ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಗಳು ಸಾಮಾಜಿಕ, ರಾಜಕೀಯ ಮತ್ತು ವಾಣಿಜ್ಯ ವಲಯಗಳಲ್ಲಿ ಕೋಲಾಹಲವನ್ನು ಎಬ್ಬಿಸಿವೆ. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಗಾಜಾ ಮತ್ತು ಉಕ್ರೇನ್ ಯುದ್ಧ ನಿಲ್ಲುವಂತೆ ಮಾಡುವ ಅವರ ಘೋಷಣೆ ಘೋಷಣೆಯಾಗಿಯೇ ಉಳಿದಿದೆ. ಯುದ್ಧಕ್ಕಾಗಿ ಅಮೆರಿಕ ಕೊಟ್ಟ ಮಿಲಿಟರಿ ಶಸ್ತ್ರಾಸ್ತ್ರ ನೆರವಿನ ಬಾಬ್ತು ಉಕ್ರೇನ್‌ನಲ್ಲಿರುವ ಖನಿಜ ಸಂಪತ್ತನ್ನು ಪಡೆಯುವ ಟ್ರಂಪ್ ಪ್ರಯತ್ನ ಇನ್ನೂ ಸಫಲವಾಗಿಲ್ಲ. ಆ ಸಂಬಂಧವಾಗಿ ಕಳೆದ ವಾರ ಒಪ್ಪಂದಕ್ಕೆ ಸಹಿ ಮಾಡಲು ಅಮೆರಿಕಕ್ಕೆ ಬಂದಿದ್ದ ಉಕ್ರೇನ್ ಅಧ್ಯಕ್ಷ ಜಲನಸ್ಕಿ ಅವರು ಟ್ರಂಪ್ ಮತ್ತು ಉಪಾಧ್ಯಕ್ಷ ಜೆ. ಡಿ. ವ್ಯಾನ್ಸ್ ಅವರಿಂದ ದೂಷಣೆ, ದಬ್ಬಾಳಿಕೆಗೆ ಒಳಗಾಗಿ, ಅವಮಾನಿತರಾಗಿ ಸ್ವದೇಶಕ್ಕೆ ಹಿಂತಿರುಗಿದ್ದಾರೆ. ತಮ್ಮ ದೇಶಕ್ಕೆ ಭದ್ರತೆ ನೀಡಬೇಕೆಂದು ಅವರು ಒತ್ತಾಯಿಸಿದ್ದೇ ಕಾರಣ ವಾಗಿ ಮಾತುಕತೆ ಮುರಿದುಬಿದ್ದಿದೆ.
ಮಾತುಕತೆ ಮುರಿದುಬಿದ್ದ ಬೆನ್ನಲ್ಲೇ ಮಿಲಿಟರಿ ನೆರವನ್ನು ಟ್ರಂಪ್ ರದ್ದು ಮಾಡಿದ್ದಾರೆ. ರಷ್ಯಾ ಆಕ್ರಮಣದ ವಿರುದ್ಧ ಯುದ್ಧ ಮುಂದುವರಿಸಲು ಉಕ್ರೇನ್ ಬಳಿ ಕ್ಷಿಪಣಿ ಮತ್ತಿತರ ಅತ್ಯಾಧುನಿಕ ಯುದ್ಧಾಸ್ತ್ರಗಳೇ ಇಲ್ಲದಂತಾಗಿದೆ. ಈ ಸ್ಥಿತಿಯಲ್ಲಿ ಜಲನಸ್ಕಿ ಶರಣಾಗುವ ಸ್ಥಿತಿ ತಲುಪಿದ್ದಾರೆ. ಖನಿಜ ಉತ್ಖನನ ಒಪ್ಪಂದಕ್ಕೆ ಸಹಿಮಾಡಲು ತಾವು ಸಿದ್ಧವೆಂದು ಟ್ರಂಪ್ ಅವರಿಗೆ ಅವರು ತಿಳಿಸಿದ್ದಾರೆ. ಮಾತುಕತೆ ಮುಂದಿನ ವಾರ ಆರಂಭವಾಗುವ ಸಾಧ್ಯತೆ ಇದೆ. ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಬೆಂಬಲವಾಗಿ ಟ್ರಂಪ್ ನಿಂತಿರುವಾಗ ಜಲನಸ್ಕಿಗೆ ಈಗ ಶರಣಾಗತಿ ಅನಿವಾರ್ಯ ಎನ್ನುವಂತಾಗಿದೆ. ಉಕ್ರೇನ್ ಹೋರಾಟಕ್ಕೆ ಯೂರೋಪ್ ಬೆಂಬಲ ಘೋಷಿಸಿದ್ದರೂ ಅಮೆರಿಕದ ನೆರವಿಲ್ಲದೆ ಜಲನಸ್ಕಿ ಯುದ್ಧ ಮುಂದುವರಿಸುವ ಸ್ಥಿತಿಯಲ್ಲಿ ಇಲ್ಲ. ರಷ್ಯಾದ ಅತಿಕ್ರಮಣದ ವಿರುದ್ಧದ ಅವರ ಹೋರಾಟದಲ್ಲಿ ಸೋಲು ಕಂಡಂತಾಗಿದೆ. ರಷ್ಯಾವನ್ನು ಮಣಿಸಲು ಉಕ್ರೇನ್‌ನಲ್ಲಿ ರಾಷ್ಟ್ರೀಯವಾದದ ಮತ್ತು ಪ್ರಜಾತಂತ್ರ ಸ್ಥಾಪನೆಯ ಕೂಗೆಬ್ಬಿಸಿ ಯುದ್ಧಕ್ಕಿಳಿಯುವಂತೆ ಮಾಡಿದ ಯೂರೋಪ್ ಮತ್ತು ಅಮೆರಿಕದ ಆಡಳಿತಗಾರರು ನಡೆಸಿದ ಸಂಚು ಕೂಡ ವಿಫಲವಾಗಿದೆ. ಈ ಸಂಚಿನಲ್ಲಿ ಬಲಿಯಾದವರು ಉಕ್ರೇನ್ ಜನರು ಎಂಬುದೇ ದುರಂತ. ಈ ಸಂಚಿನ ದುರಂತ ನಾಯಕ ಜಲನಸ್ಕಿ. ಉಕ್ರೇನ್‌ನಲ್ಲಿ ಶಾಂತಿಸ್ಥಾಪನೆಯ ದಿಸೆಯಲ್ಲಿ ಮಾತುಕತೆ ಆರಂಭವಾಗಬೇಕಿದೆ. ಆಕ್ರಮಿಸಿಕೊಂಡಿರುವ ಪ್ರದೇಶವನ್ನು ಬಿಟು ಕೊಡಲು ರಷ್ಯಾ ಸಿದ್ಧವಿಲ್ಲ. ಇಂಥ ಸ್ಥಿತಿಯಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವೆ ಶಾಂತಿ ಒಪ್ಪಂದ ಸಾಧ್ಯವೇ ಎಂಬ ಪ್ರಶ್ನೆಗೆ ಮುಂದಿನ ದಿನಗಳು ಉತ್ತರಕೊಡಲಿವೆ.
ಪ್ಯಾಲೆಸ್ಟೇನ್ ಹಮಾಸ್ ಉಗ್ರವಾದಿಗಳು ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಗಾಜಾಯುದ್ಧ ನಿಲ್ಲಿಸುವ ವಿಚಾರದಲ್ಲಿಯೂ ಟ್ರಂಪ್ ಅವರ ಘೋಷಣೆ ಫಲಗೂಡುತ್ತಿಲ್ಲ. ಬಹುಪಾಲು ನಾಶವಾಗಿರುವ ಗಾಜಾ ಪ್ರದೇಶ ದಿಂದ ಪ್ಯಾಲೆಸ್ಟೇನ್ ಜನರನ್ನು ಖಾಲಿ ಮಾಡಿಸಿ ಅಲ್ಲಿ ಮನರಂಜನೆಯ ದೊಡ್ಡ ತಾಣ ನಿರ್ಮಿಸುವ ಟ್ರಂಪ್ ಅವರ ಆಲೋಚನೆ ಕೈಗೂಡುವಂತೆಯೂ ಕಾಣುತ್ತಿಲ್ಲ. ಟ್ರಂಪ್ ಅವರ ಈ ಯೋಜನೆಯನ್ನು ಅರಬ್ ಮತ್ತು ಪ್ಯಾಲೆಸ್ಟೇನ್ ಬೆಂಬಲದ ದೇಶಗಳು ತಿರಸ್ಕರಿಸಿದ್ದು, ಪರ್ಯಾಯ ಯೋಜನೆಯನ್ನು ಮುಂದಿಟ್ಟಿವೆ. ಅದನ್ನು ಟ್ರಂಪ್ ತಿರಸ್ಕರಿಸಿದ್ದಾರೆ. ಈ ಮಧ್ಯೆ ಎಲ್ಲ ಒತ್ತೆಯಾಳು ಗಳನ್ನು ಬಿಡುಗಡೆ ಮಾಡಬೇಕು, ಇಲ್ಲವಾದರೆ ಸಾವಿನ ಮನೆ ಸೇರಬೇಕಾ ಗುತ್ತದೆ ಎಂದು ಟ್ರಂಪ್ ಅವರು ಹಮಾಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಬೆದರಿಕೆಗೆ ಹಮಾಸ್ ಉಗ್ರವಾದಿ ನಾಯಕರು ಒಪ್ಪುತ್ತಾರೆಯೋ ಇಲ್ಲವೋ ಎಂಬುದು ಇನ್ನೂ ಗೊತ್ತಾಗಬೇಕಿದೆ.
