ಕಾಫಿ, ಸಂಬಾರ ಪದಾರ್ಥ, ಸಿದ್ಧ ಉಡುಪು, ಡೇರಿ ಉತ್ಪನ್ನಕ್ಕೆ ಹೊಡೆತ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಸುಂಕದ ಯುದ್ಧಕ್ಕೂ ನಮಗೂ ಏನು ಸಂಬಂಧ ಎಂದು ಕರ್ನಾಟಕ ಸರ್ಕಾರ, ವ್ಯಾಪಾರಗಾರರು ಮತ್ತು ಸಾಮಾನ್ಯ ಜನರು ಆ ಬಗ್ಗೆ ಉದಾಸೀನ ತಾಳಿರುವುದು ಆಘಾತಕಾರಿ ಬೆಳವಣಿಗೆ. ಪ್ರಪಂಚ ಹಿಂದಿನಂತಿಲ್ಲ. ಜಗತ್ತಿನ ಯಾವ ಮೂಲೆಯಲ್ಲಿ ಏನೇ ಬದಲಾವಣೆಗಳಾದರೂ ನಮ್ಮ ದೇಶದ ಜನರ ಮೇಲೆ ನೇರ ಪರಿಣಾಮವಾಗುತ್ತದೆ ಎನ್ನುವುದು ಈಗಾಗಲೇ ತಿಳಿದಿರುವ ವಿಚಾರ. ಅದರಲ್ಲಿಯೂ ಭಾರತದ ಜೊತೆಗೆ ವಾಣಿಜ್ಯ ಬಾಂಧವ್ಯ ಪಡೆದ ಮುಂದುವರಿದ ದೇಶಗಳಲ್ಲಿ ಏನಾದರೂ ಆದರೆ ನೇರವಾಗಿ ಪರಿಣಾಮ ಆಗುವುದು ನಮ್ಮ ಮೇಲೆಯೇ. ಈಗ ಆಗಿರುವುದು ಮತ್ತು ಮುಂದೆ ಆಗಲಿರುವುದು ಅಂಥದೇ ಪರಿಣಾಮ. ಕರ್ನಾಟಕ ಜಾಗತಿಕವಾಗಿ ಮಹತ್ವದ ರಾಜ್ಯವಾಗಿದ್ದು ವಿಶ್ವದ ಅತ್ಯಾಧುನಿಕ ಕೇಂದ್ರವಾಗಿದೆ. ಇದರಿಂದಾಗಿಯೇ ಟ್ರಂಪ್ ಸುಂಕದ ನೀತಿ ಕರ್ನಾಟಕದ ವಿವಿಧ ವಲಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಟ್ರಂಪ್ ಇದೇ ತಿಂಗಳ ಎರಡರಂದು ಅಮೆರಿಕಕ್ಕೆ ರಫ್ತಾಗುವ ವಸ್ತುಗಳ ಮೇಲೆ ದೊಡ್ಡ ಪ್ರಮಾಣದಲ್ಲಿಯೇ ಸುಂಕ ಪ್ರಹಾರ ಮಾಡಿದರು. ಮೊದಲು ಅವರು ಪ್ರತಿಸುಂಕ ಅಂದರೆ ಅಮೆರಿಕಕ್ಕೆ ರಫ್ತು ಮಾಡುವ ದೇಶಗಳು ಎಷ್ಟು ಸುಂಕ ವಿಽಸುತ್ತವೆಯೋ ಅಷ್ಟೇ ಪ್ರಮಾಣದ ಸುಂಕವನ್ನು ತಾವೂ ವಿಽಸುವುದಾಗಿ ಘೋಷಿಸಿದ್ದರು. ಅಮೆರಿಕಕ್ಕೆ ರಫ್ತಾಗುವ ವಸ್ತುಗಳ ಮೇಲೆ ರಫ್ರು ದೇಶಗಳು ಶೇ. ೧೫೦ ರಷ್ಟು