾನ ತಲುಪಿರುವ ಬಹಳಷ್ಟು ಮಂದಿಗೆ ತಮ್ಮ ಸ್ಥಾನ ಉಳಿಸಿಕೊಳ್ಳುವ ಚಿಂತೆ; ಅದು ಒಟಿಟಿ ಮಂದಿಗೆ ಮಾತ್ರ ಸೀಮಿತವಲ್ಲ, ವರ್ಚಸ್ವೀ ತಾರೆಯರಿಗೂ ಇದು ಅನ್ವಯವಾಗುವ ಮಾತು. ಹಾಗಾಗಿಯೇ ತಾರಾ ಪಟ್ಟ ಏರಿದ ನಟರಲ್ಲಿ, ಒಂದೆರಡು ಅಪವಾದಗಳನ್ನು ಹೊರತುಪಡಿಸಿದರೆ ಯಾರೂ ಕೂಡ ಪ್ರಯೋಗಗಳಿಗೆ ಸಿದ್ಧರಾಗುವುದಿಲ್ಲ.

ಮಲಯಾಳ ಚಿತ್ರರಂಗದಲ್ಲಿ ಮಮ್ಮುಟಿ ಸೇರಿದಂತೆ ಬಹುತೇಕ ನಟರು ಇದಕ್ಕೆ ಅಪವಾದ ಎನ್ನಬಹುದು. ವರ್ಚಸ್ವೀ ನಟರದು ತಮ್ಮ ಸಂಭಾವನೆ, ಪ್ರಚಾರಗಳ ಚಿಂತೆಯೇ ಹೊರತು ಉದ್ಯಮದ ಕಾಳಜಿ ಕಡಿಮೆ ಎನ್ನುವ ಮಾತೂ ಇದೆ. ಅದು ಹುರುಳಿಲ್ಲದ್ದೇನೂ ಅಲ್ಲ.

ಡಿಸೆಂಬರ್ ಕೊನೆಯ ವಾರಗಳಲ್ಲಿ ತೆರೆಕಂಡ ಎರಡೂ ಚಿತ್ರಗಳು ಗೆದ್ದಿವೆ ಎಂದಿದ್ದಾರೆ ಅವುಗಳ ನಿರ್ಮಾಪಕರು. ಅವುಗಳಿಗೆ ಹೂಡಿದ ಬಂಡವಾಳ ಎಷ್ಟು, ಗಳಿಕೆ ಎಷ್ಟು ಎನ್ನುವುದು ಇಲ್ಲಿ ಅಪ್ರಸ್ತುತ. ನಿರ್ಮಾಪಕರೇ ಚಿತ್ರ ಗೆದ್ದಿದೆ ಎಂದು ಪತ್ರಿಕಾಗೋಷ್ಠಿ ಕರೆದು ಹೇಳಿದ್ದಾರೆ. ಉಪೇಂದ್ರ ಅವರಿಗೆ, ಈ ಚಿತ್ರವನ್ನು ನೋಡಿದವರಲ್ಲಿ ಹೆಚ್ಚಿನವರು ಅದನ್ನು ಸರಿಯಾಗಿಯೇ ತಿಳಿದುಕೊಂಡಿದ್ದಾರೆ ಎನ್ನುವುದು ಖುಷಿ ತಂದಿದೆಯಂತೆ. ‘ಚಿತ್ರದ ಮೂಲಕ ಹೇಳುವ ಪ್ರಯತ್ನ ನನ್ನದು. ಎಚ್ಚೆತ್ತುಕೊಳ್ಳುವುದು ಜನರಿಗೆ ಬಿಟ್ಟಿದ್ದು. ಇಲ್ಲಿ ಸಮಾಜ ಎನ್ನುವುದಕ್ಕಿಂತ ಪ್ರತಿಯೊಬ್ಬರೂ ತಮ್ಮ ಜೀವನವನ್ನು ಸರಿಯಾಗಿ ಮಾಡಿಕೊಂಡರೆ, ಸಮಸ್ಯೆಗಳೇ ಇರುವುದಿಲ್ಲ. ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳಬೇಕು, ವಿಶ್ಲೇಷಿಸಿಕೊಳ್ಳಬೇಕು’ ಎನ್ನುತ್ತಾರವರು.

ನಿರ್ದೇಶನದಲ್ಲಿ ತಮಗೆ ತಾವೇ ಸಾಟಿ ಎನಿಸಿಕೊಂಡಿರುವ ಉಪೇಂದ್ರ ಅವರ ಚಿತ್ರಗಳನ್ನು ನೋಡಿ, ಅನುರಾಗ್ ಕಶ್ಯಪ್, ದಕ್ಷಿಣ ಭಾರತದ ಚಿತ್ರಗಳತ್ತ ಎಷ್ಟು ಆಕರ್ಷಿತರಾಗಿದ್ದಾರೆಂದರೆ, ಹಿಂದಿ ಚಿತ್ರರಂಗ ಬಿಟ್ಟು ಮಲಯಾಳ ಚಿತ್ರರಂಗದತ್ತ ಹೊರಳುವ ಮಾತುಗಳನ್ನಾಡಿದ್ದಾರೆ. ತಮ್ಮದೇ ಧಾಟಿಯ ಚಿತ್ರಗಳನ್ನು ನೀಡುವ ಉಪೇಂದ್ರ ಅವರು, ಮೊನ್ನೆ ರಾಮಾಯಣ, ಮಹಾಭಾರತಗಳಿಂದ ಉದ್ಧರಿತವಾದ ಚಿತ್ರಗಳೇ ಹೆಚ್ಚು, ಹಾಗೆ ನೋಡಿದರೆ ಎಲ್ಲ ನಿರ್ದೇಶಕರು ವ್ಯಾಸ, ವಾಲ್ಮೀಕಿಯರಿಗೆ ರಾಯಧನ ನೀಡಬೇಕು ಎನ್ನುತ್ತಾರೆ.

ಆದರೆ ನಮ್ಮಲ್ಲಿನ ನಿರ್ಮಾಪಕ/ನಿರ್ದೇಶಕರಲ್ಲಿ ಕೆಲವರು, ಬೇರೆ ಭಾಷೆಯ ಚಿತ್ರಗಳ ಕನ್ನಡ ಅವತರಣಿಕೆ ಮಾಡುವಾಗ, ಮೂಲ ಕೃತಿಸ್ವಾಮ್ಯ ಇದ್ದವರಿಗೆ ರಾಯಧನ ನೀಡಿ ಅನುಮತಿ ಪಡೆಯುವ ಮಾತಂತಿರಲಿ, ಇದು ಯಾವುದೇ ಚಿತ್ರದ ರಿಮೇಕ್ ಅಲ್ಲ ಎಂದು ಪ್ರಮಾಣಪತ್ರ ನೀಡಿ ಸಹಾಯಧನ ಪಡೆಯಲು ಪ್ರಯತ್ನಿಸುತ್ತಾರೆ ಎನ್ನುವುದು ಅವರ ಗಮನಕ್ಕೆ ಬಂದಂತಿಲ್ಲ.

