ಸಿದ್ದರಾಮಯ್ಯರಿಗೆ ಬಹುತೇಕ ಶಾಸಕರ ಬೆಂಬಲ; ಜತೆಗಿದೆ ಅಹಿಂದ ಅಸ್ತ್ರ
ರಾಜ್ಯ ಕಾಂಗ್ರೆಸ್‌ನ ವಿದ್ಯಮಾನಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಚಿಂತೆಗೆ ತಳ್ಳಿದೆ. ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎರಡೂವರೆ ವರ್ಷ ಭರ್ತಿಯಾದ ನಂತರ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ದಿಲ್ಲಿಯವರೆಗೆ ತಲುಪುತ್ತಿರುವ ರೀತಿ ಅವರನ್ನು ಕಂಗೆಡಿಸಿದೆ.
ಹಾಗೆ ನೋಡಿದರೆ ಇವತ್ತು ಸಿದ್ದರಾಮಯ್ಯ ಅವರ ಜಾಗಕ್ಕೆ ತಾವು ಬರಬೇಕು ಎಂದು ಪಟ್ಟು ಹಿಡಿದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ರಾಹುಲ್ ಗಾಂಧಿಯವರಿಗೆ ತುಂಬ ಚಿಂತೆಯಾಗುತ್ತಿಲ್ಲ.ಏಕೆಂದರೆ ರಾಹುಲ್ ಗಾಂಧಿಯವರ ಕಿವಿಗೆ ತಲುಪಿರುವ ವಿಷಯದ ಪ್ರಕಾರ ರಾಜ್ಯ ಕಾಂಗ್ರೆಸ್‌ನ ಬಹುತೇಕ ಶಾಸಕರು ಡಿ.ಕೆ.ಶಿವಕುಮಾರ್ ಅವರ ಬೆನ್ನ ಹಿಂದಿಲ್ಲ. ಬದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿದ್ದಾರೆ.
ಇದನ್ನು ಓದಿ: ವಿಆರ್‌ಡಿಎಲ್ ಬೆನ್ನಲ್ಲೇ ಐಪಿಎಚ್‌ಎಲ್ ಲ್ಯಾಬ್ ಆರಂಭಕ್ಕೆ ಸಿದ್ಧತೆ
ಹೀಗೆ ದೊಡ್ಡ ಸಂಖ್ಯೆಯ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿರಲು ಹಲವು ಕಾರಣಗಳಿವೆ. ಮೊದಲನೆಯದಾಗಿ, ಇವತ್ತು ಕಾಂಗ್ರೆಸ್ ಪಕ್ಷದ ಶಾಸಕರೇನಿದ್ದಾರೋ ಅದರಲ್ಲಿ ಬಹುತೇಕ ಶಾಸಕರ ಕ್ಷೇತ್ರಗಳಲ್ಲಿ ಅಹಿಂದ ವರ್ಗಗಳ ಮತ ಬ್ಯಾಂಕ್ ಸಾಲಿಡ್ಡಾಗಿದೆ. ಅರ್ಥಾತ್, ತಮ್ಮ ರಾಜಕೀಯ ಭವಿಷ್ಯ ಚೆನ್ನಾಗಿರಬೇಕು ಎಂದು ಬಯಸುವ ಈ ಶಾಸಕರು ಸಿದ್ದರಾಮಯ್ಯ ಅವರ ಶಕ್ತಿ ತಮ್ಮ ಜತೆಗಿರಬೇಕು ಎಂದು ಬಯಸುತ್ತಾರೆ. ಮತ್ತದು ಸಹಜ ಕೂಡ. ಒಂದು ವೇಳೆ ಇವತ್ತು ಸಿದ್ದರಾಮಯ್ಯ ಅವರ ಜತೆ ನಿಂತಿರುವ ಶಾಸಕರು ಏಕಾಏಕಿ ತಮ್ಮ ಮನಸ್ಸನ್ನು ಬದಲಿಸಿಕೊಂಡು ವಿರೋಧಿ ಪಾಳೆಯ ಸೇರಿದರು ಎಂದಿಟ್ಟುಕೊಳ್ಳಿ. ಇದಾದ ಮರುದಿನವೇ ಅಂತಹ ಶಾಸಕರ ಕ್ಷೇತ್ರಗಳಲ್ಲಿ ಅಹಿಂದ ಮತ ಬ್ಯಾಂಕಿನ ಮನಕಲಕುವ, ಅದನ್ನು ಸಿಟ್ಟಿಗೇಳಿಸುವ, ರಾಜಕೀಯವಾಗಿ ಆ ಕ್ಷೇತ್ರದ ಶಾಸಕರ ವಿರುದ್ಧ ನಿಲ್ಲುವ ಕೆಲಸಗಳು ಶುರುವಾಗುತ್ತವೆ. ಮತ್ತು ಇಂತಹ ಕೆಲಸಗಳು ಮುಂದಿನ ಚುನಾವಣೆಯಲ್ಲಿ ನಿಶ್ಚಿತವಾಗಿ ಆ ಶಾಸಕರ ಗೆಲುವಿಗೆ ಅಡ್ಡಿ ಮಾಡುತ್ತವೆ.
