ಅಂಕಣಗಳು

ಹೆಣ್ಣು ದನಿಯ ದಿಟ್ಟ ಕೊರಳು ಚ.ಸರ್ವಮಂಗಳ

• ಶಭಾನ

“ಅಯ್ಯಾ ನನಗೊಂದು ಆಸೆ ಹಾಗೆ-ಹೀಗೆ ಹೆಣ್ಣು ಬುಗುರಿಯಾಡಿಸುವ ಇವುಗಳ ಕುಂಡಿಗೆ ಝಾಡಿಸಿ ಒದೆಯಬೇಕು ಒಮ್ಮೆಯಾದರೂ…” ಹೆಣ್ಣನ್ನು ಸಂಕಷ್ಟಕ್ಕೀಡುಮಾಡುವ ಗಂಡು ಜಗತ್ತಿನ ಮೇಲಿನ ಆಕ್ರೋಶವನ್ನು ಹೊರಹಾಕುವ ಈ ಕವಿತೆಯ ಸಾಲುಗಳು ಮೈಸೂರಿನ ಹಿರಿಯ ಕವಯಿತ್ರಿ ಚ.ಸರ್ವಮಂಗಳ ಅವರದು. ಕನ್ನಡ ಸಾಹಿತ್ಯದಲ್ಲಿ ಕಡಿಮೆ ಬರೆದರೂ, ಕನ್ನಡ-ಕರ್ನಾಟಕವನ್ನು ಪ್ರಭಾವಿಸಿದವರ ಸಾಲಿನಲ್ಲಿ ಚ. ಸರ್ವಮಂಗಳ ಅವರಿಗೆ ವಿಶಿಷ್ಟ ಸ್ಥಾನವಿದೆ.

‘ಅಮ್ಮನಗುಡ್ಡ’ (1988) ಕವನ ಸಂಕಲನದಿಂದ ಹೆಸರಾದ ಇವರು ನವ್ಯ ಹಾಗೂ ನವೋತ್ತರ ಕಾಲದಲ್ಲಿ ಬರೆಯಲು ಪ್ರಾರಂಭಿಸಿದ ಕನ್ನಡದ ದಿಟ್ಟ ಕವಯಿತ್ರಿಯರಲ್ಲಿ ಒಬ್ಬರು.

ಕ್ರಿಯಾಶೀಲ ಕನ್ನಡ ಅಧ್ಯಾಪಕಿಯಾಗಿ, ಕವಯಿತ್ರಿಯಾಗಿ, ಮಹಿಳಾಪರ ಹೋರಾಟಗಾರ್ತಿಯಾಗಿ, ರಂಗಭೂಮಿಯಲ್ಲೂ ತಮ್ಮದೇ ಆದ ಚಾಪು ಮೂಡಿಸಿದ ಇವರು ತಮ್ಮ ಕವಿತೆಗಳ ಉದ್ದಕ್ಕೂ ಗಂಡು ದನಿಯ ಆರ್ಭಟದಲ್ಲಿ ಹುದುಗಿ ಹೋಗಿರುವ ಸ್ತ್ರೀ ಮನದ ತೊಳಲಾಟಗಳನ್ನು ಸಶಕ್ತವಾಗಿ ಮುಂದಿಡುವ ಮೂಲಕ ಹೆಣ್ಣಿನ ಅಸ್ತಿತ್ವದ ಹುಡುಕಾಟವನ್ನೂ ನಡೆಸುತ್ತಾರೆ. ಸ್ತ್ರೀಯರಿಗೆ ಈ ಸಮಾಜ ಹೊರಿಸಿರುವ ಒಳ್ಳೆಯ ಹೆಂಡತಿ, ಒಳ್ಳೆಯ ಮಗಳು, ಒಳ್ಳೆಯ ತಾಯಿ, ಇತ್ಯಾದಿ ‘ಒಳ್ಳೆಯ’, ‘ಆದರ್ಶ’ದ ಯಾವ ಗೋಜಲುಗಳಲ್ಲೂ ಸಿಕ್ಕಿ ನರಳದೆ ತನ್ನ ಅಸ್ತಿತ್ವವನ್ನು ಕಂಡು ಕೊಳ್ಳಲು ನಿರಾಳವಾಗಿ ಮಾತನಾಡುವ ಸ್ತ್ರೀ ದನಿಯೊಂದನ್ನು ತಮ್ಮ ಕವನಗಳ ಜೀವದ್ರವ್ಯವಾಗಿಸಿದ್ದಾರೆ. ಪರಂಪರೆಗೆ ಅಂಟಿಕೊಳ್ಳದೆ ಮುಂದೆ ಸಾಗುವ ಇವರ ಕವಿತೆಗಳಿಗೆ ಖಚಿತ ನಿಲುವಿದೆ. ಅದಕ್ಕಾಗಿ ಅವರು ‘ತಡೆ’ ಕವನದಲ್ಲಿ ಹೇಳುವ- “ಅಮ್ಮಾ, ಸಾಕುಮಾಡೆ ನಿನ್ನ ಪುರಾಣ…

