ಪರಿಸರದ ಸಂರಕ್ಷಣೆ ಪ್ರಯೋಗದಲ್ಲಿ ಯಶಸ್ಸಾದ ಸಾಲುಮರದ ತಿಮ್ಮಕ್ಕ
ಪದ್ಮಶ್ರೀ, ನಾಡೋಜ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ತುಮಕೂರಿನ ಗುಬ್ಬಿ ಸಮೀಪದ ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿದರು. ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ) ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದ ಕಲ್ಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ ದಿನಗೂಲಿ ಕೆಲಸಗಾರ ಬಿಕ್ಕಲ ಚಿಕ್ಕಯ್ಯನನ್ನು ವಿವಾಹವಾಗಿ ಬಂದು ಜಗತ್ತು ವಿಸ್ಮಯದ ಬೆರಗುಗಣ್ಣುಗಳಿಂದ ತಿರುಗಿ ನೋಡುವಂತೆ ಸಾಧನೆ ಮಾಡಿದ ಹೆಮ್ಮೆಯ ತಾಯಿ ಇವರು.
ಕಿತ್ತು ತಿನ್ನುವ ಬಡತನದ ನಡುವೆ ತಮಗೆ ಮಕ್ಕಳನ್ನು ಕರುಣಿಸದ ಭಗವಂತನನ್ನು ಶಪಿಸುತ್ತಾ ಕೈಕಟ್ಟಿ ಕೂರದೆ ತನ್ನ ಪತಿಯ ಜೊತೆಗೂಡಿ ಗಿಡ ಮರ ಬೆಳೆಸಲು ತೀರ್ಮಾನಿಸಿದರು. ಪರಿಸರವೇ ಮಗುವೆಂದು ಭಾವಿಸಿ ಗಿಡಮರಗಳನ್ನು ನೆಟ್ಟು ಅವಕ್ಕೆ ಕಾಲಕಾಲಕ್ಕೆ ನೀರುಣಿಸಿ ಪೋಷಿಸಿದರು. ಆ ಗ್ರಾಮದಲ್ಲಿ ಬಹುತೇಕ ಸುಲಭವಾಗಿ ಸಿಗುತ್ತಿದ್ದ ಮರಗಳೆಂದರೆ ಆಲದಮರ. ಈ ದಂಪತಿ ಆಲದಮರಗಳಿಂದ ರೆಂಬೆ ಕಡಿದು ಕುದೂರು ಮತ್ತು ಹುಲಿಕಲ್ ರಸ್ತೆಯ ಇಕ್ಕೆಲಗಳಲ್ಲಿ ಅವುಗಳನ್ನು ನೆಡಲು ಪ್ರಾರಂಭಿಸಿದರು. ದಿನಗಳು ಉರುಳಿದಂತೆ ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು ೨೮೮ ಗಿಡಗಳನ್ನು ನೆಟ್ಟು ಇಂದು ಹೆಮ್ಮರವಾಗಿ ರಸ್ತೆಯ ಇಕ್ಕೆಲಗಳಲ್ಲಿ ಹಸಿರಿನ ಚಾದರ ಹೊದ್ದು ನಮ್ಮ ಮುಂದೆ ನಿಂತಿರುವುದೇ ಸಾಕ್ಷಿಯಾಗಿದೆ. ಈ ಮರಗಳು ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತವೆ. ಆದರೆ, ಆ ತಾಯಿಯ ಬೆವರಿನ ಹನಿಗಳಿಗೆ, ಹಸಿರಿನ ಆಸೆಗೆ ಬೆಲೆ ಕಟ್ಟಲು ಸಾಧ್ಯವೇ…
ರಸ್ತೆಗಳ ಇಬ್ಬದಿಯಲ್ಲಿ ನಾಲ್ಕು ಕಿಲೋಮೀಟರ್‌ಗಟ್ಟಲೆ ದಾರಿಯಲ್ಲಿ ಗಿಡ ನೆಟ್ಟು ನೀರುಣಿಸುವುದು ಸುಲಭದ ಮಾತಾಗಿರಲಿಲ್ಲ. ಮುಂಗಾರಿನ ವರ್ಷಧಾರೆಗೆ ಗಿಡನೆಟ್ಟು ಬಿಸಿಲಿನ ತಾಪದ ಬೇಸಿಗೆಯಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ದೂರದ ಊರುಗಳಿಂದ ಬಿಂದಿಗೆ, ಕೊಳಗಗಳಲ್ಲಿ ನೀರು ತಂದು ಗಿಡಮರ ಬೆಳೆಸಿದರು. ಮುಳ್ಳು ಪೊದೆಗಳನ್ನು ಕಡಿದು ತಂದು ಆ ಸಸಿಗಳಿಗೆ ಹೊದಿಸಿ ಜಾನುವಾರುಗಳಿಂದ ಅವುಗಳನ್ನು ರಕ್ಷಿಸಿದರು. ಸಾಲು ಸಾಲು ಮರಗಳನ್ನು ರಸ್ತೆಬದಿಯಲ್ಲಿ ನೆಟ್ಟ ತಿಮ್ಮಕ್ಕರ ನಿಸರ್ಗ ಪ್ರೀತಿ, ಇತರರಿಗೂ ಸ್ಛೂರ್ತಿಯಾಗಿದೆ. ಇದರ ಪರಿಣಾಮ ಇಂದು ಕುದೂರು- ಹುಲಿಕಲ್ ರಸ್ತೆಯ ಇಕ್ಕೆಲಗಳಲ್ಲಿ ನಾವು ಗಿಡಮರಗಳನ್ನು ನೋಡಬಹುದು. ಶಾಲೆಗೆ ಹೋಗಿಲ್ಲದಿದ್ದರೂ, ಅಶೋಕ ಚಕ್ರವರ್ತಿಯ ಸಾಲುಮರದ ಕಥೆ ಓದಿಲ್ಲದಿದ್ದರೂ ಕೂಡ ಅಷ್ಟು ವಿಚಾರಶೀಲತೆಯಿಂದ ಕಾರ್ಯತತ್ಪರರಾಗಿದ್ದು ಮಾತ್ರ ಹೆಮ್ಮೆಯ ಸಂಗತಿಯೇ ಸರಿ. ಅಕ್ಷರಸ್ಥ ರಿಗೂ ಮಾದರಿ ವನಿತೆಯಾದ ಅದಮ್ಯ ಚೇತನ ಇವರು. ಇವರು ನೆಟ್ಟ ಗಿಡಮರಗಳು ಇಂದು ನೂರಾರು ಖಗ ಮೃಗಗಳಿಗೆ ಆಶ್ರಯತಾಣವಾಗಿವೆ. ಆ ದಾರಿಯಲ್ಲಿ ಕ್ರಮಿಸುವ ಎಲ್ಲರಿಗೂ ನೆರಳಿನ ಚಾದರವಾಗಿವೆ.
ತೆರೆಮರೆಯಲ್ಲಿದ್ದ ಸಾಲುಮರದ ತಿಮ್ಮಕ್ಕನ ಸಾಧನೆಯನ್ನು ಪ್ರಥಮವಾಗಿ ಬೆಳಕಿಗೆ ತಂದು ಅದರ ಬಗ್ಗೆ ಎಲ್ಲರ ಗಮನ ಸೆಳೆದವರುನೆಲಮಂಗಲದ ಉಪನ್ಯಾಸಕ ಡಾ.ನೆಗಳೂರು ಅವರು. ಇವರಪತ್ರಿಕಾ ವರದಿ ಇಂದು ಜಾಗತಿಕ ಮಟ್ಟದಲ್ಲಿ ತಿಮ್ಮಕ್ಕನನ್ನು ಸಾಲುಮರದ ತಿಮ್ಮಕ್ಕನನ್ನಾಗಿಸಿದೆ. ಮಗುವೊಂದು ಹೆಚ್ಚೆಂದರೆ ಒಂದು ಕುಟುಂಬಕ್ಕೆ ಆಶ್ರಯ ನೀಡುತ್ತದೆ. ಆದರೆ ಗಿಡವನ್ನು ಬೆಳೆದರೆ ಹಲವು ವೈವಿಧ್ಯಮಯ ರೂಪಗಳಲ್ಲಿ ಉಪಯುಕ್ತವಾಗುತ್ತದೆ. ಗಿಡ ಮರಗಳಲ್ಲಿ ವಾಸಿಸುವ ಕೀಟಸ್ತೋಮ ಸಸ್ಯಗಳಿಂದಲೇ ಬದುಕುತ್ತವೆ. ಮನುಜರಿಗೆ ನೆರಳಿನ ಆಸರೆ ದೊರೆಯುತ್ತದೆ. ಪಕ್ಷಿಗಳು ಗೂಡು ಕಟ್ಟಿಕೊಂಡು ಸಂತಾನೋತ್ಪತ್ತಿ ಮಾಡಿ ತಮ್ಮ ಜೀವ ಸಂಕುಲವನ್ನು ಕಟ್ಟಿಕೊಳ್ಳುತ್ತವೆ. ಜೊತೆಗೆ ಪಕ್ಷಿಗಳು ಬೀಜ ಪ್ರಸರಣದಲ್ಲಿ ಭಾಗಿಯಾಗಿ ವೃಕ್ಷಗಳನ್ನು ಹೆಚ್ಚಿಸುತ್ತವೆ. ಅಂತಹ ಬಹು ಉಪಯುಕ್ತತೆ ಹೊಂದಿರುವ ಸಸ್ಯರಾಶಿಯನ್ನು ಬೆಳೆಸುವ ಮೂಲಕ ನಿಸರ್ಗ ಶಕ್ತಿ ಕಾಪಾಡುತ್ತವೆ.
