ದೇವೇಗೌಡ-ಕುಮಾರಸ್ವಾಮಿ ಮುಷ್ಟಿಗೆ ಸಿಲುಕಬಹುದಾಗಿದ್ದ ಪಕ್ಷ ಉಪ ಚುನಾವಣೆಯ ಫಲಿತಾಂಶದಿಂದ ಬಚಾವಾಗಿದೆ ಎಂಬ ಲೆಕ್ಕಾಚಾರ
ಬೆಂಗಳೂರು ಡೈರಿ
ಆರ್.ಟಿ.ವಿಠ್ಠಲಮೂರ್ತಿ
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಬಿಜೆಪಿ ಪಾಳೆಯದಲ್ಲಿ ಸಮಾಧಾನ ಮೂಡಿಸಿದೆ. ಈ ಮಾತನ್ನು ಹೇಳಿದರೆ ಹಲವರಿಗೆ ಆಚ್ಚರಿಯಾಗಬಹುದು. ಮೂರಕ್ಕೆ ಮೂರೂ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ ಮೇಲೆ ಇದರಲ್ಲಿ ಸಮಾಧಾನ ಪಡುವಂತದ್ದೇನಿದೆ? ಎಂದು ಕೇಳಬಹುದು. ಅದೇ ರೀತಿ ಈ ಸೋಲಿನ ಹೊಣೆಗಾರಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ತಲೆಗೆ ಕಟ್ಟಿ ಆರ್ಭಟಿಸುತ್ತಿರುವ ಬಿಜೆಪಿ ಭಿನ್ನರ ಕಡೆಗೆ ಬೊಟ್ಟು ಮಾಡಿ ತೋರಿಸಬಹುದು. ಆದರೂ ಉಪಚುನಾವಣೆಯ ಫಲಿತಾಂಶದಿಂದ ಬಿಜೆಪಿಯ ಮೇಲುಸ್ತರದ ನಾಯಕರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಅಷ್ಟೇ ಅಲ್ಲ. ಇದು ಭವಿಷ್ಯದಲ್ಲಿ ಯಾರನ್ನೂ ಅವಲಂಬಿಸದೆ ಪಕ್ಷ ಕಟ್ಟಲು ಸಿಕ್ಕ ಅವಕಾಶ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಅರ್ಥಾತ್, ದೇವೇಗೌಡ-ಕುಮಾರಸ್ವಾಮಿ ನೇತೃತ್ವದ ಜಾತ್ಯಾತೀಕ ಜನತಾದಳದ ಮುಷ್ಟಿಗೆ ಸಿಲುಕಬಹುದಾಗಿದ್ದ ಪಕ್ಷ ಉಪಚುನಾವಣೆಯ ಫಲಿತಾಂಶದಿಂದ ಬಚಾವಾಗಿದೆ ಎಂಬುದು ಮೇಲುಸ್ತರದ ನಾಯಕರ ಲೆಕ್ಕಾಚಾರ.
ಒಂದು ವೇಳೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಾ.ದಳ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಗಳಿಸಿದ್ದರೆ ಏನಾಗುತ್ತಿತ್ತು? ಹಳೇ ಮೈಸೂರು ಭಾಗದಲ್ಲಿ ಗೆಲುವು ಸಾಧಿಸಲು ಜಾ.ದಳ ಸಖ್ಯ ಅನಿವಾರ್ಯ ಎಂಬ ಲೆಕ್ಕಾಚಾರಕ್ಕೆ ಬಿಜೆಪಿ ವರಿಷ್ಠರು ಬರುತ್ತಿದ್ದರು. ಅವರು ಇಂತಹ ಲೆಕ್ಕಾಚಾರಕ್ಕೆ ಬರಲು ಹಿಂದಿನ ಅನುಭವವೂ ಪುಷ್ಟಿ ಕೊಡುತ್ತಿತ್ತು. ಅದೆಂದರೆ ಆರು ತಿಂಗಳುಗಳ ಹಿಂದೆ ನಡೆದ ಲೋಕಸಭಾ ಚುನಾವಣೆ, ಈ ಚುನಾವಣೆಯಲ್ಲಿ ಬಿಜೆಪಿ-ಜಾ.ದಳ ಮೈತ್ರಿಕೂಟ ಹತ್ತೊಂಬತ್ತು ಸ್ಥಾನಗಳನ್ನು ಗಳಿಸಿತ್ತು.
