ಅಂಕಣಗಳು

2023ಕ್ಕೆ ವಿದಾಯ ಹೇಳುವ ಈ ವಾರ…

ಕಳೆದ ವಾರ ಹೊಂಬಾಳೆ ಸಂಸ್ಥೆ ನಿರ್ಮಿಸಿದ ‘ಸಲಾರ್‌’ ತೆಲುಗು ಚಿತ್ರ ತೆರೆಗೆ ಬಂತು. ಕನ್ನಡದ ನಿರ್ಮಾಪಕರ, ಕನ್ನಡದ ತಂತ್ರಜ್ಞರ ತೆಲುಗು ಚಿತ್ರ. ಶಾರುಖ್ ಖಾನ್ ಅಭಿನಯದ ‘ಡಂಕಿ’ ಚಿತ್ರವೂ ಕಳೆದ ವಾರ ತೆರೆಕಂಡಿದೆ. ಈ ಎರಡು ಚಿತ್ರಗಳ ಪರಸ್ಪರ ಸ್ಪರ್ಧೆ, ಗಳಿಕೆಗಳ ಕುರಿತಂತೆ ಸಾಕಷ್ಟು ಚರ್ಚೆ, ಜಿಜ್ಞಾಸೆ, ಅದರ ಬಿಡುಗಡೆಗೆ ಮೊದಲು ನಡೆದರೆ, ಬಿಡುಗಡೆಯ ನಂತರ, ಬಾಕ್ಸಾಫೀಸು ಲೆಕ್ಕಾಚಾರಗಳು ಎಂದಿನಂತೆ ನಡೆದಿವೆ.

‘ಸಲಾರ್‌‌’ ಚಿತ್ರದ ನಿರ್ದೇಶಕರು ಪ್ರಶಾಂತ್ ನೀಲ್, ತಮ್ಮ ಭಾವ ಶ್ರೀಮುರಳಿ ಅವರಿಗಾಗಿ ‘ಉಗ್ರಂ’ ಚಿತ್ರವನ್ನು ನಿರ್ದೇಶಿಸಿದವರು. ‘ಸಲಾರ್’ ಚಿತ್ರದ ಬಿಡುಗಡೆಯ ವೇಳೆ ಅವರು ನೀಡಿದ ಸಂದರ್ಶನವೊಂದು ಅವರ ಸಿನಿಮಾಯಾನ, ಅನುಭವ, ಮುಂದಿನ ಹೆಜ್ಜೆಗಳ ಕುರಿತಂತೆ ಹೇಳಿದೆ. ತಮ್ಮ ಮೊದಲ ಚಿತ್ರ ‘ಉಗ್ರಂ’ ವೇಳೆ ಅವರು ಅನುಭವಿಸಿದ ನೋವು ನಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ.

‘ಉಗ್ರಂ’ ಚಿತ್ರದ ಮೂಲಕ ಶ್ರೀಮುರಳಿ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಒಂದು ಇಮೇಜನ್ನು ನೀಡುವುದು ಅನಿವಾರ್ಯವಾಗಿತ್ತೆನ್ನಿ. ಈ ಚಿತ್ರದ ವೇಳೆ ತಾವು ಮನೆ ಮಾರಬೇಕಾಯಿತು ಎಂದಿರುವ ಅವರು, ಮುಂದೆ ಹತ್ತು ಮನೆಗಳನ್ನು ವಿಜಯಕುಮಾರ್ ಮತ್ತು ಯಶ್‌ರಿಂದಾಗಿ ಕೊಂಡದ್ದನ್ನೂ ಹೇಳಿದ್ದಾರೆ. ಕನ್ನಡ ಚಿತ್ರೋದ್ಯಮದಲ್ಲಿನ ವ್ಯವಹಾರ, ರೀತಿ, ನೀತಿಗಳನ್ನು, ಮಾರುಕಟ್ಟೆಯ ಮಿತಿಯನ್ನು ಮೊದಲ ಚಿತ್ರದಲ್ಲೇ ತಿಳಿದುಕೊಂಡ ಪ್ರಶಾಂತ್ ನೀಲ್ ಅವರ ಸೃಜನಶೀಲತೆಗೆ ಹೊಂಬಾಳೆ ಸಂಸ್ಥೆ ಒತ್ತಾಸೆಯಾಗಿ ನಿಂತಿತು. ಕನ್ನಡ ಚಿತ್ರರಂಗ ಹಿಂದೆಂದೂ ಕಂಡು ಕೇಳರಿಯದ ಯಶಸ್ಸನ್ನು ಅವರ ನಿರ್ದೇಶನದ ‘ಕೆಜಿಎಫ್’ ಮತ್ತು ‘ಕೆಜಿಎಫ್ ಚಾಪ್ಟರ್ 2’ ಕಂಡವು. ಗಳಿಕೆಯಲ್ಲಿ ಇತರ ಭಾರತೀಯ ಭಾಷಾ ಚಿತ್ರಗಳಿಗೆ ಸಡ್ಡುಹೊಡೆದು ನಿಂತಿತು ಚಾಪ್ಟರ್ 2.

ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ ಎಂದು ಸ್ವಯಂ ಕರೆದುಕೊಳ್ಳುವಹಿಂದಿ ಚಿತ್ರರಂಗದ ಮಂದಿಗೆ ದಕ್ಷಿಣ ಭಾರತದಲ್ಲಿ ತಯಾರಾದ ಎರಡು ಬಾಹುಬಲಿಗಳು ಮತ್ತು ಎರಡು ಕೆಜಿಎಫ್ ತಲ್ಲಣಗೊಳಿಸಿದ್ದಂತೂ ಹೌದು. ಹಿಂದಿ ಚಿತ್ರರಂಗ ಆತ್ಮಾವಲೋಕನ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಅಲ್ಲಿನ ಮಂದಿ ಚರ್ಚಿಸಿದ್ದು ದೇಶಾದ್ಯಂತ ಸುದ್ದಿಯೂ ಆಗಿತ್ತು. ಪ್ರಶಾಂತ್ ನೀಲ್ ಕನ್ನಡದಲ್ಲಿ ಮೂರು ಚಿತ್ರಗಳ ನಂತರ ತೆಲುಗು ಚಿತ್ರರಂಗಕ್ಕೆ ಕಾಲಿಡಲು ಮುಖ್ಯ ಕಾರಣ ಅವರ ಪ್ರಕಾರ, ಅಲ್ಲಿನ ಮಾರುಕಟ್ಟೆಯ ವಿಸ್ತಾರ. ಹಾಲಿವುಡ್ ಚಿತ್ರಗಳಿಂದ ಸ್ಫೂರ್ತಿ ಪಡೆದು, ಆ ರೀತಿಯ ಚಿತ್ರಗಳನ್ನೇ ನಿರ್ದೇಶಿಸಲು ಹೊರಟಿರುವ ಅವರ ‘ಸಲಾ‌’ ಚಿತ್ರದ ಕುರಿತಂತೆ ಅಲ್ಲಿ ಇಲ್ಲಿ ಕೇಳಿಬರುತ್ತಿರುವ ನಕಾರಾತ್ಮಕ ಟೀಕೆ, ವಿಮರ್ಶೆಗಳ ಕುರಿತಂತೆ ಅವರಿಗೆ ಅಂತಹ ಬೇಸರವೇನೂ ಇಲ್ಲ. ಮುಖ್ಯವಾಗಿ, ‘ಸಲಾರ್’ ಚಿತ್ರವನ್ನು ‘ಉಗ್ರಂ’ ಮತ್ತು ‘ಕೆಜಿಎಫ್’ಗಳ ಹೊಸ ತಳಿ ಎನ್ನುವರ್ಥದ ಟೀಕೆಗಳೂ ಇದ್ದವು. “ಎಲ್ಲರನ್ನೂ ಮೆಚ್ಚಿಸುವುದು ಆಗದ ಕೆಲಸ. ‘ಉಗ್ರಂ’ ಮತ್ತು ‘ಕೆಜಿಎಫ್’ ನಾನೇ ನಿರ್ದೇಶಿಸಿದ ಚಿತ್ರಗಳು. ನಾನು ನನ್ನದೇ ಆದ ಶೈಲಿಯನ್ನು ಅನುಸರಿಸುತ್ತೇನೆ’ ಎನ್ನುವುದು ಅವರ ಮಾತು.

ಯಾರೇ ನಿರ್ದೇಶಕರಾಗಲೀ, ನಟರಾಗಲೀ, ತಮ್ಮ ಇಷ್ಟದ ಭಾಷೆಗಳಲ್ಲಿ ಚಲನಚಿತ್ರಗಳನ್ನು ನಿರ್ದೇಶಿಸಲು, ನಟಿಸಲು ಸ್ವತಂತ್ರರು. ಕರ್ನಾಟಕದವರೇ ಆದ ರಾಜಮೌಳಿ ಅವರೀಗ ತೆಲುಗು ಚಿತ್ರರಂಗದಲ್ಲಿ ನಿರ್ದೇಶಕರಾಗಿ ಬಹುದೊಡ್ಡ ಹೆಸರಾದರು, ಆಸ್ಕರ್ ಪ್ರಶಸ್ತಿಯನ್ನು ತಮ್ಮ ಚಿತ್ರದ ಸಂಗೀತಕ್ಕೆ ತರುವ ಮೂಲಕ ನಾಡಿಗೆ ಹೆಮ್ಮೆ ತಂದರು. ಕನ್ನಡದ ರಜನಿಕಾಂತ್ ಭಾರತೀಯ ಚಿತ್ರರಂಗದಲ್ಲೇ ಬಹುದೊಡ್ಡ ಹೆಸರಾದರು ತಮಿಳು ಚಿತ್ರನಟರಾಗಿ,

ಕಳೆದ ವರ್ಷ ಹೊಂಬಾಳೆ ಸಂಸ್ಥೆ ನಿರ್ಮಿಸಿದ ಮತ್ತೊಂದು ಚಿತ್ರ ಕಾಂತಾರ. ಆ ಚಿತ್ರವನ್ನು ನಿರ್ದೇಶಿಸಿ ನಟಿಸಿದ ರಿಷಭ್ ಶೆಟ್ಟಿ ಅವರ ಮಾತುಗಳಿಗೂ, ಪ್ರಶಾಂತ್ ನೀಲ್ ಅವರ ಮಾತುಗಳಿಗೂ ಉತ್ತರ ದಕ್ಷಿಣ. ಯಾವುದೇ ಭಾಷೆಗಳಿಂದ ನಟಿಸಲು, ನಿರ್ದೇಶಿಸಲು ಆಹ್ವಾನ ಬಂದರೂ ನಾನು ಹೋಗುವುದಿಲ್ಲ. ನನ್ನನ್ನು ಈ ಎತ್ತರಕ್ಕೆ ಬೆಳೆಸಿರುವುದು ಕನ್ನಡದ ಪ್ರೇಕ್ಷಕರು. ಕನ್ನಡದಲ್ಲಿ ಚಿತ್ರ ನಿರ್ದೇಶಿಸುತ್ತೇನೆ, ನಟಿಸುತ್ತೇನೆ. ಇತರ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡುವುದಾಗುತ್ತದೆ ಎನ್ನುವುದು ಅವರು ಎಲ್ಲ ಸಂದರ್ಶನಗಳಲ್ಲಿ ಹೇಳುತ್ತಿರುವ ಮಾತು. ಈಗ ಸೆಟ್ಟೇರಿರುವ ‘ಕಾಂತಾರ’ದ ಮೊದಲ ಭಾಗವೂ ಕನ್ನಡದಲ್ಲೇ ತಯಾರಾಗಿ ಇತರ ಭಾಷೆಗಳಿಗೆ ಡಬ್ ಆಗಲಿದೆ. ಹೊಂಬಾಳೆಯದೇ ನಿರ್ಮಾಣ ಅದು.

ಕನ್ನಡ ಚಿತ್ರರಂಗಕ್ಕೆ ಮಾರುಕಟ್ಟೆಯ ಮಿತಿ ಇದೆ, ನಿಜ. ಆದರೆ ಅದನ್ನು ವಿಸ್ತರಿಸಲೂ ಸಾಧ್ಯ ಎನ್ನುವುದನ್ನು ರವಿಚಂದ್ರನ್‌ರಂತಹವರು ಎಂಬತ್ತರ ದಶಕದಲ್ಲೇ ತಮ್ಮ ಚಿತ್ರಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ‘ಕಾಂತಾರ’ವೂ ಅದಕ್ಕೆ ಇನ್ನೊಂದು ಪುರಾವೆ. ಅದು ಪ್ರಪಂಚಾದ್ಯಂತ ಮೊದಲು ತೆರೆಕಂಡದ್ದು ಕನ್ನಡದಲ್ಲಿ ಮಾತ್ರ. ಎರಡು ವಾರಗಳ ಭರ್ಜರಿ ಪ್ರದರ್ಶನದ ನಂತರ ಅದರ ವ್ಯಾಪಾರ, ಡಬ್ಬಿಂಗ್ ಆಗಿ ಹೊಸ ದಾಖಲೆ ಬರೆಯಿತು.

ಕನ್ನಡ ಚಿತ್ರರಂಗದ ಒಂದು ರೀತಿಯ ಕೀಳರಿಮೆಯನ್ನು ನಮ್ಮವರೇ ತೋರಿಸಿಕೊಡುವುದರ ಪರಿಣಾಮವೋ ಏನೋ ಒಟಿಟಿ ತಾಣಗಳು, ವರ್ಚಸ್ವೀ ತಾರೆಯರ, ಇಲ್ಲವೇ ನಿರ್ಮಾಣ ಸಂಸ್ಥೆಗಳನ್ನು ಹೊರತು ಪಡಿಸಿ, ಕನ್ನಡ ಚಿತ್ರಗಳನ್ನು ಸಾರಾಸಗಟಾಗಿ ನಿರಾಕರಿಸುತ್ತಿವೆ. ಇದರ ವಿರುದ್ಧ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದ ಪತ್ರಿಕಾಗೋಷ್ಠಿಯಲ್ಲಿ ರಿಷಬ್ ಶೆಟ್ಟಿ ದನಿ ಎತ್ತಿದ್ದರು. ಚಿತ್ರೋದ್ಯಮದಲ್ಲಿ ಕಾರ್ಪೊರೇಟ್ ಸಂಸ್ಕೃತಿ ವ್ಯವಹಾರಕ್ಕೆ ಅಗತ್ಯ. ಆದರೆ ಚಿತ್ರಗಳು ನೆಲದ ಸಂಸ್ಕೃ ತಿಯಿಂದ ಆಚೆಗೆ, ಹಾಲಿವುಡ್ ಪ್ರೀತಿಗೆ ಶರಣಾಗುವುದು, ಭಾರತದ ಯಾವುದೇ ಭಾಷೆಯ ಚಿತ್ರರಂಗಗಳ ಭವಿಷ್ಯಕ್ಕೆ ಎರವಾಗಬಹುದು.

ಕನ್ನಡದ ಪಾಲಿಗಂತೂ ಇನ್ನೂ ಕಷ್ಟ. ಅದಾಗಲೇ, ಚಿತ್ರಮಂದಿರಗಳತ್ತ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗತೊಡಗಿದೆ. ಬೆರಳ ತುದಿಯಲ್ಲಿ ಮನರಂಜನೆ ಲಭ್ಯ. ಒಟಿಟಿ ತಾಣಗಳಲ್ಲಿ ಕನ್ನಡ ಚಿತ್ರಗಳಿಗಾಗಿ ಹುಡುಕಿದರೆ, ಕನ್ನಡದಲ್ಲಿ ತಯಾರಾದ ಚಿತ್ರಗಳ ಮೂರು ನಾಲ್ಕು ಪಟ್ಟು ಡಬ್ ಆದ ಕನ್ನಡ ಚಿತ್ರಗಳು ಸಿಗುತ್ತವೆ. ಕನ್ನಡ ಚಿತ್ರಗಳನ್ನು ಒಟಿಟಿತಾಣಗಳು ಕೊಂಡುಕೊಳ್ಳುತ್ತಿಲ್ಲ, ಡಬ್ ಆದ ಚಿತ್ರಗಳು ಕಡಿಮೆ ರಾಯಧನಕ್ಕೆ ಸಿಗುತ್ತದೆ ಎಂದಾದರೆ, ಅತ್ತಲೇ ಅವು ಗಮನ ಹರಿಸುತ್ತವೆ.

ಏಕಪರದೆಯ ಚಿತ್ರಮಂದಿರಗಳು ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಮಲ್ಟಿಪ್ಲೆಕ್ಸ್‌ಗಳು ಮನಸೋ ಇಚ್ಚೆ ಪ್ರದರ್ಶನ ಸಮಯವನ್ನು ಕನ್ನಡ ಚಿತ್ರಗಳಿಗೆ ನಿಗದಿ ಮಾಡುತ್ತವೆ. ಇದರ ವಿರುದ್ಧ ಎಲ್ಲರೂ ಮಾತನಾಡುತ್ತಾರೆಯೇ ವಿನಾ ಸೂಕ್ತ ಕ್ರಮ ಕೈಗೊಳ್ಳುವ ಪ್ರಯತ್ನ ಆಗಿಲ್ಲ. ಇನ್ನು ಚಿತ್ರಮಂದಿರ ಲಭ್ಯವಾದರೂ, ಅಲ್ಲಿನ ಪ್ರವೇಶ ದರ ಸಾಮಾನ್ಯ ಪ್ರೇಕ್ಷಕನ ಪಾಲಿಗೆ ಬಹುದೊಡ್ಡ ಹೊರೆ. ವಾರದಲ್ಲಿ ಒಂದು ಬಿಡಿ, ತಿಂಗಳಲ್ಲಿ ಒಂದು ಚಿತ್ರವನ್ನು ಕೂಡ ಕುಟುಂಬದ ಜೊತೆ ನೋಡಲಾಗದ ಪರಿಸ್ಥಿತಿ.

ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಇರುವಂತೆ, ಪ್ರವೇಶದರ ಗರಿಷ್ಟ 200-250 ದಾಟದಂತೆ ಸರ್ಕಾರ ಮಿತಿ ಹೇರಿ ಕಾನೂನು ತರಬೇಕು; ಅಲ್ಲಿ ತಿಂಡಿ, ಪಾನೀಯಗಳ ದರಗಳು ದುಬಾರಿಯಾಗದಂತೆ ಮಾಡಬೇಕು. ಪ್ರತಿ ಬಾರಿಯೂ, ಚಿತ್ರೋದ್ಯಮದ ಪ್ರತಿನಿಧಿಗಳು ಈ ಕುರಿತು ಮಾತನಾಡಲು ಹೋದಾಗಲೂ ಸಕಾರಾತ್ಮಕ ಆಶ್ವಾಸನೆ ಸಾಕಷ್ಟು ಸಿಕಿದೆ. ಆದರೆ ಪರಿಣಾಮ ಮಾತ್ರ ಶೂನ್ಯ.

ಕನ್ನಡ ಚಿತ್ರೋದ್ಯಮದ ಪ್ರಾತಿನಿಧಿಕ ಸಂಸ್ಥೆಗಳು ಅನಿಸಿಕೊಂಡಿರುವವು, ಯಾವುದೂ ಉದ್ಯಮದ ಹಿತಚಿಂತನೆಯ ಕೆಲಸ ಮಾಡುವುದರತ್ತ ತಲೆ ಕೆಡಿಸಿಕೊಂಡಿಲ್ಲ. 2023ರಲ್ಲಿ ತೆರೆಕಂಡ 234 ಚಿತ್ರಗಳಲ್ಲಿ ಸೋಲು ಕಂಡವುಗಳೇ ಹೆಚ್ಚು. ತೆರೆಕಂಡ ಚಿತ್ರಗಳೆಲ್ಲ ಯಶಸ್ವಿಯಾದ ಇತಿಹಾಸ ಪ್ರಪಂಚದ ಯಾವ ಚಿತ್ರರಂಗದಲ್ಲೂ ಇಲ್ಲವೆನ್ನಿ. ಗಳಿಕೆಯ ದೃಷ್ಟಿಯಿಂದ ಅಲ್ಲದೆ ಇದ್ದರೂ, ಗುಣಮಟ್ಟದ ದೃಷ್ಟಿಯಿಂದ ಒಳ್ಳೆಯ ಚಿತ್ರಗಳನ್ನು ನೀಡುವ ನಿಟ್ಟಿನಲ್ಲಿ ಉದ್ಯಮದ ಮಂದಿ ಗಮನ ಹರಿಸಬೇಕು. ಅಂತಹ ಚಿತ್ರಗಳು ಬಂದಾಗ ಅವುಗಳನ್ನು ಉತ್ತೇಜಿಸುವ ಕೆಲಸ ಉದ್ಯಮದಿಂದ ಆಗಬೇಕು. ಕನ್ನಡ ಚಿತ್ರೋದ್ಯಮದ ಮಾರುಕಟ್ಟೆಯ ಮಿತಿಯನ್ನು ಮೀರುವ ಕೆಲಸ ಇನ್ನಷ್ಟು ಆಗಲಿ, 2024 ಅದಕ್ಕೆ ಮತ್ತೆ ಸಾಕ್ಷಿಯಾಗಲಿ.

andolanait

Recent Posts

ಬಿಜೆಪಿ ಶಾಸಕ ಶರಣು ಸಲಗರ್‌ ವಿರುದ್ಧ ಎಫ್‌ಐಆರ್:‌ ಕಾರಣ ಇಷ್ಟೇ

ಬೀದರ್:‌ 99 ಲಕ್ಷ ಸಾಲ ಹಿಂತಿರುಗಿಸದ ಆರೋಪದ ಮೇರೆಗೆ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್‌ ವಿರುದ್ಧ ಎಫ್‌ಐಆರ್‌…

8 mins ago

ಪ್ರೀತಿ ವಿಚಾರವಾಗಿ ಹಲ್ಲೆ: ಮನನೊಂದು ಯುವಕ ಆತ್ಮಹತ್ಯೆ

ಮೈಸೂರು: ಯುವತಿಯ ಪ್ರೀತಿ ವಿಚಾರವಾಗಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೈಸೂರು ಜಿಲ್ಲೆ ಟಿ.ನರಸೀಪುರ…

36 mins ago

ರಾಷ್ಟ್ರಕವಿ ಕುವೆಂಪು ಕಟ್ಟಿದ ಸಂವಿಧಾನ ಸ್ವಾಗತ ಗೀತೆ

ನಮ್ಮ ಸಂವಿಧಾನಕ್ಕೆ ಬರೋಬ್ಬರಿ 75ವರ್ಷಗಳು ತುಂಬಿವೆ. ಭಾರತದ ಪ್ರಜೆಗಳಾದ ನಮಗೆ ಸಂವಿಧಾನವೇ ‘ಸಾಮಾಜಿಕ ನ್ಯಾಯದ ತಾಯಿ’. ಸರ್ವಜನಾಂಗದ ಹಿತರಕ್ಷಣೆಯ ಹೊಣೆಹೊತ್ತ…

1 hour ago

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಸಂಚಲನ ಮೂಡಿಸಿದ ಬಿಜೆಪಿ-ಜಾ.ದಳ ಮೈತ್ರಿ ವಿಚಾರ

ಭವಿಷ್ಯದ ಗುರಿಸಾಧನೆಗಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೆ ನಿರ್ಧಾರ  ಕಳೆದ ವಾರ ಬಿಜೆಪಿ-ಜಾ.ದಳ ಪಾಳೆಯಗಳಲ್ಲಿ ದೊಡ್ಡ ಮಟ್ಟದ ಸಂಚಲನ…

1 hour ago

ಆಟಿಕೆ ಮಾರಾಟಗಾರರ ಸುರಕ್ಷತೆಗೆ ಸರ್ಕಾರಗಳು ಮುಂದಾಗಲಿ

2025ರ ವರ್ಷಾಂತ್ಯದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಘೋರ ದುರಂತಕ್ಕೆ ಸಾಕ್ಷಿಯಾದದ್ದು ಅತ್ಯಂತ ವಿಷಾದಕರ ಮತ್ತು ಆತಂಕಕಾರಿ ಸಂಗತಿ. ಹೊಟ್ಟೆ ಪಾಡಿಗಾಗಿ…

2 hours ago

ಕ್ರೀಡಾಲೋಕದ ಸಿಹಿ-ಕಹಿ ಮೆಲುಕು

ಹೊಸ ವರ್ಷದ ಹೊಸ್ತಿಲಲ್ಲಿರುವ ನಾವು 2025ರ ವರ್ಷಪೂರ್ತಿ ಸುಂದರ ಹಾಗೂ ಕಹಿ ಘಟನೆಗಳನ್ನು ಮೆಲುಕು ಹಾಕಿದ್ದು. ಅದೇ ಮಾದರಿಯಲ್ಲಿ ಪ್ರಸಕ್ತ…

3 hours ago