ಸುದೀಪ್ ಅವರ ‘ಮ್ಯಾಕ್ಸ್’ ಗೆಲುವಿನ ನಂತರದ ಬೆಳವಣಿಗೆ, ವಿವಾದದ ರೂಪ ಪಡೆಯಿತು. ಗೆಲುವಿನ ಕೂಟದ ಸಂದರ್ಭದಲ್ಲಿ ಸುದೀಪ್ ಅದರ ಕುರಿತೂ ಪ್ರಸ್ತಾಪಿಸುತ್ತಾರೆ. ‘ನನ್ನ ಹುಡುಗನೊಬ್ಬ ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡುತ್ತಾನೆ. ಚಿತ್ರ ನೋಡಿ ಬಂದು, ‘ಇವತ್ತಿನಿಂದ ಕಿಚ್ಚ ಬಾಸ್ ಅಂತ ಕರೆಯೋದು ನಿಲ್ಲಿಸಿ, ಕಿಚ್ಚ ಮಾಸ್ ಅಂತ ಕರೆಯಿರಿ’ ಎಂದು ಹೇಳುತ್ತಾನೆ. ಅದನ್ನೇ ಕೇಕ್ ಮೇಲೆ ಬರೆಸಿ ತರುತ್ತಾರೆ. ಅದನ್ನು ನೋಡಿದ ಒಂದು ವಾಹಿನಿಯವರು, ‘ಯಾರಿಗೋ ಟಾಂಟ್ ಕೊಟ್ರಾ ಕಿಚ್ಚ?’ ಎಂದು ಸುದ್ದಿ ಮಾಡುತ್ತಾರೆ. ನಮಗೆ ಟಾಂಟ್ ಕೊಡುವ ಯೋಚನೆಯೇ ಇಲ್ಲ. ಯಾವ ವಾಹಿನಿ ಈ ಸುದ್ದಿ ಮಾಡಿತೋ, ಅಲ್ಲಿ ಕೆಲಸ ಮಾಡುವವರು ಅವರ ಯಜಮಾನರಿಗೆ ಬಾಸ್ ಎಂದು ಕರೆಯುತ್ತಾರೆ. ಹಾಗಾದರೆ, ನಾನು ಅವರ ಬಾಸ್‌ಗೆ ಅಪಹಾಸ್ಯ ಮಾಡಿದೆನಾ?’ ಎಂದು ಪ್ರಶ್ನಿಸಿದರು. ಇದಕ್ಕೆ ಮೂಲ, ದರ್ಶನ್ ಅಭಿಮಾನಿಗಳು ಅವರನ್ನು ಡಿ ಬಾಸ್ ಎಂದು ಕರೆಯುವುದು! ಅದನ್ನೇ ಕೆಲವು ಮಾಧ್ಯಮಗಳು ಪುನರುಚ್ಚರಿಸುತ್ತಿರುವುದು!

ಮಾತೆತ್ತಿದರೆ ಸಾಮಾಜಿಕ ತಾಣಗಳ ಮೂಲಕ ಪ್ರಚಾರ ಪಡೆಯುವ ನಾಯಕ ನಟರ ಅಭಿಮಾನಿಗಳು ಅನಿಸಿಕೊಂಡವರಿಗೆ ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ನೆಚ್ಚಿನ ನಟರ ಕುರಿತಂತೆ ಮಾತ್ರ ಕಾಳಜಿ. ಅವರ ಚಿತ್ರಗಳು ಮಾತ್ರ ಗೆಲ್ಲಬೇಕು ಎನ್ನುವ ಇರಾದೆ. ದರ್ಶನ್ ಕೊಲೆ ಆರೋಪದಲ್ಲಿ ಜೈಲಿನಲ್ಲಿದ್ದ ದಿನಗಳಲ್ಲಿ ತೆರೆಕಂಡ ಇತರ ನಟರ ಚಿತ್ರಗಳ ಕುರಿತಂತೆ ಅವರ ಅಭಿಮಾನಿಗಳು ಹೇಳಿದರೆನ್ನಲಾದ ಮಾತುಗಳು ದರ್ಶನ್ ಗಮನಕ್ಕೆ ಬಂದಿತ್ತೋ ಇಲ್ಲವೋ ಗೊತ್ತಿಲ್ಲ.