ಏನೇ ಹೇಳು ತೊಡೆ ಸಂಧಿಯಲ್ಲಿ ಬದುಕ ಹುದುಗಿಸಿ ಬದುಕಲಾರೆ, ನೀನು ಅಜ್ಜಿ ಸುತ್ತಿದ ವರ್ತುಲದಲ್ಲೇ ಸುತ್ತಲಾರೆ, ಕುತ್ತಿಗೆಗೊಂದು ಬಿಗಿದು ಹಿಡಿಯಬೇಡ ಅಮ್ಮಾ” ಎನ್ನುವ ಸಾಲುಗಳು ಕೇವಲ ನಾನು ನಿಮ್ಮಗಳ ಚೌಕಟ್ಟುಗಳ ಒಳಗೆ ಕಷ್ಟದ ಬದುಕ ಬದುಕಲಾರೆ ಎನ್ನುವ ಕೋರಿಕೆ/ಆಗ್ರಹದ ಜೊತೆಗೆ ‘ನನ್ನ ಬದುಕನ್ನಾದರೂ ನನಗಾಗಿ ಬಿಡುವಿರಾ’ ? ಎಂಬ ಪ್ರಶ್ನೆಯೂ ಆಗುತ್ತವೆ. ಹಾಗೆ ನೋಡಿದ್ದಲ್ಲಿ ಅಮ್ಮನ ಗುಡ್ಡ’ ಸಂಕಲನದ ಕವಿತೆಗಳು ಕೇವಲ ಕವಿತೆಗಳಷ್ಟೇ ಅಲ್ಲ, ಕವಯಿತ್ರಿಯ ಬದುಕೂ ಹೌದು ಎಂಬುದು ಅನೇಕ ಸಂದರ್ಭಗಳಲ್ಲಿ ಮನದಟ್ಟಾಗುತ್ತದೆ.

ಕವಯಿತ್ರಿ ತನ್ನ ಅನುಭವವನ್ನು ಅಭಿವ್ಯಕ್ತಿಸುವಾಗ ಎಲ್ಲಿಯೂ, ಯಾರ ಬಳಿಯೂ, ಯಾವುದಕ್ಕೂ ನಿವೇದನೆ ಮಾಡಿಕೊಳ್ಳುವುದಿಲ್ಲ. ಬದಲಿಗೆ ಘಟಿಸಿ ಹೋದದನ್ನು ಟೀಕಿಸುತ್ತಲೇ ”ಕ್ಷಣ ತಿಕ್ಕಾಟದಲ್ಲಿ ಹೇಸಿಗೆ ನಡುವೆ ಹುಟ್ಟಿ ಅಲ್ಲಿಯೇ ಇನ್ನೂ ಗಿ‌ಗಿಟ್ಟೆ ಆಡುತ್ತಿರುವ ನನ್ನ ನಾನೇ ಅರಿವುದು’ ಮುಖ್ಯವೆನ್ನುತ್ತಾರೆ. ಹೆಣ್ಣು ಹೀಗೆ ತನ್ನ ಅಸ್ತಿತ್ವವನ್ನು ತಾನೇ ಕಟ್ಟಿಕೊಳ್ಳುವುದು ತನ್ನ ಗುರುತು ಏನೋ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಎಷ್ಟು ಮುಖ್ಯವೆನ್ನುವ ತಿಳಿವನ್ನು ಇವರ ಬಹುತೇಕ ಕವನಗಳಲ್ಲಿ ಗುರುತಿಸಬಹುದು.

ಇವರ ಗಮನಿಸಲೇಬೇಕಾದ ಅಥವಾ ಕನ್ನಡದ ಅಸಂಖ್ಯಾತ ಜನಮಾನಸ ಓದಿ-ಕೇಳಿರುವ ಅವನು ಬಸವ’ ಕವನವು ಲಿಂಗ ತಾರತಮ್ಯದ ಬಗೆಗಿನ ಸ್ಥಾಪಿತ ಧೋರಣೆಯನ್ನು ಸಾರಾಸಗಟಾಗಿ ತಳ್ಳಿಹಾಕುತ್ತದೆ. ಹೆಣ್ಣು ಹೆಣ್ಣಾಗಿ ರೂಪಿತವಾಗುವಲ್ಲಿ ‘ಮನೆಯೇ ಮೊದಲ ಪಾಠಶಾಲೆ’ ಯಾಗಿರುವ ಪರಿಯನ್ನು, ಮಗನಾದ ಬಸವನಿಗೆ, ಮಗಳು ಕಮಲಳಿಗೆ ಕುಟುಂಬ ಕಲಿಸುವ ಪಾಠವನ್ನು ಅತ್ಯಂತ ಮೊನಚಾಗಿ ಪ್ರಶ್ನಿಸುತ್ತದೆ. ಮನೆ ಯಾರಿಗೆ ಮೊದಲ ಪಾಠ ಶಾಲೆ? ಯಾರಿಗೆ ಯಾವ ಪಾಠ ಇಲ್ಲಿ ಸಿಗುತ್ತದೆ? ಎಂಬ ಪ್ರಶ್ನೆಯನ್ನೂ ಓದುಗರಲ್ಲಿ ಹುಟ್ಟಿಸುತ್ತದೆ.

1948 ಏಪ್ರಿಲ್ 6ರಂದು ಶಿವಮೊಗ್ಗದಲ್ಲಿ ಜನಿಸಿದ ಇವರು ಮೈಸೂರಿನ ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿ ಈಗ ವಿಶ್ರಾಂತರಾಗಿದ್ದಾರೆ. ಇವರ ‘ಅಮ್ಮನ ಗುಡ್ಡ’ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ದಿನಕರ ದೇಸಾಯಿ ಪ್ರಶಸ್ತಿ ಲಭಿಸಿದೆ. ಸುಮಾರು 9 ಭಾಗಗಳಿಗೆ ಅನುವಾದಗೊಂಡಿರುವ ‘ಅಮ್ಮನಗುಡ್ಡ’ದ ನಂತರ ಇತರೆ ಸಂದರ್ಭಗಳಲ್ಲಿ ಬರೆದ ಕವಿತೆಗಳನ್ನು ಒಟ್ಟು ಸೇರಿಸಿ ಅಮ್ಮನ ಗುಡ್ಡ ಅಂತರಾಳ’ ಎಂಬ ಸಂಕಲನವನ್ನಿವರು ಹೊರ ತಂದಿದ್ದಾರೆ. ಇದಲ್ಲದೆ ಎರಡು ದಶಕಗಳ ಕಾವ್ಯ’, ‘ಚದುರಂಗ ವಾಚಿಕೆ’ ಎಂಬ ಕೆಲವು ಕೃತಿಗಳನ್ನು ಸಂಪಾದಿಸಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಿಂದಲೂ ಜನ ಚಳವಳಿಗಳಲ್ಲಿ ಸಕ್ರಿಯರಾಗಿರುವ ಚ. ಸರ್ವಮಂಗಳ ಅವರ ಅಭಿಮಾನಿ ಬಳಗ ಇವರಿಗೆ ‘ಕದಳಿಯ ಬೆರಗು’ ಎಂಬ ಅಕ್ಷರ ಬಾಗಿನವನ್ನು ಸಮರ್ಪಿಸಿದೆ.
(shabhanamys@gmail.com)

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago