ಎನ್. ಕೇಶವಮೂರ್ತಿ
ನಾನು ತೀರ್ಥಹಳ್ಳಿ ಸಮೀಪದ ಒಬ್ಬ ದೊಡ್ಡ ಹಿಡುವಳಿ ಹೊಂದಿರುವ ಅಡಕೆ ಬೆಳೆಗಾರನನ್ನು ಭೇಟಿ ಮಾಡಲು ಹೋಗಿದ್ದೆ. ಅವರ ಅಡಕೆ ತೋಟ ತಂಪಾಗಿತ್ತು. ಅಡಕೆಗೆ ಹಬ್ಬಿಸಿದ್ದ ಕಾಳುಮೆಣಸು, ವೀಳ್ಯದೆಲೆ ಹಂಬು ನಳನಳಿಸುತ್ತಿತ್ತು. ದೂರದಲ್ಲಿ ಜನರ ಸದ್ದು ಕೇಳುತ್ತಿತ್ತು. ಹತ್ತಿರ ಹೋದೆ ಅಲ್ಲಿ ಹತ್ತಾರು ಜನ ಕೆಲಸಗಾರರು ಖಾಕಿ ಚಡ್ಡಿ ಧರಿಸಿ ಎಲೆ ಹಂಬು ತೆಕ್ಕೆ ಇಳಿಸ್ತಾ ಇದ್ದರು. ಪ್ರತಿಯೊಬ್ಬರೂ ಒಂದೊಂದು ಕೆಲಸದಲ್ಲಿ ನಿರತರಾಗಿದ್ದರು. ನಾನು ಅಲ್ಲಿರುವ ಒಬ್ಬ ಕೆಲಸಗಾರನನ್ನು ಕೇಳಿದೆ.
‘ನಾನು ದೂರದಿಂದ ಬಂದಿದ್ದೇನೆ, ಈ ತೋಟದ ಮಾಲೀಕರನ್ನು ನೋಡಬೇಕಿತ್ತು’ ಎಂದೆ.
ಅದಕ್ಕೆ ಆತ ಹೇಳಿದ, `ಓ ಯಜಮಾನರಾ, ಅಗೋ ಅಲ್ಲಿ ಗುಡಿಸಲಿದೆಯಲ್ಲಾ ಅಲ್ಲಿ ಕುಳಿತಿರಿ. ನಾನು ಅವರನ್ನು ಕರೆದುಕೊಂಡು ಬರುತ್ತೀನಿ’ ಅಂದ. ನಾನು ಹೋಗಿ ಕುಳಿತೆ. ಹತ್ತು ನಿಮಿಷದಲ್ಲಿ ಒಬ್ಬ ಎಳನೀರು ತಂದ, ಮತ್ತೊಬ್ಬ ಬಾಳೆಹಣ್ಣು ತಂದ.
ನಾನು ‘ಯಜಮಾನರೆಲ್ಲಪ್ಪಾ?’ ಅಂದೆ. ‘ಬರ್ತಾರೆ ಕುಳಿತಿರಿ’ ಅಂದ ಅವ. ಒಂದು ಗಂಟೆ ಆಯ್ತು. ಅಷ್ಟರಲ್ಲಿ ಎಲೆ ಹಂಬಿನ ತೆಕ್ಕೆ ಇಳಿಸುವ ಕೆಲಸವೂ ಮುಗಿದಿತ್ತು. ಮತ್ತೊಬ್ಬ ಕೆಲಸಗಾರ ಬೆವರೊರೆಸುತ್ತಾ ನನ್ನೆದುರು ಬಂದು ನಿಂತ. ‘ಅಯ್ಯಾ ಕಾದು ಕಾದು ಸಾಕಾಗಿದೆ, ಈಗಲಾದರೂ ಯಜಮಾನರನ್ನು ಕರಿತೀಯಾ?’ ಕೇಳಿದೆ. ಆತ ನಿಧಾನವಾಗಿ ನುಡಿದ, ‘ಕ್ಷಮಿಸಿ, ನಾನೇ ಈ ತೋಟದ ಯಜಮಾನ. ನಿಮ್ಮನ್ನು ಕಾಯಿಸಿಬಿಟ್ಟೆ’ ಅಂದ. ನಾನು ಅವಕ್ಕಾದೆ.