ಆದರೆ ಹೀಗೆ ಗೆದ್ದ ಸ್ಥಾನಗಳಲ್ಲಿ ಬಹುತೇಕ ಕ್ಷೇತ್ರಗಳು ಹಳೇ ಮೈಸೂರು ಭಾಗಕ್ಕೆ ಸೇರಿದ ಕ್ಷೇತ್ರಗಳು. ಲಿಂಗಾಯತ ಪ್ರಾಬಲ್ಯದ ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲಿ ಬಿಜೆಪಿಗೆ ಸಿಕ್ಕ ಯಶಸ್ಸು ಕಡಿಮೆ. ಆದರೆ ಒಕ್ಕಲಿಗ ಪ್ರಾಬಲ್ಯದ ಹಳೇ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಸಿಕ್ಕ ಯಶಸ್ಸು ಹೆಚ್ಚು. ಇದರರ್ಥ ಎಂದರೆ ಭವಿಷ್ಯದಲ್ಲಿ ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳ ಮೇಲೆ ಹೆಚ್ಚು ಅವಲಂಬಿತರಾಗುವ ಬದಲು ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳ ಮೇಲೆ ಹೆಚ್ಚು ಗಮನ ನೀಡಬೇಕು, ಹಾಗೆ ಗಮನ ನೀಡಬೇಕು ಎಂದರೆ ದೇವೇಗೌಡ ಕುಮಾರಸ್ವಾಮಿ ನೇತೃತ್ವದ ಜಾ.ದಳ ಪಕ್ಷದೊಂದಿಗಿನ ಮೈತ್ರಿಗೆ ಅದ್ಯತೆ ನೀಡಬೇಕು ಅಂತ ಅವರಿವರಿರಲಿ, ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಭಾವಿಸಿದ್ದರು.
ಇದೇ ಕಾರಣಕ್ಕಾಗಿ ಇತ್ತೀಚಿನ ದಿನಗಳಲ್ಲಿ ಅವರು ರಾಜ್ಯದ ಬಿಜೆಪಿ ನಾಯಕರಿಗಿಂತ ಹೆಚ್ಚಾಗಿ ಕುಮಾರಸ್ವಾಮಿ ಅವರಿಗೆ ಆದ್ಯತೆ ನೀಡುತ್ತಾ ಬಂದಿದ್ದರು. ಯಾವಾಗ ಅಮಿತ್ ಶಾ ಅವರು ಕರ್ನಾಟಕದ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಆದ್ಯತೆ ನೀಡತೊಡಗಿದರೋ? ಆಗ ರಾಜ್ಯ ಬಿಜೆಪಿಯ ಹಲವು ನಾಯಕರು ಮೆಲ್ಲಗೆ ಕುಮಾರಸ್ವಾಮಿಯವರ ಜತೆ ಹೊಂದಿಕೊಳ್ಳುವ ಪ್ರಯತ್ನ ಆರಂಭಿಸಿದರು. ಇವತ್ತಿಗೂ ರಾಜ್ಯ ಬಿಜೆಪಿಯ ಒಂದು ದೊಡ್ಡ ಬಣ ಕುಮಾರಸ್ವಾಮಿ ಅವರನ್ನು ಮೈತ್ರಿಕೂಟದ ಮಹಾನಾಯಕ ಎಂದೇ ಭಾವಿಸುತ್ತಿದೆ. ಅಷ್ಟೇ ಅಲ್ಲ, ಸ್ವಪಕ್ಷದಲ್ಲಿ ತಮಗೆ ಆದ್ಯತೆ ಸಿಗದಿದ್ದರೂ ಕುಮಾರಸ್ವಾಮಿ ಅವರೊಂದಿಗಿದ್ದರೆ ತಮ್ಮ ರಾಜಕೀಯ ಶಕ್ತಿ ಹಿಗ್ಗುತ್ತದೆ ಎಂಬ ಲೆಕ್ಕಾಚಾರಕ್ಕೆ ಬಂದಿದೆ.
