ಅಂಕಣಗಳು

ರೈತರ ಬಾಳಿನ ಸಂಕ್ರಾಂತಿ

* ಡಾ.ವಿಜಯಲಕ್ಷ್ಮಿ ಮನಾಪುರ

ಜಗತ್ತು ಸೂಕ್ಷ್ಮತೆ ಸಂವೇದನೆಗಳನ್ನು ಕಳೆದುಕೊಳ್ಳುತ್ತಿದೆ ದ್ವೇಷ, ಅಸೂಯೆ, ಕ್ರೌರ್ಯಗಳ ವಿಜೃಂಭಣೆಯಲ್ಲಿ ತಲ್ಲಣಿಸುತ್ತಿದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಮನುಷ್ಯನಿಗೆ ವಿಕೃತಿ, ಸಂಕುಚಿತತೆಗಳನ್ನು ಮರೆತು ಸೌಹಾರ್ದವನ್ನು ಅಪ್ಪಿಕೊಳ್ಳಬೇಕಾಗಿದೆ. ಈ ಸೌಹಾರ್ದತೆಯ ಸಂಕೇತವೇ ಹಬ್ಬಗಳು. ಕೃಷಿ ಕೇಂದ್ರೀತ ಹಬ್ಬಗಳಲ್ಲಿ ಸಂಕ್ರಾಂತಿ ಬಹುಮುಖ್ಯವಾದ ಹಬ್ಬ. ಜನಪದ ಮೂಲದ ಅದರಲ್ಲೂ ರೈತನ ಬದುಕಿಗೆ ಸಂಬಂಧಿಸಿದ ಹಬ್ಬ, ಕೃಷಿ ಎಂಬುದು ಸಂಸ್ಕೃತಿ, ಜೀವನ ವಿಧಾನ, ಮನುಷ್ಯನ ಬದುಕಿಗೆ ನಿಸರ್ಗದ ಮರ್ಮವನು ಪಾಲಿಸುವ ಕಾಯಕವಾಗಿದೆ.

ಸಂಕ್ರಾಂತಿ ಹಬ್ಬವು ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಸಮೃದ್ಧಿಯ ಸಂಕೇತವಾಗಿ ಆಚರಿಸುವುದರಿಂದ ಮೌಲ್ಯವನ್ನು ಪಡೆದುಕೊಂಡಿದೆ. ವೈಜ್ಞಾನಿಕವಾಗಿ ಹೇಳುವುದಾದರೆ ಭೂಮಿ ಸೂರ್ಯನ ಸುತ್ತ ಒಂದು ಪ್ರದಕ್ಷಿಣೆ ಹಾಕಲು ಒಂದು ವರ್ಷದ ಅವಧಿ ಬೇಕು. ಭೂಮಿಯ ಈ ಚಲನೆಯ ಪರಿಣಾಮವಾಗಿ ಸೂರ್ಯನು ದಿನದಿಂದ ದಿನಕ್ಕೆ ಆಕಾಶದಲ್ಲಿ ಅಪ್ರದಕ್ಷಿಣವಾಗಿ ಚಲಿಸುವಂತೆ ಕಾಣುತ್ತದೆ. ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದ ವೇಳೆಗೆ ಸೂರ್ಯ ಭೂಮಧ್ಯೆ ರೇಖೆಯಿಂದ ದಕ್ಷಿಣದ ಧನುರ್ ರಾಶಿಯಲ್ಲಿರುತ್ತಾನೆ. ಜನವರಿ ತಿಂಗಳಿನ 14ನೇ ಅಥವಾ 15ನೇ ದಿನಾಂಕದಂದು ಸೂರ್ಯ ಧನು‌ ರಾಶಿಯಿಂದ ಉತ್ತರದ ಕಡೆಯ ಮಕರರಾಶಿಗೆ ಪ್ರವೇಶಿಸಿದಂತೆ ಕಾಣುತ್ತದೆ. ಆದ್ದರಿಂದ ಸೂರ್ಯನ ಸಂಕ್ರಮಣ ಕಾಲವನ್ನು ಮಕರ ಸಂಕ್ರಾಂತಿ ಹಬ್ಬ ಎಂದು ಆಚರಿಸುತ್ತಾರೆ. ಎಳ್ಳು ಬೆಲ್ಲವನ್ನು ಮನೆ ಮನೆಗೆ ಹಂಚುವುದು, ಒಳ್ಳೆಯ ಮಾತಾಡಿ ಎಂಬ ಸಂದೇಶ ಸಾರುವುದು ಹಬ್ಬದ ಉದ್ದೇಶ. ಆದರೆ ರೈತರಿಗೆ ಮಾತ್ರ ದುಡಿಮೆ ಯಿಂದ ಬಿಡುವು ನನಗೆ ಹೊರಳುವ ಶುಭ ಸಮಯವೇ ಸಂಕ್ರಾಂತಿ, ಅದರಲ್ಲೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಕೆ.ಆರ್. ನಗರ, ಹೆಚ್.ಡಿ.ಕೋಟೆ ಭಾಗಗಳಲ್ಲಿ ಸಂಕ್ರಾಂತಿ ಎಂದರೆ ಸಮೃದ್ಧಿಯ ಸಂಕೇತ. ರೈತನು ಇಡೀ ವರ್ಷ ದುಡಿದು ಬೆಳೆದ ಬೆಳೆಯನ್ನು ಕಣ್ಣಿಗೊತ್ತಿಕೊಂಡು ಹಿರಿ ಹಿರಿ ಹಿಗ್ಗುವ ಸುಗ್ಗಿ ಹಬ್ಬ, ಹೆಗಲಿಗೆ ಹೆಗಲಾಗಿ ದುಡಿದ ಬಸವನನ್ನು ನೆನೆವ ದಿನವಿದು. ಕಿಚ್ಚು ಹಾಯಿಸುವುದು, ಮೆರವಣಿಗೆ, ಓಡಿಸುವುದು ಮುಂತಾದವು… ಹಬ್ಬದ ಪ್ರಮುಖ ವಿಶೇಷತೆ.