ಅವರು ನಗುನಗುತ್ತಾ ಹೇಳಿದರು, “ನನ್ನ ತಂದೆ ಯಾವಾಗಲೂ ಹೇಳೋರು, ‘ಮಾಡೋನಿಗೆ ಮೂರು ಹಣ ಆದ್ರೆ ಹೇಳೋನಿಗೆ ಆರು ಹಣ’ ಎಂದು. ಅವರ ಗರಡೀಲೇ ನಾನು ಬೆಳೆದಿದ್ದು. ಹಾಗಾಗಿ ನನಗೆ ಎಲ್ಲ ಕೆಲಸಾನೂ ಗೊತ್ತು. ನಾನು ನನ್ನ ಕೆಲಗಾರರಿಗೆ ಹೇಳ್ತಿರ್ತೀನಿ. ನಾನು ಮಾಡುವ ಕೆಲಸದಲ್ಲಿ ಅರ್ಧ ಮಾಡಿ ಸಾಕು ಅಂತಾ. ನಾನು ಹೇಳಿ, ನಿಂತು ಕೆಲಸ ಮಾಡಿ ತೋರಿಸದಿದ್ದರೆ ಅವರು ಮಾಡುವುದಿಲ್ಲ. ಮಾಲೀಕ ಆದವನು, ಆಳಿಗೆ ಕೆಲಸ ಹೇಳಿ ಊರೂರು ತಿರುಗೋಕೆ ನಿಂತರೆ ತೋಟ ಹಾಳು, ನೆಮ್ಮದಿಯೂ ಇರುವುದಿಲ್ಲ ನೋಡಿ’ ಅಂದರು. ಅದಕ್ಕೆ ಅಲ್ಲವೇ ನೀವು ಕೃಷಿ
ಪಂಡಿತರಾದದ್ದು ಅಂತ ಮನದಲ್ಲೇ ಅಂದುಕೊಂಡೆ.
ಆದರೂ ಕೇಳಿದೆ ‘ಅಲ್ಲಾ ಸ್ವಾಮಿ, ಕೆಲಸ ಮಾಡೋದು ಕಷ್ಟ, ಹೇಳೋದು ಸುಲಭ ಅಲ್ವಾ. ಹೀಗಾಗಿ ಮಾಡೋನಿಗೆ ಜಾಸ್ತಿ ಹಣ ಬರಬೇಕು ಅಲ್ವಾ?’
ಅವರು ಜೋರಾಗಿ ನಕ್ಕರು. ‘ನೋಡಿ, ನಾನು ಆಳುಗಳಿಗೆ ಈ ಎಲೆ ಹಂಬು ತೆಕ್ಕೆ ಬಿಡ್ರಯ್ಯಾ ಅಂತಾ ಹೇಳಿದೆ. ಆಗ ಅವರು ಹೇಳಿದ್ರು, ಅಯ್ಯಾ ನಮಗೆ ಇದು ಹೊಸದು. ಸ್ವಲ್ಪ ತೋರಿಸ್ತೀರಾ ಅಂತಾರೆ. ಆಗ ಏನು ಮಾಡ್ತೀರಾ? ನೀವು ಮಾಡಿ ತೋರಿಸಬೇಕು ತಾನೆ. ಅಲ್ಲಿಗೆ ಹೇಳೋನಿಗೆ, ಮಾಡೋನಿಗಿಂತ ಜಾಸ್ತಿಯಾಗಿ ಅನುಭವ ಇರಬೇಕು ತಾನೆ? ಅದಕ್ಕೇ ಜಾಸ್ತಿ ಹಣ’ ಅಂದು ಪಕ್ಕದಲ್ಲಿರುವ ಬದುವಿನಲ್ಲಿ ಕುಳಿತರು. ನಾನೂ ಕುಳಿತೆ.
ಸುಧಾರಿಸಿಕೊಂಡು ಅವರೇ ಹೇಳಿದರು. ‘ನಮ್ಮಪ್ಪ ನಮ್ಮನ್ನು ತೋಟದಲ್ಲಿ ಮಕ್ಕಳಂತೆ ಕಾಣಿರಲಿಲ್ಲ. ಇಲ್ಲಿ ನಾನೂ ಒಬ್ಬ ಕೆಲಸಗಾರನ ಹಾಗೇ ನಮ್ಮಪ್ಪನೂ ಒಬ್ಬ ಕೆಲಸಗಾರ. ವ್ಯವಸಾಯ ನಾಲ್ಕು ಗೋಡೆಗಳ ನಡುವೆ ಪಡೆಯುವ ಶಿಕ್ಷಣ ಅಲ್ಲ. ಭೂಮಿಯ ಒಡಲಲ್ಲಿ ಪ್ರಾಯೋಗಿಕವಾಗಿ ಪಡೆಯುವ ಜ್ಞಾನ. ಈಗಿನ ಮಕ್ಕಳಿಗೆ ಮೇಣಿ ಹಿಡಿಯಲೂ ಬರೋಲ್ಲ, ಎತ್ತು ಹೂಡಲು ಬರೋಲ್ಲ, ಸರಿಯಾಗಿ ಸಾಲು ಹಿಡಿದು ಉಳಲು ಬರೋಲ್ಲ, ಸನಿಕೆ ಹಿಡಿದು ಮಣ್ಣು ಕೆಲಸ ಮಾಡೋಕೆ ಬರೋಲ್ಲ. ನಮ್ಮ ದುರದೃಷ್ಟ ಯಾವ ಕಾಲೇಜೂ ಈ ಪ್ರಾಯೋಗಿಕ ಜ್ಞಾನವನ್ನು ಕಲಿಸುವುದಿಲ್ಲ. ಮಾತೆತ್ತಿದ್ರೆ ಯಂತ್ರ ಅಂತಾರೆ. ಕೃಷಿಯ ಎಲ್ಲ ಕೆಲಸಗಳನ್ನು ಯಂತ್ರಗಳಿಂದಲೇ ಮಾಡಲು ಸಾಧ್ಯವೇ? ಆಗೋಲ್ಲ. ಎತ್ತು ಬೇಕು, ನುರಿತ ಕೆಲಸಗಾರರು ಬೇಕು, ಸಾಧನ ಸಲಕರಣೆ ಇರಬೇಕು, ಹೇಳೋನಿಗೆ ತಿಳಿದಿರಬೇಕು, ಪ್ರಾಯೋಗಿಕ ಅನುಭವ ಇರಬೇಕು, ಆಗ ತೋಟತುಡಿಕೆ ನೋಡುವ ಹಾಗಿರುತ್ತೆ. ನಿಮ್ಮಂತಹವರು ಬಂದು
ನೋಡುವಂತಿರುತ್ತದೆ’ ಎಂದು ‘ಬನ್ನಿ, ಎಲ್ಲರಿಗೂ ಊಟ ಬಂದಿದೆ ಮಾಡೋಣ’ ಎಂದ. ಹೇಳಿದ ಹಾಗೇ ಎಲ್ಲರಿಗೂ ಒಂದೇ ಊಟ. ಮಾಲೀಕ, ಕಾರ್ಮಿಕ ಭೇದವಿಲ್ಲ. ಎಲ್ಲರೂ ಬದುವಿನ ಪಕ್ಕದಲ್ಲೇ ಕುಳಿತು, ಸೊಗಸಾದ ಬಾಳೆಲೆಯಲ್ಲಿ ಊಟ ಮಾಡಿದ್ದಾಯ್ತು. ನನ್ನ ಮನದಲ್ಲಿ ಅವರ ಮಾತೇ ಉಳಿಯಿತು. ಮಾಡೋನಿಗೆ ಮೂರು ಹಣ… ಹೇಳೋನಿಗೆ ಆರು ಹಣ. ನಿಮಗೇನನ್ನಿಸುತ್ತೆ? ನಿಜ ತಾನೇ?
keshavamurthy.n@gmail.com
ಬೆಂಗಳೂರು: ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೇ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ…
ಹನೂರು: ತಾಲೂಕಿನ ಮಿಣ್ಯಂ ಗ್ರಾಮದಿಂದ ಹನೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕರಿಗೆ ಅರಣ್ಯ ವ್ಯಾಪ್ತಿಯಲ್ಲಿ ಹುಲಿರಾಯ ದರ್ಶನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ…
ಬೆಳಗಾವಿ: ಆದಷ್ಟು ಬೇಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುತ್ತದೆ ಎಂದು ಸಚಿವ ರಹೀಂ ಖಾನ್ ತಿಳಿಸಿದರು. ವಿಧಾನಪರಿಷತ್ ಕಲಾಪದಲ್ಲಿ…
ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಮಂಡ್ಯ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಅದ್ಧೂರಿಯಾಗಿ ಆಚರಣೆ ಮಾಡಿದರು. ಮದ್ದೂರಿನಲ್ಲಿ ಮಾಜಿ…
ಬೆಳಗಾವಿ: ಕೋಳಿ ಮೊಟ್ಟೆ ಸೇವಿಸಿದರೆ ಕ್ಯಾನ್ಸರ್ ಬರುವ ವದಂತಿ ಎಲ್ಲೆಡೆ ಹಬ್ಬಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ…
ಮಳವಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಳವಳ್ಳಿಯಲ್ಲಿ ನಡೆಯಲಿರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ…