ಅಂಕಣಗಳು

ಗೊಂದಲದ ಗೂಡಾಗಿರುವ ಬಿಹಾರದ ಸ್ಥಿತಿ

ದೆಹಲಿ ಕಣ್ಣೋಟ

ಮತದಾರರ ಪಟ್ಟಿ ಪರಿಷ್ಕರಣೆಯ ವಿವಾದದ ನಡುವೆ ಬಿಹಾರದಲ್ಲೀಗ ಚುನಾವಣೆಯ ಕಾವು ಹೆಚ್ಚುತ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ದೋಷ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಮತ್ತೊಂದು ಕಡೆ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾದಳ ಜಂಟಿಯಾಗಿ ಕೈಗೊಂಡಿರುವ ‘ವೋಟರ್ ಅಧಿಕಾರ್ ಯಾತ್ರೆ’ಯಿಂದಾಗಿ ಅಧಿಕೃತವಾಗಿ ಚುನಾವಣೆಯ ಘೋಷಣೆಯ ಮುನ್ನವೇ ಚುನಾವಣೆಯ ವಾತಾವರಣ ಉಂಟಾಗಿ ಗೊಂದಲದ ಗೂಡಾಗಿದೆ.

ರಾಜ್ಯ ಚುನಾವಣಾ ಆಯೋಗವು ತನ್ನ ಮತದಾರರ ಪಟ್ಟಿಯ ಪರಿಷ್ಕರಣೆಯ ಕಾರ್ಯದಲ್ಲಿ ಸುಮಾರು ೬೦ ಲಕ್ಷ ಮತದಾರರ ಹೆಸರನ್ನು ತೆಗೆದು ಹಾಕಿರುವುದರ ವಿರುದ್ಧ ಕಾಂಗ್ರೆಸ್ ಮತ್ತು ಆರ್‌ಜೆಡಿ ಮತದಾರರಲ್ಲಿ ಜಾಗೃತಿ ಉಂಟು ಮಾಡುವ ಮತ್ತು ಚುನಾವಣಾ ಆಯೋಗವು ಬಿಜೆಪಿಗೆ ಸಹಾಯ ಮಾಡಲು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಕೈಗೆತ್ತಿಕೊಂಡಿದೆ ಎಂದು ಬೀದಿಗಿಳಿದು ಹೋರಾಡುತ್ತಿವೆ.

ಈ ಹೋರಾಟಕ್ಕೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣ ಹಾಗೂ ಪಕ್ಷದ ಇತರೆ ನಾಯಕರನ್ನು ಬಿಹಾರಕ್ಕೆ ಕರೆಸಿಕೊಂಡು ಮತದಾರರ ಪಟ್ಟಿಯಲ್ಲಿ ಭಾರೀ ದೋಷವಿದೆ ಎನ್ನುವುದನ್ನು ಪ್ರಚಾರಗೊಳಿಸುವ ಕಾರ್ಯದಲ್ಲಿ ತೊಡಗಿದೆ. ಕರ್ನಾಟಕದ ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ಸಹಸ್ರಾರು ನಕಲಿ ಮತದಾರರನ್ನು ಸೃಷ್ಟಿಸಿ ಚುನಾವಣೆಯಲ್ಲಿ ಮತಗಳ್ಳತನ ಮಾಡಲಾಗಿದೆ. ಇದೇ ರೀತಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿಯೂ ಮೋಸ ನಡೆದಿದೆ ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೈಗೊಂಡಿದ್ದ ಹೋರಾಟ ಈಗ ಚುನಾವಣಾ ಆಯೋಗ ಮತ್ತು ಕೇಂದ್ರದಲ್ಲಿನ ಬಿಜೆಪಿ ಸರ್ಕಾರಕ್ಕೆ ತಲೆನೋವು ಉಂಟು ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮತಗಳ್ಳತನದಿಂದ ಅಧಿಕಾರಕ್ಕೆ ಬಂದಿದ್ದಾರೆ ಎಂದು ಅವರು ಪ್ರಚಾರ ಮಾಡುತ್ತಿರುವುದು ಮೋದಿ ಮತ್ತು ಅಮಿತ್ ಶಾ ಅವರ ನಿದ್ದೆಗೆಡಿಸಿದೆ. ಕಳೆದ ವರ್ಷ ಲೋಕಸಭೆ ಚುನಾವಣೆಯ ನಂತರ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಸದನದ ಒಳಗೆ ಮತ್ತು ಹೊರಗೆ ನಡೆಸುತ್ತಿರುವ ಹೋರಾಟದಿಂದ ಕಾಂಗ್ರೆಸ್ ಸೇರಿದಂತೆ ‘ಇಂಡಿಯಾ’ ಮೈತ್ರಿಕೂಟದ ಸದಸ್ಯರು ದಿನನಿತ್ಯ ಸದನದ ಹೊರಗೆ ಪ್ಲೆಕಾರ್ಡ್ ಹಿಡಿದು ಘೋಷಣೆ ಕೂಗುತ್ತಿದ್ದಾರೆ.