ಜನಪ್ರಿಯ ನಟರ ಅಭಿಮಾನಿಗಳ ನಡುವೆ ತಿಕ್ಕಾಟ, ವಿವಾದಗಳು ಹೊಸದೇನೂ ಅಲ್ಲ. ಆದರೆ ಅವುಗಳಿಗೆ ನೀರೆರೆಯುವ ಕೆಲಸವನ್ನು ಆಯ ಕಟ್ಟಿನ ಜಾಗದಲ್ಲಿರುವ ಮಂದಿ ಮಾಡಬಾರದು ಅಷ್ಟೇ.‘ನಮ್ಮ ಹಿರಿಯರು ಚಿತ್ರರಂಗದ ಜವಾಬ್ದಾರಿಯನ್ನು ಹೊತ್ತು, ಅದನ್ನು ಬೆಳೆಸಿ, ಇವತ್ತು ನಮ್ಮ ಕೈಗೆ ಕೊಟ್ಟು ಹೋಗಿದ್ದಾರೆ. ಅದನ್ನು ಇನ್ನಷ್ಟು ಬೆಳೆಸಿ, ಮುಂದಿನ ತಲೆಮಾರಿನವರಿಗೆ ಕೊಟ್ಟು ಹೋಗಬೇಕು. ಇದೊಂದು ಕುಟುಂಬ’ ಎಂದ ಸುದೀಪ್ ಮಾತು ಎಲ್ಲ ಜನಪ್ರಿಯ ನಟರ ಪಾಲಿಗೆ ಪಾಠ ಆಗಬೇಕು.

ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಲು ಆಶಿಸುವ ಮಂದಿ ಇಲ್ಲಿನ ದುಬಾರಿ ಪ್ರವೇಶ ದರದ ಕಾರಣ, ಒಟಿಟಿಯಲ್ಲಿ ಬಂದಾಗ ನೋಡಿದರಾಯಿತು ಎನ್ನುವುದೂ ಇದೆ. ಒಟಿಟಿಯಲ್ಲಿ ಇತ್ತೀಚೆಗೆ ಚಿತ್ರಗಳನ್ನು ಕೊಳ್ಳುತ್ತಿಲ್ಲ; ಚಿತ್ರಮಂದಿರಗಳಲ್ಲಿ ತೆರೆಕಂಡು ಯಶಸ್ವಿಯಾದರೆ ಮಾತ್ರ ಒಟಿಟಿ ಮಂದಿಯ ಜೊತೆ ವ್ಯವಹಾರ ಕುದುರುತ್ತದೆ, ಇಲ್ಲದಿದ್ದರೆ ಇಲ್ಲ. ಹಾಗಾಗಿಯೇ ಸಾಕಷ್ಟು ಕನ್ನಡ ಚಿತ್ರಗಳು ಅತ್ತ ಚಿತ್ರಮಂದಿರಗಳಿಗೂ ಬರಲಾಗದೆ, ಇತ್ತ ಒಟಿಟಿಯಲ್ಲೂ ಪ್ರಸಾರವಾಗದೆ ತ್ರಿಶಂಕು ಸ್ಥಿತಿಯಲ್ಲಿರುತ್ತವೆ. ಬಂಡವಾಳ ಹೂಡಿದ ನಿರ್ಮಾಪಕ ಆಕಾಶ ನೋಡುವ ಪರಿಸ್ಥಿತಿ.

ಆಂದೋಲನ ಡೆಸ್ಕ್

Recent Posts

ಬಂಡೀಪುರ, ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭ : ಸಿಎಂ

ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…

7 hours ago

ಜ.5, 6ರಂದು ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ ; ತವರಲ್ಲಿ ಸಂಭ್ರಮ ಸಾಧ್ಯತೆ?

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…

7 hours ago

ಜ.4ರಂದು ʼಚಾ.ಬೆಟ್ಟಕ್ಕೆ ನಡಿಗೆʼ ಜಾಗೃತಿ ಜಾಥ ; ಬೆಂಬಲಿಸಲು ಮನವಿ

ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…

7 hours ago

ದೇಶದ ಸ್ವಚ್ಛ ನಗರ ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದ 11 ಮಂದಿ ಸಾವು!

ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…

8 hours ago

ಬಳ್ಳಾರಿ ಘರ್ಷಣೆ | ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ ; ಬಿವೈವಿ ಆಗ್ರಹ

ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…

10 hours ago

ಬಳ್ಳಾರಿ ಘರ್ಷಣೆ | ಕೈ ಕಾರ್ಯಕರ್ತ ಸಾವು, ಘಟನೆ ಬಗ್ಗೆ ಸಿಎಂ ಹೇಳಿದ್ದೇನು?

ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ  ಬ್ಯಾನರ್‌ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್‌ ಆಗಿ…

11 hours ago