ಸುಂಕ ವಿಧಿಸಿದ ನಿದರ್ಶನಗಳಿವೆ. ಭಾರತ ಕೂಡ ಅಮೆರಿಕಕ್ಕೆ ರಫ್ತು ಮಾಡುವ ವಸ್ತುಗಳ ಮೇಲೆ ಹೆಚ್ಚು ಸುಂಕ ವಿಽಸುತ್ತಿತ್ತು. ಆದರೆ ಅಮೆರಿಕಕ್ಕೆ ರಫ್ತು ಮಾಡುವ ವಸ್ತುಗಳ ಮೇಲೆ ವಿಧಿಸುತ್ತಿದ್ದ ಸುಂಕ ಗರಿಷ್ಟ ಶೇ. ೩. ೫ರಷ್ಟು ಮಾತ್ರ. ಇದರಿಂದ ಅಮೆರಿಕಕ್ಕೆ ನಷ್ಟವಾಗುತ್ತಿದೆ. ಇತರ ದೇಶಗಳು ಅಮೆರಿಕದ ಗ್ರಾಹಕರನ್ನು ಶೋಷಣೆ ಮಾಡುತ್ತಿವೆ. ಸಮಾನ ಸುಂಕ ವಿಧಿಸಿದರೆ ಅಮೆರಿಕಕ್ಕೆ ಲಕ್ಷಾಂತರ ಬಿಲಿಯನ್ ಕನಿಷ್ಠ ವರ್ಷಕ್ಕೆ ಮೂರು ಟ್ರಿಲಿಯನ್ ಆದಾಯ ಬರುತ್ತದೆ ಎಂಬುದು ಟ್ರಂಪ್ ಅವರ ವಾದ.
ಟ್ರಂಪ್ ಅವರು ತಮ್ಮ ಹಿಂದಿನ ಅವಧಿಯಲ್ಲಿಯೇ ಅಂಥ ಒಂದು ಕ್ರಮಕ್ಕೆ ಮುಂದಾದರು. ಈಗ ಮತ್ತೆ ಅಧ್ಯಕ್ಷರಾದ ಮೇಲೆ ಹೊಸ ಸುಂಕವನ್ನು ಮೀಸಲು ತೀರ್ಮಾನಿಸಿದರು. ಟ್ರಂಪ್ ಅವರ ಹೊಸ ಸುಂಕ ಜಾರಿಗೆ ಆದೇಶವೂ ಹೊರಬಿತ್ತು. ಸುಂಕ ಏರಿಕೆ ಘೋಷಣೆ ಪರಿಣಾಮ ವಿಶ್ವದಾದ್ಯಂತ ಷೇರುಪೇಟೆ ಕುಸಿಯಿತು. ವಾಣಿಜ್ಯ ವಲಯ ಟ್ರಿಲಿಯನ್‌ಗಟ್ಟಲೆ ನಷ್ಟ ಅನುಭವಿಸಿತು. ಈ ಮಧ್ಯೆ ಅಮೆರಿಕ ಮತ್ತು ಚೀನಾ ನಡುವಣ ಸುಂಕದ ಯುದ್ಧ ತಾರಕಕ್ಕೆ ಏರಿತು. ಟ್ರಂಪ್ ಹೇರಿದ ಶೇ. ೩೪ರಷ್ಟು ಸುಂಕಕ್ಕೆ ಪ್ರತೀಕಾರವಾಗಿ ಚೀನಾವೂ ಸುಂಕ ಏರಿಸಿತು. ಈಗ ಚೀನಾ ವಿಧಿಸಿದ ಸುಂಕ ೮೪ಕ್ಕೆ ಏರಿದ್ದರೆ, ಅಮೆರಿಕ ಶೇ. ೧೫೪ ರಷ್ಟು ಸುಂಕ ಏರಿಸಿದೆ. ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಜಿದ್ದಿಗೆ ಬಿದ್ದಿದ್ದಾರೆ. ಈ ಕದನದಲ್ಲಿ ನಷ್ಟಕ್ಕೆ ಗುರಿಯಾಗುತ್ತಿರುವವರು ಸಾಮಾನ್ಯ ಜನರು, ವ್ಯಾಪಾರಗಾರರು.
ತಮ್ಮ ಸುಂಕದ ನೀತಿಯ ಕೆಟ್ಟ ಪರಿಣಾಮವನ್ನು ಗಮನಿಸಿ ಇದೀಗ ಟ್ರಂಪ್ ಹೊಸ ಸುಂಕ ಜಾರಿ ದಿನವನ್ನು ೯೦ ದಿನಗಳ ಕಾಲ ಮುಂದೂಡಿದ್ದಾರೆ. (ಚೀನಾ ಹೊರತುಪಡಿಸಿ) ಸುಮಾರು ೭೦ಕ್ಕೂ ಹೆಚ್ಚು ದೇಶಗಳು ಸುಂಕದ ವಿಚಾರದಲ್ಲಿ ಮಾತುಕತೆ ನಡೆಸಲು ಮುಂದೆ ಬಂದಿವೆ. ಈ ಹಿನ್ನೆಲೆಯಲ್ಲಿ ಹೊಸ ಸುಂಕ ಜಾರಿಯನ್ನು ಮುಂದೂಡಲಾಗಿದೆ ಎಂದು ಟ್ರಂಪ್ ಪ್ರಕಟಿಸಿದ್ದಾರೆ. ಈ ಮುಂದೂಡಿಕೆ ಹಿನ್ನೆಲೆಯಲ್ಲಿ ಜಾಗತಿಕ ಷೇರುಪೇಟೆಯಲ್ಲಿ ಜಿಗಿತ ಕಂಡುಬಂದಿದೆ. ಆದರೆ ಮಾರನೆಯ ದಿನವೇ ಮತ್ತೆ ಪೇಟೆ ಕುಸಿದಿದೆ. ವಿಶ್ವದ ವಾಣಿಜ್ಯ ವ್ಯವಸ್ಥೆಯೇ ಅಸ್ತವ್ಯಸ್ತವಾಗಿರುವುದರಿಂದ ಆರ್ಥಿಕ ವಲಯದಲ್ಲಿ ಅಲ್ಲೋಲ ಕಲ್ಲೋಲ ಕಾಣಿಸುತ್ತಿದೆ.
ರಪ್ತು ವಿಚಾರದಲ್ಲಿ ಅಮೆರಿಕದ ನಿದರ್ಶನವನ್ನೇ ನೀಡುವುದಾದರೆ ಈಗಾಗಲೇ ರಪ್ತು ೧೯ರಷ್ಟು ಕುಸಿದಿದೆ. ಚೀನಾದಿಂದ ಪ್ರತಿವರ್ಷ ಅಮೆರಿಕಕ್ಕೆ ರಫ್ತಾಗುವ ಸ್ಮಾರ್ಟ್‌ಫೋನ್‌ಗಳ ಪ್ರಮಾಣ ಶೇ. ೭೩, ಲ್ಯಾಪ್‌ಟಾಪ್ ಪ್ರಮಾಣ ಶೇ. ೭೮, ವಿಡಿಯೋ ಗೇಮ್ಸ್ ಪ್ರಮಾಣ ಶೇ. ೮೭. ಈ ವ್ಯಾಪಾರ ಅಸ್ತವ್ಯಸ್ತ ಗೊಂಡಿದ್ದು, ವ್ಯಾಪಾರಗಾರರು. ಮುಂದೇನು ಎಂದು ಯೋಚಿಸುವಂತಾಗಿದೆ. ಟ್ರಂಪ್ ಸುಂಕದ ಪರಿಣಾಮ ಎಲನ್ ಮಸ್ಕ್ ಅವರ ವ್ಯಾಪಾರವನ್ನೂ ಬಿಟ್ಟಿಲ್ಲ. ಅವರ ಕಂಪೆನಿ ಒಂದೇ ವಾರದಲ್ಲಿ ೩೦೦ ಬಿಲಿಯನ್ ಡಾಲರ್ ಕಳೆದುಕೊಂಡಿದೆ. ಅಮೆರಿಕದ ವಸ್ತುಗಳ ಮಾರಾಟದಲ್ಲಿ ಕುಸಿತ ಕಂಡುಬಂದಿದೆ.
ಬೇರೆ ದೇಶಗಳ ವಸ್ತುಗಳ ಮೇಲೆ ಸುಂಕ ಹೆಚ್ಚು ಮಾಡಿದರೆ ಅಮೆರಿಕದ ಜನರು ಅಮೆರಿಕದ ವಸ್ತುಗಳನ್ನೇ ಕೊಳ್ಳುತ್ತಾರೆ ಎಂಬುದು ಟ್ರಂಪ್ ಲೆಕ್ಕಾಚಾರ. ಆದರೆ ಹಾಗೆ ಆಗುತ್ತಿಲ್ಲ. ಅಮೆರಿಕದ ಜನರು ಚೀನಾ, ದಕ್ಷಿಣ ಕೊರಿಯಾ, ಮೆಕ್ಸಿಕೊ, ಜಪಾನ್ ವಸ್ತುಗಳನ್ನೇ ಹೆಚ್ಚು ಕೊಳ್ಳುತ್ತಾ ಬಂದಿದ್ದಾರೆ. ಅಮೆರಿಕದಲ್ಲಿ ತಯಾರಿಸಿದ ಕಾರುಗಳಿಗಿಂತ ಚೀನಾ, ದಕ್ಷಿಣ ಕೊರಿಯಾ, ಜಪಾನ್‌ನಲ್ಲಿ ತಯಾರಾದ ಕಾರುಗಳನ್ನೇ ಲಕ್ಷ ಲಕ್ಷ ಸಂಖ್ಯೆಯಲ್ಲಿ ಕೊಳ್ಳುತ್ತಾ ಬಂದಿರುವುದೇ ಇದಕ್ಕೆ ನಿದರ್ಶನ. ಎಲೆಕ್ಟ್ರಾನಿಕ್ ವಸ್ತುಗಳ ವಿಚಾರದಲ್ಲಿಯೂ ಅಮೆರಿಕದ ವಸ್ತುಗಳಿಗೆ ಜನ ಒಲವು ತೋರಿಸುತ್ತಿಲ್ಲ. ಇದು ವಾಸ್ತವ. ಸುಂಕ ಹೆಚ್ಚಿಸಿದರೂ ಜನರು ಅಮೆರಿಕದ ವಸ್ತುಗಳನ್ನು ಕೊಳ್ಳಲು ಮುಂದೆ ಬರದಿದ್ದರೆ ಟ್ರಂಪ್ ಯೋಜನೆ ಕುಸಿದಂತೆಯೇ ಸರಿ. ಅಷ್ಟಕ್ಕೂ ಎಲ್ಲವನ್ನೂ ಅಮೆರಿಕದಲ್ಲಿಯೇ ದಿಢೀರನೆ ಉತ್ಪಾದನೆ ಮಾಡಲು ಹೇಗೆ ಸಾಧ್ಯ? ಜಾಗತಿಕವಾಗಿ ಮುಕ್ತ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ಬಂದ ಮೇಲೆ ಒಂದೇ ದೇಶದಲ್ಲಿ ಎಲ್ಲ ವಸ್ತು ಗಳನ್ನು ತಯಾರಿಸುವ ವಿಧಾನ ಬದಲಾಗಿದೆ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಉತ್ಪಾದನಾ ವ್ಯವಸ್ಥೆ ಸಿದ್ಧವಾಗಿದೆ. ಇದರಿಂದ ಅಗ್ಗದ ದರಗಳಲ್ಲಿ ಗ್ರಾಹಕರಿಗೆ ವಸ್ತುಗಳು ಸಿಗುತ್ತವೆ. ಆದರೆ ಟ್ರಂಪ್ ಇದನ್ನು ಒಪ್ಪುವುದಿಲ್ಲ. ಅಮೆರಿಕದಲ್ಲಿ ಎಲ್ಲ ವಸ್ತುಗಳೂ ಉತ್ಪಾದನೆಯಾಗಬೇಕು ಮತ್ತು ಅಮೆರಿಕದ ಜನರು ಅಗ್ಗದ ದರದಲ್ಲಿ ಅವುಗಳನ್ನೇ ಕೊಳ್ಳುವಂತಾಗಬೇಕು ಎಂಬ ರಾಷ್ಟ್ರೀಯವಾದ ಟ್ರಂಪ್ ಅವರದ್ದು.
ಇದೇನೇ ಇದ್ದರೂ ಈ ಸುಂಕ ಯುದ್ಧದಲ್ಲಿ ಕೊನೆಯವರೆಗೂ ಯುದ್ಧ ಮಾಡುವುದಾಗಿ ಚೀನಾ ಘೋಷಿಸಿದೆ. ಯೂರೋಪ್ ಮತ್ತು ಭಾರತದ ಸಹಕಾರ ಕೋರಿದೆ. ಚೀನಾದ ವಸ್ತುಗಳ ಮೇಲೆ ರಿಯಾಯಿತಿ ಘೋಷಿಸಿ ಅಮೆರಿಕಕ್ಕೆ ಸಡ್ಡು ಹೊಡೆಯಲು ಚೀನಾ ತೀರ್ಮಾನಿಸಿದೆ. ಎಷ್ಟು ಸುಂಕ ಹೇರಲಾಗುತ್ತದೋ ಅಷ್ಟೆ ರಿಯಾಯಿತಿ ಘೋಷಿಸಿ ಅಮೆರಿಕವನ್ನು ಬಗ್ಗುಬಡಿಯಲು ಚೀನಾ ಸಿದ್ಧವಿರುವಂತಿದೆ. ಆದರೆ ಬಹುಶಃ ಆ ಹಂತಕ್ಕೆ ಈ ಯುದ್ಧ ಹೋಗಲಾರದು. ಟ್ರಂಪ್ ಈಗಾಗಲೇ ಸ್ವಲ್ಪ ತಗ್ಗಿ ಹೊಸ ಸುಂಕ ಹೇರಿಕೆಯ ದಿನವನ್ನು ಮುಂದೂಡಿದ್ದಾರೆ. ಚೀನಾದ ಜೊತೆಗೂ ರಾಜಿಗೆ ಅವರು ಸಿದ್ಧವಾಗಬಹುದು. ವಿಶ್ವದ ಎರಡು ಮಹಾ ಅಭಿವೃದ್ಧಿ ದೇಶಗಳು ರಾಜಿ ಮಾಡಿಕೊಳ್ಳದಿದ್ದರೆ ಜಾಗತಿಕ ಹಣದುಬ್ಬರ ಗ್ಯಾರಂಟಿ. ತಾನೂ ಪ್ರತಿ ಸುಂಕ ವಿಧಿಸುವುದಾಗಿ ಪ್ರಕಟಿಸಿದ್ದ ಯೂರೋಪ್ ಒಕ್ಕೂಟ ಇದೀಗ ರಾಜಿಗೆ ಮುಂದಾಗಿದೆ. ಅದು ಮುಂದಿಟ್ಟಿರುವ ಸಲಹೆ ಶೂನ್ಯ ಸುಂಕ. ಯೂರೋಪ್ ಒಕ್ಕೂಟ ಮಾತುಕತೆಗೆ ಮುಂದಾಗಿರುವುದನ್ನು ಟ್ರಂಪ್ ಸ್ವಾಗತಿಸಿದ್ದಾರೆ.