ಮಳೆಗಾಲ ಸಮೀಪಿಸುತ್ತಿದ್ದಂತೆ ರೈತರು ತಮ್ಮ ಎತ್ತುಗಳ ಸಹಾಯದಿಂದ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸುತ್ತಾರೆ ಜನವರಿ ಹೊತ್ತಿಗೆ ರಾಗಿ, ಜೋಳ, ತಡಗುಣಿ, ಅವರೆ, ಭತ್ತ ಹೀಗೆ ಧವಸ ಧಾನ್ಯಗಳು ಮನೆಯನ್ನು ಅಲಂಕರಿಸುತ್ತವೆ, ರೈತನ ಪ್ರತಿಯೊಂದು ಚಟುವಟಿಕೆಯ ಹಿಂದೆಯೂ ಎತ್ತುಗಳ ಶ್ರಮ ಇದ್ದೇ ಇರುತ್ತವೆ. ಹಾಗಾಗಿ ರೈತರು ಎತ್ತುಗಳನ್ನು ಬಣ್ಣಿಸಿ ಹಾಡುವ ಪದಗಳುಂಟು.

ಕರಿಯೆತ್ತು ಕಾಳಿಂಗ ಬಿಳಿಯೆತ್ತು ಮಾಲಿಂಗ
ಸರದಾರ ನನ್ನೆತ್ತು ಸಾರಂಗ ಸಾಗುವಾಗ
ಕಾಲಿನ ಕಿರುಗೆಜ್ಜೆ ಢಣಿರೆಂದೋ

ದನ ಕರುಗಳಿಗೆ ಮೇವು ತಿನ್ನಿಸಿ, ಅವು ಮೈತುಂಬಿಕೊಂಡು ಫಳಫಳ ಹೊಳೆಯುವಂತೆ ಸಂತುಷ್ಟಗೊಳಿಸುತ್ತಾರೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲೇ ದನಗಳ ಜಾತ್ರೆಯು ಪ್ರಾರಂಭವಾಗುತ್ತದೆ. ಈ ಭಾಗದ ರೈತರೆಲ್ಲರೂ ರಾಸು ಗಳನ್ನು ರಾಮನಾಥಪುರ, ಚುಂಚನಕಟ್ಟೆ ಜಾತ್ರೆಗೆ ಹೊಡೆಯುವ ಪದ್ಧತಿ ಉಂಟು

ಕಿಚ್ಚು ಹಾಯಿಸುವುದು: ಸಂಕ್ರಾಂತಿಯಂದು ದನಕರುಗಳ ಮೈತೊಳೆದು, ಅವುಗಳ ಕೊಂಬಿಗೆ ಬಣ್ಣ ಹಚ್ಚಿ, ಸಿಂಗ ಕಟ್ಟಿ ಬಗೆಬಗೆಯ ಹೂಗಳಿಂದ ಕೊರಳನ್ನು ಸಿಂಗರಿಸಿ ಕಿಚ್ಚು ಹಾಯಿಸುವುದು ಸಂಕ್ರಾಂತಿಯ ವಿಶೇಷತೆ. ಇದು ಹಬ್ಬದ ದಿನ ಸಂಜೆ ನಡೆಯುವ ಆಚರಣೆ, ದೇವಸ್ಥಾನದ ಮುಂಭಾಗ ಅಥವಾ ಸ್ವಲ್ಪ ವಿಶಾಲವಾದ ಸ್ಥಳದಲ್ಲೇ ಸುತ್ತಲೂ ಜನನಿಂತು ಒಂದು ಕಡೆ ಮಾತ್ರ ದಾರಿ ಬಿಟ್ಟು, ದಾರಿಗಡ್ಡಲಾಗಿ ಬೆಂಕಿ ಹಾಕಿ ಉರಿಯುವ ಆಳುದ್ದದ ಬೆಂಕಿಯ ಕಿಚ್ಚಿನಲ್ಲಿ ದನಗಳನ್ನು ಹಾಯಿಸುತ್ತಾರೆ. ಇದರಿಂದ ದನಗಳ ಮೈ ಮೇಲಿನ ಕ್ರಿಮಿಕೀಟಗಳು ನಾಶವಾಗಲಿ ಎಂಬುದು ಕಿಚ್ಚು ಹಾಯಿಸುವುದರ ಉದ್ದೇಶ.

ಎತ್ತುಗಳ ಮೆರವಣಿಗೆ: ಸಂಕ್ರಾಂತಿ ಹಬ್ಬದ ದಿನ ಸಿಂಗಾರಗೊಂಡ ದನಕರಗಳನ್ನು ಮೆರವಣಿಗೆ ಮಾಡುವುದು ಹಬ್ಬದ ಪ್ರಾರಂಭ. ಸಿಂಗರಿಸಿದ ಎತ್ತುಗಳ ಮೇಲೆ ಹೊಳೆಯುವ ಗೌನನ್ನು ಹೊದಿಸಿ ಅಲಂಕರಿಸುತ್ತಾರೆ. ಬಳಿಕ ಮಂಗಳವಾದ್ಯದೊಂದಿಗೆ ಊರೆಲ್ಲ ಒಂದು ಸುತ್ತು ಹಾಕಿಸಿ ಮೆರವಣಿಗೆ ಮಾಡುತ್ತಾರೆ. ದನಗಳನ್ನು ಓಡಿಸುವುದೂ ಒಂದು ಮೈ ನವಿರೇಳಿಸುವ ನೋಟ.

ಎತ್ತು ಎನಬೇಡ ಎಡಚೋರಿ ಬಸವನ
ಸುತ್ತೇಳು ಲೋಕ ಸಲಹೋನ ಬಸವನ
ಸತ್ವ ಮರೆಯುವುದೇ ಧರೆಯಲ್ಲಿ…

ಕಾಯಕದ ಬದುಕಿಗೆ ಬೆನ್ನೆಲುಬಾಗಿರುವ ಬಸವಣ್ಣನ ಒಕ್ಕಲು ಮಕ್ಕಳಿಗೆ ಬಹುದೊಡ್ಡ ದೇವರು ಅವನ ಹೆಸರಲ್ಲಿ ಗುಡಿಕಟ್ಟಿ ಹಬ್ಬ ಹರಿದಿನ ಜಾತ್ರೆಗಳನ್ನ ಹಮ್ಮಿಕೊಂಡು ಆರಾಧನೆ ಗೈದಿರುವ ಅಂಶ ಗಮನಾರ್ಹ. ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಇಂದಿಗೂ ಬಸವನ ಗುಡಿಗಳನ್ನು ಕಾಣಬಹುದು.