ತಿಮ್ಮಕ್ಕ – ಸಾಲುಮರದ ತಿಮ್ಮಕ್ಕನಾಗುವಲ್ಲಿನ ಶ್ರಮತೆ ಸರಳವಾಗಿರಲಿಲ್ಲ. ಸಾರಿಗೆ ಸೌಲಭ್ಯ ಹಾಗೂ ನೀರಿನ ಮೂಲಗಳ ಕೊರತೆಯ ನಡುವೆಯೂ ರಣಬಿಸಿಲಿನಲ್ಲಿ ಕಿಲೋ ಮೀಟರ್ ಗಟ್ಟಲೇ ಕಾಲು ನಡಿಗೆಯಲ್ಲಿ ಚಲಿಸಿ ಗಿಡ ಬೆಳೆಸಿದ್ದ ಆಕೆಯ ಮಾತೃಹೃದಯ ಎದ್ದು ಕಾಣುತ್ತದೆ. ತಮಗೆ ಮಕ್ಕಳಿಲ್ಲದಿದ್ದರೇನು? ಗಿಡಮರಗಳನ್ನು ಬೆಳೆಸಿ ಅವುಗಳಿಗೆತಾಯಾಗಿ ಬಾಳಿದರು ತಿಮ್ಮಕ್ಕ. ತಲೆಯ ಮೇಲೆ ಬಿಂದಿಗೆಯಲ್ಲಿ ನೀರು ಹೊತ್ತು ಸಾಕಿದ ಫಲವಾಗಿ ಹೊತ್ತಿದ್ದರಿಂದ ರಸ್ತೆಯ ಇಕ್ಕೆಲಗಳಲ್ಲಿ ಬಾನೆತ್ತರ ಬೆಳೆದು ನಿಂತ ಸಾಲು ಸಾಲು ಮರಗಳು ಸಾಕ್ಷಿಯಾಗಿ ಪ್ರಯಾಣಿಕರನ್ನು ಸ್ವಾಗತಿಸುತ್ತಿವೆ.
ಸೂರ್ಯನ ಪ್ರಖರ ಬಿಸಿಲಿಗೆ ತನ್ನ ಚರ್ಮ ಸುಟ್ಟು ಕಳಾಹೀನವಾದರೂ ಅದನ್ನು ಲೆಕ್ಕಿಸದೆ ತಾನು ನೆಟ್ಟ ಗಿಡಗಳ ಹಸಿರು ಒಣಗದಂತೆ ಕಾಪಿಟ್ಟ ಈ ತಾಯಿಯ ಹೃದಯದ ಆದ್ರತೆ ಎಲ್ಲರಿಗೂ ಮಾದರಿ. ಮಕ್ಕಳಿಗೆ ಮಮಕಾರ ತೋರುವ ತಾಯಿಯಂತೆ ಗಿಡ ಮರಗಳಿಗೆ ಪ್ರೀತಿಯಅಮೃತವನ್ನು ಹಾರೈಕೆಯ ರೂಪದಲ್ಲಿ ನೀಡಿದ ತಿಮ್ಮಕ್ಕ ನಮ್ಮ ತಾಲ್ಲೂಕಿನ ಹೆಣ್ಣು ಮಗಳು ಎಂಬುದು ಖುಷಿಯ ಸಂಗತಿ.
” ಗಿಡಮರಗಳನ್ನೇ ಮಕ್ಕಳೆಂದು ಸಾಕಿದ ವೃಕ್ಷ ಮಾತೆ ಮಕ್ಕಳ ದಿನಾಚರಣೆ ದಿನವೇ ನಮ್ಮನ್ನೆಲ್ಲ ಅಗಲಿರುವುದು ನೋವಿನ ಸಂಗತಿ. ಹಸಿರುಇರುವವರೆಗೂ ನಿಮ್ಮ ಹೆಸರಿರುತ್ತದೆ. ಹೋಗಿ ಬನ್ನಿ ಪರಿಸರದವ್ವ. ನಿಮಗಿದೋ ಕನ್ನಡಿಗರ ನುಡಿ ನಮನ.”
-ಅನಸೂಯ ಯತೀಶ್, ಬೆಂಗಳೂರು
ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…
ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…
ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…
ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…
ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…
ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…