ಅಕ್ರಮ ವಲಸಿಗರನ್ನು ಬಂಽಸಿ ಅವರವರ ದೇಶಗಳಿಗೆ ಹೊತ್ತುಹಾಕುವ ಕಾರ್ಯಕ್ರಮ ಟ್ರಂಪ್ ಅವರ ಪ್ರಮುಖ ಚುನಾವಣೆ ಘೋಷಣೆಗಳಲ್ಲಿ ಒಂದು. ಟ್ರಂಪ್ ಅಧಿಕಾರಕ್ಕೆ ಬಂದ ಹೊಸದರಲ್ಲಿ ಈ ಕಾರ್ಯ ವೇಗದಿಂದ ನಡೆಯಿತು. ಕ್ರಮೇಣ ಈ ಕಾರ್ಯಕ್ರಮ ಮಂದಗತಿಯಲ್ಲಿ ಸಾಗುತ್ತಿದೆ.
ಈ ವಿಷಯಗಳನ್ನು ಬಿಟ್ಟರೆ ಟ್ರಂಪ್ ಕೈಗೆತ್ತಿಕೊಂಡಿರುವ ಮತ್ತು ಆರಂಭಿಕ ವಿಘ್ನಗಳನ್ನು ಎದುರಿಸುತ್ತಿರುವ ಮತ್ತೊಂದು ಯೋಜನೆ ಸುಂಕಕ್ಕೆ (ತೆರಿಗೆ) ಸಂಬಂಧಿಸಿದ್ದು. ಜಗತ್ತಿನ ಬಹುಪಾಲು ದೇಶಗಳು ಅಮೆರಿಕವನ್ನು ಶೋಷಣೆ ಮಾಡುತ್ತಿವೆ ಎನ್ನುವುದು ಟ್ರಂಪ್ ಆರೋಪ. ಅಮೆರಿಕದ ವಸ್ತುಗಳನ್ನು ಇತರ ದೇಶಗಳಲ್ಲಿ ಮಾರಾಟ ಮಾಡುವಲ್ಲಿ ಹೆಚ್ಚು ಆಮದು ಸುಂಕ (ತೆರಿಗೆ) ವಿಧಿಸಲಾಗುತ್ತದೆ. ಆದರೆ ಇತರ ದೇಶಗಳ ವಸ್ತುಗಳಿಗೆ ಅಮೆರಿಕದಲ್ಲಿ ಕಡಿಮೆ ಆಮದು ಸುಂಕ ವಿಽಸಲಾಗುತ್ತಿದೆ. ಈ ತಾರತಮ್ಯ ಹಲವಾರು ವರ್ಷಗಳಿಂದ ಇದ್ದು ಅಮೆರಿಕಕ್ಕೆ ಅನ್ಯಾಯವಾಗುತ್ತಿದೆ ಎಂದು ಟ್ರಂಪ್ ವಾದಿಸುತ್ತಾರೆ. ಹೀಗಾಗಿ ಸುಂಕವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದ್ದಾರೆ. ಅಮೆರಿಕದ ಬಹುಪಾಲು ವ್ಯಾಪಾರ-ವಹಿವಾಟು ಇರುವುದು ಕೆನಡಾ ಮತ್ತು ಮೆಕ್ಸಿಕೋ ಜತೆಗೆ. ಈ ದೇಶಗಳಿಂದ ಅಮೆರಿಕಕ್ಕೆ ಆಮದಾಗುವ ಎಲ್ಲ ವಸ್ತುಗಳ ಮೇಲೆ ಟ್ರಂಪ್ ಶೇ. ೨೫ರಷ್ಟು ಸುಂಕ ವಿಧಿಸಲಾಗುವುದೆಂದು ಘೋಷಿಸಿದ್ದಾರೆ. ಚೀನಾದ ವಸ್ತುಗಳ ಮೇಲೆ ಶೇ. ೨೦ರಷ್ಟು ಸುಂಕ ವಿಧಿಸಲಾಗಿದೆ. ಅದೇ ರೀತಿ ಭಾರತ, ಬ್ರೆಜಿಲ್, ವಿಯಟ್ನಾಂ, ತೈವಾನ್‌ನಿಂದ ಅಮೆರಿಕಕ್ಕೆ ರಫ್ತಾಗುವ ಎಲ್ಲ ವಸ್ತುಗಳ ಮೇಲೆಯೂ ಸುಂಕ ಪರಿಷ್ಕರಣೆ ಅಗತ್ಯ ಎನ್ನುವುದು ಟ್ರಂಪ್ ವಾದ. ಭಾರತವೂ ಸೇರಿದಂತೆ ಕೆಲವು ದೇಶಗಳ ಮೇಲೆ ಸಮಾನ ತೆರಿಗೆ ನೀತಿಯನ್ನು ಜಾರಿಗೆ ತರಲು ಆದೇಶ ಹೊರಡಿಸಿದ್ದಾರೆ. ಅಮೆರಿಕದಿಂದ ರಫ್ತಾಗುವ ವಸ್ತುಗಳ ಮೇಲೆ ಬೇರೆ ದೇಶಗಳು ಎಷ್ಟು ಸುಂಕ ವಿಽಸುತ್ತಿವೆಯೋ ಅಷ್ಟೇ ಸುಂಕವನ್ನು ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ವಿಧಿಸುವುದು ಈ ಹೊಸ ಆದೇಶದ ಉದ್ದೇಶ. ಮುಂದಿನ ತಿಂಗಳ ಎರಡನೆಯ ತಾರೀಖಿನಿಂದ ಈ ಹೊಸ ಸುಂಕದ ನೀತಿ ಜಾರಿಗೆ ಬರಬೇಕಿದೆ.
ಟ್ರಂಪ್ ಅವರ ಈ ಸುಂಕದ ಯೋಜನೆಯಿಂದ ಈಗಾಗಲೇ ವಿಶ್ವದ ವಾಣಿಜ್ಯ, ವ್ಯಾಪಾರ ಕ್ಷೇತ್ರಗಳು ತಲ್ಲಣಗೊಂಡಿವೆ. ಕೆನಡಾ ಮತ್ತು ಮೆಕ್ಸಿಕೋ ಹೊಸ ಸುಂಕದ ನೀತಿಯನ್ನು ಬಹಿರಂಗವಾಗಿ ಟೀಕಿಸಿ ಪ್ರತೀಕಾರ ಸುಂಕ ವಿಽಸುವ ಪ್ರಯತ್ನಗಳನ್ನು ನಡೆಸಿವೆ. ಹೊಸ ಸುಂಕದ ನೀತಿಯಿಂದ ವಿಶ್ವದ ಆಮದು- ರಫ್ತು ಅಸ್ತವ್ಯಸ್ತವಾಗಲಿದೆ ಎಂಬುದು ಆರ್ಥಿಕ ತಜ್ಞರ ಅಭಿಮತ. ಮುಖ್ಯವಾಗಿ ಸುಂಕದ ಪರಿಷ್ಕರಣೆಯಿಂದಾಗಿ ಎಲ್ಲ ವಸ್ತುಗಳ ಬೆಲೆಗಳು ಏರುತ್ತವೆ. ಇದರ ಮುಂದಿನ ಭಾಗ ಹಣದುಬ್ಬರ ಎನ್ನುವುದು ಅವರ ಅಭಿಪ್ರಾಯ. ಹೊಸ ನೀತಿ ಜಾರಿಗೆ ಬರುವ ಮೊದಲ ದಿನವೇ ಷೇರುಪೇಟೆ ಕುಸಿದಿದೆ. ಅಮೆರಿಕದ ವಾಣಿಜ್ಯ ಕ್ಷೇತ್ರದಲ್ಲಿ ಭೀತಿ ಕಂಡುಬಂದಿದೆ. ಸುಂಕ ಏರಿಸಿದರೆ ಹೀಗಾಗುತ್ತದೆ ಎಂದು ಆರ್ಥಿಕ ತಜ್ಞರು ಮೊದಲೇ ಎಚ್ಚರಿಕೆ ನೀಡಿದ್ದರು. ಆದರೆ ಟ್ರಂಪ್ ಆ ಏರಿಕೆ ಕೆಲವು ದಿನ ಮಾತ್ರ ಎಂದು ಹೇಳಿ ಅವರ ಎಚ್ಚರಿಕೆಗೆ ಹೆಚ್ಚು ಗಮನಕೊಡಲಿಲ್ಲ. ಆದರೆ ಕ್ರಮೇಣ ಟ್ರಂಪ್‌ಗೆ ಅಪಾಯದ ಮನವರಿಕೆ ಆದಂತಿದೆ. ಮೆಕ್ಸಿಕೋ ಮತ್ತು ಕೆನಡಾ ಅಧ್ಯಕ್ಷರು ಟ್ರಂಪ್ ಜೊತೆ ವಿವರವಾಗಿ ಮಾತನಾಡಿದ ಪರಿಣಾಮವಾಗಿ ಹೊಸ ಸುಂಕ ನೀತಿಯ ಜಾರಿಯನ್ನು ಏಪ್ರಿಲ್ ಎರಡರವರೆಗೆ ಮುಂದೂಡಿ ಆದೇಶ ಹೊರಡಿಸಿದ್ದಾರೆ.
ಸುಂಕದ ಯುದ್ಧಕ್ಕೆ ತಮ್ಮ ದೇಶ ಸಿದ್ಧವಿದೆ ಎಂದು ಚೀನಾ ನಾಯಕರು ಘೋಷಿಸಿದ್ದಾರೆ. ಚೀನಾ ಕೂಡ ಪ್ರತೀಕಾರ ಕ್ರಮವಾಗಿ ಅಮೆರಿಕದಿಂದ ಆಮದು ಮಾಡುವ ಎಲ್ಲ ವಸ್ತುಗಳ ಮೇಲೆ ಶೇ. ೧೫ರಷ್ಟು ಹೆಚ್ಚು ಸುಂಕ ವಿಽಸುವುದಾಗಿ ಘೋಷಿಸಿದೆ. ಸಮಾನ ಸುಂಕದ ಬೆದರಿಕೆಯನ್ನು ಎದುರಿಸುತ್ತಿರುವ ಭಾರತ ಕೂಡ ಟ್ರಂಪ್ ಜೊತೆ ಮಾತುಕತೆ ನಡೆಸಲು ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಈಗಾಗಲೇ ಅಮೆರಿಕದಿಂದ ಆಮದಾಗುವ ಕೆಲವು ವಸ್ತುಗಳ ಮೇಲಿನ ಸುಂಕವನ್ನು ಇಳಿಸಿದೆ. ಸಮಾನ ತೆರಿಗೆ ನೀತಿಯ ಕೆಟ್ಟಪರಿಣಾಮವನ್ನು ಎದುರಿಸುವ ಸಲುವಾಗಿ ಅಮೆರಿಕದ ಜೊತೆಗೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲು ಭಾರತ ಪ್ರಯತ್ನಿಸುತ್ತಿದೆ. ಈ ಒಪ್ಪಂದವಾದರೆ ಹೊರೆ ಕಡಿಮೆ ಆಗುವುದೆಂಬುದು ಭಾರತದ ಲೆಕ್ಕಾಚಾರ. ಇದೇನೇ ಇದ್ದರೂ ಅಮೆರಿಕದ ಹೊಸ ಸುಂಕದ ನೀತಿಯಿಂದ ಭಾರತ ವರ್ಷಕ್ಕೆ ಕನಿಷ್ಠ ಏಳು ಬಿಲಿಯನ್ ಡಾಲರ್ ಕಳೆದುಕೊಳ್ಳಲಿದೆ ಎಂದು ಅಂದಾಜು ಮಾಡಲಾಗಿದೆ. ಯೂರೋಪ್ ಮತ್ತು ಇತರ ದೇಶಗಳ ಜೊತೆ ವಾಣಿಜ್ಯ ಒಪ್ಪಂದ ಕುದುರಿಸುವ ಮೂಲಕ ಈ ನಷ್ಟವನ್ನು ಭಾರತ ತುಂಬಿಕೊಳ್ಳುವ, ಅಷ್ಟೇ ಏಕೆ ಹೆಚ್ಚು ರಫ್ತು ಸಾಽಸುವ ಅವಕಾಶವೂ ಟ್ರಂಪ್ ನೀತಿಯಿಂದ ಸೃಷ್ಟಿಯಾಗಿದೆ.