ಸಂಕ್ರಾಂತಿ ಸವಿರುಚಿ : ಸಂಕ್ರಾಂತಿಯು ಕರ್ನಾಟಕದ ಆಹಾರ ವೈವಿಧ್ಯತೆ ಗಳನ್ನಾದರೂ ರುಚಿಗಳನ್ನು ಒಟ್ಟಾಗಿ ತರುತ್ತದೆ. ಆ ವರ್ಷ ಬೆಳೆದ ಬೆಳೆಗಳ ಬಳಸಿಕೊಂಡು ವೈವಿಧ್ಯ ಮಯ ಆರೋಗ್ಯಕರ ಆಹಾರ ತಯಾರಿಸಲಾಗುತ್ತದೆ. ಪ್ರಾದೇಶಿಕವಾಗಿ ಆಯಾ ಭಾಗದ ಬೆಳೆಗಳನ್ನು ಆಧರಿಸಿದ ಆಹಾರ ಸಂಕ್ರಾಂತಿ ಒಂದುಗೂಡಿಸುತ್ತದೆ.

ಹೀಗೆ ಜನಪದರು ಆರೋಗ್ಯವನ್ನು ಸಮತೋಲನದಲ್ಲಿಡಲು ಋತುಮಾನಕ್ಕನುಗುಣವಾಗಿ ಬರುವ ಹಬ್ಬಗಳಲ್ಲಿ ತಾವೇ ಬೆಳೆದ ಬೆಳೆಯನ್ನು ಬಳಸಿಕೊಂಡು ಆಹಾರ ತಯಾರಿಸುವುದು ಅವರ ದೂರ ದೃಷ್ಟಿಗೆ ಹಿಡಿದ ಕನ್ನಡಿ, ಒಟ್ಟಾರೆ ಅನ್ನ ಸಂಸ್ಕೃತಿ, ಕೃಷಿ ಸಂಸ್ಕೃತಿಯನ್ನು ಅವಲಂಬಿಸಿದ ಮಣ್ಣಿನ ಸಂಸ್ಕೃತಿ ಯನ್ನು ಅವಲಂಬಿಸಿದ. ಈ ಮಣ್ಣು ಮತ್ತು ಮನಸ್ಸಿಗೆ ಅವಿನಾಭಾವ ಸಂಬಂಧ ವಿದೆ. ಈ ಮನಸ್ಸನ್ನು ಮುದಗೊಳಿಸಲು ಮನುಷ್ಯ ಹಬ್ಬಗಳನ್ನು ಸೃಷ್ಟಿಸಿಕೊಂಡು ಆಚರಿಸುತ್ತಾ ಬಂದಿದ್ದಾನೆ.

(ಲೇಖಕರು ಮೈಸೂರು ವಿಶ್ವವಿದ್ಯಾನಿಲಯ ಮಹಾರಾಜ ಕಾಲೇಜಿನ ಜಾನಪದ ಪ್ರಾಧ್ಯಾಪಕಿಯಾಗಿದ್ದಾರೆ)

andolanait

Recent Posts

ಜಾತೀಯತೆ ತೊಲಗಲಿ : ಡಾ.ಯತೀಂದ್ರ ಸಿದ್ದರಾಮಯ್ಯ

ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…

6 hours ago

ರಂಗಾಯಣ | ಐದು ದಿನಗಳ ʼನಿರಂತರ ರಂಗ ಉತ್ಸವʼಕ್ಕೆ ತೆರೆ

ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…

6 hours ago

ಭೀಕರ ಸರಣಿ ಅಪಘಾತ : ಇಬ್ಬರು ಸಾವು, 20ಕ್ಕೂ ಹೆಚ್ಚು ವಾಹನ ಹಾನಿ

ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…

6 hours ago

ವಿದ್ಯಾವಂತರಲ್ಲಿ ಹೆಚ್ಚುತ್ತಿರುವ ಮೌಢ್ಯತೆ, ಕಂದಾಚಾರ : ಸಿಎಂ ವಿಷಾದ

ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…

6 hours ago

ವಸ್ತುಪ್ರದರ್ಶನದಲ್ಲಿ ಜನಾಕರ್ಷಿಸಿದ ಚಿತ್ರ ಸಂತೆ

ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…

6 hours ago

ಬಂಧನದ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕನಿಗೆ ಲುಕ್‌ಔಟ್‌ ನೋಟಿಸ್‌ ಜಾರಿ

ಬೆಂಗಳೂರು : ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…

6 hours ago