ಇಂತಹ ಹೊತ್ತಿನಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಜಾ.ದಳ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆದ್ದೇ ಬಿಟ್ಟಿದ್ದರೆ ಬಿಜೆಪಿಯ ಒಂದು ಬಣದ ನಾಯಕರು ತಮ್ಮ ಶಕ್ತಿ ಹೆಚ್ಚಿದೆ ಎಂದು ಭಾವಿಸುತ್ತಿದ್ದರು. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ಜಾ.ದಳ ಜತೆಗಿನ ಸಖ್ಯ ಅನಿವಾರ್ಯ ಎಂಬ ವಾತಾವರಣ ಸೃಷ್ಟಿಸಲು ಕಾರಣರಾಗುತ್ತಿದ್ದರು.
ಹಾಗೇನಾದರೂ ಆಗಿದ್ದರೆ ರಾಜ್ಯ ಬಿಜೆಪಿ ಹಂತ ಹಂತವಾಗಿ ಜಾ.ದಳದ ಹಿಡಿತಕ್ಕೆ ಸಿಲುಕುತ್ತಾ ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಅದು ಹೇಳಿದ್ದೇ ವೇದವಾಕ್ಯವಾಗುತ್ತಿತ್ತು. ಪರಿಣಾಮ ಜಾ.ದಳ ಪ್ರಾಬಲ್ಯದ ಕ್ಷೇತ್ರಗಳಲ್ಲದೆ ಬಿಜೆಪಿ ಪ್ರಾಬಲ್ಯದ ಹಲವು ಕ್ಷೇತ್ರಗಳನ್ನು ಜಾ.ದಳ ಬಿಟ್ಟುಕೊಡುವ ಅನಿವಾರ್ಯತೆಗೆ ಬಿಜೆಪಿ ವರಿಷ್ಠರು ಒಳಗಾಗುತ್ತಿದ್ದರು.
ಹಾಗಾದಾಗ ರಾಜ್ಯದ ಇನ್ನೂರಾ ಇಪ್ಪತ್ನಾಲ್ಕು ಕ್ಷೇತ್ರಗಳ ಪೈಕಿ ಎಂಬತ್ತೂ, ತೊಂಬತ್ತೋ ಸ್ಥಾನಗಳು ಜಾ.ದಳಕ್ಕೆ ಲಭ್ಯವಾಗುತ್ತಿದ್ದವು. ಬಿಜೆಪಿಯ ಮಿತ್ರತ್ವದೊಂದಿಗೆ ಜಾ.ದಳ ಎಪ್ಪತ್ತು ಪ್ಲಸ್ ಸ್ಥಾನಗಳನ್ನು ಗೆದ್ದಿದ್ದರೆ ನೋ ಡೌಟ್, ಕುಮಾರಸ್ವಾಮಿ ಅವರೇ ಬಿಜೆಪಿ-ಜಾ.ದಳ ಮೈತ್ರಿಕೂಟ ಸರ್ಕಾರದ ಚುಕ್ಕಾಣಿ ಹಿಡಿಯುತ್ತಿದ್ದರು. ಅಲ್ಲಿಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ಮುಗಿದುಹೋದ ಅಧ್ಯಾಯವೊಂದು ಕರ್ನಾಟಕದಲ್ಲಿ ಪುನರಾರಂಭವಾದಂತೆ ಆಗುತ್ತಿತ್ತು.
ಅರ್ಥಾತ್, ತೊಂಬತ್ತೆಂಟರ ಸುಮಾರಿಗೆ ಮಹಾರಾಷ್ಟ್ರದಲ್ಲಿ ಬಲ ಪಡೆದ ಬಿಜೆಪಿ-ಶಿವಸೇನೆ ಮೈತ್ರಿ ಯುಗ ಕರ್ನಾಟಕದಲ್ಲೂ ಆರಂಭವಾಗುತ್ತಿತ್ತು.
ಅಂದ ಹಾಗೆ ಅವತ್ತು ಮಹಾರಾಷ್ಟ್ರದಲ್ಲಿ ಶುರುವಾದ ಬಿಜೆಪಿ ಶಿವಸೇನೆಯ ವ್ಯಕ್ತಿ ಯುಗ ಎರಡು ದಶಕಗಳಿಗೂ ಹೆಚ್ಚು ಕಾಲ ನಡೆಯಿತಲ್ಲದೆ, ಅಲ್ಲಿ ಬಾಳಾ ಸಾಹೇಬ್ ಠಾಕ್ರೆ ಹೇಳಿದ್ದನ್ನೇ ಬಿಜೆಪಿಯವರು ವೇದವಾಕ್ಯ ಅಂತ ಪರಿಗಣಿಸುವ ಸ್ಥಿತಿ ಇತ್ತು. ಕಾರಣ ಮಹಾರಾಷ್ಟ್ರದಲ್ಲಿ ನಾವು ಶಿವಸೇನೆಯೊಂದಿಗೆ ಹೋದರೆ ಮಾತ್ರ ಬಚಾವಾಗುತ್ತೇವೆ ಎಂಬ ಭಾವ ಬಿಜೆಪಿಯಲ್ಲಿ ಸ್ಥಾಯಿಯಾಗಿತ್ತು.