ರಾಹುಲ್ ಗಾಂಧಿ ಸದನದೊಳಗಿನ ಚರ್ಚೆಗಿಂತ ಹೆಚ್ಚಾಗಿ ತಮ್ಮ ಪಕ್ಷದ ಸದಸ್ಯರನ್ನು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿಸಿದ್ದು, ರಾಹುಲ್ ಗಾಂಧಿ ಅವರುಮಾಡುತ್ತಿರುವ ಆರೋಪಗಳಿಗೆ ಸರಿಯಾಗಿ ಉತ್ತರ ನೀಡದ ಬಿಜೆಪಿ ಸರ್ಕಾರವು ರಾಹುಲ್ ಗಾಂಧಿ ಅವರನ್ನು ಖಳನಾಯಕನಂತೆ ಬಿಂಬಿಸಲು ಹೊರಟಿರುವುದರಿಂದ ಸಮಸ್ಯೆಗೆ ಸರಿಯಾದ ಪರಿಹಾರ ಸಿಗದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಸಮಸ್ಯೆ ಮತ್ತು ವಿವಾದ ಬಂದರೂ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಗಳ ಜೊತೆ ಸೌಹಾರ್ದ ಮಾತುಕತೆ ನಡೆಸಿದ ಉದಾಹರಣೆಗಳಿಲ್ಲ. ಹಾಗಾಗಿ ವಿವಾದ ಮತ್ತು ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು, ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದೆ.

ರಾಹುಲ್ ಗಾಂಧಿ ಆಗಿಂದಾಗ್ಗೆ ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ಮೋದಿ ಸರ್ಕಾರ ‘ಕ್ಷುಲ್ಲಕ ಮತ್ತು ದೇಶ ವಿರೋಧಿ ನಡೆ’ ಎಂದು ನಿರ್ಲಕ್ಷಿಸುತ್ತಿರುವುದರಿಂದ ಅಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಕಂದಕ ದಿನೇದಿನೇ ಹೆಚ್ಚಾಗುತ್ತಿದೆ. ಈ ಮಧ್ಯೆ ಚುನಾವಣಾ ಆಯೋಗವು ಬಿಹಾರದಲ್ಲಿ ಪ್ರಕಟಿಸಿದ್ದ ೬೫ ಲಕ್ಷ ಮತದಾರರ ಹೆಸರನ್ನು ಕೈಬಿಟ್ಟ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಮತದಾರರ ಪಟ್ಟಿಯ ಮರುಪರಿಷ್ಕರಣೆ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಆಧಾರ್ ಕಾರ್ಡನ್ನು ಗಂಭೀರವಾಗಿ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದ ಅನ್ವಯ ಚುನಾವಣಾ ಆಯೋಗ ಪಟ್ಟಿಯ ಪರಿಷ್ಕರಣೆಯನ್ನು ತ್ವರಿತಗತಿಯಲ್ಲಿ ಮುಂದುವರಿಸಿದೆ.

