ಡಿ.ವಿ.ರಾಜಶೇಖರ
ಪ್ಯಾಲೆಸ್ಟೇನ್ ಉಗ್ರಗಾಮಿ ಸಂಘಟನೆ ಹಮಾಸ್ ಮತ್ತು ಇಸ್ರೇಲ್ ನಡುವೆ ಆಗಿದ್ದ ಕದನ ವಿರಾಮ ಒಪ್ಪಂದ ಕುಸಿದಿದೆ. ಇಂಥ ನಿರಾಶೆಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವಣ ಕದನವಿರಾಮ ಮಾತುಕತೆಗಳು ಸೋಮವಾರ ಸೌದಿಅರೇಬಿಯಾದಲ್ಲಿ ಆರಂಭವಾಗಲಿವೆ. ಈ ಮಾತುಕತೆಗಳು ಮುಖ್ಯವಾಗಿ ಅಮೆರಿಕದ ಮತ್ತು ರಷ್ಯಾದ ಉನ್ನತ ಮಟ್ಟದ ಪ್ರತಿನಿಧಿಗಳ ನಡುವೆ ನಡೆಯಲಿದೆ. ಈ ಸಂದರ್ಭದಲ್ಲಿ ಉಕ್ರೇನ್ ಅಧ್ಯಕ್ಷ ಜಲನಸ್ಕಿ ನೇತೃತ್ವದ ನಿಯೋಗ ಸೌದಿ ರಾಜಧಾನಿ ರಿಯಾದ್‌ನಲ್ಲಿಯೇ ಇರಲಿದೆ. ಅಗತ್ಯ ಬಿದ್ದರೆ ಅಮೆರಿಕದ ನಿಯೋಗ ಜಲನಸ್ಕಿ ಅವರನ್ನು ಸಂಪರ್ಕಿಸಲಿದೆ.
ಇಸ್ರೇಲ್ ಸೇನೆ ಗಾಜಾ ಪ್ರದೇಶದ ಮೇಲೆ ಬಾಂಬ್ ದಾಳಿಯನ್ನು ಮತ್ತೆ ಆರಂಭಿಸಿದೆ. ಈ ದಾಳಿಗಳಲ್ಲಿ ೨೦೦ಕ್ಕೂ ಹೆಚ್ಚು ಮಕ್ಕಳೂ ಸೇರಿದಂತೆ ೬೦೦ ಪ್ಯಾಲೆಸ್ಟೇನ್ ಜನರು ಸತ್ತಿದ್ದಾರೆ ಎಂದು ಹೇಳಲಾಗಿದೆ. ಉಳಿದ ಒತ್ತೆಯಾಳುಗಳು ಬಿಡುಗಡೆಯಾಗುವವರೆಗೆ ದಾಳಿ ಮುಂದುವರಿಯುತ್ತದೆ ಎಂದು ಇಸ್ರೇಲ್ ಪ್ರಧಾನಿ ನೆತಾನ್ಯಹು ಘೋಷಿಸಿದ್ದಾರೆ. ಕದನ ವಿರಾಮದ ಬಗ್ಗೆಯೇ ನಂಬಿಕೆ ಹೋಗಿರುವ ಇಂಥ ಸಂದರ್ಭದಲ್ಲಿ ಆರಂಭವಾಗಲಿರುವ ಉಕ್ರೇನ್-ರಷ್ಯಾ ಯುದ್ಧ ನಿಲುಗಡೆ ಮಾತುಕತೆಗಳು ನಿರಾಶೆಯ ವಾತಾವರಣದ ನಡುವೆಯೂ ಆಶಾಭಾವನೆ ಮೂಡಿಸಿವೆ.
ಆಶಾಭಾವನೆ ಮೂಡಲು ಹಲವು ಕಾರಣಗಳಿವೆ. ಅವರಿವರಿಂದ ಬೇಳಾಡಿ ತಂದ ಯುದ್ಧಾಸ್ತ್ರಗಳಿಂದ ಯುದ್ಧ ಮುಂದುವರಿಸುವುದು ಕಷ್ಟ ಎನ್ನುವ ಭಾವನೆ ಉಕ್ರೇನ್ ಅಧ್ಯಕ್ಷ ಜಲನಸ್ಕಿ ಅವರಲ್ಲಿ ಮೂಡಿದಂತಿದೆ. ಹೇಗಾದರೂ ಕದನ ವಿರಾಮ ಘೋಷಣೆಯಾದರೆ ಸಾಕು ಎನ್ನುವ ಹಂತಕ್ಕೆ ಜಲನಸ್ಕಿ ತಲುಪಿದಂತಿದೆ. ತಾವು ಯಾವ ಯಾವ ಪ್ರದೇಶಗಳನ್ನು ವಶಪಡಿಸಿಕೊಳ್ಳಬೇಕೋ ಅವನ್ನೆಲ್ಲಾ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಶಮಾಡಿಕೊಂಡಿದ್ದಾರೆ. ಉಕ್ರೇನ್‌ನ ಉಳಿದ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಆಸಕ್ತಿ ಅವರಿಗೆ ಇಲ್ಲ. ಹೀಗಾಗಿ ಅವರೂ ಕದನ ವಿರಾಮಕ್ಕೆ ಸಿದ್ಧರಿದ್ದಂತೆ ಕಾಣುತ್ತದೆ. ಆದರೆ ಕದನ ವಿರಾಮ ಅವರು ಬಯಸಿದಂತೆ ಆಗಬೇಕು ಎನ್ನುವುದೂ ಅವರಲ್ಲಿ ಕಾಣುತ್ತಿದೆ. ಟ್ರಂಪ್ ಸ್ನೇಹದಿಂದ ಸಾಽಸಬೇಕಾದ ಗುರಿಗಳತ್ತ ಪುಟಿನ್ ಕಣ್ಣು ನೆಟ್ಟಂತಿದೆ. ಉಕ್ರೇನ್ ಅತಿಕ್ರಮಣದ ನಂತರ ರಷ್ಯಾದ ಮೇಲೆ ಅಮೆರಿಕ ನಾನಾ ರೀತಿಯ ಆರ್ಥಿಕ ದಿಗ್ಬಂಧನಗಳನ್ನು ಹೇರಿದೆ. ಯುರೋಪ್ ಕೂಡ ದಿಗ್ಬಂಧನಗಳನ್ನು ವಿಧಿಸಿದೆ. ಮುಖ್ಯವಾಗಿ ತೈಲ ಪೂರೈಕೆಯ ಮೇಲೆ ಹಾಕಲಾಗಿರುವ ದಿಗ್ಬಂಧನ ರಷ್ಯಾದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಉಕ್ರೇನ್ ವಿಚಾರದಲ್ಲಿ ಒಪ್ಪಂದ ಮಾಡಿಕೊಳ್ಳುವ ಮೂಲಕ ಅಮೆರಿಕ ಹಾಕಿರುವ ಆರ್ಥಿಕ ದಿಗ್ಬಂಧನಗಳನ್ನು ಟ್ರಂಪ್ ಕಡೆಯಿಂದ ತೆರವು ಮಾಡಿಸುವುದು ಪುಟಿನ್ ಅವರ ದೊಡ್ಡ ಉದ್ದೇಶ.
ಇನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇದೊಂದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ತಾವು ಅಮೆರಿಕದ ಅಧ್ಯಕ್ಷರಾಗಿ ಕಳೆದ ಬಾರಿ ಮುಂದುವರಿದಿದ್ದರೆ ಈ ಯುದ್ಧವೇ ಆಗುತ್ತಿರಲಿಲ್ಲ, ಮತ್ತೆ ಅಧಿಕಾರಕ್ಕೆ ಬಂದರೆ ಕೆಲವೇ ದಿನಗಳಲ್ಲಿ ಈ ಯುದ್ಧ ನಿಲ್ಲಿಸುವುದಾಗಿ ಚುನಾವಣೆ ಪ್ರಚಾರ ಕಾಲದಲ್ಲಿ ಟ್ರಂಪ್ ಹೇಳಿದ್ದರು. ಈಗ ಅಧಿಕಾರಕ್ಕೆ ಬಂದೂ ಆಗಿದ್ದು ಯುದ್ಧ ನಿಲ್ಲಿಸುವುದು ಅವರಿಗೆ ಅನಿವಾರ್ಯವಾಗಿದೆ. ಹೀಗಾಗಿ ಕದನ ವಿರಾಮ ಅವರಿಗೂ ಬೇಕಿದೆ. ಹೀಗಾಗಿ ಉಕ್ರೇನ್- ರಷ್ಯಾ ಯುದ್ಧ ನಿಲುಗಡೆ ಮಾತುಕತೆಗಳು ಕುತೂಹಲ ಮೂಡಿಸಿವೆ.
ಈ ಮಾತುಕತೆಗೆ ಮುನ್ನವೇ ಟ್ರಂಪ್ ಅವರು ಪುಟಿನ್ ಜೊತೆ ಹಲವು ಸುತ್ತು ಮಾತನಾಡಿದ್ದಾರೆ. ಜಲನಸ್ಕಿ ಜೊತೆಗೂ ಮಾತನಾಡಿದ್ದಾರೆ. ಪುಟಿನ್ ಏನು ಬಯಸುತ್ತಾರೆ ಹಾಗೆಯೇ ಜಲನಸ್ಕಿಯ ಬಯಕೆಯೇನು ಎನ್ನುವುದನ್ನು ತಿಳಿಯಲಾಗಿದೆ. ಉಕ್ರೇನ್‌ಗೆ ಭದ್ರತೆ ನೀಡಬೇಕಾದುದು ಅನಿವಾರ್ಯ ಎಂಬ ಜಲನಸ್ಕಿ ನಿಲುವು ಟ್ರಂಪ್ ಜೊತೆ ಮಾತಿನ ಚಕಮಕಿಗೆ ಕಾರಣವಾಗಿತ್ತು. ಜಲನಸ್ಕಿ ತಮಗೆ ಆದ ಅವಮಾನ ಮತ್ತು ಮುಜುಗರವನ್ನು ನುಂಗಿಕೊಂಡು ಮತ್ತೆ ಟ್ರಂಪ್ ಜೊತೆ ಸ್ನೇಹ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕದನ ವಿರಾಮ ಒಪ್ಪಂದವಾದಲ್ಲಿ ಅವರು ಕಳೆದುಕೊಳ್ಳಬೇಕಾಗುವುದು ಎಷ್ಟು ಎನ್ನುವುದು ಈಗ ಚರ್ಚೆಯ ಮುಂಚೂಣಿಯಲ್ಲಿರುವ ಪ್ರಶ್ನೆ. ಮೊದಲ ಹಂತವಾಗಿ ತಾತ್ಕಾಲಿಕ ಯುದ್ಧ ವಿರಾಮ ಘೋಷಿಸಬೇಕೆಂಬ ಟ್ರಂಪ್ ಅವರ ಒತ್ತಾಯಕ್ಕೆ ಪುಟಿನ್ ಒಪ್ಪಿಲ್ಲ. ಮಾತುಕತೆಗೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ. ಅವನ್ನೆಲ್ಲಾ ಮಾತುಕತೆಯಲ್ಲಿ ಚರ್ಚಿಸಿದರಾಯಿತು ಎಂದು ಹೇಳಿದ ಟ್ರಂಪ್ ಪ್ರಾಥಮಿಕ ಹಂತದಲ್ಲಿ ಎರಡೂ ದೇಶಗಳು ಜನರ ಹಿತದೃಷ್ಟಿಯಿಂದ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಮತ್ತು ಇಂಧನ ಘಟಕಗಳ ಮೇಲೆ ಬಾಂಬ್ ಹಾಕುವುದನ್ನು ನಿಲ್ಲಿಸಬೇಕೆಂದು ಟ್ರಂಪ್ ಸಲಹೆ ನೀಡಿದ್ದಾರೆ. ಅದಕ್ಕೆ ಪುಟಿನ್ ಒಪ್ಪಿ ಸೇನೆಗೆ ತುರ್ತು ಸಂದೇಶ ಕಳುಹಿಸಿದ್ದಾರೆ. ಜಲನಸ್ಕಿಯೂ ಈ ಸಲಹೆಗೆ ಒಪ್ಪಿಗೆ ನೀಡಿದ್ದಾರೆ. ಆದರೆ ಈ ಮಾತಿನ ಒಪ್ಪಂದದಲ್ಲಿಯೂ ಸ್ವಲ್ಪ ಗೊಂದಲ ಉಂಟಾಗಿದೆ. ಇಂಧನ ಮತ್ತು ವಿದ್ಯುತ್ ಘಟಕಗಳ ಜೊತೆಗೆ ಮೂಲ ಸೌಕರ್ಯಗಳನ್ನು ನಾಶ ಮಾಡಬಾರದು ಎಂಬ ಮಾತಿಗೆ ಪುಟಿನ್ ಒಪ್ಪಿದ್ದಾರೆ ಎಂದು ಟ್ರಂಪ್ ವಕ್ತಾರರು ಹೇಳುತ್ತಿದ್ದಾರೆ. ಆದರೆ ಪುಟಿನ್ ಅದನ್ನು ಅಲ್ಲಗಳೆಯುತ್ತಿದ್ದಾರೆ. ಈ ಗೊಂದಲ ಸೋಮವಾರ ಮಾತುಕತೆಯಲ್ಲಿ ಪ್ರಸ್ತಾಪಕ್ಕೆ ಬರಲಿದ್ದು ಗೊಂದಲ ನಿವಾರಣೆಯಾಗುವ ಸಾಧ್ಯತೆ ಇದೆ.
ರಾಜಿಗೆ ಸಿದ್ಧವಾಗಿರಬೇಕು ಎಂದು ಈ ಹಿಂದೆಯೇ ಟ್ರಂಪ್ ಅವರು ಜಲನಸ್ಕಿಗೆ ತಿಳಿಸಿದ್ದಾರೆ. ಅದೂ ಪುಟಿನ್ ಜೊತೆಗಿನ ಮಾತುಕತೆಯ ನಂತರ ಅವರು ಆ ಮಾತನ್ನು ಹೇಳಿದ್ದಾರೆ. ಅಂದರೆ ಪರೋಕ್ಷವಾಗಿ ಪುಟಿನ್ ಅವರ ನಿಲುವು ಏನು ಎನ್ನುವುದನ್ನು ಜಲನಸ್ಕಿಗೆ ತಿಳಿಸಿದಂತಾಗಿದೆ. ಈ ವಿಚಾರ ಹೇಳಿದ ನಂತರವೂ ಜಲನಸ್ಕಿ ಮಾತುಕತೆ ಬಗ್ಗೆ ಆಸಕ್ತಿ ತೋರಿಸುತ್ತಿರುವುದನ್ನು ನೋಡಿದರೆ ಅವರಿಗೆ ವಿಷಯ ಅರ್ಥವಾಗಿದೆ ಎಂದು ಅರ್ಥ. ಸೋವಿಯತ್ ಒಕ್ಕೂಟ ಕುಸಿದು ಅದರ ಆಳ್ವಿಕೆಯಲ್ಲಿದ್ದ ಪ್ರದೇಶಗಳು ಸ್ವತಂತ್ರ ರಾಷ್ಟ್ರಗಳಾದಾಗ ಉಕ್ರೇನ್ ಕೂಡ ಸ್ವಾತಂತ್ರ್ಯ ಘೋಷಿಸಿಕೊಂಡಿತು. ನನೆಗುದಿಗೆ ಬಿದ್ದಿದ್ದ ಗಡಿ ಸಮಸ್ಯೆಗಳು ಕ್ರಮೇಣ ದೊಡ್ಡದಾದವು. ಮಧ್ಯ ಪ್ರಾಚ್ಯ, ಮೆಡಿಟರೇನಿಯನ್‌ನ ಪೂರ್ವ ಪ್ರದೇಶ ಮತ್ತು ಬಾಲ್ಕನ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಕ್ರೈಮಿಯಾ ಬಂದರು ಪ್ರದೇಶ ಉಕ್ರೇನ್ ಭಾಗವಾದ ಬಗ್ಗೆ ರಷ್ಯಾಕ್ಕೆ ಮೊದಲಿನಿಂದಲೂ ಅಸಮಾಧಾನವಿತ್ತು. ಹೀಗಾಗಿ ೨೦೧೪ರಲ್ಲಿಯೇ ರಷ್ಯಾ ಕ್ರೈಮಿಯಾವನ್ನು ಅತಿಕ್ರಮಿಸಿಕೊಂಡಿತು. ಎರಡೂ ದೇಶಗಳ ನಡುವೆ ವೈಮನಸ್ಯ ಸ್ಛೋಟಗೊಂಡಿದ್ದು ಅಲ್ಲಿಂದಲೇ. ಅದನ್ನೇ ಕಾರಣವಾಗಿಟ್ಟುಕೊಂಡು ರಷ್ಯಾ ಮೇಲೆ ವಿಶ್ವ ಆರ್ಥಿಕ ನಿರ್ಬಂಧಗಳು ಜಾರಿಗೊಂಡವು. ಉಕ್ರೇನ್ ಕೂಡ ಸುಮ್ಮನಿರಲಿಲ್ಲ. ಪ್ರತಿರೋಧ ತೋರುತ್ತಲೇ ಬಂತು. ಗಡಿ ಭಾಗದಲ್ಲಿರುವ ಮತ್ತಷ್ಟು ಪ್ರದೇಶಗಳ ಜನರು ಕೂಡ ಸ್ವಾತಂತ್ರ್ಯ ಚಳವಳಿ ಆರಂಭಿಸಿದರು. ಗಡಿಯಲ್ಲಿ ರಷ್ಯಾದ ಜನರೇ ಹೆಚ್ಚು ಇದ್ದ ಕಾರಣಕ್ಕೆ ರಷ್ಯಾ ಕೂಡ ಬೆಂಬಲ ನೀಡಿತು. ರಷ್ಯಾದ ಜನರನ್ನು ಹೊರ ಹಾಕುವ ಕೆಲಸವನ್ನು ಉಕ್ರೇನ್ ಆಡಳಿತಗಾರರು ಮಾಡಲಾರಂಭಿಸಿದರು. ಹೀಗಾಗಿ ೨೦೨೦ರ ವೇಳೆಗೆ ರಷ್ಯಾದ ಸೇನೆ ರಷ್ಯನ್ನರು ಹೆಚ್ಚು ಇರುವ ಪ್ರದೇಶಗಳನ್ನು ಅತಿಕ್ರಮಿಸಲು ಆರಂಭಿಸಿತು. ಈ ಸಂದರ್ಭದಲ್ಲಿ ದೇಶದ ಜನರಲ್ಲಿ ರಾಷ್ಟ್ರೀಯ ಭಾವನೆಯನ್ನು ಉದ್ದೀಪನಗೊಳಿಸಲಾಯಿತು. ಅದರ ಪರಿಣಾಮವಾಗಿ ರಷ್ಯಾದ ಬೆಂಬಲದ ಅಧ್ಯಕ್ಷರು ಪದಚ್ಯುತಿಗೊಂಡು ರಾಷ್ಟ್ರೀಯ ಭಾವನೆಯನ್ನು ಉದ್ದೀಪನೆ ಗೊಳಿಸಿದವರಲ್ಲಿ ಒಬ್ಬರಾದ ಜಲನಸ್ಕಿ (ಮೂಲತಃ ಅವರು ಟಿವಿ ಷೋಗಳಲ್ಲಿ ಜನಪ್ರಿಯ ಹಾಸ್ಯಗಾರ) ಅಧ್ಯಕ್ಷರಾಗಿ ಚುನಾಯಿತರಾದರು. ಪೂರ್ವಪರ ಯೋಚಿಸದೆ ರಷ್ಯಾದ ವಿರುದ್ಧ ಯುದ್ಧ ಘೋಷಿಸಿದರು. ಆದರೆ ರಷ್ಯಾದ ಆಕ್ರಮಣವನ್ನು ಸಮರ್ಥವಾಗಿ ಎದುರಿಸಲು ಉಕ್ರೇನ್‌ಗೆ ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಕಳೆದ ಮೂರು ವರ್ಷಗಳಲ್ಲಿ ಡಾನ್‌ಬಾಸ್, ಖೆರಸನ್, ಡೋನಸಕ್, ಲುಹನ್‌ಸಕ್ ಮುಂತಾದ ಗಡಿ ಪ್ರದೇಶಗಳ ಸುಮಾರು ೧೧ ಸಾವಿರ ಚದರ ಕಿ.ಮೀ. ಪ್ರದೇಶವನ್ನು ರಷ್ಯಾ ಅತಿಕ್ರಮಿಸಿಕೊಂಡಿದೆ. ಸುಮಾರು ೪೫೦ ಚದರ ಕಿ.ಮೀ.ನಷ್ಟು ಮಾತ್ರ ರಷ್ಯಾದ ಪ್ರದೇಶವನ್ನು ಉಕ್ರೇನ್ ಸೇನೆಯೂ ಅತಿಕ್ರಮಿಸಿದೆ. ಯುದ್ಧದಿಂದಾಗಿ ಸಾವಿರಾರು ಜನರು ಸತ್ತಿದ್ದಾರೆ. ಲಕ್ಷಾಂತರ ಜನರು ವಲಸೆಹೋಗಿದ್ದಾರೆ. ಧಾನ್ಯಕ್ಕೆ ವಿಶ್ವದ ಕಣಜ ಎಂದು ಹೆಸರಾಗಿದ್ದ ಉಕ್ರೇನ್ ಈಗ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ.
ಉದ್ದೇಶಿತ ಮಾತುಕತೆಯಲ್ಲಿ ಅತಿಕ್ರಮಿಸಿಕೊಂಡಿರುವ ಎಲ್ಲ ಪ್ರದೇಶಗಳನ್ನೂ ಬಿಟ್ಟುಕೊಡಬೇಕೆಂದು ಉಕ್ರೇನ್ ಷರತ್ತು ಹಾಕಬಹುದು. ತಾನು ಆಕ್ರಮಿಸಿಕೊಂಡಿರುವ ಪ್ರದೇಶವನ್ನು ಬಿಟ್ಟುಕೊಡುವ ಭರವಸೆಯನ್ನೂ ಉಕ್ರೇನ್ ನೀಡ ಬಹುದು. ಆದರೆ ಯಾವುದೆ ಕಾರಣಕ್ಕೆ ಆಕ್ರಮಿತ ಪ್ರದೇಶವನ್ನು ಬಿಟ್ಟುಕೊಡುವುದಿಲ್ಲ ಎಂದು ಈಗಾಗಲೇ ಪುಟಿನ್ ಸ್ಪಷ್ಟಮಾಡಿದಂತೆ ಕಾಣುತ್ತಿದೆ. ಟ್ರಂಪ್ ಅವರಿಗೂ ಇದು ಗೊತ್ತಿದೆ. ಕದನ ವಿರಾಮಕ್ಕೆ ಒಪ್ಪಲು ಪುಟಿನ್ ಕೆಲವು ಷರತ್ತುಗಳನ್ನು ಹಾಕಿದ್ದಾರೆ. ಉಕ್ರೇನ್ ನ್ಯಾಟೋ ಸಂಘಟನೆಗೆ ಸೇರಬಾರದು. ಅತಿ ಕ್ರಮಿಸಿಕೊಂಡಿರುವ ಪ್ರದೇಶಗಳನ್ನು ವಾಪಸ್ ಕೇಳಬಾರದು. ಸ್ವತಂತ್ರ ವಿದೇಶಾಂಗ ನೀತಿಯನ್ನು (ಅಲಿಪ್ತ) ಉಕ್ರೇನ್ ಅಳವಡಿಸಿಕೊಳ್ಳಬೇಕು. ಯೂರೋಪ್ ಮತ್ತು ಅಮೆರಿಕದಿಂದ ಯುದ್ಧಾಸ್ತ್ರ ಪೂರೈಕೆ ನಿಲ್ಲಬೇಕು. ಈ ಷರತ್ತುಗಳನ್ನು ರಷ್ಯಾ ಹಾಕಿದೆ ಎನ್ನಲಾಗಿದೆ. ಕದನವಿರಾಮ ಘೋಷಣೆಯಾದ ನಂತರ ವಿವಾದಿತ ಪ್ರದೇಶದಲ್ಲಿ ಶಾಂತಿಪಡೆ ಸ್ಥಾಪಿಸಲು ಯೂರೋಪ್ ಸಿದ್ಧವಿದೆ. ಆದರೆ ಅದಕ್ಕೆ ಪುಟಿನ್ ಒಪ್ಪಿಲ್ಲ. ನ್ಯಾಟೋ, ಅಮೆರಿಕ ಅಥವಾ ಯೂರೋಪ್‌ನಭದ್ರತೆ ಅಗತ್ಯವೆಂದು ಜಲನಸ್ಕಿ ಒತ್ತಾಯಿಸುತ್ತಿದ್ದಾರೆ. ನ್ಯಾಟೋವನ್ನು ಗಡಿಗೆ ಬರಲು ಬಿಟ್ಟರೆ ರಷ್ಯಾ ಸದಾ ಅಭದ್ರತೆ ಮತ್ತು ಅಸ್ಥಿರತೆಯನ್ನು ಎದುರಿಸಬೇಕಾಗುತ್ತದೆ, ಆದ್ದರಿಂದ ಅದಕ್ಕೆ ಅವಕಾಶ ಇಲ್ಲ ಎಂದು ಪುಟಿನ್ ಹೇಳುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಈ ಸಮಸ್ಯೆಗಳು ಪರಿಹಾರ ಇಲ್ಲದಂಥವೇನೂ ಅಲ್ಲ.
” ಇನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಪ್ ಅವರಿಗೆ ಇದೊಂದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ತಾವು ಅಮೆರಿಕದ ಅಧ್ಯಕ್ಷರಾಗಿ ಕಳೆದ ಬಾರಿ ಮುಂದುವರಿದಿದ್ದರೆ ಈ ಯುದ್ಧವೇ ಆಗುತ್ತಿರಲಿಲ್ಲ, ಮತ್ತೆ ಅಽಕಾರಕ್ಕೆ ಬಂದರೆ ಕೆಲವೇ ದಿನಗಳಲ್ಲಿ ಈ ಯುದ್ಧ ನಿಲ್ಲಿಸುವುದಾಗಿ ಚುನಾವಣೆ ಪ್ರಚಾರ ಕಾಲದಲ್ಲಿ ಟ್ರಂಪ್ ಹೇಳಿದ್ದರು. ಈಗ ಅಽಕಾರಕ್ಕೆ ಬಂದೂ ಆಗಿದ್ದು ಯುದ್ಧ ನಿಲ್ಲಿಸುವುದು ಅವರಿಗೆ ಅನಿವಾರ್ಯವಾಗಿದೆ. ಹೀಗಾಗಿ ಕದನ ವಿರಾಮ ಅವರಿಗೂ ಬೇಕಿದೆ. ಹೀಗಾಗಿ ಉಕ್ರೇನ್- ರಷ್ಯಾ ಯುದ್ಧ ನಿಲುಗಡೆ ಮಾತುಕತೆಗಳು ಕುತೂಹಲ ಮೂಡಿಸಿದೆ”
ಮೈಸೂರು: ದೇಶ-ವಿದೇಶಗಳಲ್ಲಿ ಜನ ಸಮೂಹವನ್ನು ಹೊಂದಿರುವ ಅವಧೂತ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನೂತನ ಶಾಖೆಯನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ…
ಕುಲಪತಿ ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ೧೦೬ನೇ ಘಟಿಕೋತ್ಸವವನ್ನು ಜ.೫ರಂದುನಡೆಸಲು ತೀರ್ಮಾನಿಸಲಾಗಿದ್ದು, ಘಟಿಕೋತ್ಸವ…
ಲಕ್ಷ್ಮೀಕಾಂತ್ ಕೊಮಾರಪ್ಪ ಶೀತಗಾಳಿಯಿಂದ ಪಾರಾಗಲು ಬೆಚ್ಚನೆಯ ಬಟ್ಟೆ, ಹೊದಿಕೆ, ಬೆಂಕಿಯ ಮೊರೆ ಸೋಮವಾರಪೇಟೆ: ಶೀತಗಾಳಿಯಿಂದ ಚಳಿಯ ಪ್ರಮಾಣ ಹೆಚ್ಚಾಗಿದ್ದು, ಕಳೆದೆರಡು…
ಕೊಳ್ಳೇಗಾಲ: ಶಾಸಕರು ಮೊದಲಿದ್ದ ಡಾಂಬರು ರಸ್ತೆಯನ್ನು ಕಿತ್ತು ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಮುಂದಾದರೆ ಗುತ್ತಿಗೆದಾರ ನಡೆಸಿದ ಕಳಪೆಕಾಮಗಾರಿಯಿಂದ ಜಲ್ಲಿಕಲ್ಲುಗಳು ಮೇಲೆದ್ದು…
ಹನಗೋಡು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಆತಂಕ; ಜಮೀನಿಗೆ ತೆರಳಲು ಹಿಂದೇಟು ವೀರನಹೊಸಹಳ್ಳಿ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ಬಫರ್…