ಈ ಯುದ್ಧದಲ್ಲಿ ಭಾರತ ಸಿಕ್ಕಿಕೊಂಡು ಕಷ್ಟ ಅನುಭವಿಸುತ್ತಿದೆ. ಭಾರತ ಆರ್ಥಿಕವಾಗಿ ಈಗ ಬೆಳೆಯುತ್ತಿರುವ ದೇಶ. ಟ್ರಂಪ್ ಸುಂಕ ಯುದ್ಧದಿಂದಾಗಿ ಭಾರತದ ಷೇರುಪೇಟೆಯೂ ಕುಸಿತ ಎದುರಿಸುತ್ತಿದೆ. ಹೊಸ ಹೂಡಿಕೆ ಹರಿದುಬರುತ್ತಿಲ್ಲ. ಭಾರತದ್ದು ಇನ್ನೂ ಬೆಳೆಯುತ್ತಿರುವ ಆರ್ಥಿಕತೆಯಾದ್ದರಿಂದ ಇದೊಂದು ರೀತಿಯಲ್ಲಿ ಆಘಾತವೇ. ಭಾರತದ ಮೇಲೆ ಟ್ರಂಪ್ ಶೇ. ೨೬ ರಷ್ಟು ಸುಂಕ ವಿಽಸಿದ್ದಾರೆ. ಮೊದಲು ಭಾರತದ ವಸ್ತುಗಳ ಮೇಲೆ ಅಮೆರಿಕ ವಿಽಸುತ್ತಿದ್ದ ಸುಂಕ ಗರಿಷ್ಟ ೩. ೫. ಈಗ ಶೇ. ೨೬ ಕೊಡಬೇಕಾಗಿದೆ. ಅಂದರೆ ಅಷ್ಟು ಹೆಚ್ಚು ಹಣವನ್ನು ಅಮೆರಿಕದ ಜನರು ತೆರಬೇಕಾಗುತ್ತದೆ. ಜನರು ಕೊಳ್ಳು ವುದನ್ನು ನಿಲ್ಲಿಸಿದರೆ ಅಥವಾ ಕೊಳ್ಳುವುದನ್ನು ಕಡಿಮೆ ಮಾಡಿದರೆ ಭಾರತ ಅಪಾರ ನಷ್ಟ ಎದುರಿಸಬೇಕಾಗುತ್ತದೆ. ವಸ್ತುಗಳ ಮಾರಾಟವಾಗದಿದ್ದರೆ ಉತ್ಪಾದನೆ ಸ್ಥಗಿತಗೊಳ್ಳುತ್ತದೆ, ಉತ್ಪಾದನೆ ಸ್ಥಗಿತಗೊಂಡರೆ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಾರೆ. ಇದೊಂದು ರೀತಿಯಲ್ಲಿ ಸರಪಳಿ ಪರಿಣಾಮ.
ಈ ಸುಳಿಯಲ್ಲಿ ಕರ್ನಾಟಕವೂ ಸಿಕ್ಕಿಹಾಕಿಕೊಂಡಿದೆ. ಕರ್ನಾಟಕದಿಂದ ಅಮೆರಿಕಕ್ಕೆ ರಫ್ತಾಗುವ ವಸ್ತುಗಳು ಕಡಿಮೆ ಇರಬಹುದು. ಆದರೆ ಕೆಟ್ಟ ಪರಿಣಾಮ ಗ್ಯಾರಂಟಿ. ಕರ್ನಾಟಕದಿಂದ ಅಮೆರಿಕಕ್ಕೆ ಕಾಫಿ, ಸಂಬಾರಪದಾರ್ಥ, ಸಿದ್ಧ ಉಡುಪು, ವಿವಿಧ ಕೈಗಾರಿಕೆಗಳಿಗೆ ಬೇಕಾಗುವ ಬಿಡಿಭಾಗಗಳು, ಚಿನ್ನ ಮತ್ತು ವಜ್ರದ ಆಭರಣಗಳು, ಸಂಸ್ಕರಿತ ಪೆಟ್ರೋಲಿಯಂ ವಸ್ತುಗಳು, ಕಾರು ಮತ್ತಿತರ ವಾಹನಗಳ ಬಿಡಿ ಭಾಗಗಳು, ಪರಮಾಣು ಸ್ಥಾವರಗಳಿಗೆ ಬೇಕಾಗುವ ಬಿಡಿಭಾಗಗಳು, ವಿಮಾನ ಬಿಡಿಭಾಗಗಳು (ಬೋಯಿಂಗ್ ವಿಮಾನ ಕಂಪೆನಿಗೆ ಸಾಕಷ್ಟು ಪ್ರಮಾಣದ ಬಿಡಿಭಾಗಗಳು ಬೆಂಗಳೂರಿನಲ್ಲಿ ತಯಾರಾಗಿ ರಫ್ತಾಗುತ್ತವೆ), ಈ ರಫ್ತು ಅಷ್ಟೇನೂ ದೊಡ್ಡ ಪ್ರಮಾಣದ್ದು ಅಲ್ಲದಿರಬಹುದು. ಆದರೆ ಹೊಸ ಸುಂಕದ ಹೇರಿಕೆಯಿಂದ ರಫ್ತು ಕಡಿಮೆಯಾಗಿ ರೈತರು. ಕೈಗಾರಿಕಾ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗುವುದು ಖಚಿತ. ಕರ್ನಾಟಕದಿಂದ ಅಮೆರಿಕಕ್ಕೆ ಹೋಗುವ ಔಷಧಗಳು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಇತರ ವಸ್ತುಗಳ ಪ್ರಮಾಣ ಸಾಕಷ್ಟು ಇದೆ. ಮುಂದಿನ ಹಂತದಲ್ಲಿ ಇವುಗಳ ಮೇಲೂ ಸುಂಕ ವಿಧಿಸುವುದಾಗಿ ಟ್ರಂಪ್ ಇದೀಗ ಪ್ರಕಟಿಸಿದ್ದಾರೆ. ಸುಂಕ ಹೆಚ್ಚಿಸಿದರೆ ಔಷಧ ಕೈಗಾರಿಕೆ ಸಂಕಷ್ಟಕ್ಕೆ ಸಿಲುಕಲಿದೆ.
ಬೆಂಗಳೂರು ಕಂಪ್ಯೂಟರ್ ಸಾಫ್ಟ್‌ವೇರ್‌ಗೆ ಹೆಸರುವಾಸಿ. ಪ್ರಪಂಚದ ಎಲ್ಲ ಕಡೆಯಿಂದ ತಮ್ಮ ಉದ್ಯಮಗಳಿಗೆ ಬೇಕಾದಂಥ ಸಾಫ್ಟ್‌ವೇರ್ ತಯಾರಿಕೆಗೆ ಬೇಡಿಕೆ ಇದೆ. ಸಾವಿರಾರು ಬಿಲಿಯನ್ ವ್ಯಾಪಾರ ನಡೆಯುತ್ತಿದೆ. ಸದ್ಯ ಟ್ರಂಪ್ ಈ ಕ್ಷೇತ್ರದ ಮೇಲೆ ಸುಂಕ ಹೆಚ್ಚಿಸಿಲ್ಲದಿರುವುದು ಸಮಾಧಾನದ ಸಂಗತಿ. ಸಾವಿರಾರು ಇಂಜಿನಿಯರುಗಳು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಿಮವಾಗಿ ಟ್ರಂಪ್ ರಾಜಿ ಮಾಡಿಕೊಂಡು ಸುಂಕ ಇಳಿಸಬಹುದು. ಆದರೆ ಸುಂಕ ಮೊದಲಿನಷ್ಟೇ ಇಲ್ಲದೆ ಇರುವುದಂತೂ ಖಚಿತ. ಈ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಟ್ರಂಪ್ ಹೊಸ ಸುಂಕ ನೀತಿಯಿಂದ ಆಗಬಹುದಾದ ಕೆಟ್ಟ ಪರಿಣಾಮದ ಬಗ್ಗೆ ಅಧ್ಯಯನ ನಡೆಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಿದೆ.
ನಾಳೆಯಿಂದ ಬಿಜೆಪಿ ಪ್ರತಿಭಟನೆ: ಸಂಸದರ ಮಾಹಿತಿ ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ…
ಬೆಳಗಾವಿ : ಮುಂದಿನ ಮಾರ್ಚ್‌ನಿಂದ ಎರಡೂವರೆ ಸಾವಿರ ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ…
ಬೆಳಗಾವಿ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜ್ಯಾಥಿತ್ಯ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಶೂನ್ಯವೇಳೆಯಲ್ಲಿ ಸದಸ್ಯ ಧನಂಜಯ್…
ಬೆಂಗಳೂರು : ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ದಿ ಡೆವಿಲ್ ಸಿನಿಮಾ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಅಭಿಮಾನಿಗಳು, ದರ್ಶನ್…
ಬೆಳಗಾವಿ : ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ…
ಬೆಳಗಾವಿ : ರಾಜ್ಯದಲ್ಲಿ ಹೊಸ ತಾಲ್ಲೂಕುಗಳಲ್ಲಿ ಸದ್ಯಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಮಂಜೂರಾತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ…