ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್
ನಮ್ಮದು ಹಲವು ಭಾಷೆ, ಜಾತಿ, ಧರ್ಮ, ಸಂಸ್ಕ ತಿ ಮತ್ತು ಪ್ರಾದೇಶಿಕ ವೈವಿಧ್ಯತೆಯನ್ನು ಹೊಂದಿರುವ ದೇಶ ಎಂದು ಪ್ರಾಥಮಿಕ ಹಂತದ ಶಾಲೆಗಳಲ್ಲಿಯೇ ಬೋಧಿಸಲಾಗುತ್ತದೆ. ಪ್ರತಿಯೊಂದು ರಾಜ್ಯವೂ ತನ್ನದೇ ಆದ ಸ್ಥಳೀಯ ಭಾಷೆಯನ್ನು ಹೊಂದಿದೆ ಹಿಂದಿ ಮಾತ್ರ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಜನರಾಡುವ ಭಾಷೆಯಾಗಿದ್ದರೂ, ಅಲ್ಲಿಯೂ ಸ್ಥಳೀಯವಾಗಿ ಬೇರೆ ಬೇರೆ ಭಾಷೆಗಳೇ ತಮ್ಮ ಪಾರಮ್ಯ ಮೆರೆದಿವೆ.
ನಮ್ಮ ಒಕ್ಕೂಟ ವ್ಯವಸ್ಥೆಯ ಕೇಂದ್ರ ಸರ್ಕಾರದ ಅಧಿಕೃತ ಆಡಳಿತಭಾಷೆಯಾಗಿ ಹಿಂದಿ ಮತ್ತು ವ್ಯಾವಹಾರಿಕ ಭಾಷೆಯಾಗಿ ಇಂಗ್ಲಿಷ್ ಎಂಬುದನ್ನು ಸಂವಿಧಾನಾತ್ಮಕವಾಗಿ ಒಪ್ಪಿಕೊಳ್ಳಲಾಗಿದೆ. ಭಾಷೆಯು ಜನರನ್ನು ಭಾವನಾತ್ಮಕ ವಾಗಿ ಒಂದುಗೂಡಿಸುವ ಮಾಧ್ಯಮ. ಆದರೆ ಹಲವು ಬಾರಿ ಭಾಷೆಗಳು ನಮ್ಮಲ್ಲಿ ಏಕತೆ ಉಂಟು ಮಾಡುವ ಜೊತೆಗೆ ಪರಸ್ಪರ ಪ್ರತಿರೋಧ, ದ್ವೇಷವನ್ನು ಉಂಟು ಮಾಡುವುದು ಇತಿಹಾಸದತ್ತ ಗಮನಹರಿಸಿದಾಗ ಗೊತ್ತಾಗುತ್ತದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರ ಇಂಗ್ಲಿಷ್ ಮತ್ತು ಉರ್ದುವನ್ನು ಆಡಳಿತ ಭಾಷೆಯನ್ನಾಗಿ ಒಪ್ಪಿಕೊಂಡಿತ್ತು. ಸ್ವಾತಂತ್ರ್ಯ ನಂತರ ಉರ್ದು ಬದಲಿಗೆ ಹಿಂದಿ/ ದೇವನಾಗರಿ ಭಾಷೆಯನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯನ್ನಾಗಿ ಅಂಗೀಕರಿಸಲಾಯಿತು. ಹಿಂದಿಯೇತರ ರಾಜ್ಯಗಳ ದೃಷ್ಟಿಯಿಂದ ಹಿಂದಿ ಜೊತೆಗೆ ಇಂಗ್ಲಿಷನ್ನು ಒಪ್ಪಿಕೊಳ್ಳಲಾಯಿತು.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳೂ ತಮ್ಮ ಸ್ಥಳೀಯ ಭಾಷೆಯನ್ನೇ ಒಪ್ಪಿಕೊಂಡಿದ್ದು, ಅದರಂತೆ ಶಿಕ್ಷಣವನ್ನು ಮುಂದುವರಿಸಲಾಗಿದೆ. ಬ್ರಿಟಿಷ್ ಆಡಳಿತದ ಪಳೆಯುಳಿಕೆಯಾಗಿ ಮತ್ತು ಕ್ರೈಸ್ತ ಮಿಷನರಿಗಳು ಬಹುತೇಕ ಎಲ್ಲ ರಾಜ್ಯಗಳಲ್ಲೂ ನುಸುಳಿ ಜನಸಾಮಾನ್ಯರಿಗೆ ಇಂಗ್ಲಿಷ್ ಪರಿಚಯಿಸಿದವು. ಹೀಗಾಗಿ ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳಲ್ಲಿ ಇಂಗ್ಲಿಷ್ ಹೆಚ್ಚು ಜನಪ್ರಿಯವಾಯಿತು. ದಕ್ಷಿಣ ರಾಜ್ಯಗಳಿಗೆ ಹಿಂದಿಗಿಂತ ಇಂಗ್ಲಿಷ್ ಹೆಚ್ಚು ಆಕರ್ಷಣೆಯಾಯಿತು. ಇಂಗ್ಲಿಷ್ ವ್ಯಾವಹಾರಿಕ ಮತ್ತು ವಿದೇಶಿ ಶಿಕ್ಷಣ ಪಡೆಯುವವರಿಗೆ ಸಂಪರ್ಕ ಸೇತುವಾಯಿತು.
ಈ ಹಿನ್ನೆಲೆಯನ್ನು ಗಮನಿಸಿದಾಗ ದಕ್ಷಿಣ ರಾಜ್ಯಗಳಲ್ಲಿ ಹಿಂದಿಯು ದೇಶೀಯ ಭಾಷೆಯಾದರೂ ಅಪರಿಚಿತವಾಗಿ ಉಳಿಯಿತು. ಇಂಗ್ಲಿಷ್ ಹೆಚ್ಚಿನ ಜ್ಞಾನ ಸಂಪಾದನೆಗೆ ಒತ್ತಾಸೆಯಾಗುವ ಜೊತೆಗೆ ದೇಶದ ಇತರೆ ರಾಜ್ಯಗಳೊಡನೆ ಮತ್ತು ಹೊರ ದೇಶಗಳ ಜತೆ ಸುಲಭವಾಗಿ ವ್ಯವಹರಿಸಲು ಸಂಪರ್ಕ ಭಾಷೆಯಾಯಿತು.
ಇಡೀ ದೇಶದಲ್ಲಿ ಒಂದು ಶಿಕ್ಷಣ ನೀತಿಯನ್ನು ರೂಪಿಸುವ ಉದ್ದೇಶದಿಂದ ೧೯೬೪ರಲ್ಲಿ ಕೇಂದ್ರ ಸರ್ಕಾರ ದೌಲತ್ ಸಿಂಗ್ ಕೊಠಾರಿ ಅವರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿತು. ಈ ಆಯೋಗ ಶಿಕ್ಷಣದಲ್ಲಿ ಭಾಷಾ ನೀತಿಯನ್ನು ರೂಪಿಸಿತು. ಎರಡು ವರ್ಷಗಳು ಅಧ್ಯಯನ ಮಾಡಿದ ನಂತರ ಕೊಠಾರಿ ಆಯೋಗವು ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಬೇಕೆಂದು ಶಿಫಾರಸು ಮಾಡಿತು. ಈ ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿತು. ೧೯೬೮ರಲ್ಲಿ ಸಂಸತ್ ಈ ತ್ರಿಭಾಷಾ ಸೂತ್ರವನ್ನು ಅಂಗೀಕರಿಸಿತು.
ಕೇಂದ್ರ ಸರ್ಕಾರ ಮತ್ತು ಸಂಸತ್ ಅಂಗೀಕರಿಸಿದ ತ್ರಿಭಾಷಾ ಸೂತ್ರದ ವಿರುದ್ಧ ಮದ್ರಾಸ್‌ನಲ್ಲಿ ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರಲಾಗುತ್ತಿದೆ ಎಂದು ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆಗೆ ಇಳಿದರು. ಈ ಚಳವಳಿ ಇಡೀ ಮದ್ರಾಸ್ ರಾಜ್ಯವನ್ನು ಆವರಿಸಿತು. ಉತ್ತರ ಭಾರತೀಯರ ಭಾಷೆಯಾದ ಹಿಂದಿಯನ್ನು (ಕೌವ್ ಬೆಲ್ಟ್ ಸ್ಟೇಟ್ಸ್-ಬಿಹಾರ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಉತ್ತರ ಪ್ರದೇಶ) ನಮ್ಮ ದ್ರಾವಿಡ ರಾಜ್ಯಗಳ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ ಎಂದು ವಿದ್ಯಾರ್ಥಿಗಳನ್ನು ಪ್ರಚೋದಿಸಿ ಮುಷ್ಕರಕ್ಕಿಳಿಯುವಂತೆ ಮಾಡಲಾಯಿತು. ಈ ಮುಷ್ಕರವನ್ನು ಅಂದಿನ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಗಂಭೀರವಾಗಿಯೇ ಪರಿಗಣಿಸಿದರು. ರಾಜ್ಯದಾದ್ಯಂತ ಹಿಂದಿ ವಿರೋಧಿ ಚಳವಳಿ ಹಬ್ಬಿದ್ದರಿಂದ ಅಂದಿನ ವಿಧಾನಸಭೆಯು ಕೊಠಾರಿ ಆಯೋಗದ ತ್ರಿಭಾಷಾ ಸೂತ್ರವನ್ನು ವಿರೋಧಿಸಿ ದ್ವಿಭಾಷಾ ನೀತಿಯನ್ನು ಅಂಗೀಕರಿಸಿತು.
ಕೊಠಾರಿ ಆಯೋಗದ ಪ್ರಕಾರ ತ್ರಿಭಾಷಾ ಸೂತ್ರ ಎಂದರೆ ಹಿಂದಿ ಮಾತನಾಡುವ ರಾಜ್ಯಗಳು ಶಿಕ್ಷಣದಲ್ಲಿ ಪ್ರಥಮ ಭಾಷೆಯನ್ನಾಗಿ ಮಾತೃ ಭಾಷೆಯ ಜೊತೆಗೆ ಪ್ರಾದೇಶಿಕ ಭಾಷೆಯನ್ನು ಎರಡನೇ ಭಾಷೆಯನ್ನಾಗಿ ಮತ್ತು ಇಂಗ್ಲಿಷನ್ನು ಸಂಪರ್ಕ ಭಾಷೆಯನ್ನಾಗಿ ಕಲಿಯಬೇಕು. ಹಾಗೆಯೇ ಹಿಂದಿಯೇತರ ರಾಜ್ಯಗಳು ತಮ್ಮ ಮಾತೃ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಮತ್ತು ಯಾವುದಾದರೊಂದು ಪ್ರಾದೇಶಿಕ ಭಾಷೆಯನ್ನು ದ್ವಿತೀಯ ಭಾಷೆಯನ್ನಾಗಿ ಮತ್ತು ಇಂಗ್ಲಿಷನ್ನು ಮೂರನೆಯ ಸಂಪರ್ಕ ಭಾಷೆಯನ್ನಾಗಿ ಕಲಿಯಬೇಕು.
ನಮ್ಮ ಸಂವಿಧಾನದ ಎಂಟನೇ ಪರಿಚ್ಛೇದದ ಪ್ರಕಾರ ಶಿಕ್ಷಣ ಕನ್ಕರೆಂಟ್ ಪಟ್ಟಿಯಲ್ಲಿ ಬರುತ್ತದೆ. ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರದೊಡನೆ ಜಾರಿ ಮಾಡಬಹುದಾದ ವಿಷಯಗಳ ಪಟ್ಟಿಯಲ್ಲಿ ಸೇರುತ್ತದೆ. ಈ ಪಟ್ಟಿಯಲ್ಲಿ ೫೮ ವಿಷಯಗಳು ಸೇರಿವೆ. ಹಾಗಾಗಿ ಕೇಂದ್ರ ಸರ್ಕಾರವು ರಾಜ್ಯಸರ್ಕಾರಗಳ ಒಪ್ಪಿಗೆ ಮತ್ತು ಸಹಕಾರವಿಲ್ಲದೆ ಯಾವುದೇ ವಿಷಯವನ್ನು ಬಲವಂತವಾಗಿ ರಾಜ್ಯಗಳ ಮೇಲೆ ಹೇರಲಾಗದು. ಇದರಿಂದಾಗಿ ತಮಿಳುನಾಡಿನಲ್ಲಿ ಇದುವರೆಗೂ ದ್ವಿಭಾಷಾ ಸೂತ್ರದಂತೆಯೇ ಮಾತೃ ಭಾಷೆ ತಮಿಳು ಮತ್ತು ಸಂಪರ್ಕ ಭಾಷೆಯಾದ ಇಂಗ್ಲಿಷ್‌ನಲ್ಲಿ ಶಿಕ್ಷಣ ನೀಡುವ ಪದ್ಧತಿಯನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ.
ಕೇಂದ್ರ ಸರ್ಕಾರವು ಹಿಂದಿ ಭಾಷೆಯನ್ನು ಹೇರುವ ತನ್ನ ನೀತಿಯ ಮೂಲಕ ದ್ರಾವಿಡ ಸಂಸ್ಕ ತಿಯನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ ಎನ್ನುವ ಬಲವಾದ ಅನುಮಾನ ಅರುವತ್ತರ ದಶಕದಿಂದ ಇಂದಿನವರೆಗೂ ತಮಿಳರ ಮನಸ್ಸಿನಲ್ಲಿ ಗಾಢವಾಗಿ ಬೇರೂರಿದೆ. ಇದರಿಂದಾಗಿ ಅದನ್ನು ವಿರೋಧಿಸಿ ಕೊಂಡೇ ಬರಲಾಗುತ್ತಿದೆ. ಕೇಂದ್ರ ಸರ್ಕಾರದ ಅಧೀನದ ದೂರದರ್ಶನದಲ್ಲಿಯೂ ತಮಿಳುನಾಡಿನಲ್ಲಿ ಹಿಂದಿ ಸುದ್ದಿಯನ್ನು ಪ್ರಸಾರ ಮಾಡುವುದಿಲ್ಲ. ಅಷ್ಟರಮಟ್ಟಿಗೆ ತಮಿಳುನಾಡಿನಲ್ಲಿ ಹಿಂದಿಯನ್ನು ವಿರೋಧಿಸಲಾಗುತ್ತಿದೆ.
ಅಷ್ಟು ಮಾತ್ರವಲ್ಲ ಸಂಸತ್ತಿನಲ್ಲೂ ತಮಿಳುನಾಡಿನ ಸದಸ್ಯರು ಹಿಂದಿಯಲ್ಲಿ ಮಾತನಾಡದೆ ಎಲ್ಲರೂ ಇಂಗ್ಲಿಷಿನಲ್ಲಿಯೇ ಮಾತನಾಡುವುದು ವಾಡಿಕೆ ಯಾಗಿದೆ. ಅಷ್ಟರಮಟ್ಟಿಗೆ ಕೌವ್ ಬೆಲ್ಟ್ ರಾಜ್ಯಗಳ ಹಿಂದಿ ಭಾಷೆಯ ವಿರೋಽ ಭಾವನೆ ತಮಿಳು ಜನರಲ್ಲಿ ಬೇರೂರಿದೆ.
ಈಗ ಮತ್ತೆ ತ್ರಿಭಾಷಾ ಸೂತ್ರ ತಲೆ ಎತ್ತಿದೆ. ೨೦೨೦ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಈ ಶಿಕ್ಷಣ ನೀತಿಯು ತ್ರಿಭಾಷಾ ಸೂತ್ರವನ್ನು ಹೊಂದಿದೆ. ಆರಂಭದಲ್ಲಿ ಕರ್ನಾಟಕ ಸೇರಿದಂತೆ ಹಲವು ಹಿಂದಿಯೇತರ ರಾಜ್ಯಗಳು ಕೇಂದ್ರದ ಈ ಶಿಕ್ಷಣ ನೀತಿಯನ್ನು ಒಪ್ಪಿಕೊಳ್ಳಲಾಗದೆ ವಿರೋಧಿಸಿದವು. ತಮಿಳುನಾಡು ಸುತಾರಾಂ ಈ ಹೊಸ ಶಿಕ್ಷಣ ನೀತಿಯ ಭಾಷಾ ವಿಷಯವನ್ನು ಒಪ್ಪಿಲ್ಲ. ಹೀಗಾಗಿ ಕೇಂದ್ರ ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ನೀಡಬೇಕಾಗಿರುವ ಅನುದಾನವನ್ನು ತಮಿಳುನಾಡು ಸರ್ಕಾರಕ್ಕೆ ನೀಡುತ್ತಿಲ್ಲ. ಈ ನಾಲ್ಕು ವರ್ಷಗಳ ಅವಽಯಲ್ಲಿ ಕೇಂದ್ರ ಸರ್ಕಾರವು ಶಿಕ್ಷಣ ಬಾಬ್ತಿಗೆಂದು ೨,೧೫೪ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಬೇಕಿದೆ.
೧೯೬೮ರಲ್ಲಿ ಅಂದಿನ ಮದ್ರಾಸ್ ವಿಧಾನಸಭೆಯು ಅಂಗೀಕರಿಸಿದ ದ್ವಿಭಾಷಾ ಸೂತ್ರದಿಂದ ತಾನು ಹಿಂದೆ ಸರಿಯುವುದಿಲ್ಲ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೇಂದ್ರ ಸರ್ಕಾರದ ವಿರುದ್ಧ ಗುಟುರು ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಕೇಂದ್ರದ ಮಾನವ ಸಂಪನ್ಮೂಲಸಚಿವ ಧರ್ಮೇಂದ್ರ ಪ್ರಧಾನ್ ಹೊಸ ಶಿಕ್ಷಣ ನೀತಿಯಂತೆ ತ್ರಿಭಾಷಾ ಸೂತ್ರವನ್ನು ಒಪ್ಪದೆ ಹೋದರೆ ಕೇಂದ್ರವು ಒಂದು ನಯಾಪೈಸೆಯನ್ನೂ ನೀಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ.
ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ನಡುವೆ ಆಗಾಗ್ಗೆ ಬೂದಿಮುಚ್ಚಿದ ಕೆಂಡದಂತೆ ಹೊಗೆಯಾಡುವ ಈ ಭಾಷಾ ವಿವಾದ ಈಗ ಭುಗಿಲೇಳುವ ಮಟ್ಟಿಗೆ ವಾದ ವಿವಾದ ನಡೆಯುತ್ತಿದೆ. ಜನಸಂಘ ಮತ್ತು ಅದರ ಎರಡನೇ ಪೀಳಿಗೆಯ ಪಕ್ಷವಾಗಿ ಉದ್ಭವಗೊಂಡ ಭಾರತೀಯ ಜನತಾ ಪಕ್ಷವು ಎರಡು ದಶಕಗಳ ಹಿಂದಿನವರೆಗೂ ಉತ್ತರ ಭಾರತೀಯರ ಪಕ್ಷ ಎಂದೇ ಹೆಸರಾಗಿತ್ತು. ಅದರ ನಾಯಕತ್ವ ಮೊದಲಿನಿಂದಲೂ ಹಿಂದಿ ಮಾತನಾಡುವ ಸಂಸ್ಕೃತಿಯವರದ್ದು. ಇಡೀ ಭಾರತದಲ್ಲಿ ತನ್ನ ಹಿಂದುತ್ವ ಸಂಸ್ಕೃತಿಯನ್ನು ಜಾರಿಗೆ ತರಬೇಕೆನ್ನುವ ಅಜೆಂಡಾ ಈ ಪಕ್ಷದ್ದು.
ಬಿಜೆಪಿಗೆ ದಕ್ಷಿಣ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ನೆಲೆಯಿರಲಿಲ್ಲ. ಆದರೆ ಎರಡು ದಶಕಗಳ ಹಿಂದೆ ಬಿಜೆಪಿ ಕರ್ನಾಟಕವನ್ನು ಪ್ರವೇಶಿಸುವ ಮೂಲಕ ಇಡೀ ದಕ್ಷಿಣ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಶತಾಯಗತಾಯ ಹೋರಾಡುತ್ತಲೇ ಬಂದಿದೆ. ಆಂಧ್ರಪ್ರದೇಶದ ಜೊತೆ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಸ್ನೇಹ ಬೆಳೆಸಿಕೊಂಡಿದೆ. ಅದರ ಮುಖ್ಯ ಗುರಿ ಈಗ ತಮಿಳುನಾಡು ಮತ್ತು ಕೇರಳ ರಾಜ್ಯವಾಗಿದೆ. ಕಮ್ಯೂನಿಸ್ಟ್ ಮತ್ತು ಕಾಂಗ್ರೆಸ್ ಪ್ರಾಬಲ್ಯವಿರುವ ಕೇರಳದಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆದ್ದು ಬೀಗುತ್ತಿದೆ. ಆದರೆಅಂತಹ ಪ್ರಯತ್ನದಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಯಶಸ್ಸು ಕಾಣಲು ಆಗುತ್ತಿಲ್ಲ.
ತಮಿಳುನಾಡು ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಬೇಕಿದೆ. ಒಂದು ಕಾಲಕ್ಕೆ ಕೇರಳದಂತೆ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳ ಪ್ರಾಬಲ್ಯವಿದ್ದ ಪಶ್ಚಿಮ ಬಂಗಾಳದಲ್ಲಿ ಮೂಲ ಕಾಂಗ್ರೆಸ್ಸಿನವರೇ ಆದ ಮಮತಾ ಬ್ಯಾನರ್ಜಿ ಎಡ ಪಕ್ಷಗಳ ರಾಜಕೀಯ ದಾದಾಗಿರಿಯ ವಿರುದ್ಧ ಹೋರಾಡಿ ಅಲ್ಲೀಗ ತಮ್ಮದೇ ಆದ ತೃಣಮೂಲ ಕಾಂಗ್ರೆಸ್ ಮೂಲಕ ಕಳೆದ ಎರಡು ದಶಕಗಳಿಂದ ಆಡಳಿತ ಸೂತ್ರವನ್ನಿಡಿದಿದ್ದಾರೆ. ಪಶ್ಚಿಮ ಬಂಗಾಳ ಎಂದರೆ ಕಮ್ಯೂನಿಸ್ಟ್ ರಾಜ್ಯ ಎಂದು ಹೆಸರುವಾಸಿಯಾಗಿದ್ದ ಅಲ್ಲಿ ಎಡ ಪಕ್ಷಗಳು ನೆಲಕಚ್ಚಿ ಅವುಗಳ ಜಾಗವನ್ನೀಗ ಬಿಜೆಪಿ ಆವರಿಸಿಕೊಂಡಿದೆ. ಹೀಗಾಗಿ ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಅಥವಾ ಎಡ ಪಕ್ಷಗಳಿಗಿಂತ ಮುಖ್ಯವಾಗಿ ಬಿಜೆಪಿಯನ್ನು ಎದುರಿಸಬೇಕಾಗುವಂತೆ ರಾಜಕೀಯ ವ್ಯವಸ್ಥೆ ಬದಲಾಗಿದೆ.
ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ ಈಗ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿರುವುದರಿಂದ ಆ ರಾಜ್ಯದ ಸಮಗ್ರ ಅಭಿವೃದ್ಧಿಗೆ ತನ್ನ ಬಜೆಟ್ಟಿನಲ್ಲಿಯೇ ೫೦ ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ಘೋಷಿಸಿದೆ. ಆದರೆ ತನ್ನ ತಾಳಕ್ಕೆ ಕುಣಿಯಲಾರದ ಕರ್ನಾಟಕ ಮತ್ತು ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಜೊತೆ ಕೇಂದ್ರ ಸರ್ಕಾರವು ದ್ವೇಷದ ರಾಜಕಾರಣಕ್ಕಿಳಿದಿರುವುದು ಬಹಿರಂಗ ಸತ್ಯ. ಹೀಗಾಗಿ ತ್ರಿಭಾಷಾ ಸೂತ್ರದ ವಿಷಯ ಈಗ ಕೇಂದ್ರ ಮತ್ತು ತಮಿಳುನಾಡು ನಡುವೆ ಜಟಾಪಟಿಯ ವಿಷಯವಾಗಿದ್ದು ಈ ಬಿಕ್ಕಟ್ಟು ಹೇಗೆ ಬಗೆಹರಿಯಲಿದೆ ಎನ್ನುವುದು ಕುತೂಹಲಕಾರಿ ಬೆಳವಣಿಗೆ.
ಮೈಸೂರು : ಸಂಕ್ರಾಂತಿ ಹೊಸ್ತಿಲಲ್ಲಿ ಮೈಸೂರಿನಲ್ಲಿ ನಡೆಯುವ ಕಲಾ ಹಬ್ಬವಾದ ಬಹುರೂಪಿ ನಾಟಕೋತ್ಸವವಕ್ಕೆ ಮುನ್ನುಡಿ ಬರೆದು ‘ಜಾನಪದ ಉತ್ಸವ’ ರಂಗಾಯಣದಲ್ಲಿ…
ರಸಪ್ರಶ್ನೆ ಕಾರ್ಯಕ್ರಮದ ಸಮಾರಂಭದಲ್ಲಿ ಡಾ.ಚಿದಾನಂದ ಗೌಡ ಮಾಹಿತಿ ಕುಶಾಲನಗರ : ಕುವೆಂಪುರವರ ಉದಯರವಿ ಮನೆಯನ್ನು ಸಂಗ್ರಹಾಲಯ ಮಾಡುವ ಬಗ್ಗೆ ಚಿಂತನೆ…
ಹನೂರು : ತಾಲ್ಲೂಕಿನ ಮಹದೇಶ್ವರ ಬೆಟ್ಟದ ಮಾರ್ಗಮಧ್ಯ ರಂಗಸ್ವಾಮಿ ಒಡ್ಡಿನ ಬಳಿ ತಡೆಗೋಡೆಯ ಮೇಲೆ ಚಿರತೆ ಮತ್ತು ಅದರ ಎರಡು…
ನಂಜನಗೂಡು : ದ್ವೇಷ ಮರೆತು, ಪ್ರೀತಿ ಗಳಿಸುವಂತೆ ಕೆಲಸ ಮಾಡಿ ಜೀವನ ನಡೆಸಬೇಕು ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ…
ಬೆಂಗಳೂರು : ನಟ ಯಶ್ ಅವರು ‘ಟ್ಯಾಕ್ಸಿಕ್’ ಸಿನಿಮಾದ ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಟೀಸರ್ ನಲ್ಲಿನ ಕಾರು…
ಸೋಮನಾಥ : ಗುಜರಾತ್‌ನ ಗಿರ್ ಸೋಮನಾಥ ಜಿಲ್ಲೆಯ ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಆಯೋಜಿಸಲಾದ ವಿಧ್ಯುಕ್ತ…