ಹೀಗಾಗಿ ಇವತ್ತು ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿರುವ ಶಾಸಕರ ಸಂಖ್ಯೆ ಹೆಚ್ಚು. ಇವತ್ತು ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ತಮಗೆ ಮುಖ್ಯಮಂತ್ರಿ ಪಟ್ಟ ಕೊಡಿಸಬೇಕು ಎಂದು ಡಿ.ಕೆ.ಶಿವಕುಮಾರ್ ಹೋರಾಟ ನಡೆಸಿದ್ದರೂ, ರಾಹುಲ್ ಗಾಂಧಿಯವರ ಕಣ್ಣ ಮುಂದೆ ಈ ಚಿತ್ರ ಬರುತ್ತಿದೆ.
ಎರಡನೆಯದಾಗಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಹುದ್ದೆಯಲ್ಲಿ ಯಾಕೆ ಮುಂದುವರಿಯಬೇಕು? ಎಂಬ ವಿಷಯದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ರಾಹುಲ್ ಗಾಂಽಯವರಿಗೆ ಸ್ಪಷ್ಟ ಮಾತುಗಳಲ್ಲಿ ವಿವರಿಸಿದ್ದಾರೆ. ಇವತು ಕಾಂಗ್ರೆಸ್ ಪಕ್ಷ ದೇಶದಲ್ಲಿ ಶೋಷಿತ ಸಮುದಾಯಗಳ ಪರವಾಗಿ ಹೋರಾಡಲು ರೂಪರೇಷೆ ಮಾಡಿಕೊಂಡಿದೆ. ಅದರ ಆಧಾರದ ಮೇಲೆ ಹೋರಾಟ ಮಾಡುತ್ತಿದೆ. ಹೀಗಿರುವಾಗ ಹಿಂದುಳಿದ ನಾಯಕರೇ ಮುಖ್ಯಮಂತ್ರಿಯಾಗಿರುವ ಕರ್ನಾಟಕದಲ್ಲಿ ಅದೇ ಸಮುದಾಯದ ನಾಯಕರೊಬ್ಬರ ವಿರುದ್ಧ ನಿಲ್ಲಲು ಸಾಧ್ಯವಿಲ್ಲ ಎಂಬುದು ಕೆ.ಸಿ.ವೇಣುಗೋಪಾಲ್ ಅವರ ವಾದ.
ಅಂದ ಹಾಗೆ ಇವತ್ತು ನಾವು ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಎದುರಾಗುವ ಮತ್ತೊಂದು ಅಪಾಯ ಮುಂದಿನ ಲೋಕಸಭಾ ಚುನಾವಣೆಯದು. ಅಂದ ಹಾಗೆ ೨೦೨೯ರಲ್ಲಿ ಭಾರತದ ಸಂಸತ್ತಿಗೆ ಲೋಕಸಭಾ ಚುನಾವಣೆ ನಡೆಯುತ್ತದೆ. ಈ ಚುನಾವಣೆ ನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಗತ್ಯವಾದ ಸುಭದ್ರ ಸೇನಾ ನೆಲೆ ಎಲ್ಲಿದೆ? ಇವತ್ತು ತೆಲಂಗಾಣ, ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ನಾವು ಅಧಿಕಾರದಲ್ಲಿದ್ದರೂ ಅಲ್ಲಿಂದ ಲೋಕಸಭಾ ಚುನಾವಣೆಯಲ್ಲಿ ಹೋರಾಡಲು ದೊಡ್ಡ ಶಕ್ತಿ ಸಿಗುವುದು ಸಾಧ್ಯವಿಲ್ಲ.