ಈ ಹಿಂದಿನ ಚುನಾವಣೆಗಳ ಪಟ್ಟಿಯಲ್ಲಿ ಬಾಂಗ್ಲಾದೇಶದ ನುಸುಳುಕೋರರ ಹೆಸರುಗಳು ಸೇರಿದ್ದವು ಎಂಬ ಆತಂಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರದ್ದು. ಹೀಗಾಗಿ ಬಿಹಾರ ಹೊರತುಪಡಿಸಿ ಬೇರೆ ದೇಶದಿಂದ ವಲಸೆ ಬಂದಿರುವ ಒಬ್ಬ ವ್ಯಕ್ತಿಯ ಹೆಸರನ್ನೂ ಮತದಾರರ ಪಟ್ಟಿಯಲ್ಲಿ ಸೇರಲು ಬಿಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಬಾಂಗ್ಲಾ ದೇಶದ ನುಸುಳುಕೋರರ ಹೆಸರು ಮತದಾರರ ಪಟ್ಟಿಯಲ್ಲಿ ಸೇರದಂತೆ ಗೃಹ ಸಚಿವಾಲಯ ಮತ್ತು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಕೈಗೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ ಬಿಹಾರದ ಸಾವಿರಾರು ಮಂದಿ ನಿವಾಸಿಗಳ ಹೆಸರನ್ನೇ ಕೈಬಿಡಲಾಗಿದೆ. ಬದಲಿಗೆ ನಕಲಿ ಮತದಾರರ ಸಂಖ್ಯೆಯನ್ನು ಸೃಷ್ಟಿಸಲಾಗಿದೆ ಎನ್ನುವುದು ಕಾಂಗ್ರೆಸ್ಸಿನ ವಾದ. ಬೆಂಗಳೂರಿನ ಮಹದೇವಪುರ ವಿಧಾನಸಭೆ ಕ್ಷೇತ್ರದ ಮನೆಯೊಂದರಲ್ಲಿ ನೋಂದಣಿ ಆಗಿದ್ದ ೪೭ ಮತದಾರರಂತೆಯೇ ಬಿಹಾರದಲ್ಲಿಯೂ ನಕಲಿ ವಿಳಾಸ ನೀಡಿ ನೂರಾರು ಮಂದಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಾಪತ್ತೆಯಾದ ಮತ್ತು ಮೃತರಾಗಿದ್ದಾರೆನ್ನಲಾದ ಕೆಲವು ಪ್ರಕರಣಗಳು ಚುನಾವಣಾ ಆಯೋಗಕ್ಕೆ ಮುಜುಗರ ತಂದಿವೆ. ಮೃತರಾಗಿದ್ದಾರೆನ್ನಲಾದ ಕೆಲವು ಮತದಾರರು ಆಯೋಗದ ಕಚೇರಿಯ ಪರಿಷ್ಕರಣೆ ಕಾರ್ಯ ನಡೆಯುವಾಗ ಪ್ರತ್ಯಕ್ಷರಾದುದನ್ನು ಅರಗಿಸಿಕೊಳ್ಳುವುದು ಚುನಾವಣಾ ಆಯೋಗಕ್ಕೆ ಕಷ್ಟವಾಗಿದೆ. ಒಂದು ಕಡೆ ಸುಪ್ರೀಂ ಕೋರ್ಟಿಗೆ ಸರಿಯಾದ ಮಾಹಿತಿ ನೀಡುವ ಜೊತೆಗೆ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಹಾರದ ಜನರ ವಿಶ್ವಾಸ ಗಳಿಸುವುದು ಆಯೋಗಕ್ಕೆ ಒಂದು ದೊಡ್ಡ ಸವಾಲಾಗಿದೆ.

‘ಸತ್ತ ಮತದಾರ’ ಪ್ರತ್ಯಕ್ಷವಾದ ಮತ್ತು ನಾಪತ್ತೆ ಎಂದು ಕೈಬಿಟ್ಟಿರುವ ಮತದಾರರು ಆಯೋಗದ ಮುಂದೆ ಬಂದು ನಿಂತ ಪ್ರಕರಣಗಳು ಈಗ ರಾಹುಲ್ ಗಾಂಧಿ ಅವರ ‘ಮತಗಳ್ಳತನ’ ಮತ್ತು ಈಗ ಬಿಹಾರದಲ್ಲಿ ಕೈಗೊಂಡಿರುವ ‘ವೋಟರ್ ಅಧಿಕಾರ್ ಯಾತ್ರೆ’ ಅಭಿಯಾನಕ್ಕೆ ಬಲ ನೀಡಿದಂತಾಗಿದೆ. ಚುನಾವಣಾ ಆಯೋಗದ ಇಂತಹ ಯಡವಟ್ಟಿನ ನಂತರ ಕೇಂದ್ರ ಸರ್ಕಾರ ಈ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದೆ. ಈ ಗೊಂದಲದ ನಡುವೆ ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷಗಳು ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ಸೀಟು ಹಂಚಿಕೆಯನ್ನು ಬಹುತೇಕ ಅಖೈರುಗೊಳಿಸಿರುವ ವರದಿಗಳು ಬರುತ್ತಿವೆ. ಬಿಹಾರ ರಾಜ್ಯ ವಿಧಾನಸಭೆಯ ಒಟ್ಟು ೨೪೩ ಸ್ಥಾನಗಳಲ್ಲಿ ಬಿಜೆಪಿಯು ೧೦೧, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳಕ್ಕೆ ೧೦೨ ಸ್ಥಾನಗಳು ಮತ್ತು ಎನ್‌ಡಿಎದಲ್ಲಿದ್ದರೂ ನಿತೀಶ್ ಆಡಳಿತದ ವಿರುದ್ಧ ಬಹಿರಂಗವಾಗಿ ಟೀಕೆ ಮಾಡುತ್ತಿದ್ದ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕಜನಶಕ್ತಿಗೆ ೨೦ ಸ್ಥಾನಗಳನ್ನು ಮತ್ತು ಇತರೆ ಸಣ್ಣಪುಟ್ಟ ಪಕ್ಷಗಳಿಗೆ ಉಳಿದ ಸೀಟುಗಳನ್ನು ನೀಡಲು ದೆಹಲಿ ಮಟ್ಟದಲ್ಲಿನ ಮಾತುಕತೆಯಲ್ಲಿ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಬಹುತೇಕ ಈ ಸೀಟು ಹಂಚಿಕೆಯ ಸೂತ್ರದ ವಿವರವನ್ನು ಬಿಜೆಪಿ ಶೀಘ್ರದಲ್ಲಿಯೇ ಬಹಿರಂಗಗೊಳಿಸುವುದಾಗಿ ಹೇಳಲಾಗುತ್ತಿದೆ. ಈ ಸೀಟು ಹಂಚಿಕೆಯ ಸೂತ್ರವನ್ನು ಗಮನಿಸಿದರೆ ಮತ್ತು ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿತೀಶ್ ಕುಮಾರ್ ಎಂದೇ ಬಿಜೆಪಿ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಬಿಜೆಪಿ ನಾಯಕರಾಗಿದ್ದ ಸುಶೀಲ್ ಕುಮಾರ್ ಮೋದಿ ನಿಧನದ ನಂತರ ಬಿಹಾರದಲ್ಲಿ ಬಿಜೆಪಿ ಚೇತರಿಸಿಕೊಳ್ಳಲು ಆಗಿಲ್ಲ. ಹಾಗಾಗಿ ಕಳೆದ ಚುನಾವಣೆಯಲ್ಲಿ ಬಿಜೆಪಿ ೧೧೦ ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ ಈ ಬಾರಿ ೧೦೧ ಸ್ಥಾನಕ್ಕಿಳಿದಿರುವುದು ಅಚ್ಚರಿಯ ಸಂಗತಿಯಾಗಿದೆ. ನಿತೀಶ್ ಕುಮಾರ್ ಆ ದಿನಗಳಲ್ಲಿ ಆರ್‌ಜೆಡಿ ಜೊತೆ ಹೊಂದಾಣಿಕೆ ಮಾಡಿಕೊಂಡು ೪೫ ಸ್ಥಾನಗಳನ್ನು ಗಳಿಸಿದ್ದರು. ಆಗ ಆರ್‌ಜೆಡಿ ೭೬ ಸ್ಥಾನ ಗಳನ್ನು ಗಳಿಸಿತ್ತು. ಬಿಜೆಪಿ ೮೦ ಸ್ಥಾನಗಳನ್ನು ಪಡೆದಿತ್ತು. ಬಿಹಾರದಲ್ಲಿ ಸದ್ಯದಲ್ಲಿ ಬಲಿಷ್ಠ ನಾಯಕನ ಕೊರತೆ ಇರುವುದರಿಂದ ಬಿಜೆಪಿಯು ನಿತೀಶ್ ಕುಮಾರ್ ಅವರನ್ನೇ ಅವಲಂಬಿಸಬೇಕಾಗಿರುವುದು ವಾಸ್ತವ.

ಈಗಿನ ವಿಧಾನಸಭೆಯಲ್ಲಿನ ೨೪೩ ಸ್ಥಾನಗಳ ಪೈಕಿ ಆಡಳಿತಾರೂಢ ಎನ್‌ಡಿಎ ೧೩೧ ಸ್ಥಾನಗಳನ್ನು ಹೊಂದಿದೆ. ಬಿಜೆಪಿ ೮೦ ಸ್ಥಾನಗಳನ್ನು ಹೊಂದಿದ್ದರೂ ತನ್ನ ಪ್ರಾಬಲ್ಯ ಮತ್ತು ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಿಜೆಪಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೊತೆ ಹೊಂದಾಣಿಕೆ ಮುಂದುವರಿಸುವುದು ಅನಿವಾರ್ಯವಾಗಿದೆ. ಸುಶೀಲ್‌ಕುಮಾರ್ ಮೋದಿ ನಿಧನದ ನಂತರ ಬಿಹಾರದಲ್ಲಿ ಬಿಜೆಪಿಯು ಪ್ರಬಲ ನಾಯಕರನ್ನು ಬೆಳೆಸುವಲ್ಲಿ ವಿಫಲಗೊಂಡಿರುವುದು ದೆಹಲಿ ನಾಯಕರಿಗೆ ಈ ಚುನಾವಣೆಯು ಕಸಿವಿಸಿ ಉಂಟು ಮಾಡಿದೆ ಎನ್ನಲಾಗಿದೆ. ಈಗಿನ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿಯಾಗಲಿ, ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಕುಮಾರ್ ಜೈಸ್ವಾಲ್ ಅವರಾಗಲಿ ಬಲಿಷ್ಠ ನಾಯಕರಾಗಿ ಕಾಣಿಸಿಕೊಂಡಿಲ್ಲದಿರುವುದು ಪಕ್ಷದ ಕೇಂದ್ರದ ನಾಯಕತ್ವ ಮತ್ತು ಪ್ರಧಾನಿ ಮೋದಿ ಅವರನ್ನು ಚಿಂತೆಗೀಡು ಮಾಡಿದೆ. ಹಾಗಾಗಿ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ನಿತೀಶ್ಕು ಮಾರ್ ನಾಯಕತ್ವನ್ನು ಒಪ್ಪಿಕೊಳ್ಳದೆ ಬಿಜೆಪಿಗೆ ಬೇರೆ ದಾರಿ ಇಲ್ಲದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಏಳೆಂಟು ಬಾರಿ ಬಿಹಾರ ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಕೇಂದ್ರದ ನೆರವಿನ ಹಲವಾರು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಈಗ ಸೀಟು ಹಂಚಿಕೆಯ ಕಾರ್ಯವೂ ಮುಗಿದಿರುವುದರಿಂದ ಚುನಾವಣಾ ಆಯೋಗ ಸದ್ಯದಲ್ಲಿಯೇ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಬಿಜೆಪಿ ಮತ್ತು ಜೆಡಿಯು ಸೀಟು ಹಂಚಿಕೆಯ ಮಾತುಕತೆಯ ಪ್ರಕ್ರಿಯೆಯನ್ನು ಮುಗಿಸಿದ್ದರೂ, ‘ಇಂಡಿಯಾ’ ಒಕ್ಕೂಟ ಇನ್ನೂ ಈ ದಿಕ್ಕಿನಲ್ಲಿ ಯಾವುದೇ ಹೆಜ್ಜೆಯನ್ನಿಟ್ಟಿಲ್ಲ. ಮತದಾರರ ಪಟ್ಟಿಯ ಅಕ್ರಮಗಳ ವಿರುದ್ಧದ ಹೋರಾಟವನ್ನೇ ತನ್ನ ಚುನಾವಣಾ ವಿಷಯವನ್ನಾಗಿ ಮತದಾರರ ಮುಂದಿಡುವ ಅವಕಾಶಗಳು ಹೆಚ್ಚಿವೆ. ಬರಲಿರುವ ವಿಧಾನಸಭೆ ಚುನಾವಣೆಯು ಪಾರದರ್ಶಕವಾಗಿ ನಡೆಯುವ ಸಾಧ್ಯತೆಗಳಿಲ್ಲ. ಎಲ್ಲವೂ ಮೋಸದಾಟ ಎನ್ನುವುದನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟು ಆರ್‌ಜೆಡಿ ಮತ್ತು ಕಾಂಗ್ರೆಸ್ಸಿನತ್ತ ಮತದಾರರನ್ನು ಸೆಳೆಯುವ ತಂತ್ರಗಾರಿಕೆ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರದ್ದು ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಬಿಹಾರದಲ್ಲಿ ಯಾದವರು ಪ್ರಬಲರಾಗಿರುವ ಕಾರಣ ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ ಹೆಚ್ಚು ಸ್ಥಾನಗಳನ್ನು ಗಳಿಸುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ಮೂರು ತಿಂಗಳ ಹಿಂದೆ ಸಿ-ವೋಟರ್ ನಡೆಸಿದ ಸಮೀಕ್ಷೆಯ ಪ್ರಕಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವರ್ಚಸ್ಸು ಕೇವಲ ಶೇ.೧೭ ಇದ್ದರೆ ತೇಜಸ್ವಿ ಯಾದವ್ ಅವರ ಜನಪ್ರಿಯತೆ ಶೇ.೩೪ ಇತ್ತು. ಹಾಗಾಗಿ ಜನತಾದಳ (ಯು) ಮತ್ತು ಬಿಜೆಪಿಯ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಮಾಡಬೇಕಿದೆ. ಬಿಹಾರದ ಪ್ರಸ್ತುತ ರಾಜಕಾರಣ ಮತ್ತು ಚುನಾವಣಾ ಆಯೋಗದ ಮತದಾರರ ಪಟ್ಟಿಯ ಗೊಂದಲದ ನಡುವೆ ಪ್ರಧಾನಿ ಮೋದಿ ಅವರಿಗೆ ಇಲ್ಲಿನ ಚುನಾವಣೆ ನೀರು ಕುಡಿದಷ್ಟು ಸುಲಭವಾಗಿಲ್ಲ.

” ರಾಹುಲ್ ಗಾಂಧಿ ಆಗಿಂದಾಗ್ಗೆ ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ಮೋದಿ ಸರ್ಕಾರ ‘ಕ್ಷುಲ್ಲಕ ಮತ್ತು ದೇಶ ವಿರೋಧಿ ನಡೆ’ ಎಂದು ನಿರ್ಲಕ್ಷಿಸುತ್ತಿರುವುದರಿಂದ ಅಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಕಂದಕ ದಿನೇದಿನೇ ಹೆಚ್ಚಾಗುತ್ತಿದೆ”

-ಶಿವಾಜಿ ಗಣೇಶನ್‌ 

 

ಆಂದೋಲನ ಡೆಸ್ಕ್

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

6 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

7 hours ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

8 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

9 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

10 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

10 hours ago