ಆದರೆ ಈ ಕಾಲದಿಂದ ಹೊರಬರಲು ಬಿಜೆಪಿಗೆ ಸಾಧ್ಯವಾಗಿದ್ದು ಉದ್ಧವ್ ಠಾಕ್ರೆ ಕಾಲದಲ್ಲಿ, ಯಾವಾಗ ಏಕನಾಥ್ ಶಿಂಧೆ ಬಣವನ್ನು ಶಿವಸೇನೆಯ ಶಕ್ತಿಯಿಂದ ತೆಕ್ಕೆಯಿಂದ ಹೊರತರಲು ಬಿಜೆಪಿಗೆ ಸಾಧ್ಯವಾಯಿತೋ ಇದಾದ ನಂತರ ಅದು ಮಹಾರಾಷ್ಟ್ರದ ನೆಲದಲ್ಲಿ ಗಟ್ಟಿಯಾಗಿ ಬೇರೂರ ತೊಡಗಿತು.
ಮೊನ್ನೆ ನಡೆದ ವಿಧಾನಸಭಾ ಚುನಾವಣೆಯ ನಂತರ ಅದು ಯಾವ ಪರಿ ತಲೆ ಎತ್ತಿದೆ ಎಂದರೆ, ಇನ್ನು ಮಹಾರಾಷ್ಟ್ರದಲ್ಲಿ ಅದಕ್ಕೆ ಶಿವಸೇನೆಯ ಗಾಳಿ ಬೇಕಿಲ್ಲ, ಅರ್ಥಾತ್, ಅಲ್ಲೀಗ ಬಿಜೆಪಿ ಸ್ವಯಂ ಶಕ್ತಿಯಾಗಿ ಮೇಲೆದ್ದು ನಿಂತಿದೆ. ಆ ದೃಷ್ಟಿಯಿಂದ ಮಹಾರಾಷ್ಟ್ರದ ರಾಜಕಾರಣ ಇಲ್ಲಿ ಪುನರಾವರ್ತನೆಯಾಗುವ ಅಪಾಯ ತಪ್ಪಿದೆ. ಅಧಿಕಾರಕ್ಕೆ ಬರಲು ಸ್ವಂತ ಶಕ್ತಿಯನ್ನು ನೆಚ್ಚಿಕೊಳ್ಳಲು ರಾಜ್ಯ ಬಿಜೆಪಿಗೆ ಒಂದು ಅವಕಾಶ ದೊರೆತಿದೆ ಎಂಬುದು ಬಿಜೆಪಿಯ ಥಿಂಕ್ ಟ್ಯಾಂಕ್ ಪ್ರಮುಖರ ಲೆಕ್ಕಾಚಾರ.
ಆ ದೃಷ್ಟಿಯಿಂದ ಉಪ ಚುನಾವಣೆಯ, ಅದರಲ್ಲೂ ಚನ್ನಪಟ್ಟಣದಲ್ಲಿ ಜಾ.ದಳದ ನಿಖಿಲ್ ಕುಮಾರಸ್ವಾಮಿ ಅವರ ಸೋಲು ರಾಜ್ಯ ಬಿಜೆಪಿಗೆ ಬೂಸ್ಟರ್ ಡೋಸ್ ಇದ್ದಂತೆ ಎಂಬುದು ಈ ಪ್ರಮುಖರ ಲೆಕ್ಕಾಚಾರ.
ಅಂದರೆ ಉಪ ಚುನಾವಣೆ ನಡೆದ ಮೂರೂ ಕ್ಷೇತ್ರಗಳ ಪೈಕಿ ಸಂಡೂರು ಹೇಳಿ ಕೇಳಿ ಕಾಂಗ್ರೆಸ್ ಪಕ್ಷದ ಭದ್ರಕೋಟೆ, ಆದರೂ ಜಾ.ದಳದ ಬಲವಿಲ್ಲದ ಆ ಕ್ಷೇತ್ರದಲ್ಲಿ ಬಿಜೆಪಿ ಖಾಡಾಖಾಡಿ ಹೋರಾಟ ನಡೆಸಿದ್ದಷ್ಟೇ ಅಲ್ಲ. ಗೆಲುವಿನ ಹತ್ತತ್ತಿರ ಬಂದು ತಲುಪಲು ಯಶಸ್ವಿಯಾಯಿತು. ಇದರರ್ಥ, ಮುಂದಿನ ಚುನಾವಣೆಯಲ್ಲಿ ಪಕ್ಷ ಇನ್ನಷ್ಟು ಬಲ ಹಾಕಿದರೆ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಸಂಡೂರು ಕ್ಷೇತ್ರವನ್ನು ವಶಕ್ಕೆ ಪಡೆಯಬಹುದು.
ಇನ್ನು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಹೇಳಿ ಕೇಳಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರ ಸ್ವಯಂ ಪಾರಮ್ಯದ ಕ್ಷೇತ್ರ, ಈ ಬಾರಿ ಬಿಜೆಪಿ ಅಲ್ಲಿ ಸೋತಿದ್ದರೂ ಮುಂದಿನ ಬಾರಿ ಅಲ್ಲಿ ಪಕ್ಷ ಗೆಲುವು ಸಾಧಿಸಲು ಅಗತ್ಯವಾದ ವೇದಿಕೆ ಸಜ್ಜಾಗಿದೆ ಎಂಬುದು ಈ ಪ್ರಮುಖರ ವಾದ.
ಹೀಗೆ ಜಾ.ದಳ ತೆಕ್ಕೆಗೆ ಹೋಗುವ ಅಪಾಯದಿಂದ ಪಾರಾಗಿ ಮುಂದಿನ ದಿನಗಳಲ್ಲಿ ಸ್ವಯಂಶಕ್ತಿಯಿಂದ ಅಧಿಕಾರಕ್ಕೆ ಬರಲು ಪ್ರೇರಣೆ ಒದಗಿಸಿರುವ ಉಪ ಚುನಾವಣೆಯ ಫಲಿತಾಂಶವನ್ನು ನಾವು ಸ್ವಾಗತಿಸಬೇಕು ಎಂಬ ಈ ನಾಯಕರ ಭಾವನೆ ಏನಿದೆ ಅದು ನಿಜಕ್ಕೂ ಕುತೂಹಲಕಾರಿ.
ಒಂದು ವೇಳೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಾ.ದಳ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಗಳಿಸಿದ್ದರೆ ಏನಾಗುತ್ತಿತ್ತು? ಹಳೇ ಮೈಸೂರು ಭಾಗದಲ್ಲಿ ಗೆಲುವು ಸಾಧಿಸಲು, ಭವಿಷ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ಜಾ.ದಳ ಜತೆಗಿನ ಸಖ್ಯ, ಅನಿವಾರ್ಯ ಎಂಬ ಲೆಕ್ಕಾಚಾರಕ್ಕೆ ಬಿಜೆಪಿ ವರಿಷ್ಠರು ಬರುತ್ತಿದ್ದರು. ಹಾಗೇನಾದರೂ ಆಗಿದ್ದರೆ ರಾಜ್ಯ ಬಿಜೆಪಿ ಹಂತ ಹಂತವಾಗಿ ಜಾ.ದಳದ ಹಿಡಿತಕ್ಕೆ ಸಿಲುಕುತ್ತಾ ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಅದು ಹೇಳಿದ್ದೇ ವೇದವಾಕ್ಯವಾಗುತ್ತಿತ್ತು. ಪರಿಣಾಮ ಜಾ.ದಳ ಪ್ರಾಬಲ್ಯದ ಕ್ಷೇತ್ರಗಳಲ್ಲದೆ ಬಿಜೆಪಿ ಪ್ರಾಬಲ್ಯದ ಹಲವು ಕ್ಷೇತ್ರಗಳನ್ನು ಜಾ.ದಳಕ್ಕೆ ಬಿಟ್ಟುಕೊಡುವ ಅನಿವಾರ್ಯತೆಗೆ ಬಿಜೆಪಿ ವರಿಷ್ಠರು ಒಳಗಾಗುತ್ತಿದ್ದರು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…