ಈಗಲೇ ತೆಲಂಗಾಣ, ಹಿಮಾಚಲ ಪ್ರದೇಶದಂತಹ ರಾಜ್ಯಗಳ ಮುಖ್ಯಮಂತ್ರಿಗಳು ನಮ್ಮ ರಾಜ್ಯ ಆರ್ಥಿಕವಾಗಿ ಸಂಕಷ್ಟದಲ್ಲಿದೆ ಎಂದು ಗೋಳಾಡುತ್ತಿದ್ದಾರೆ. ಸರ್ಕಾರಿ ನೌಕರರ ವೇತನ ಸಕಾಲಕ್ಕೆ ಕೊಡುವುದು ಕಷ್ಟ ಎನ್ನುತ್ತಿದ್ದಾರೆ. ಇಂತಹವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೈನ್ಯಕ್ಕೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಪೂರೈಸಲು ಸಾಧ್ಯವೇ? ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಬಿಜೆಪಿ ವಿರುದ್ಧ ನಿರ್ಣಾಯಕ ಹೋರಾಟ ಮಾಡಬೇಕೆಂದರೆ, ಕರ್ನಾಟಕ ಎಂಬ ಸುಭದ್ರ ಸೇನಾ ನೆಲೆ ಕಾಂಗ್ರೆಸ್ ಪಕ್ಷದ ಕೈಲಿರಬೇಕು. ಒಂದು ವೇಳೆ ಅಧಿಕಾರ ಹಂಚಿಕೆಯ ಹೆಸರಿನಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪಟ್ಟ ಕೊಟ್ಟರೆ ಏನಾಗುತ್ತದೆ? ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ದಿನಗಳು ಶುರುವಾಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ಅಹಿಂದ ವರ್ಗಗಳು ದೊಡ್ಡ ಮಟ್ಟದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿಜೆಪಿ-ಜಾ.ದಳ ಮಿತ್ರಕೂಟಕ್ಕೆ ಶಕ್ತಿ ತುಂಬುತ್ತವೆ. ಅರ್ಥಾತ್, ಮುಂದಿನ ಲೋಕಸಭಾ ಚುನಾವಣೆಯ ಹೊತ್ತಿಗಿರಲಿ, ಅದಕ್ಕಿಂತ ಮುಂಚಿತವಾಗಿಯೇ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ದಿಕ್ಕೆಟ್ಟು ನಿಲ್ಲುತ್ತದೆ.
ಇದನ್ನು ಓದಿ: ಕೈಗಾರಿಕೆ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಸಿಗದ ಪರಿಹಾರ
ಹೀಗೆ ದಿಕ್ಕೆಟ್ಟು ನಿಂತ ಕಾಂಗ್ರೆಸ್ ಪಕ್ಷ ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಸನಿಹಕ್ಕೂ ಸುಳಿಯುವುದಿಲ್ಲ. ಹೀಗಾಗಿ ಮರು ವರ್ಷವೇ ನಡೆಯಲಿರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೊಡ್ಡ ಮಟ್ಟದ ನೆರವು ನೀಡುವ ಶಕ್ತಿ ಸ್ಥಳೀಯ ಘಟಕಕ್ಕಿರುವುದಿಲ್ಲ ಎಂಬುದು ಕೆ.ಸಿ.ವೇಣುಗೋಪಾಲ್ ಅವರ ವಾದ. ಹೀಗೆ ಕೆ.ಸಿ.ವೇಣುಗೋಪಾಲ್ ಅವರು ತಮ್ಮ ಕಿವಿಗೆ ತುಂಬಿರುವ ಈ ವಿಷಯವನ್ನು ರಾಹುಲ್ ಗಾಂಧಿ ಗಂಭೀರವಾಗಿ ಪರಿಗಣಿಸಿದ್ದಾರೆ. ಇದೆಲ್ಲದರೊಂದಿಗೆ ಅವರ ಕಿವಿಗೆ ತಲುಪುತ್ತಿರುವ ಮತ್ತೊಂದು ಸಂಗತಿ ಮತ್ತಷ್ಟು ಆತಂಕಕಾರಿಯಾಗಿದೆ. ಅದರ ಪ್ರಕಾರ ಕರ್ನಾಟಕದಲ್ಲಿ ಸಿಎಂ ಹುದ್ದೆಯಿಂದ ಸಿದ್ದರಾಮಯ್ಯ ಕೆಳಗಿಳಿದರೆ ಅವರ ಬೆಂಬಲಿಗರು ಸುಮ್ಮನಿರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸತೀಶ್ ಜಾರಕಿಹೊಳಿ ನೇತೃತ್ವದ ಶಾಸಕರ ದೊಡ್ಡ ತಂಡ ಹಲವು ಕಾಲದಿಂದ ಬಿಜೆಪಿ ನಾಯಕರಾದ ಪ್ರಮೋದ್ ಸಾವಂತ್ ಮತ್ತು ದೇವೇಂದ್ರ ಫಡ್ನವೀಸ್ ಅವರ ಜತೆ ಸಂಪರ್ಕದಲ್ಲಿದೆ.
ಇಂತಹ ಸಂದರ್ಭದಲ್ಲಿ ಅಧಿಕಾರ ತ್ಯಾಗ ಮಾಡುವಂತೆ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚಿಸಿದರೆ, ಅಥವಾ ಮನವೊಲಿಸಿದರೂ ಕೂಡ ಸತೀಶ್ ಜಾರಕಿಹೊಳಿ ಮತ್ತವರ ಜತೆಗಿರುವ ಶಾಸಕರ ತಂಡ ಬಿಜೆಪಿಯ ಕಡೆ ವಲಸೆ ಹೋಗಲು ಅದಾಗಲೇ ತಯಾರಿ ನಡೆಸಿದೆ. ಹೀಗೆ ಬಿಜೆಪಿ ಕಡೆ ಹೋಗುವ ಶಾಸಕರ ತಂಡ ಹಾಗೆಯೇ ಹೋಗುವುದಿಲ್ಲ. ಬದಲಿಗೆ, ಬಿಜೆಪಿ ಜತೆ ಸೇರಿ ಪರ್ಯಾಯ ಸರ್ಕಾರ ರಚನೆ ಮಾಡಲು ಮಾತುಕತೆ ನಡೆಸಿದೆ. ಹಾಗೇನಾದರೂ ಆದರೆ ಕರ್ನಾಟಕದಲ್ಲಿ ಬಲಿಷ್ಠ ಮತ್ತು ಶೋಷಿತ ವರ್ಗಗಳನ್ನು ಒಳಗೊಂಡ ಹೊಸ ಮಾದರಿಯ ಸರ್ಕಾರವೊಂದು ತಲೆ ಎತ್ತಿ ನಿಲ್ಲಬಹುದು. ಹಾಗೇನಾದರೂ ಆದರೆ ಕರ್ನಾಟಕದ ನೆಲೆಯಲ್ಲಿ ಕನಿಷ್ಠ ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಅಧಿಕಾರದ ಕನಸು ಕಾಣಲು ಸಾಧ್ಯವಿಲ್ಲ ಎಂಬುದು ರಾಹುಲ್ ಗಾಂಧಿಯವರಿಗೆ ತಲುಪಿರುವ ಮತ್ತೊಂದು ಶಾಕಿಂಗ್ ಸಂಗತಿ. ಪರಿಣಾಮ ಸದ್ಯದ ಸ್ಥಿತಿಯಲ್ಲಿ ಅವರು ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಬಯಸುತ್ತಿಲ್ಲ.ಬದಲಿಗೆ ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಮಾಧಾನಪಡಿಸುವ ಮಾರ್ಗ ಹುಡುಕುತ್ತಿದ್ದಾರೆ. ಮೊನ್ನೆ ಶನಿವಾರ ನಡೆದ ಉಪಾಹಾರ ಕೂಟದ ಹಿಂದಿನ ತಂತ್ರ ಇದು. ಆದರೆ ಈ ತಂತ್ರ ಯಶಸ್ವಿಯಾಗುತ್ತದಾ ಇಲ್ಲವಾ ಎಂಬುದನ್ನು ನೋಡಲು ಡಿಸೆಂಬರ್ ಎಂಟಕ್ಕೆ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನ ಮುಗಿಯುವವರೆಗೆ ಕಾಯಬೇಕು.
” ದೊಡ್ಡ ಸಂಖ್ಯೆಯ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿರಲು ಹಲವು ಕಾರಣಗಳಿವೆ. ಮೊದಲನೆಯದಾಗಿ, ಇವತ್ತು ಕಾಂಗ್ರೆಸ್ ಪಕ್ಷದ ಶಾಸಕರೇನಿದ್ದಾರೋ ಅದರಲ್ಲಿ ಬಹುತೇಕ ಶಾಸಕರ ಕ್ಷೇತ್ರಗಳಲ್ಲಿ ಅಹಿಂದ ವರ್ಗಗಳ ಮತ ಬ್ಯಾಂಕ್ ಸಾಲಿಡ್ಡಾಗಿದೆ.”
-ಬೆಂಗಳೂರು ಡೈರಿ
ಆರ್.ಟಿ.ವಿಠ್ಠಲಮೂರ್ತಿ
ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…
ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…
ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್ ಪುಟಿನ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…
ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…
ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…