ಟ್ರಂಪ್ ಅಧಿಕಾರಕ್ಕೆ ಬಂದಂದಿನಿಂದ ಭಾರತವೂ ಸೇರಿದಂತೆ ಹಲವು ದೇಶಗಳು ಅಕ್ರಮವಾಗಿ ಅಮೆರಿಕಕ್ಕೆ ಹೋದ ವಲಸಿಗರ ಸಮಸ್ಯೆಯನ್ನು ಎದುರಿಸುತ್ತಿವೆ. ಅಕ್ರಮ ವಲಸಿಗರನ್ನು ಬಂಽಸಿ ಅವರನ್ನು ಅವರವರ ದೇಶಗಳಿಗೆ ಕಳುಹಿಸಲಾಗುತ್ತಿದೆ. ಇದು ಸಣ್ಣ ಸಮಸ್ಯೆಯಲ್ಲ. ಅಮೆರಿಕದಲ್ಲಿ ಒಂದು ಕೋಟಿಗೂ ಹೆಚ್ಚು ಮಂದಿ ಅಕ್ರಮ ವಲಸಿಗರಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಇವರನ್ನೆಲ್ಲಾ ಪತ್ತೆ ಹಚ್ಚಿ ಅವರವರ ದೇಶಗಳಿಗೆ ಕಳುಹಿ ಸುವುದು ಸುಲಭಸಾಧ್ಯ ಕೆಲಸವಲ್ಲ. ಆದರೆ ಟ್ರಂಪ್ ಅದನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಂಡಿರುವುದರಿಂದ ಮುಂದುವರಿಯಲಿದೆ. ಆದರೆ ಒಂದೇ ತಿಂಗಳಲ್ಲಿ ಈ ಕಾರ್ಯಕ್ರಮದ ವೇಗ ಕಡಿಮೆಯಾಗಿದೆ. ಈಗ ಟ್ರಂಪ್ ಆ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ. ಇದೇ ರೀತಿ ದೇಶದ ಪೌರತ್ವ ಮತ್ತು ಗ್ರೀನ್ ಕಾರ್ಡ್ ಕುರಿತಂತೆಯೂ ವಿವಾದ ಎದ್ದಿದೆ. ವಿವಾದ ಅಷ್ಟೇ ಅಲ್ಲ ಗೊಂದಲವೂ ಉಂಟಾಗಿದೆ. ಸ್ಪಷ್ಟ ನಿರ್ದೇಶನ ಇಲ್ಲದಿರುವುದರಿಂದ ಜನರಿಗೆ ಕಿರುಕುಳವೂ ಆಗುತ್ತಿದೆ. ಸರ್ಕಾರದ ನೀತಿಗಳು ಸ್ಪಷ್ಟವಾಗಲು ಇನ್ನೂ ಕೆಲವು ವಾರ ಬೇಕಾಗಬಹುದು. ಅದುವರೆಗೆ ಜನರಿಗೆ ಆತಂಕ ತಪ್ಪಿದ್ದಲ್ಲ.
ಬಾರಾಮತಿ : ಭಾರತೀಯ ರಾಜಕಾರಣದಲ್ಲಿ ಅನೇಕ ರಾಜಕೀಯ ನಾಯಕರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ವಿಮಾನ ಅಪಘಾತದಲ್ಲಿ ಯಾವೆಲ್ಲಾ…
ಮೈಸೂರು : ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಲ್ಯಾಬ್ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ…
ಬೆಂಗಳೂರು : 25 ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಶಾಸಕರಿಗೆ ಮಾತ್ರ…
ಮೈಸೂರು : ಸೈಬರ್ ವಂಚಕರು ವಾಟ್ಸಾಪ್ ಕರೆ ಮೂಲಕ ಹೂಡಿದ ಡಿಜಿಟಲ್ ಅರೆಸ್ಟ್ ಕುತಂತ್ರಕ್ಕೆ ಬಲಿಯಾಗಿ ವಿವೇಕಾನಂದ ನಗರದ ಹಿರಿಯ…
ಬೆಂಗಳೂರು : ಕೆಎಸ್‌ಆರ್‌ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ, ಕಾರ್ಮಿಕ ಮುಖಂಡ ಎಚ್.ವಿಅನಂತ್ ಸುಬ್ಬರಾವ್ (85) ಬುಧವಾರ ಸಂಜೆ ನಿಧನರಾಗಿದ್ದಾರೆ.…
ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 25 ವರ್ಷದ ಗಂಡು ಜಿರಾಫೆ ‘ಯುವರಾಜ’ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದೆ. 1987ರಲ್ಲಿ ಜರ್ಮನಿಯಿಂದ…